Advertisement

ಕೋವಿಡ್ ಮಣಿಸಲು ಜಾಗೃತಿ ಮದ್ದು: ಜಿ.ಪಂ. ನಿರ್ಣಯ

06:25 AM Sep 16, 2020 | mahesh |

ಉಡುಪಿ: ವ್ಯಾಪಕವಾಗಿರುವ ಕೋವಿಡ್ ವನ್ನು ಮಣಿಸಲು ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲು ಉಡುಪಿ ಜಿಲ್ಲಾ ಪಂಚಾಯತ್‌ ತೀರ್ಮಾನಿಸಿದೆ. ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಯಿತು.

Advertisement

ಕೋವಿಡ್‌ ಪರೀಕ್ಷೆ, ಚಿಕಿತ್ಸೆ, ಬಿಲ್‌ ಕುರಿತಂತೆ ಜನಸಾಮಾನ್ಯರಲ್ಲಿ ಹಲವು ಸಂಶಯ, ಗೊಂದಲಗಳಿದ್ದು ಅವುಗಳನ್ನು ನಿವಾರಿಸುವಂತೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಪ್ರತಾಪ್‌ ಹೆಗ್ಡೆ ಮಾರಾಳಿ ಮತ್ತು ಇತರ ಸದಸ್ಯರು ಕೇಳಿದಾಗ ಉತ್ತರಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಸುಧೀರ್‌ ಚಂದ್ರ ಸೂಡಅವರು, ಪೀಡಿತರಿಗೆ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಎಪಿಎಲ್‌, ಬಿಪಿಎಲ್‌ ಭೇದ ವಿಲ್ಲದೆ ಸರಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಕೊರೊನಾವನ್ನು ಬೇಗ ಗುರುತಿಸಿದಲ್ಲಿ ಇತರ‌ರಿಗೆ ಹರಡುವುದನ್ನು ತಡೆಯಲು ಸಾಧ್ಯ. ರ್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ನಲ್ಲಿ 1 ಗಂಟೆಯಲ್ಲಿ ಫ‌ಲಿತಾಂಶ ದೊರೆಯುತ್ತದೆ. ಫ‌ಲಿತಾಂಶ ನೆಗೆಟಿವ್‌ ಬಂದಲ್ಲಿ, ರೋಗ ಲಕ್ಷಣಗಳಿರುವ ವ್ಯಕ್ತಿಗಳಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಲಾಗುವುದು. ಪಾಸಿಟಿವ್‌ ಬಂದರೆ ಕೂಡಲೇ ಚಿಕಿತ್ಸೆ ಆರಂಭಿಸಲಾಗುವುದು. ಸರಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಉಚಿತವಾಗಿದೆ. ಪಾಸಿಟಿವ್‌ ಬಂದ ವ್ಯಕ್ತಿ ಜಿಲ್ಲಾಡಳಿತದ ಶಿಫಾರಸಿನೊಂದಿಗೆ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಅಲ್ಲೂ ಸಂಪೂರ್ಣ ಉಚಿತ ಚಿಕಿತ್ಸೆ ದೊರೆಯುತ್ತದೆ. ಒಂದು ವೇಳೆ ರೋಗಿ ಸಾಮಾನ್ಯ ವಾರ್ಡ್‌ ಬಿಟ್ಟು ಹೆಚ್ಚಿನ ಸೌಲಭ್ಯ ಪಡೆದಲ್ಲಿ ಅದಕ್ಕೆ ಮಾತ್ರ ಬಿಲ್‌ ಭರಿಸಬೇಕಾಗುತ್ತದೆ ಮತ್ತು ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಮಾತ್ರ ಬಿಲ್‌ ಭರಿಸಬೇಕಾಗುತ್ತದೆ ಎಂದು ತಿಳಿಸಿದರು.

