ನವದೆಹಲಿ: ನಿರ್ಭಯಾ ಅತ್ಯಾಚಾರಿಗಳನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇಂದು ಮುಂಜಾನೆ 5:30ಕ್ಕೆ ನೇಣಿಗೆ ಏರಿಸಲಾಯಿತು. ಇದರ ಬೆನ್ನಿಗೆ ‘ನನ್ನ ಮಗಳನ್ನು ನನಗೆ ರಕ್ಷಿಸಿಕೊಳ್ಳಲಾಗಲಿಲ್ಲ, ಆದರೆ ಅವಳಿಗಾಗಿ ಹೋರಾಡಿದ್ದೇನೆ’ ಎಂದು ನಿರ್ಭಯಾ ತಾಯಿ ಆಶಾ ದೇವಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
“ನನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದವರನ್ನು ಏಳು ವರ್ಷಗಳ ನಂತರ ಗಲ್ಲಿಗೆ ಏರಿಸಲಾಯಿತು. ನಮಗೆ ತಡವಾದರೂ ನ್ಯಾಯ ದೊರೆತಿದೆ. ಹೆಣ್ಣುಮಕ್ಕಳಿಗೆ ತೊಂದರೆ ನೀಡಿದವರಿಗೆ ಈ ದೇಶದ ನ್ಯಾಯ ವ್ಯವಸ್ಥೆ ಶಿಕ್ಷೆ ನೀಡುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ, ಈ ಹೋರಾಟ ನನ್ನ ಹಾಗೂ ದೇಶದ ಹೆಣ್ಣು ಮಕ್ಕಳಿಗಾಗಿ. ನನ್ನ ಮಗಳ ಬಗ್ಗೆ ನನಗೆ ಹೆಮ್ಮೆ ಇದೆ. ಡಾಕ್ಟರ್ನ ತಾಯಿ ಎಂದು ಕರೆಸಿಕೊಂಡರೆ ಇನ್ನೂ ಹೆಮ್ಮೆ ಆಗುತ್ತಿತ್ತು. ಆದರೆ, ಆ ಕನಸು ಈಡೇರಲೇ ಇಲ್ಲ. ಅವಳನ್ನು ರಕ್ಷಿಸಿಕೊಳ್ಳಲು ನನಗೆ ಸಾಧ್ಯವಾಗಿಲ್ಲ. ಆದರೆ, ಅವಳಿಗೋಸ್ಕರ ಹೋರಾಟ ನಡೆಸಿದ್ದೇನೆ,” ಎಂದರು.
ಅತ್ಯಾಚಾರಿಗಳಿಗೆ ಗಲ್ಲು ಶೀಕ್ಷೆ ನಿಡುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಲೇ ಇತ್ತು. ಈ ಬಗ್ಗೆ ಆಶಾ ದೇವಿ ಬೇಸರ ವ್ಯಕ್ತಪಡಿಸಿದ್ದಾರೆ. “ನನ್ನ ಮಗಳಿಗೆ ತಡವಾದರೂ ನ್ಯಾಯ ದೊರೆತಿದೆ. ಮುಂದಿನ ದಿನಗಳಲ್ಲಿ ಸುಪ್ರೀಂಕೋರ್ಟ್ ದೇಶದ ಕಾನೂನಿನ ಬಗ್ಗೆ ಮುಂದಿನ ದಿನಗಳಲ್ಲಿ ಪರಾಮರ್ಶೆ ಮಾಡಲಿದೆ. ಈ ಮೂಲಕ ಈ ವಿಳಂಬವನ್ನು ನಿಲ್ಲಿಸಲಿದೆ ಎಂದು ನಾನು ಭಾವಿಸಿದ್ದೇನೆ,”ಈ ದಿನವನ್ನು ದೇಶದ ಹೆಣ್ಣುಮಕ್ಕಳಿಗೆ ಆರ್ಪಿಸುವುದಾಗಿ ನಿರ್ಭಯಾ ತಾಯಿ ಆಶಾ ದೇವಿ ಸುದ್ದಿಗಾರರಿಗೆ ತಿಳಿಸಿದರು.
ನನ್ನ ಮಗಳು ಸತ್ತಿಲ್ಲ ಮತ್ತು ಬರುವುದು ಇಲ್ಲ. ನಮ್ಮನ್ನು ಆಕೆ ಅಗಲಿದ ನಂತರ ಈ ಹೋರಾಟವನ್ನು ಆರಂಭಿಸಲಾಯಿತು. ನಿರ್ಭಯಾಳಿಗಾಗಿ ಆರಂಭಿಸಿದ ಹೋರಾಟವನ್ನು ದೇಶದ ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಮುಂದುವರೆಸಲಾಗುವುದು ಎಂದು ಆಶಾದೇವಿ ತಿಳಿಸಿದರು.