Advertisement

ಕಸಸಂಗ್ರಹ ವಾಹನದಲ್ಲಿ ಜಾಗೃತಿ ಸಂದೇಶ

12:15 PM Jul 30, 2019 | Suhan S |

ಶಿವಮೊಗ್ಗ: ಜಿಲ್ಲೆಯಲ್ಲಿ ಆನ್‌ಲೈನ್‌ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ವಿನೂತನ ಪ್ರಯತ್ನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

Advertisement

ಎಸ್‌ಎಂಎಸ್‌, ಕರಪತ್ರಗಳ ಮೂಲಕ ಜಾಗೃತಿ ಸಂದೇಶ ಕಳುಹಿಸಿದರೂ ಅದನ್ನು ನೋಡುವರು, ಓದುವವರ ಸಂಖ್ಯೆ ಕಡಿಮೆ ಆಗಿರುವುದರಿಂದ ವಂಚನೆಗೆ ಒಳಗಾಗುವವರ ಪ್ರಮಾಣ ಏರಿಕೆಯಾಗುತ್ತಲೇ ಇತ್ತು. ಕಳೆದ ಒಂದೂವರೆ ವರ್ಷದಲ್ಲಿ 3 ಕೋಟಿ ಅಧಿಕ ಮೊತ್ತವನ್ನು ಕಳೆದುಕೊಂಡಿರುವುದೇ ಇದಕ್ಕೆ ಸಾಕ್ಷಿಯಾಗಿತ್ತು. ಹೀಗಾಗಿ ಇಲಾಖೆ ಈಗ ಹೊಸ ಪ್ರಯೋಗಕ್ಕೆ ಮುಂದಾಗಿದ್ದು ಕಸದ ವಾಹನದ ಮೂಲಕ ಜನರಿಗೆ ಸಂದೇಶ ನೀಡುವ ಪ್ರಯತ್ನ ನಡೆದಿದೆ.

ಜನಜಾಗೃತಿಯೇ ಮದ್ದು: ಪ್ರಸ್ತುತ ದಿನಗಳಲ್ಲಿ ಜನ ಡಿಜಿಟಲ್ ಆಗುತ್ತಿದ್ದಾರೆ. ಆದರೆ ಸಣ್ಣಪುಟ್ಟ ವ್ಯತ್ಯಾಸಗಳನ್ನು ಗಮನಿಸದೆ ಆಸೆ, ಆಮಿಷಗಳಿಗೆ ಒಳಗಾಗಿ ಹಣ ಕಳೆದುಕೊಳ್ಳುತ್ತಿದ್ದರು. ನಿಮ್ಮ ಎಟಿಎಂ ಹ್ಯಾಕ್‌ ಆಗಿದೆ, ಎಟಿಎಂ ಅವಧಿ ಮುಗಿದಿದೆ. ಹೀಗೆ ಅನೇಕ ಕಾರಣ ನೀಡಿ ಓಟಿಪಿ ಪಡೆದು ಕ್ಷಣಾರ್ಧದಲ್ಲಿ ಹಣ ಲಪಟಾಯಿಸುತ್ತಿದ್ದರು. ವಂಚಕರು ದೇಶದ ಯಾವುದೋ ಮೂಲೆಯಲ್ಲಿ ಕುಳಿತು ಇಂತಹ ಕೃತ್ಯ ಎಸಗುವುದರಿಂದ ಅವರನ್ನು ಪತ್ತೆ ಹಚ್ಚುವುದು ಸುಲಭವಾಗಿರುವುದಿಲ್ಲ. ನಕಲಿ ದಾಖಲೆ, ನಕಲಿ ಸಿಎಂ ಕೊಟ್ಟು ಬ್ಯಾಂಕ್‌ ಅಕೌಂಟ್ ಓಪನ್‌ ಮಾಡುವ ಅವರು ಹಣ ವರ್ಗಾವಣೆಯಾದ ತಕ್ಷಣ ಹಣ ತೆಗೆದುಕೊಂಡು ಎಸ್ಕೇಪ್‌ ಆಗುತ್ತಾರೆ. ಫೇಸ್‌ಬುಕ್‌, ವಾಟ್ಸಾಪ್‌ ಹ್ಯಾಕ್‌ ಮಾಡುವ ಮೂಲಕವು ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹಾಗಾಗಿ ಇಂತಹ ಸಮಸ್ಯೆಗಳಿಗೆ ಜನರೇ ಜಾಗೃತರಾಗುವುದು ಅನಿವಾರ್ಯವಾಗಿದೆ. ಹಾಗಾಗಿ ಪೊಲೀಸ್‌ ಇಲಾಖೆ ಮನೆ ಮನೆಗೆ ಸಂದೇಶ ತಲುಪಿಸುವ ವ್ಯವಸ್ಥೆ ಮಾಡಿದೆ.

ಜಾಗೃತಿ ಹೇಗೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 35 ವಾರ್ಡ್‌ಗಳಿದ್ದು ಪ್ರತಿ ವಾರ್ಡ್‌ಗಳಿಗೆ ಎರಡು ಕಸ ಸ್ವೀಕರಿಸುವ ವಾಹನಗಳಿವೆ. ಪ್ರತಿ ದಿನ ಬೆಳಗ್ಗೆ ನಗರದ ಪ್ರತಿ ರಸ್ತೆಗಳಿಗೆ ಹೋಗುವ ಅವು ಕಸ ಸಂಗ್ರಹಿಸುತ್ತವೆ. ಜತೆಗೆ ಸ್ವಚ್ಛತೆ ಬಗ್ಗೆ ಪಾಠ ಮಾಡುತ್ತವೆ. ಇಂತಹ ವಾಹನಗಳನ್ನೇ ಬಳಸಿಕೊಂಡಿರುವ ಪೊಲೀಸರು ಸ್ವಚ್ಛತೆ ಜಾಗೃತಿ ಹಾಡುಗಳ ಜತೆಗೆ ಆನ್‌ಲೈನ್‌ ವಂಚನೆಗಳಿಂದ ಹುಷಾರಾಗಿರುವಂತೆ ಮಾಹಿತಿ ನೀಡಲಿವೆ. ದುನಿಯಾ ಸಿನಿಮಾದ ಹಾಡಿದ ಸಂಗೀತ ಬಂತೆಂದರೆ ಕಸದ ಗಾಡಿ ಬಂತು ಎಂದು ಅಂದುಕೊಳ್ಳುತ್ತಿದ್ದ ಜನ ಇನ್ಮೇಲೆ ಜಾಗೃತಿ ಮಾತಗಳನ್ನು ಸಹ ಕೇಳಿಸಿಕೊಳ್ಳಲಿದ್ದಾರೆ.

ಇದಕ್ಕಾಗಿ ಪ್ರತ್ಯೇಕ ಸಂದೇಶ ಸಿದ್ಧಪಡಿಸಿ ಕಸದ ಗಾಡಿಗಳಲ್ಲಿ ಅಳವಡಿಸಲಾಗಿದೆ. ಮೂರು ದಿನಗಳಿಂದ ಶಿವಮೊಗ್ಗ ನಗರದ ಪ್ರತಿ ವಾರ್ಡ್‌ಗಳಲ್ಲಿ ಈ ಸಂದೇಶ ಕೇಳಿಬರುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next