ಈವರೆಗೆ, ಕೋವಿಡ್ 19 ವೈರಸ್ ಕುರಿತಾಗಿಯೇ ಸುಮಾರು 300ಕ್ಕೂ ಹೆಚ್ಚು ಪೇಂಟಿಂಗ್ಸ್ ಮತ್ತು ಕಾರ್ಟೂನ್ ರಚಿಸಿರುವ ಹೆಗ್ಗಳಿಕೆ, ಕಾಗದಗಾರ ಅವರದ್ದು.
ಕೋವಿಡ್ 19 ಮಹಾಮಾರಿ ವಿರುದ್ಧದ ಸಮರದಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರು ಆಹಾರದ ಕಿಟ್, ಮಾಸ್ಟ್, ಸ್ಯಾನಿಟೈಸರ್ ವಿತರಿಸಿದರೆ, ಮತ್ತೆ ಕೆಲವರು ಕರಪತ್ರ ಹಂಚುವುದು, ಸಾಹಿತ್ಯ ರಚಿಸಿ ಹಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಚಿತ್ರಕಲೆಯನ್ನೇ ಉಸಿರಾಗಿಸಿಕೊಂಡಿರುವ ಹಾವೇರಿ ಜಿಲ್ಲೆ, ರಾಣೆಬೆನ್ನೂರಿನ ಚಿತ್ರಕಲಾ ಶಿಕ್ಷಕರಾದ ನಾಮದೇವ ಕಾಗದಗಾರ, ತಮ್ಮಲ್ಲಿರುವ ಕಲೆಯನ್ನೇ ಜಾಗೃತಿ ಮಾಧ್ಯಮ ಆಗಿಸಿಕೊಂಡಿದ್ದಾರೆ.
ಕಳೆದ ಮೂರ್‍ನಾಲ್ಕು ತಿಂಗಳಿಂದ ವಿಶೇಷ ಶ್ರಮ ವಹಿಸಿ ಕೋವಿಡ್ 19 ಕುರಿತಾ ಗಿಯೇ ಪೇಂಟಿಂಗ್ಸ್ ಮತ್ತು ಕಾರ್ಟೂನ್‌ಗಳನ್ನು ರಚಿಸಿದ್ದಾರೆ. ಓದು, ಬರಹ ಗೊತ್ತಿಲ್ಲದವರೂ ಈ ಚಿತ್ರಗಳಿಂದ ಕೋವಿಡ್ 19 ವೈರಸ್ ಹರಡುವ ಬಗ್ಗೆ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿಯಬಹುದು. “ಲಾಕ್‌ಡೌನ್‌ಗಿಂತ ಮುಂಚೆಯೇ, ಕೋವಿಡ್ 19 ಸೋಂಕಿನ ಬಗ್ಗೆ ತುಸು ಲಕ್ಷ ಕೊಟ್ಟಿದ್ದೆ. ಪ್ರಚಲಿತ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದೆ. ಕೋವಿಡ್ 19 ನನ್ನ ಚಿತ್ರಕಲೆಯ ವಿಷಯ ವಸ್ತು ಆಗಿತ್ತು.
ಸೋಂಕಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ, ಕೋವಿಡ್ 19 ಕುರಿತಾದ ಚಿತ್ರ ಬಿಡಿಸಲು ಹೆಚ್ಚು ಒತ್ತು ಕೊಟ್ಟೆ..’ ಎನ್ನುವ ಇವರು, ಅರ್ಕಾಲಿಕ್ ಮತ್ತು ಇಂಕ್‌ನಲ್ಲಿ ಜಾಗೃತಿ ಪೇಂಟಿಂಗ್ಸ್ ರಚಿಸುತ್ತಿದ್ದಾರೆ. ಇವುಗಳನ್ನು ಫೇಸ್‌ಬುಕ್, ಮೆಸೆಂಜರ್, ವಾಟ್ಸಾಪ್ ಮೂಲಕ ಪೋಸ್ಟ್ ಮಾಡುತ್ತಾರೆ. ಇಲ್ಲಿಯವರೆಗೆ ಕೋವಿಡ್ 19 ವೈರಸ್ ಕುರಿತಾಗಿಯೇ ಸುಮಾರು 300ಕ್ಕೂ ಹೆಚ್ಚು ಪೇಂಟಿಂಗ್ಸ್ ಮತ್ತು ಕಾರ್ಟೂನ್ ರಚಿಸಿರುವ ಹೆಗ್ಗಳಿಕೆಇವರದ್ದು.
ಇವೆಲ್ಲವೂ ಒಂದಕ್ಕಿಂತ ಒಂದು ಆಕರ್ಷಕ ಮತ್ತು ಅರ್ಥಪೂರ್ಣ ಆಗಿವೆ. ಅದರಲ್ಲಿ “ಪ್ರಸೆಂಟ್ ಸಿನಾರಿಯೋ’ ಎಂಬ ಶೀರ್ಷಿಕೆಯ ಕಲಾಕೃತಿ ವಿಶೇಷವಾಗಿ ಗಮನ ಸೆಳೆಯುತ್ತದೆ. ಕಾಗದಗಾರ ಅವರು, ಸೋಶಿಯಲ್ ಮೀಡಿಯಾದಲ್ಲಿ ಚಿತ್ರಗಳನ್ನು ಪೋಸ್ಟ್ ಮಾಡಿ ಸುಮ್ಮನೆ ಕೂರಲ್ಲ. ಅದರೊಟ್ಟಿಗೆ ತಮ್ಮೂರಿನಲ್ಲೂ ಕೋವಿಡ್ 19 ಯೋಧನಂತೆ ಕೆಲಸ ಮಾಡುತ್ತಿದ್ದಾರೆ. ಕೋವಿಡ್ 19 ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ತಮ್ಮ ಮನೆಯ ಮುಂದೆ ಬ್ಯಾನರ್, ಫ್ಲೆಕ್ಸ್ ಮಾಡಿಸಿ ಹಾಕಿದ್ದಾರೆ.
ಅಷ್ಟೇ ಅಲ್ಲ, ಸ್ಥಳೀಯ ಕಲಾವಿದರಾದ ಬಸವರಾಜ, ರವಿ ಕಾಳೇರ, ಸಚ್ಚಿದಾನಂದ ಕುಮಾರ್ ಜೊತೆ ಸೇರಿ, ರಾಣೆಬೆನ್ನೂರಿನ ಅಶೋಕ್ ಸರ್ಕಲ್, ಬಸ್ಟ್ಯಾಂಡ್ ಮುಂಭಾಗದಲ್ಲಿ ಡಾಂಬರು ರಸ್ತೆಗಳ ಮೇಲೆ ದೊಡ್ಡ ದೊಡ್ಡ ಚಿತ್ರಗಳನ್ನು ಬಿಡಿಸಿ, ಜನರಲ್ಲಿ ಕೋವಿಡ್ 19 ಸೋಂಕು, ಸ್ವತ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
* ಸ್ವರೂಪಾನಂದ ಕೊಟ್ಟೂರ್