Advertisement

ಇತಿಹಾಸದ ಅರಿವು ಅಗತ್ಯ : ವೀಣಾ ಶ್ರೀನಿವಾಸ್‌

01:56 AM Oct 15, 2019 | mahesh |

ಮಂಗಳೂರು: ಇತಿಹಾಸವನ್ನು ತಿಳಿದುಕೊಂಡಾಗ ಹೊಸ ಇತಿಹಾಸ ನಿರ್ಮಾಣ ಸಾಧ್ಯವಾಗುತ್ತದೆ. ನಮ್ಮ ಪರಂಪರೆ, ಸಂಸ್ಕೃತಿ, ಅನನ್ಯತೆಗಳು, ಮಹನೀಯರ ಬಗ್ಗೆ ಹೊಸ ಪೀಳಿಗೆಗೆ ಅರಿವು ನೀಡುವ ಕಾರ್ಯ ನಡೆಯಬೇಕು ಎಂದು ಪೋಸ್ಟ್‌ ಮಾಸ್ಟರ್‌ ಜನರಲ್‌ ವೀಣಾ ಶ್ರೀನಿವಾಸ್‌ ಹೇಳಿದರು.

Advertisement

ನಗರದ ಡಾ| ಟಿ.ಎಂ.ಎ. ಪೈ ಇಂಟರ್‌ನ್ಯಾಶನಲ್‌ ಕನ್ವೆನ್ಶನ್‌ ಹಾಲ್‌ನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ “ಕರ್ನಾಪೆಕ್ಸ್‌-2019’ನಲ್ಲಿ ಸೋಮವಾರ ವಿಶೇಷ ಅಂಚೆಲಕೋಟೆಗಳನ್ನು ಅವರು ಬಿಡುಗಡೆ ಮಾಡಿ ಮಾತನಾಡಿದರು. ಅಂಚೆ ಇಲಾಖೆ ವಿವಿಧ ಸಂದರ್ಭದಲ್ಲಿ ವಿಶೇಷ ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಕರಾವಳಿ ಮೂಲದ ಸಾಧಕರಾದ ಜಾರ್ಜ್‌ ಫೆರ್ನಾಂಡಿಸ್‌, ಅನಂತ್‌ ಪೈ, ಗಿರೀಶ್‌ ಕಾರ್ನಾಡ್‌, ಇಲ್ಲಿನ ಅನನ್ಯತೆಗಳಾದ ಮಟ್ಟು ಗುಳ್ಳ, ಶಂಕರಪುರ ಮಲ್ಲಿಗೆ, ಕರಾವಳಿಯಲ್ಲಿ ಪತ್ತೆಯಾಗಿರುವ ಹೊಸ ಪ್ರಭೇದದ ಕಪ್ಪೆ “ಯುಕ್ಲಿಪ್ಟಿಸ್‌ ಅಲೋಸಿ’ ಬಗ್ಗೆ ವಿಶೇಷ ಅಂಚೆ ಲಕೋಟೆ ಹೊರತಂದಿದೆ. ಇಂದು ರಾಷ್ಟ್ರಧ್ವಜ, ತುಳು ಸಿನೆಮಾ, ಸಿದ್ಧಿ ಜನಾಂಗದ ಬಗ್ಗೆ ವಿಶೇಷ ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ತುಳು ಚಲನಚಿತ್ರ ನಿರ್ದೇಶಕ, ನಿರ್ಮಾಪಕ ರಿಚರ್ಡ್‌ ಕ್ಯಾಸ್ತಲಿನೋ ಮಾತನಾಡಿ, ತುಳು ಸಿನೆಮಾ ರಂಗದ ಬಗ್ಗೆ ವಿಶೇಷ ಅಂಚೆ ಲಕೋಟೆ ಹೊರ ತಂದಿರುವುದು ಸಂತಸ ತಂದಿದೆ. 1971ರಲ್ಲಿ “ಎನ್ನ ತಂಗಡಿ’ ಮೂಲಕ ಆರಂಭಗೊಂಡ ತುಳು ಚಿತ್ರರಂಗ 49 ವರ್ಷಗಳಲ್ಲಿ ಸಾರ್ಥಕ ಪಯಣ ನಡೆಸಿದೆ ಎಂದರು.

ಕರ್ನಾಟಕ ಸಿದ್ಧಿ ಪ್ರತಿಷ್ಠಾನದ ಅಧ್ಯಕ್ಷ ದಿಯೋಗ್‌ ಬಿ. ಸಿದ್ಧಿ ಮಾತನಾಡಿ, ಕಾಡಿನಂಚಿನ ಸಿದ್ಧಿ ಸಮುದಾಯವನ್ನು ಗುರುತಿಸಿರುವುದಕ್ಕೆ ಭಾರತೀಯ ಅಂಚೆ ಇಲಾಖೆಗೆ ಆಭಾರಿಯಾಗಿದ್ದೇನೆ ಎಂದರು.

ಖಾದಿ ಕೇಂದ್ರ ಗರಗದ ಅಧ್ಯಕ್ಷ ಎಚ್‌. ಬಸವ ಪ್ರಭು ಮಾತನಾಡಿ, ಖಾದಿ ಬರೇ ಬಟ್ಟೆಯಲ್ಲ, ಒಂದು ಜೀವನ ಶೈಲಿ. ರಾಷ್ಟ್ರಧ್ವಜ ಸಿದ್ಧಪಡಿಸುವ ಮತ್ತು ಸರಬರಾಜು ಮಾಡುವ ಮನ್ನಣೆಗೆ ಗರಗ ಗ್ರಾಮ ಪಾತ್ರವಾಗಿದೆ ಎಂದರು. ಅಂಚೆ ಇಲಾಖೆ ದಕ್ಷಿಣ ಕರ್ನಾಟಕ ವೃತ್ತದ ಕೇಂದ್ರ ಕಚೇರಿಯ ನಿರ್ದೇಶಕ ಬಿ. ನಟರಾಜ್‌ ಉಪಸ್ಥಿತರಿದ್ದರು.

Advertisement

ಕರ್ನಾಪೆಕ್ಸ್‌ ಲಾಂಛನವನ್ನು ಸಿದ್ಧಪಡಿಸಿದ ಕಲಾವಿದ ದಿನೇಶ್‌ ಹೊಳ್ಳ ಅವರನ್ನು ಸಮ್ಮಾನಿಸಲಾಯಿತು. ಎಂ.ಬಿ. ಗಜಭಿಯಾ ಸ್ವಾಗತಿಸಿದರು. ಚಂದ್ರಶೇಖರ್‌ ವಂದಿಸಿದರು . ಸುರೇಖಾ ಕುಡ್ವ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next