ನರೇಗಲ್ಲ: ಅರಣ್ಯ ಇಲಾಖೆಯಿಂದ ರೈತರಿಗೆ ಅರಣ್ಯ ಕೃಷಿ ಮಾಡಲು ಅನೇಕ ಯೋಜನೆಗಳಿದ್ದು, ಅವುಗಳ ಬಗ್ಗೆ ಮಾಹಿತಿ ಪಡೆದು ಅರಣ್ಯ ಕೃಷಿಗೆ ರೈತರು ಮುಂದಾಗಬೇಕು ಎಂದು ರೋಣ ಸಹಾಯಕ ವಲಯ ಅರಣ್ಯಾಧಿಕಾರಿ ಸಿ.ಎ. ಪಾಗದ ಹೇಳಿದರು.
ಡ.ಸ. ಹಡಗಲಿ ಗ್ರಾಮದಲ್ಲಿ ರವಿವಾರ ಗದಗ ಜಿಪಂ, ರೋಣ ತಾಪಂ ಹಾಗೂ ಅರಣ್ಯ ಇಲಾಖೆ ವತಿಯಿಂದ ಕೃಷಿ ಅರಣ್ಯ ಚಟುವಟಿಕೆ ಕುರಿತು ಅರಿವು ಮೂಡಿಸುವ ಬೀದಿ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೃಷಿಗೆ ಮಳೆ ಮಹತ್ವದ ಪಾತ್ರ ವಹಿಸುತ್ತದೆ. ಪರಿಸರದ ಸಂರಕ್ಷಣೆಯಾದಲ್ಲಿ ಸಕಾಲಕ್ಕೆ ಮಳೆಯಾಗಿ ಉತ್ತಮ ಬೆಳೆ ಬೆಳೆಯಬಹುದು. ವ್ಯವಸಾಯ ಮಾಡದೇ ಇರುವ ಜಮೀನಿನಲ್ಲಿ ಅರಣ್ಯ ಕೃಷಿ ಮಾಡಲು ರೈತರು ಮುಂದಾಗಬೇಕು. ಅರಣ್ಯ ಇಲಾಖೆಯಿಂದ ಸಾಕಷ್ಟು ಅನುದಾನ ಲಭ್ಯವಿದ್ದು, ಗ್ರಾಪಂ ಮಟ್ಟದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಅರಣ್ಯ ಕೃಷಿಗೆ ಅನುದಾನ ನೀಡಲಾಗುತ್ತಿದೆ. ಬೇವು, ಮಾವು, ಹುಣಸೆ, ಹೆಬ್ಬೇವು ಸೇರಿದಂತೆ ಅನೇಕ ರೀತಿಯ ಮರ ನೀಡಲಾಗುತ್ತಿದೆ ಎಂದರು.
ಶಿರಹಟ್ಟಿ ತಾಲೂಕಿನ ಕೊಂಚಿಗೇರಿಯ ಜನರಂಗ ಕಲಾ ತಂಡದಿಂದ ಅರಣ್ಯ ಇಲಾಖೆ ವಿವಿಧ ಯೋಜನೆ, ಪರಿಸರ ಸಂರಕ್ಷಣೆ ಕುರಿತಾದ ಬೀದಿ ನಾಟಕ ಜರುಗಿತು. ಅರಣ್ಯ ಪ್ರೇರಕ ಎಸ್.ಎಸ್. ಚನ್ನವೀರಶೆಟ್ಟರ, ಕಲಾ ತಂಡದ ಅಶೋಕ ಬಡಿಗೇರ, ಶರೀಫ್ ಸಾಬ ನದಾಫ್, ರಮೇಶ ಕಾಳಿ, ಸುನಂದಾ ಬಡಿಗೇರ, ಶರಣಪ್ಪ ಬೆಳವಗಿ, ಕೃಷ್ಣಾ ಬಡಿಗೇರ ಇತರರು ಇದ್ದರು.