Advertisement

ಸಾರ್ವಜನಿಕರಿಗೆ ರೋಟಾ ವೈರಸ್‌ ಲಸಿಕೆ ಜಾಗೃತಿ ಅತ್ಯವಶ್ಯ

09:19 AM Jul 27, 2019 | Suhan S |

ಕೊಪ್ಪಳ: ರೋಟಾ ವೈರಸ್‌ ಲಸಿಕೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಅಗತ್ಯವಾಗಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಲಿಂಗರಾಜ್‌ ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ರೋಟಾ ವೈರಸ್‌ ಲಸಿಕೆಯ ಪರಿಚಯ ಕುರಿತು ನಗರದ ಹಳೆಯ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾಮಟ್ಟದ ಮಾಧ್ಯಮ ಮಿತ್ರರ ತರಬೇತಿ ಕಾರ್ಯಾಗಾರದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೋಟಾ ವೈರಸ್‌ ಲಸಿಕೆ ನವಜಾತ ಶಿಶುಗಳ ಆರೋಗ್ಯ ರಕ್ಷಣೆ ಮಾಡುವಂತಹ ಲಸಿಕೆಯಾಗಿದೆ. ಈ ಲಸಿಕೆಯನ್ನು ಮಗು ಹುಟ್ಟಿದ ಆರು ವಾರಗಳಿಂದ 14ನೇ ವಾರದವರೆಗೂ ಮಗುವಿಗೆ ಹಾಕಬೇಕು. ಇದರಿಂದ ಮಗುವಿನ ಬೆಳವಣಿಗೆಯಲ್ಲಿ ಹೆಚ್ಚಿನ ಪ್ರಗತಿ ಕಾಣಬಹುದು. ರೋಟಾ ವೈರಸ್‌ನಿಂದಾಗುವ ಅತಿಸಾರ ಭೇದಿಯ ವಿರುದ್ಧ ಮಕ್ಕಳ ರಕ್ಷಣೆ ಮಾಡುವ ಸಲುವಾಗಿ ಭಾರತ ಸರ್ಕಾರವು ರೋಟಾ ವೈರಸ್‌ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಪರಿಚಯಿಸಲಾಗುತ್ತಿದೆ. ಸದ್ಯ ರೋಟಾ ವೈರಸ್‌ ಲಸಿಕೆ ಭಾರತದ ಹನ್ನೊಂದು ರಾಜ್ಯದಲ್ಲಿ ಜಾರಿಯಲ್ಲಿದೆ ಎಂದರು.

ರೋಟಾ ವೈರಸ್‌ ಲಸಿಕೆಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ವೈದ್ಯರು ಹಾಗೂ ಆರೋಗ್ಯ ಮೇಲ್ವಿಚಾರಕರಿಗೆ ಈ ಕುರಿತು ತರಬೇತಿಗಳನ್ನು ನೀಡಲಾಗುತ್ತಿದೆ. ಪ್ರಪಂಚಾದ್ಯಂತ 94 ದೇಶದಲ್ಲಿ ರೋಟಾ ವೈರಸ್‌ ಲಸಿಕೆ ಜಾರಿಯಲ್ಲಿದೆ. ಈ ಲಸಿಕೆ ನಮ್ಮ ದೇಶದಲ್ಲಿಯೂ ಜಾರಿಯಲ್ಲಿದ್ದು, ಆರಂಭದಲ್ಲಿ ವಿದೇಶಗಳು ತಯಾರಿಸಿದ ರೋಟಾ ವೈರಸ್‌ ಲಸಿಕೆ ತೆರೆಸಿಕೊಳ್ಳಲಾಗುತ್ತಿತ್ತು. ಈಗ ನಮ್ಮ ರಾಷ್ಟ್ರದಲ್ಲೇ ಈ ಲಸಿಕೆ ತಯಾರಿಸಲಾಗುತ್ತಿದೆ. ರೋಟಾ ವೈರಸ್‌ನಿಂದಾಗಿ ಪ್ರತಿ ವರ್ಷ 79 ಸಾವಿರ ಮಕ್ಕಳು ಸಾವಿಗಿಡಾಗುತ್ತಾರೆ. ರೋಟಾ ವೈರಸ್‌ ಲಸಿಕೆ ನೀಡುವುದರಿಂದ ಮಕ್ಕಳ ಸಾವಿನ ಪ್ರಮಾಣ ಕುಂಠಿತಗೊಳ್ಳುವುದು. ರೋಟಾ ವೈರಸ್‌ ಲಸಿಕೆ ಹಾಕುವುದರಿಂದ ಮಗುವಿಗೆ ಮುಂದೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ ಎಂದರು.

ಒಂದೂವರೇ ತಿಂಗಳ ಮಗುವಿಗೆ 2.5 ಎಂಎಲ್ ಡೋಸ್‌ ಹಾಕಬೇಕು. ಒಂದು ಮಗುವಿಗೆ ಉಪಯೋಗ ಮಾಡಿದ ಸೂಜಿ ಮತ್ತೆ ಬೇರೆ ಮಗುವಿಗೆ ಉಪಯೋಗ ಮಾಡುವುದಿಲ್ಲ. ಎಚ್ಐವಿ ಮತ್ತು ಅಪೌಷ್ಟಿಕದಿಂದ ಬಳಲುತ್ತಿರುವ ಮಗುವಿಗೂ ಈ ರೋಟಾ ಲಸಿಕೆ ಹಾಕಬಹುದು. ಇದರಿಂದ ಆ ಮಗು ಆರೋಗ್ಯವಂತವಾಗುತ್ತದೆ. ಆದ್ದರಿಂದ ರೋಟಾ ವೈರಸ್‌ ಲಸಿಕಾ ಕಾರ್ಯಕ್ರಮಕ್ಕೆ ಸಾರ್ವಜನಿಕರೆಲ್ಲರೂ ಸಹಕರಿಸಬೇಕು ಎಂದರು.

Advertisement

ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ| ಮಹೇಶ ಎಂ.ಜಿ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ| ಜಂಬಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ| ರಾಮಾಂಜನೇಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಂ. ಅವಿನಾಶ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next