ಮಾನ್ವಿ: ಕೋವಿಡ್ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಬಾಲ ಕಾರ್ಮಿಕತೆ ಮತ್ತು ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕ್ರಮ ಕೈಗೊಳ್ಳುತ್ತಿದ್ದು, ಪಾಲಕರಿಗೆ ಜಾಗೃತಿ ಮೂಡಿಸಿ ಮುಚ್ಚಳಿಕೆ ಬರೆಸಿಕೊಳ್ಳುತ್ತಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಹಿಳೆಯರ ರಕ್ಷಣೆಗಾಗಿ ಅನೇಕ ಯೋಜನೆಗಳನ್ನು ಜಾರಿ ತಂದಿವೆ. ಮಹಿಳೆಯರ ಮೇಲಿನ ದೌರ್ಜನ್ಯ, ಲಿಂಗ ತಾರತಮ್ಯ, ಲಿಂಗಾನುಪಾತ, ವರದಕ್ಷಣೆ, ಬಾಲ್ಯ ವಿವಾಹ ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಇಲಾಖೆಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ. ಕೋವಿಡ್ ಭೀತಿಯಲ್ಲಿನ ಲಾಕ್‌ಡೌನ್ ಸಂದರ್ಭದಲ್ಲಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾಲ್ಯವಿವಾಹ ಪ್ರಕರಣಗಳು ಬೆಳಕಿಗೆ ಬಂದಿವೆ.
ಅಂಕಿ-ಅಂಶ: 2019ರಲ್ಲಿ ಕೊರವಿ ಗ್ರಾಮದಲ್ಲಿ ಬಾಲಕಿಯ ಬಾಲ್ಯವಿವಾಹಒಂದೇ ಒಂದು ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಮದುವೆ ತಡೆದಿದ್ದರು. ಆದರೆ, 2020ರ ಜನೆವರಿಯಿಂದ ಇಲ್ಲಿಯವರೆಗೆ ತಾಲೂಕಿನಲ್ಲಿ 7ಪ್ರಕರಣಗಳು ಬೆಳಕಿಗೆ ಬಂದಿವೆ. ಸೀಕಲ್, ಮುಸ್ಟೂರು, ಕಂಬಳತ್ತಿ ಮತ್ತು ತಿಮ್ಮಾಪುರ ಗ್ರಾಮಗಳಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ತಡಕಲ್ ಹಾಗೂ ಕಂಬಳತ್ತಿ ಗ್ರಾಮದಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣವನ್ನು ಸಿಡಿಪಿಒ ಸುಭದ್ರಾ ದೇವಿಯವರು ಆಯಾ ವ್ಯಾಪ್ತಿಯ ಕವಿತಾಳ ಮತ್ತು ಮಾನ್ವಿ ಠಾಣೆಯಲ್ಲಿ ದೂರು ದಾಖಲಿದ್ದಾರೆ. ಬೊಮ್ಮನಾಳ ಮತ್ತು ನಸ್ಲಾಪುರ ಗ್ರಾಮದ ಬಾಲಕಿಯರ ಮದುವೆ ಸಿಂಧನೂರು ತಾಲೂಕಿನಲ್ಲಿ ನಡೆದಿದ್ದು, ಅಲ್ಲಿನ ಸಿಡಿಪಿಒ ಅಧಿಕಾರಿಗಳಿಗೆ ಕ್ರಮಕ್ಕೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ 45 ಪ್ರಕರಣಗಳಿದ್ದು, ಇದರಲ್ಲಿ ಈಗಾಗಲೇ 10 ಬಾಲ್ಯ ವಿವಾಹ ಬಗ್ಗೆ ದೂರು ದಾಖಲಿಸಲಾಗಿದೆ.
