ರಾಯಚೂರು: ಮಾರಕ ಕಾಯಿಲೆ ಎಂದೇ ಗುರುತಿಸಲಾದ ಏಡ್ಸ್ ಈಗ ಮುಂಚೆಗಿಂತ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ. ಗ್ರಾಮೀಣ ಭಾಗದಲ್ಲಿ ಮತ್ತಷ್ಟು ಪ್ರಚಾರ ಮಾಡಿದಲ್ಲಿ ಈ ರೋಗವನ್ನು ಸಂಪೂರ್ಣ ನಿರ್ನಾಮ ಮಾಡಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬೈಲೂರು ಶಂಕರರಾಮ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಶ್ವ ಏಡ್ಸ್ ತಡೆ ದಿನಾಚರಣೆ ನಿಮಿತ್ತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕ, ಭಾರತೀಯ ವೈದ್ಯಕೀಯ ಸಂಘ, ವಕೀಲರ ಸಂಘ ಸೇರಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಚ್‌ಐವಿ ರೋಗಕ್ಕೆ ಸೂಕ್ತ ಚಿಕಿತ್ಸೆ ಸಿಗದಿದ್ದಾಗ ಅದು ಏಡ್ಸ್ ಆಗಿ ಪರಿವರ್ತನೆ ಆಗಲಿದೆ. ಒಮ್ಮೆ ರೋಗಿ ಏಡ್ಸ್‌ಗೆ ತುತ್ತಾದರೆ ನಿವಾರಣೆ ಮಾಡುವುದು ಕಷ್ಟ. ಹೀಗಾಗಿ ಈ ಕಾಯಿಲೆ ಹರಡದಂತೆ ಎಚ್ಚರಿಕೆ ವಹಿಸಬೇಕು. ಎಚ್‌ಐವಿ ವಿವಿಧ ರೂಪದಲ್ಲಿ ಹರಡುವ ಕಾಯಿಲೆಯಾಗಿದೆ. 2011ರಿಂದ ಈ ಕಾಯಿಲೆ ಪ್ರಮಾಣ ಕಡಿಮೆಯಾಗಿದೆ ಎಂಬ ವರದಿಗಳಿವೆ. ರಾಯಚೂರು ತಾಲೂಕಿನಲ್ಲಿ ಏಡ್ಸ್ ಪ್ರಕರಣಗಳು ಇಡೀ ಜಿಲ್ಲೆಯಲ್ಲಿಯೇ ಅತೀ ಹೆಚ್ಚಾಗಿದೆ. ಆದ್ದರಿಂದ ಆರೋಗ್ಯ ಇಲಾಖೆ ಮತ್ತು ಇತರೆ ಇಲಾಖೆಗಳು ಜನರಲ್ಲಿ ಜಾಗೃತಿ ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.
ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ, ಇಂಥ ದಿನಗಳು ಕೇವಲ ಆಚರಣೆಗೆ ಸೀಮಿತ ಆಗಬಾರದು. ಜನರಿಗೆ ಈ ಬಗ್ಗೆ ಮಾಹಿತಿ ತಲುಪಬೇಕು. ರಾಯಚೂರು ಜಿಲ್ಲೆ ಏಡ್ಸ್‌ನಲ್ಲಿ ರಾಜ್ಯದಲ್ಲಿ 4ನೇ ಸ್ಥಾನದಲ್ಲಿದೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಸಿ.ನಾಡಗೌಡ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಎಂ.ಕೆ.ಎಸ್. ನಸೀರ್, ಡಾ| ಸುರೇಂದ್ರ ಬಾಬು, ಡಾ| ಗಣೇಶ ಕೆ., ಡಾ| ವಿಜಯಾ ಕೆ., ರೆಡ್‌ಕ್ರಾಸ್ ಸಂಸ್ಥೆ, ಲಯನ್ಸ್ ಕ್ಲಬ್, ರೆಡ್ ರಿಬ್ಬನ್ ಕ್ಲಬ್ ಹೊಸ ಬೆಳಕು, ಆಪ್ತಮಿತ್ರ ಸಂಸ್ಥೆ ಹಾಗೂ ಎನ್‌ಎಸ್‌ಎಸ್, ಎನ್‌ಸಿಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಕಚೇರಿಯಿಂದ ಆರೋಗ್ಯ ಇಲಾಖೆ ಕಚೇರಿವರೆಗೆ ಜಾಗೃತಿ ಜಾಥಾ ನಡೆಸಲಾಯಿತು.