ಐಟಿ ಕಚೇರಿ ಸ್ಥಳಾಂತರಕ್ಕೆ ವಿರೋಧ
ಮಂಗಳೂರಿನ ಐಟಿ ಕಚೇರಿಯನ್ನು ಗೋವಾಕ್ಕೆ ಸ್ಥಳಾಂತರಿಸುವುದರಿಂದ ಅವಿಭಜಿತ ಜಿಲ್ಲೆಯ ಸುಮಾರು 4 ಲಕ್ಷಕ್ಕೂ ಅಧಿಕ ತೆರಿಗೆದಾರರಿಗೆ ಅನನುಕೂಲವಾಗಲಿದ್ದು ಈ ಆದೇಶವನ್ನು ಹಿಂಪಡೆಯುವ ಕುರಿತಂತೆ ನಿರ್ಣಯ ಕೈಗೊಳ್ಳುವಂತೆ ಸದಸ್ಯ ಜನಾರ್ದನ ತೋನ್ಸೆ ಆಗ್ರಹಿಸಿದರು.

ವಿವಿಧೆಡೆ ಡಯಾಲಿಸಿಸ್‌ ಯಂತ್ರ
ಜಿಲ್ಲೆಯಲ್ಲಿ ಡಯಾಲಿಸಿಸ್‌ಗೆ ಬೇಡಿಕೆ ಇದ್ದು  ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚಿನ ಯಂತ್ರಗಳನ್ನು ಅಳವಡಿಸುವಂತೆ ಕೃಷಿ ಮತ್ತು ಕೈಗಾರಿಕೆ ಸ್ಥಾಯೀ ಸಮಿತಿ
ಅಧ್ಯಕ್ಷ ಸುಮಿತ್‌ ಶೆಟ್ಟಿ ಹೇಳಿದರು. ಜಿಲ್ಲಾಸ್ಪತ್ರೆಯಲ್ಲಿ ಸ್ಥಳಾವಕಾಶ ಕೊರತೆಯಿದ್ದು ಬೈಂದೂರು, ಬ್ರಹ್ಮಾವರ ಆಸ್ಪತ್ರೆಯಲ್ಲಿ ಹೊಸ ಯಂತ್ರ ಅಳವಡಿ ಸುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೆಬ್ರಿ, ಕಾಪು ಆಸ್ಪತ್ರೆಗಳಲ್ಲೂ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಜಿಲ್ಲಾ ಸರ್ಜನ್‌ ಡಾ| ಮಧುಸೂದನ್‌ ನಾಯಕ್‌ ತಿಳಿಸಿದರು.

Advertisement

ಬೆಳೆ ಸಮೀಕ್ಷೆ: ಶೇ.20 ಪ್ರಗತಿ
ಜಿಲ್ಲೆಯಲ್ಲಿ ಮೊಬೈಲ್‌ ಮೂಲಕ ನಡೆಯುತ್ತಿರುವ ಬೆಳೆ ಸಮೀಕ್ಷೆ ಯಲ್ಲಿ ಶೇ. 20ರಷ್ಟು ಪ್ರಗತಿ ಆಗಿದ್ದು, ಶೇ. 100 ಪ್ರಗತಿಯ ಗುರಿ ಹೊಂದ
ಲಾಗಿದೆ. ರೈತರು ವಿವರ ದಾಖಲಿಸಲು ಸೆ. 23ರ ವರೆಗೆ ಅವಕಾಶವಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಶೋಭಾ ಜಿ. ಪುತ್ರನ್‌, ಕಿರಣ್‌ ಫೆಡ್ನ್ ಕರ್‌, ಶ್ರೀನಿವಾಸ ರಾವ್‌ ಉಪಸ್ಥಿತರಿದ್ದರು.

ಅಪಾಯಕಾರಿ ಮರಗಳ ಕಟಾವಿಗೆ ಆಗ್ರಹ
ಇತ್ತೀಚೆಗೆ ಸುರಿದ ಮಳೆ, ಗಾಳಿಯಿಂದ ರಸ್ತೆ ಮೇಲೆ ಬಿದ್ದು ಬೈಕ್‌ ಸವಾರ ಯುವಕನೊಬ್ಬ ಮೃತಪಟ್ಟ ಬಗ್ಗೆ ಪ್ರಸ್ತಾವಿಸಿದ ಸದಸ್ಯೆ ಜ್ಯೋತಿ ಹರೀಶ್‌, ಇಂತಹ ಅಪಾಯಕಾರಿ ಮರಗಳನ್ನು ಮಳೆಗಾಲದ ಮುಂಚೆಯೆ ಗುರುತಿಸಿ ಕಟಾವು ಮಾಡಬೇಕು ಎಂದರು.

