ಬೀದರ: ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡುವ ರೇಬಿಸ್ ಸೋಂಕು ಮಾರಣಾಂತಿಕವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಿಸಿದಲ್ಲಿ ಪ್ರಾಣಹಾನಿ ತಡೆಯಲು ಸಾಧ್ಯವಿದೆ ಎಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಡೀನ್ ಡಾ| ಬಿ.ವಿ. ಶಿವಪ್ರಕಾಶ ಸಲಹೆ ನೀಡಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶು ವೈದ್ಯಕೀಯ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಶಾರದಾ ರೂಡಸೆಟ್ ಸಭಾಂಗಣದಲ್ಲಿ ನಡೆದ ವಿಶ್ವ ರೇಬಿಸ್ ದಿನಾಚರಣೆ ಮತ್ತು ನಾಯಿಗಳಿಗೆ ಉಚಿತ ಲಸಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಪಶು ವೈದ್ಯಕೀಯ ಮಹಾವಿದ್ಯಾಲಯಗಳು ಈ ಕಾಯಿಲೆ ಬಗ್ಗೆ ಜನರಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕಿದೆ. ಎಲ್ಲ ಪ್ರಾಣಿಗಳಿಗೂ ನಿಯಮಿತವಾಗಿ ಲಸಿಕೆ ನೀಡಲು ಮುಂದಾಗಬೇಕು ಎಂದು ಹೇಳಿದರು.
ಪಶು ಪಾಲನಾ ಇಲಾಖೆಯ ಉಪನಿರ್ದೇಶಕ ಡಾ| ಡಿ.ಎಸ್. ಹವಾಲ್ದಾರ ಮಾತನಾಡಿ, ರೇಬಿಸ್ ಸೋಂಕು ನಿಯಂತ್ರಣಕ್ಕೆ ಇಲಾಖೆಯಿಂದ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜನರೆ ಮುಂದೆ ಬಂದು ತಮ್ಮ ಸಾಕು ಪ್ರಾಣಿಗಳಿಗೆ ಲಸಿಕೆ ಪಡೆಯಲು ಮುಂದಾಗುವಂತಹ ವಾತಾವರಣ ನಿರ್ಮಿಸುವ ಅಗತ್ಯವಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಡಾ| ಚಂದ್ರಶೇಖರ ಪಾಟೀಲ ಮಾತನಾಡಿ, ಚಿಕ್ಕ ಮಕ್ಕಳು ಹೆಚ್ಚು ಪ್ರಮಾಣದಲ್ಲಿ ನಾಯಿ ಕಡಿತಕ್ಕೆ ಒಳಗಾಗುವುದರಿಂದ ರೇಬಿಸ್ ಸೋಂಕು ಮಕ್ಕಳಲ್ಲಿ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಜನರು ತಮ್ಮ ಸುತ್ತಲಿನಲ್ಲಿರುವ ನಾಯಿಗಳಿಗೆ ರೇಬಿಸ್ ಲಸಿಕೆ ನೀಡಿ ಮಕ್ಕಳನ್ನು ರಕ್ಷಿಸಬೇಕು ಎಂದು ಹೇಳಿದರು.
ಸಂಘದ ಅಧ್ಯಕ್ಷ ಡಾ| ಶಿವಶರಣಪ್ಪಾ ಯಲಗೊಡ, ವೈದ್ಯರಾದ ಡಾ| ಜೀನ್ ಕ್ರಿಸ್ಟೋಪ್, ಡಾ| ನಿಲೇಖಾ ದೇಸಾಯಿ, ಸಂಘದ ಉಪಾಧ್ಯಕ್ಷ ಡಾ| ಶ್ರೀಕಾಂತ ಬಿರಾದಾರ, ಪ್ರಧಾನ ಕಾರ್ಯದರ್ಶಿ ಡಾ| ನೀಲಕಂಠ ಚನಶೆಟ್ಟಿ, ಖಜಾಂಚಿ
ಡಾ| ಗಣಾಧೀಶ್ವರ ಹಿರೇಮಠ, ಸಂಘದ ಪದಾಧಿಕಾರಿಗಳು, ವೈದ್ಯರು, ಪಶುವೈದ್ಯಕೀಯ ಮಹಾವಿದ್ಯಾಲಯದ ಅಧ್ಯಾಪಕರು, ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು. ಬೀದಿ ನಾಯಿಗಳಿಗೆ ಲಸಿಕೆ: ಇದಕ್ಕೂ ಮುನ್ನ ನಗರದ ಗಾಂಧಿ ಗಂಜ್‌ನಲ್ಲಿರುವ ಕೃಷಿ ಮಾರುಕಟ್ಟೆಯಲ್ಲಿ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಆರ್.ಸೆಲ್ವಮಣಿ ಅವರು ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.