Advertisement

ದೂರ ಉಳಿದ ಕೌರ್‌

03:50 AM Mar 01, 2017 | |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ರಾಮ್‌ಜಾಸ್‌ ಕಾಲೇಜಿನಲ್ಲಿ ಎಬಿವಿಪಿ ನಡೆಸಿದೆ ಎನ್ನಲಾದ ಹಿಂಸಾಚಾರವನ್ನು ಖಂಡಿಸಿ ಮಂಗಳವಾರ ದಿಲ್ಲಿ ವಿವಿಯಲ್ಲಿ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಿತು.

Advertisement

ದಿಲ್ಲಿ ವಿವಿಯಡಿ ಬರುವ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಕೆಲವು ರಾಜಕೀಯ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಆದರೆ, ಎಬಿವಿಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಕೈಗೊಂಡ ಶ್ರೀರಾಮ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಗುರ್ಮೆಹರ್‌ ಕೌರ್‌ ಪ್ರತಿಭಟನಾ ರ್ಯಾಲಿಯಿಂದ ದೂರವುಳಿದರು. ನಾನು ಏಕಾಂಗಿಯಾಗಿ ಇರಲು ಬಯಸುತ್ತೇನೆ ಎಂದು ಹೇಳಿದ ಕೌರ್‌, ಜಲಾಂಧರ್‌ನಲ್ಲಿರುವ ತನ್ನ ಮನೆಗೆ ಮರಳಿದರು.

ಅದಕ್ಕೂ ಮೊದಲು ಟ್ವೀಟ್‌ ಮಾಡಿದ್ದ ಕೌರ್‌, “ನನ್ನ ಧೈರ್ಯ ಮತ್ತು ಸಾಮರ್ಥಯವನ್ನು ಯಾರಾದರೂ ಪ್ರಶ್ನಿಸುವುದಿದ್ದರೆ, ನಾನದನ್ನು ಸಾಕಷ್ಟು ತೋರಿಸಿದ್ದೇನೆ. ದಿಲ್ಲಿ ವಿವಿಯಲ್ಲಿ ಇಂದು ನಡೆಯುವ ಪ್ರತಿಭಟನೆಯು ನನಗೆ ಸಂಬಂಧಿಸಿದ್ದಲ್ಲ, ಎಲ್ಲ ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದು. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅದನ್ನು ಯಶಸ್ವಿಗೊಳಿಸಿ,’ ಎಂದು ಕೇಳಿಕೊಂಡಿದ್ದರು. 

ಪ್ರತಿಭಟನೆಯಲ್ಲಿ ಸಿಪಿಐ ನಾಯಕರಾದ ಸೀತಾರಾಂ ಯೆಚೂರಿ, ಡಿ. ರಾಜಾ, ಸ್ವರಾಜ್‌ ಇಂಡಿಯಾದ ಯೋಗೇಂದ್ರ ಯಾದವ್‌, ಜೆಎನ್‌ಯು, ಜಾಮಿಯಾ ಮಿಲಿಯಾ ವಿವಿ ಮತ್ತು ಅಂಬೇಡ್ಕರ್‌ ವಿವಿ ಉಪನ್ಯಾಸಕರು, ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್‌, ಶೆಹ್ಲಾ ರಶೀದ್‌ ಸೇರಿದಂತೆ 800ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಎನ್‌ಎಸ್‌ಯುಐ ಸದಸ್ಯರು ಕಲಾ ವಿಭಾಗದ ಹೊರಗೆ ನಿರಶನ ನಡೆಸಿದರು. 