ಅರಣ್ಯ ವ್ಯಾಪ್ತಿಯಲ್ಲಿ ಈಗಾಗಲೇ ರಸ್ತೆ ಇದ್ದು ಅದನ್ನು ಅಭಿವೃದ್ಧಿಗೊಳಿಸಲು ಅರಣ್ಯ ಇಲಾಖೆಯಿಂದ ಆಕ್ಷೇಪ ವ್ಯಕ್ತಪಡಿಸುತ್ತಿರುವ ಕುರಿತಂತೆ ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಅಂತಹ ರಸ್ತೆ ಕಾಮಗಾರಿಗಳ ಕುರಿತು ಸ್ಥಳ ಪರಿಶೀಲನೆ ನಡೆಸುವುದಾಗಿ ಕುಂದಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್‌ ರೆಡ್ಡಿ ತಿಳಿಸಿದರು.

ಗ್ರಾ.ಪಂ.ಗಳಲ್ಲಿ ಅರಿವು
ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕೋವಿಡ್‌ ವಿರುದ್ಧ ಅವಿರತ ಹೋರಾಡುತ್ತಿವೆ. ಖಾಸಗಿ ಆಸ್ಪತೆಗಳು ಸಹ ತಮ್ಮಲ್ಲಿ ದಾಖಲಾಗುವ ರೋಗಿಗಳಿಗೆ ಈ ಬಗ್ಗೆ ವಿವರವಾದ ಮಾಹಿತಿ ನೀಡಬೇಕು ಎಂದು ಪ್ರತಾಪ್‌ ಹೇಳಿದಾಗ ಕೋವಿಡ್‌ ಪರೀಕ್ಷೆ, ಚಿಕಿತ್ಸೆ ವಿಧಾನಗಳ ಕುರಿತ ವಿವರಗಳ ಕರಪತ್ರಗಳನ್ನು ಮುದ್ರಿಸಿ ಗ್ರಾಮ ಪಂಚಾಯತ್‌ ಮೂಲಕ ಪ್ರತೀ ಮನೆ ಮನೆಗೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಒ ಪ್ರೀತಿ ಗೆಹೋಲೊಟ್‌ ತಿಳಿಸಿದರು.

ಕಾಮಗಾರಿ ವಿಳಂಬಕ್ಕೆ ಆಕ್ಷೇಪ
ಪಡುಬಿದ್ರಿಯಲ್ಲಿ ರಸ್ತೆ ಮತ್ತು ಸೇತುವೆ ಕಾಮಗಾರಿ ವಿಳಂಬ ಕುರಿತಂತೆ ಸದಸ್ಯ ಶಶಿಕಾಂತ ಪಡುಬಿದ್ರಿ ಆಕ್ಷೇಪಿಸಿದರು. ಈ ಕುರಿತಂತೆ ಉತ್ತರಿಸಲು ಅಧಿಕಾರಿಗಳು ಗೈರಾದ ಕಾರಣ ಸದಸ್ಯೆ ಶಿಲ್ಪಾ ಸುವರ್ಣ ಅಸಮಾಧಾನ ವ್ಯಕ್ತಪಡಿಸಿದರು.
ಕಾಪು ಸಮೀಪ ಅಪಘಾತ ಸಂಭವಿಸಿ ಯುವತಿ ಸಾವನ್ನಪ್ಪಿದ್ದರು. ರಸ್ತೆಯಲ್ಲಿ ನಿಂತ ನೀರು ಕಾರಿಗೆ ಬಡಿದು ನಿಯಂತ್ರಣ ತಪ್ಪಿ ಅಪಘಾತವಾಗಿತ್ತು. ರಸ್ತೆ ಮೇಲೆ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಗೀತಾಂಜಲಿ ಸುವರ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next