Advertisement

ಆದಿವಾಸಿಗಳು ಜಾಗೃತರಾದಲ್ಲಿ ಸೌಲಭ್ಯ ಪಡೆಯಲು ಸಾಧ್ಯ: ಹರಿಹರ ಆನಂದಸ್ವಾಮಿ

05:37 PM Feb 22, 2022 | Team Udayavani |

ಹುಣಸೂರು: ಹತ್ತಾರು ಯೋಜನೆಗಳ ಮೂಲಕ ಆದಿವಾಸಿಗಳ ಹೆಸರಿನಲ್ಲಿ ಕೋಟ್ಯಾಂತರ ಹಣ ವ್ಯಯವಾಗಿದ್ದರೂ ಆದಿವಾಸಿಗಳ ಆರ್ಥಿಕ ಮಟ್ಟ ಈವರೆಗೂ ಸುಧಾರಿಸುವಲ್ಲಿ ವಿಫಲವಾಗಿದ್ದು,  ನಮ್ಮ ನ್ಯಾಯಯುತ ಹಕ್ಕುಗಿಟ್ಟಿಸಲು ದೊಡ್ಡಮಟ್ಟದ ಜನಾಂದೋಲನವಾಗಬೇಕಿದೆ ಎಂದು ದಲಿತ ಚಳುವಳಿ ನವನಿರ್ಮಾಣ ವೇದಿಕೆಯ ಹಿರಿಯನಾಯಕರಾದ ಹರಿಹರ ಆನಂದಸ್ವಾಮಿಯವರು ಅಭಿಪ್ರಾಯಪಟ್ಟರು.

Advertisement

ಡೀಡ್ ಸಂಸ್ಥೆಯು ನವನಿರ್ಮಾಣ ವೇದಿಕೆ,ರೈತಸಂಘದ ಸಹಯೋಗದಲ್ಲಿ  ತಾಲೂಕಿನ ಬಲ್ಲೇನಹಳ್ಳಿಹಾಡಿಯಲ್ಲಿ ಆಯೋಜಿಸಿದ್ದ ಆದಿವಾಸಿ ಅರಣ್ಯ ಹಕ್ಕುಗಳ ತಿಳುವಳಿಕೆ ಹಾಗೂ ಮುಂದಾಳತ್ವ ತರಬೇತಿ ಸಭೆಯಲ್ಲಿ  ಮಾತನಾಡಿದ ಅವರು ಇವತ್ತಿಗೆ ಸಣ್ಣ ಪ್ರಯೋಜನ ಸಿಕ್ಕ ತಕ್ಷಣ ಅವರ ದಯೆಯಿಂದ ಮನೆ ಸಿಕ್ತು, ಹಣ ಸಿಕ್ತು ಅಂತಿವಿ, ನಡೆದ ಅದು ದಯೆ ಅಲ್ಲ ನಮ್ಮ ಹಕ್ಕು ಎಂಬುದನ್ನು ಅರಿಯಬೇಕು. ನಾವು ಘೋಷಣೆಗಳ ಕೂಗಿದ ಮಾತ್ರಕ್ಕೆ ಎಲ್ಲಾ ಬದಲಾಗುವುದಿಲ್ಲ. ಪೂರ್ವಜರು ಘೋಷಣೆಗಳ ಕೂಗಿಕೊಂಡೇ, ಹೋರಾಟ ಮಾಡಿಕೊಂಡೇ ಬಂದಿದ್ದರೂ ಅವರ ಹೋರಾಟದ ಫಲವಾಗಿ ಏನೋ ಅಲ್ಪ ಮಟ್ಟಿನ ಬದಲಾವಣೆ ಕಂಡಿರಬಹುದು. ಆದರೂ ಸಹ ಇಂದಿಗೂ ನಾವು ಸ್ವಲ್ಪ ಉತ್ತಮವಾಗಿ ಬಟ್ಟೆ ತೊಟ್ಟಿದ್ದೇವೆ ಹೊರತಾಗಿ  ಬದುಕಲು ಪೂರ್ವಜರ ಆಸ್ತಿಗಳಾದ ಕಾಡನ್ನು ಹೊಂದಿಲ್ಲ. ನೀಡಿರುವ ಭೂಮಿಗಳಿಗೆ ಸಾಗುವಳಿ, ಪಕ್ಕಾಪೋಡು, ದುರಸ್ತಾಗದೆ ಅಂತಂತ್ರರಾಗಿದ್ದೇವೆ. ಇದಕ್ಕಾಗಿ ಆದಿವಾಸಿಗಳು, ದಲಿತರು, ಬಡರೈತರು ಸೇರಿದಂತೆ ಎಲ್ಲರೂ ಜೊತೆಯಾಗಿ ಹೊರಾಟ ರೂಪಿಸಬೇಕಿದೆ. ಅದಕ್ಕೆಂದೇ ನವನಿರ್ಮಾಣ ವೇದಿಕೆಯು ನಮ್ಮ ಭೂಮಿ ನಮ್ಮದು. ನಮ್ಮ ಕಾಡು ನಮ್ಮದು ಎಂಬ ಘೋಷ ವಾಕ್ಯದಡಿಯಲ್ಲಿಹೋರಾಟ ರೂಪಿಸಲು ಮುಂದಾಗಿದೆ ಎಂದರು.

ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರುಕುಮಾರ್ ಮಾತನಾಡಿ ಎಷ್ಟೋ ಆದಿವಾಸಿಗಳಿಗೆ ತಮ್ಮ ಕೃಷಿ ಭೂಮಿಯಲ್ಲಿ ಕೆಲಸ ಮಾಡಲು ಕಷ್ಟವಾಗುತ್ತಿದೆ. ಕಾರಣ ಭಾರತದಲ್ಲಿ ಕೃಷಿ ಲಾಭದಾಯಕವಾಗಿ ಉಳಿದಿಲ್ಲ. ಅರಣ್ಯದಿಂದ ಹೊರಹಾಕಲ್ಪಟ್ಟ ಆದಿವಾಸಿಗಳಿಗೆ ಯೋಗ್ಯ ಕೃಷಿಭೂಮಿಯನ್ನು ಸರ್ಕಾರ ನೀಡಲೇಬೇಕಿದೆ. ಆದಿವಾಸಿ ಯುವಕರು ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ. ನಿಮ್ಮ ಕೃಷಿ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ರೈತಸಂಘದ ಜೊತೆಗೂಡಿ ಹೊರಾಟದಲ್ಲಿ ಭಾಗಿಯಾದರೆ ಚಳುವಳಿಗೂ ಬಲಬರುತ್ತದೆ  ಎಂದರು.

ಡೀಡ್‌ಸಂಸ್ಥೆಯ ನಿರ್ದೇಶಕ ಡಾ.ಶ್ರೀಕಾಂತ್ ಮಾತನಾಡಿ ಬಲ್ಲೇನಹಳ್ಳಿ ಮಿನಿ ಭಾರತ ಇದ್ದಂತೆ. ಏಕೆಂದರೆ  ಇಲ್ಲಿನ ಶಾಲೆಯಲ್ಲಿ ಆದಿವಾಸಿಗಳು, ದಲಿತರು, ಹಿಂದುಳಿದವರ್ಗಗಳು, ಮುಸ್ಲಿಂ ಸಮುದಾಯದ ಮಕ್ಕಳು ಸೇರಿದಂತೆ ಅನೇಕ ಇತರ ಸಮುದಾಯಗಳ ಮಕ್ಕಳೂ ಒಟ್ಟಿಗೆ ಕಲಿಯುತ್ತಿದ್ದಾರೆ. ಇಲ್ಲಿ ಸಾಮರಸ್ಯ ಮೂಡಿಸಿದರೆ ಅದು ದೇಶಕ್ಕೆ ಮಾದರಿ ಎಂದರು. ಹಿಂದೆ ಇದೇ ಊರಿನಲ್ಲಿ ಅನೇಕ ಬಾರಿ ಆದಿವಾಸಿಗಳ ಮೇಲೆ ದೌರ್ಜನ್ಯಗಳು ದಾಖಲಾಗಿದ್ದವು. ದಸಂಸ ಸೇರಿದಂತೆ ಆದಿವಾಸಿ ಸಂಘಟನೆಗಳ ಹೋರಾಟದ ಫಲವಾಗಿ ಇಂದು ಎಲ್ಲರೂ ಸಾಮರಸ್ಯದಲ್ಲಿ ಬದುಕುವಂತಾಗಿದ್ದಾರೆ. ಹಾಗಾಗಿ ನಮ್ಮ ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಿದರೆ ಅವರೇ ತಮ್ಮ ಹಕ್ಕುಗಳ ಪರವಾಗಿ ದನಿ ಎತ್ತುತ್ತಾರೆ, ಯೋಗ್ಯ ಪ್ರಜೆಗಳಾಗಿ ಹೊರಹೊಮ್ಮುತ್ತಾರೆಂದರು.

ಜಾಬ್ ಕಾಡ್ ಪಡೆಯಿರಿ:

Advertisement

ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಕಾರ್ಯಕರ್ತೆ ವಿನುತ ಹಾಗೂ ಆಸ್ಪತ್ರೆಕಾವಲ್ ಗ್ರಾಮಪಂಚಾಯತಿ ಕಾರ್ಯದರ್ಶಿ ರಾಮಚಂದ್ರ ಗ್ರಾ.ಪಂ.ನ ಉದ್ಯೋಗಖಾತರಿ ಯೋಜನೆಯ ಜಾಬ್‌ಕಾರ್ಡ್, ಪ್ರತಿ ಕುಟುಂಬಗಳು ಪಡೆಯಬಹುದಾದ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಗ್ರಾಮದ ಯಜಮಾನ ಕಾಳಯ್ಯ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ವಿಠಲ್‌ನಾಣಚ್ಚಿ, ಮಹಿಳಾಪ್ರತಿನಿಧಿ ಬೊಮ್ಮಿ ಮುಂದಾಳತ್ವವಹಿಸುವ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಡೀಡ್‌ನ ಪ್ರಕಾಶ್, ಮಕ್ಕಳಹಕ್ಕುಗಳ ಕಾರ್ಯಕರ್ತ ಅನಂತ್, ಬುಡಕಟ್ಟು ಕೃಷಿಕರಸಂಘದ ಪಿ.ಕೆ.ರಾಮು, ಕಾರ್ಯದರ್ಶಿ ಜಯಪ್ಪ, ಪಂಚಾಯತಿ ಸದಸ್ಯರಾದ ಗೋಪಿನಾಥ್, ನಿಂಗಮ್ಮ, ಸಂಶೋಧನಾವಿದ್ಯಾರ್ಥಿ ಪ್ರಮೋದ್‌ಬೆಳಗೋಡ್ ಹಾಗೂ ಹಾಡಿ ಮಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು

Advertisement

Udayavani is now on Telegram. Click here to join our channel and stay updated with the latest news.

Next