ಈ ನಡುವೆ, ದಿಲ್ಲಿ ಸಿಎಂ ಕೇಜ್ರಿವಾಲ್‌ ಮಂಗಳವಾರ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌ರನ್ನು ಭೇಟಿಯಾಗಿ, ವಿದ್ಯಾರ್ಥಿನಿ ಕೌರ್‌ಗೆ ಅತ್ಯಾಚಾರ ಬೆದರಿಕೆ ಹಾಕಿದವರ ವಿರುದ್ಧ ಹಾಗೂ ಎಬಿವಿಪಿ ಗೂಂಡಾಗಿರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Advertisement

ಗೀತಾ, ಬಬಿತಾ ಟೀಕೆ: ಸೆಹ್ವಾಗ್‌ ಅವರು ಗುರ್ಮೆಹರ್‌ಗೆ ವ್ಯಂಗ್ಯವಾಡಿ ಟ್ವೀಟಿಸಿದ ಬೆನ್ನಲ್ಲೇ, ಕುಸ್ತಿಪಟು ಸಹೋದರಿಯರಾದ ಗೀತಾ, ಬಬಿತಾ ಫೊಗಟ್‌ ಹಾಗೂ ರೆಸ್ಲರ್‌ ಯೋಗೇಶ್ವರ ದತ್‌ ಅವರೂ ಕೌರ್‌ಳನ್ನು ಖಂಡಿಸಿದ್ದಾರೆ. ಕೌರ್‌ ಹೇಳಿಕೆ ಸರಿಯಲ್ಲ. ಅವರು ದೇಶಕ್ಕೆ ಅವಮಾನಿಸಿದ್ದಾರೆ ಎನ್ನುವುದು ಗೀತಾ ಮತ್ತು ಬಬಿತಾ ಆಕ್ಷೇಪ. ಯೋಗೇಶ್ವರ್‌ ಕೂಡ ಟ್ವೀಟ್‌ ಮೆಮ್‌ ಮಾಡಿದ್ದಾರೆ. ಇದೇ ವೇಳೆ, ವಿದ್ಯಾವಂತರಾದ ಸೆಹ್ವಾಗ್‌, ಯೋಗೇಶ್ವರ್‌ರಂಥವರು ಕೌರ್‌ಗೆ ಮಾಡಿರುವ ಅವಹೇಳನ ಬಗ್ಗೆ ಗೀತರಚನೆಕಾರ ಜಾವೇದ್‌ ಅಖ್ತರ್‌ ಕಿಡಿಕಾರಿದ್ದಾರೆ.

ಕೌರ್‌ಗೆ‌ ಸೇನಾಧಿನಿಗಳ ಬೆಂಬಲ: ಕೌರ್‌ ಪರ ಕಾನೂನು ಹೋರಾಟ ನಡೆಸಲು ಪಂಜಾಬ್‌ನ ನಿವೃತ್ತ ಯೋಧರು ನಿರ್ಧರಿಸಿದ್ದಾರೆ.  

ದೇಶದ್ರೋಹಿಗಳ ಕೃತ್ಯ: ಎಬಿವಿಪಿ
ರಾಮ್‌ಜಾಸ್‌ ಕಾಲೇಜಿನ ಹಿಂಸೆಗೆ ಹೊರಗಿನವರು ಪ್ರಚೋದನೆ ನೀಡಿದರು. ದೇಶದ್ರೋಹಿಗಳು ನಮ್ಮ ಮೇಲೆ ಸುಖಾಸುಮ್ಮನೆ ಆರೋಪ ಹೊರಿಸಿದ್ದಾರೆ ಎಂದು ಎಬಿವಿಪಿ ಆರೋಪಿಸಿದೆ. ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಬಿವಿಪಿ ರಾಷ್ಟ್ರೀಯ ಮಾಧ್ಯಮ ಸಂಚಾಲಕ ಸಾಕೇತ್‌ ಬಹುಗುಣ, ಕಾಲೇಜಿನ ವಾತಾವರಣವನ್ನು ಮಲಿನಗೊಳಿಸಲು ಹೊರಗಿನವರು ಯತ್ನಿಸಿದರು. ನಾವು ಯಾರ ಮೇಲೂ ದಾಳಿ ನಡೆಸಿಲ್ಲ. ನಮ್ಮ ಕ್ಯಾಂಪಸ್‌ನಲ್ಲಿ ಹೊರಗಿನವರು ಮೂಗು ತೂರಿಸುತ್ತಿರುವುದರ ವಿರುದ್ಧ ಮಾ.2ರಂದು ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next