ಕಲಬುರಗಿ: ಬಿಜೆಪಿಯಲ್ಲಿದ್ದುಕೊಂಡು ಎಲ್ಲವನ್ನೂ ಭಕ್ಕರಿಸಿ ಈಗ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ಸಿಗೆ ಬಾಬುರಾವ್ ಚಿಂಚನ್ಸೂರ್ ಮಾರಾಟವಾಗಿದ್ದು ಅವರೊಬ್ಬ ಸಮಯಕ್ಕೆ ತಕ್ಕಂತೆ ಬಣ್ಣ ಬದಲಿಸುವ ಊಸರವಳ್ಳಿ ಎಂದು ರಾಜ್ಯ ಬಿಜೆಪಿ ಒಬಿಸಿ ಘಟಕದ ಸಂಯೋಜಕ ಅವ್ಬಣ್ಣ ಮ್ಯಾಕೇರಿ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಾಬುರಾವ್ ಒಬ್ಬ ಸಂಸ್ಕಾರ ರಹಿತ ಅವಕಾಶವಾದಿ ರಾಜಕಾರಣಿ. ಮಹಾ ಭ್ರಷ್ಟರಾಗಿದ್ದುಕೊಂಡು ಬೆಣ್ಣೆತೊರ, ಮುಲ್ಲಾಮಾರಿ ಗಂಡೋರಿನಾಲ ನೀರಾವರಿ ಯೋಜನೆಗಳ ಮೂಲಕ ನೂರಾರು ಕೋಟಿ ರೂಪಾಯಿಗಳನ್ನು ಲೂಟಿ ಹೊಡೆದಿದ್ದಾರೆ. ಈಗ ಆ ಯೋಜನೆಗಳ ಅಂತರ್ಗತ ಯಾವುದೇ ರೈತರಿಗೆ ಹೊಲಗಳಿಗೆ ನೀರು ಹರಿಯದಂತೆ ಮಾಡಿದ ಮಹಾವಂಚಕ ಎಂದು ದೂರಿದರು.
ಮಾತೆತ್ತಿದರೆ ಸಾಕು ಕೇವಲ ಕೋಲಿ ಸಮಾಜವನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಮಾಡುವಲ್ಲಿ ಚತುರತೆ ತೋರಿದ ಚಿಂಚನಸೂರ್, ಮಹಾಸ್ವಾರ್ಥ ರಾಜಕಾರಣಿ. ತನ್ನ ಸ್ವಂತ ಏಳಿಗೆಗಾಗಿ ಸಮಾಜವನ್ನು ಎಲ್ಲ ಸ್ತರದಲ್ಲಿ ಬಳಕೆ ಮಾಡಿ ಕೊಂಡಿದ್ದಾರೆ ಎಂದು ದೂರಿದರು.
ಇದನ್ನೂ ಓದಿ: ಉದ್ದೇಶ ಪೂರ್ವಕವಾಗಿಯೇ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಲಾಗಿದೆ: ಎಚ್.ವಿಶ್ವನಾಥ್
Related Articles
ಕಳೆದ ನಾಲ್ಕು ದಶಕಗಳಿಂದ ತನ್ನ ವಾರಗೀಯ ಕೋಲಿ ಸಮಾಜದ ಅನೇಕ ಮುಖಂಡರನ್ನು, ಯುವ ನಾಯಕರನ್ನು ಹಾದಿ ತಪ್ಪಿಸಿದ್ದಲ್ಲದೆ, ಪ್ರತಿ ಚುನಾವಣೆಯಲ್ಲಿ ಸಮಾವೇಶಗಳ ಮುಖೇನ ಅಧಿಕಾರಕ್ಕೆ ಬರುವ ಪಕ್ಷಗಳ ಮುಖಸ್ತುತಿ ಮಾಡಿ ಅಲ್ಲಿಗೆ ಜಂಪ್ ಮಾಡಿ ಅಧಿಕಾರವನ್ನು ಅನುಭವಿಸಿ ಕೈ ಕೊಡುವ ಚಾಳಿ ಹೊಂದಿದ್ದಾರೆ ಎಂದರು.
