ಚಿತ್ರದುರ್ಗ: ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗಿವೆ. ಇದನ್ನು ಸಂಪೂರ್ಣ ನಿಯಂತ್ರಣ ಮಾಡುವ ಉದ್ದೇಶಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶರಾದ ಮನಗೂಳಿ ಎಂ. ಪ್ರೇಮಾವತಿ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಸ್ವಾತಂತ್ರÂದ ಅಮೃತ ಮಹೋತ್ಸವ, ಕಾನೂನು ಸೇವಾ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಲ್ಯ ವಿವಾಹದಿಂದ ಆಗುವ ಸಮಸ್ಯೆ ಬಗ್ಗೆ ಜನರಿಗೆ ತಿಳಿಸಿದ್ದರೂ, ಮತ್ತೆ ಅದೇ ತಪ್ಪು ಮಾಡುವುದು ಎಷ್ಟು ಸರಿ ಎಂದು ನ್ಯಾಯಾಧೀಶರು ಬೇಸರ ವ್ಯಕ್ತಪಡಿಸಿದರು. ಬಾಲ್ಯವಿವಾಹಕ್ಕೆ ಹೆಣ್ಣು ಮಕ್ಕಳೇ ಹೆಚ್ಚಾಗಿ ಗುರಿಯಾಗುತ್ತಿದ್ದಾರೆ. ಜಗತ್ತಿಗೆ ಆಗ ತಾನೇ ಕಣ್ಣು ಬೀಡುವ ಏನು ಹರಿಯದ ವಯಸ್ಸಿನಲ್ಲಿ ಮದುವೆ ಮಾಡಿದರೆ ಪೋಷಕರೇ ಅವರ ಜೀವನ ಹಾಳು ಮಾಡಿದಂತೆ. ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಭಾಗಗಳಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಆಗಾಗ ನಡೆಯುತ್ತಿವೆ. ಇದನ್ನು ಸಂಪೂರ್ಣವಾಗಿ ತಡೆಯುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳ ಜತೆ ಎಲ್ಲರ ಸಹಕಾರ ಮುಖ್ಯ ಎಂದರು.
ಭವ್ಯ ಭಾರತ ನಿರ್ಮಾಣದಲ್ಲಿ ದೇಶದ ಆಸ್ತಿಯಾಗಿರುವ ಮಕ್ಕಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಮಕ್ಕಳ ಹಕ್ಕುಗಳ ರಕ್ಷಣೆ ಆಗಬೇಕು. ಅವರ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂದರು ತಿಳಿಸಿದರು. ಮಕ್ಕಳ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಪಾಲಕರು ತಪ್ಪು ಮಾಡಿದರೆ ನೀವುಗಳೇ ಕಾನೂನಿನ ಬಗ್ಗೆ ತಿಳಿಸಬೇಕು. ಆಗ ಸಮಸ್ಯೆ ಆಗುವುದು ಪ್ರಥಮ ಹಂತದಲ್ಲೇ ತಪ್ಪಿಸಿದಂತಾಗುತ್ತದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾತನಾಡಿ, ಹಕ್ಕುಗಳ ಕುರಿತು ಮಕ್ಕಳು ತಿಳಿದು ಕೊಳ್ಳಬೇಕು. ವಿದ್ಯೆಯ ಜತೆಗೆ ಸಂಸ್ಕಾರವಂತರಾಗಿ ಬಾಳುವುದನ್ನು ಕಲಿಯಬೇಕು. ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತಹ ಸತøಜೆಗಳಾಗಿ ದೇಶ ಕಟ್ಟುವ ಕಾಯಕಕ್ಕೆ ಕೈಜೋಡಿಸಬೇಕು. ಮಕ್ಕಳ ಸಹಾಯವಾಣಿ 1098, ಪೊಲೀಸ್ ಸಹಾಯವಾಣಿ 112 ಪ್ರತಿಯೊಬ್ಬ ಮಕ್ಕಳ ಬಳಿಯೂ ಇರಬೇಕು. ಎಲ್ಲಿಯಾದರೂ ದೌರ್ಜನ್ಯ ನಡೆದರೆ, ತೊಂದರೆ ಉಂಟಾದಲ್ಲಿ ಇದು ಸಹಾಯಕ್ಕೆ ಬರಲಿದೆ. ಆದ್ದರಿಂದ ತಪ್ಪದೇ ನಿಮ್ಮ ಬಳಿ ನಂಬರ್ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು.
ಕಾನೂನಾತ್ಮಕವಾಗಿ 18 ವರ್ಷ ತುಂಬಿದ ಬಳಿಕ ಅಧಿ ಕೃತವಾಗಿ ಚಾಲನಾ ಪರವಾನಗಿ ಪಡೆದು ವಾಹನ ಚಾಲನೆ ಮಾಡಬೇಕು. ಆದರೆ, ಅದಕ್ಕಿಂತ ಮುನ್ನ ಯಾವ ಮಕ್ಕಳು ವಾಹನ ಚಾಲನೆ ಮಾಡಬಾರದು ಎಂದು ತಿಳಿಸಿದರು. ಬಾಲಕಿಯರ ಬಾಲಮಂದಿರ ಮಕ್ಕಳಿಂದ ಸಾಮಾಜಿಕ ಸಮಸ್ಯೆಗಳ ಬಗ್ಗೆ ಕಿರುನಾಟಕ, ಬಾಲಕರ ಬಾಲಮಂದಿರದ ಮಕ್ಕಳಿಂದ ನೃತ್ಯ ಹಾಗೂ ಚಿತ್ರ, ಡಾನ್ ಬಾಸ್ಕೊ ಮಕ್ಕಳು ಕಿರು ನಾಟಕ ಪ್ರದರ್ಶಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ನ್ಯಾಯಾಲಯದ ಆವರಣದಿಂದ ತರಾಸು ರಂಗಮಂದಿರದವರೆಗೂ ಜಾಥಾ ನಡೆಯಿತು. ಚಿತ್ರಕಲೆ, ಪ್ರಬಂಧ ಸ್ಪರ್ಧೆ, ಘೋಷಣೆಗಳ ರಚನೆ ಹಾಗೂ ಕಿರು ಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನ್ಯಾಯಾಧೀಶರಾದ ಆರ್.ಬನ್ನಿಹಟ್ಟಿ ಹನುಮಂತಪ್ಪ, ಎಚ್.ಎಂ.ದೇವರಾಜು, ಎಸ್. ಎನ್. ಕಲ್ಕಣಿ, ಸಿ.ಎಸ್. ಜಿತೇಂದ್ರನಾಥ್, ಕೆ.ಲತಾ, ನೇಮಚಂದ್ರ ಜೆ. ದೇಸಾಯಿ, ಎಚ್. ಜೆ. ಶಿಲ್ಪಾ, ಬಿ.ಕೆ. ಗಿರೀಶ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಸ್. ರಾಜಾನಾಯಕ್, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಶಿವು ಯಾದವ್, ಜಿ.ಸಿ. ದಯಾನಂದ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಲೋಕೇಶ್ವರಪ್ಪ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಆರ್. ಪ್ರಭಾಕರ್ ಇದ್ದರು.