ಕಠಿಣ ಕ್ರಮ: ಪೋಷಕರ ತಿಳಿವಳಿಕೆ ಕೊರತೆಯೇ ಬಾಲ್ಯ ವಿವಾಹ ಹೆಚ್ಚಳಕ್ಕೆ ಕಾರಣವಾಗಿದ್ದು, ಬಾಲ್ಯವಿವಾಹ ಮತ್ತು ಬಾಲ ಕಾರ್ಮಿಕರನ್ನು ತಡೆಯುವಲ್ಲಿ ಅಧಿಕಾರಿಗಳು ಹೈರಾಣಾಗಿದ್ದಾರೆ. ಅಧಿಕಾರಿಗಳು ಜಾಗೃತಿ ಮತ್ತು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. 18 ವರ್ಷ ತುಂಬುವವರೆಗೂ ಮದುವೆ ಮಾಡಿದರೆ 2 ವರ್ಷ ಜೈಲು, 1 ಲಕ್ಷ ರೂ. ದಂಡದ ಒಪ್ಪಿಗೆ ಮುಚ್ಚಳಿಕೆ ಪತ್ರಕ್ಕೆ ಪಾಲಕರಿಂದ ಸಹಿ ಪಡೆಯಲಾಗುತ್ತಿದೆ. ಅಲ್ಲದೆ ಆಯಾ ಅಂಗನವಾಡಿ ವ್ಯಾಪ್ತಿಯಲ್ಲಿ ನಡೆಯುವ ಬಾಲ್ಯ ವಿವಾಹಗಳ ಬಗ್ಗೆ ಮಾಹಿತಿ ನೀಡಬೇಕು. ಪಾಲಕರಿಗೆ ಜಾಗೃತಿ ಮೂಡಿಸಬೇಕು. ಒಂದು ವೇಳೆ ಬಾಲ್ಯ ವಿವಾಹ ನಡೆದರೆ ಅಂಗನವಾಡಿ ಶಿಕ್ಷಕಿಯರೇ ಹೊಣೆಗಾರರಾಗಿದ್ದು, ಅವರ ಮೇಲೆ ಕ್ರಮ ಜರುಗಿಸಲಾಗುವುದು ಎನುತ್ತಾರೆ ಸಿಡಿಪಿಒ ಮೇಲಧಿಕಾರಿಗಳು.
ರಾಜ್ಯದಲ್ಲಿ ಬಾಲ ಕಾರ್ಮಿಕತೆ, ಬಾಲ್ಯ ವಿವಾಹ ಹೆಚ್ಚಾಗುತ್ತಿರುವುದು ನಿಜ. ರಾಜ್ಯಾದ್ಯಂತ ಪ್ರವಾಸಿ ಮಾಡಿ ಮಾಹಿತಿ ಸಂಗ್ರಹಿಸಿದ್ದೇನೆ. ರಾಯಚೂರು ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದ್ದು, ಬಾಲ್ಯ ವಿವಾಹ ಮಾಹಿತಿದಾರರಿಗೆ ಇಂತಿಷ್ಟು ಹಣ ನಿಗದಿಪಡಿಸುವ ಯೋಚನೆ ಇದೆ. ಗ್ರಾಪಂ ಚುನಾವಣೆ ನಂತರ ಕಾರ್ಯ ಆರಂಭಿಸಲಾಗುವುದು.
– ಜಯಶ್ರೀ ಚನ್ನಾಳ್, ರಾಜ್ಯ ನಿರ್ದೇಶಕ, ರಾಜ್ಯ ಮಕ್ಕಳ ಸಂರಕ್ಷಣ ಘಟಕ
ಈ ವರ್ಷ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ತಾಲೂಕಿನ 7 ಪ್ರಕರಣಗಳಿದ್ದು, ಕೆಲ ಮದುವೆಗಳನ್ನು ನಿಲ್ಲಿಸಲಾಗಿದೆ. ತಡಕಲ್ ಗ್ರಾಮದಲ್ಲಿ ನಡೆದ ಬಾಲ್ಯ ವಿವಾಹ ಬಗ್ಗೆ ಕವಿತಾಳ ಠಾಣೆಯಲ್ಲಿ ಇಲಾಖೆಯಿಂದ ದೂರು ದಾಖಲಿಸಲಾಗಿದೆ. ಆಯಾ ಗ್ರಾಮದಲ್ಲಿ ನಡೆಯುವ ಬಾಲ್ಯ ವಿವಾಹಗಳ ಮಾಹಿತಿ ಕಲೆಹಾಕಲುಅಂಗನವಾಡಿ ಶಿಕ್ಷಕಿಯರಿಗೆ ತಿಳಿಸಲಾಗಿದೆ. ಮಾಹಿತಿ ಬಂದಲ್ಲಿ ಮದುವೆಗಳನ್ನು ನಿಲ್ಲಿಸಿ ಪಾಲಕರಿಗೆ ಜಾಗೃತಿ ಮೂಡಿಸಿ, ಮುಚ್ಚಳಿಕೆ ಬರೆಯಿಸಿಕೊಳ್ಳಲಾಗುತ್ತಿದೆ.
– ಸುಭದ್ರಾದೇವಿ, ಮಾನ್ವಿಯ ಸಿಡಿಪಿಒ
-ರವಿ ಶರ್ಮಾ