ಎಸ್ ಟಿ ಮಾಡಿಸುವುದೇ ಟ್ರಂಪ್ ಕಾರ್ಡ್:
ಚಿಂಚನಸೂರ ಯಾವತ್ತೂ ಪ್ರದೇಶ, ಸಮುದಾಯ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಬಯಸಿ ರಾಜಕಾರಣ ಮಾಡಿಲ್ಲ. ಕೇವಲ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡಿಸುತ್ತೇನೆ ಎಂದು ಬಗಲಲ್ಲಿ ಟ್ರಂಪ್ ಕಾರ್ಡ್ ಇಟ್ಟುಕೊಂಡು, ನಾನಾತರದ ಬಣ್ಣ ಬಣ್ಣದ ಊಸರವಳ್ಳಿ ಹೇಳಿಕೆಗಳನ್ನು ನೀಡಿ ಕೋಲಿ ಸಮಾಜದ ಜನರ ಬೆಂಬಲವನ್ನು ಪಡೆದುಕೊಂಡು ತಾವಿದ್ದ ಪಕ್ಷವನ್ನ ಹಾದಿ ತಪ್ಪಿಸಿ ತಾವು ಅಧಿಕಾರ ಅನುಭವಿಸಿದ ಕುತಂತ್ರಿ ರಾಜಕಾರಣಿ ಎಂದು ದೂರಿದರು.
2014ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಇದ್ದಾಗಲೂ ನಾಳಿಗೆ ಎಸ್ಟಿ ಪ್ರಮಾಣ ಪತ್ರ ಹಂಚಿಯೇ ಬಿಡುತ್ತೇನೆ ಎಂದು ತೊಡೆತಟ್ಟಿ ಹೇಳಿದ್ದರು. ಅದಲ್ಲದೆ ಎಸ್ ಟಿ ಸರ್ಟಿಫಿಕೇಟ್ ಪಡೆಯುವ ತನಕ ಸಾಯುವುದೇ ಇಲ್ಲ ಎಂದು ಕೂಡ ಶಪಥ ಮಾಡಿದ್ದರು. 2019ರ ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆಯಲ್ಲಿ ಒಂದು ತಿಂಗಳಲ್ಲಿ ಎಸ್ ಟಿ ಮಾಡಿಸಿ ದಿ.ವಿಠ್ಠಲ್ ಹೇರೂರು ಕನಸಿನಂತೆ ಪ್ರಮಾಣ ಪತ್ರವನ್ನು ಅವರ ಸಮಾಧಿಯ ಮೇಲೆ ಇಟ್ಟು ಪೂಜಿಸುತ್ತೇನೆ ಎಂದು ಹೇಳಿದ್ದರು. ಆದರೆ, ಅದ್ಯಾವುದೂ ನಿಜವಾಗಲೂ ಅವರ ಕೈಯಿಂದ ಮಾಡಲಿಕ್ಕೆ ಸಾಧ್ಯವೇ ಆಗಿಲ್ಲ ಎಂದು ಆಪಾದಿಸಿದರು.
ಇದನ್ನೂ ಓದಿ: ಭಾರತದ ಅಭಿವೃದ್ಧಿಯಲ್ಲಿ ಸಾಮಾಜಿಕ- ಧಾರ್ಮಿಕ ಸಂಸ್ಥೆಗಳ ಪಾತ್ರ ಮಹತ್ವದ್ದು: ನರೇಂದ್ರ ಮೋದಿ
ಮೊನ್ನೆಯಷ್ಟೇ ಎನ್. ರವಿಕುಮಾರ್ ಅವರೊಂದಿಗೆ ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗಿ ಬಿಜೆಪಿ ನನ್ನ ತಾಯಿ. ನಾನು ತಾಯಿಗೆ ದ್ರೋಹ ಮಾಡಲ್ಲ.. ಅಂತ ಹೇಳಿದ ಚಿಂಚನಸೂರ್, ಏಕಾಏಕಿ ಪಕ್ಷ ಬಿಟ್ಟು ಹೋಗಿರುವುದರಿಂದ ಕಾಂಗ್ರೆಸ್ಸಿಗೆ ಮಾರಾಟವಾದ ಶಂಕೆ ಇದೆ.ಕಂಡವರಿಗೆಲ್ಲಾ ಸುಳ್ಳು ಹೇಳಿಕೊಂಡು ಹೋಗುವುದುಅವರ ಜಾಯಮಾನ. ಅವರಿಂದ ಸಮಾಜದ ಯಾವ ಯುವಕರಿಗೆ ರಾಜಕೀಯ ಭವಿಷ್ಯ ಸಿಕ್ಕಿಲ್ಲ ಎಂದ ಅವರು, ಬಿಜೆಪಿಯಲ್ಲಿ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ತಾವೇ ಆದರು. ಇವರಿಗಾಗಿ ಮಂಡಳಿಯನ್ನು ಕ್ಯಾಬಿನೆಟ್ ದರ್ಜೆಗೆ ಏರಿಸಲಾಯಿತು. ಬಳಿಕ ಎಂಎಲ್ಸಿ ಕೂಡ ಅವರೇ ಪಡೆದುಕೊಂಡರು. ಅವರ ಪತ್ನಿ ಅಮರೇಶ್ವರಿ ಚಿಂಚನ್ಸೂರ್ ಅವರು ಆಹಾರ ನಿಗಮದ ರಾಷ್ಟ್ರೀಯ ನಿರ್ದೇಶಕರಾದರು. ಇದೆಲ್ಲವೂ ಅವರಿಗೆ ಬಿಜೆಪಿಯಲ್ಲಿ ಕೋಲಿ ಸಮಾಜವನ್ನು ಪ್ರತಿನಿಧಿಸಿದ್ದಕ್ಕಾಗಿ ಕೊಟ್ಟಂತಹ ಅಥವಾ ಪಡೆದುಕೊಂಡಂತಹ ಅಧಿಕಾರಗಳು. ಇದೆಲ್ಲವೂ ಸ್ವಾರ್ಥ ರಾಜಕಾರಣ ಅಲ್ಲವೆ ಎಂದು ಪ್ರಶ್ನಿಸಿದರು.
ಆದರೆ,ಇವತ್ತು ಬಿಜೆಪಿಯನ್ನು ದೂಷಣೆ ಮಾಡಿ ಬಿಟ್ಟು ಹೋಗುವಂತಹ ಕೆಟ್ಟ ಮನಸ್ಥಿತಿ ಪ್ರದರ್ಶನ ಮಾಡಿದ್ದಕ್ಕಾಗಿ ಖಂಡಿಸುತ್ತೇವೆ ಎಂದರು.
ಬಿಜೆಪಿ ಯಾವುದೇ ಸಂದರ್ಭದಲ್ಲಿ ಕೂಲಿ ಸಮಾಜಕ್ಕೆ ದ್ರೋಹ ಮಾಡಿಲ್ಲ. ನಾಲ್ಕು ಜನರಿಗೆ ಎಂಎಲ್ಸಿ ಸ್ಥಾನ ನೀಡಲಾಗಿದೆ. ಅಂಬಿಗರ ಚೌಡಯ್ಯ ಗುರುಪೀಠ ನರಸೀಪುರಕ್ಕೆ 12 ಕೋಟಿ, ಸಮುದಾಯ ಭವನಗಳಿಗೆ 13 ಕೋಟಿ,ಬೆಂಗಳೂರಿನಲ್ಲಿ ಕೂಲಿ ಭವನಕ್ಕೆ 5 ಕೋಟಿ, ಅಫಜಲಪುರ ಕೋಲಿ ಭವನಕ್ಕೆ ಒಂದು ಕೋಟಿ ರೂಪಾಯಿಗಳನ್ನು ನೀಡಿದ್ದಲ್ಲದೆ, ಅಂಬಿಗರ ಚೌಡಯ್ಯ ಜಯಂತಿಯನ್ನು ರಾಜ್ಯಮಟ್ಟದಲ್ಲಿ ಆಚರಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜೊತೆಯಲ್ಲಿ ರಮಾನಾಥ್ ಕೋವಿಂದವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ಕೂಡ ಬಿಜೆಪಿ ಪಕ್ಷವೇ ಎಂದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ ಸಪ್ಪನಗೋಳ, ಚಂದ್ರಕಾಂತ್ ಶಕಾಪುರ್, ತಮ್ಮಣ್ಣ ಡಿಗ್ಗಿ, ಮಲ್ಲಿಕಾರ್ಜುನ್ ಎಮ್ಮಿಗನೂರ್, ಸೂರ್ಯಕಾಂತ್ ಅವರಾದ್, ಪಿತಾಂಬರ್ ಕಲಗುರ್ತಿ ಸೇರಿದಂತೆ ಇತರರು ಇದ್ದರು.