ಚಾಮರಾಜನಗರ: ತಂಬಾಕು ಬಳಕೆಯನ್ನು ತಳಮಟ್ಟದಿಂದ ನಿಯಂತ್ರಿಸಿಲು ಪರಿಣಾಮಕಾರಿಯಾದ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್ ತಿಳಿಸಿದರು. ನಗರದ ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಮಟ್ಟದ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು.
ತಂಬಾಕು ಬಳಕೆಗೆ ಕಡಿವಾಣ ಹಾಕಲು ಗ್ರಾಮ ಮಟ್ಟದಿಂದ ಹೆಚ್ಚಿನ ಅರಿವು ಕಾರ್ಯಕ್ರಮ ಮಾಡಬೇಕು. ತಾಲೂಕು ಮಟ್ಟದಲ್ಲಿ ನಿರಂತರವಾಗಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಅಕ್ರಮವಾಗಿ ತಂಬಾಕು ಮಾರಾಟ ಹಾಗೂ ಸಾರ್ವಜನಿಕವಾಗಿ ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಬೇಡಿ: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಏಕೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ಧೂಮಪಾನ ಮಾಡದ ವ್ಯಕ್ತಿಯೂ ಕೂಡ ಪರೋಕ್ಷ ಧೂಮಪಾನ ಮಾಡಿ ಅನಾರೋಗ್ಯಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದು ತಂಬಾಕು ನಿಯಂತ್ರಣಕ್ಕೆ ಅಡಿಪಾಯವಾಗಲಿದೆ ಎಂದು ತಿಳಿಸಿದರು.
ಸೂಚನಾ ಫಲಕ ಅಳವಡಿಸಿ: ಕೋಟಾ ಸೆಕ್ಷನ್-4ರ ಸೂಚನಾ ಫಲಕವನ್ನು ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ಪ್ರವೇಶ ದ್ವಾರದಲ್ಲಿ ಅಳವಡಿಸಬೇಕು. ಈ ಫಲಕದಲ್ಲಿ ಸೂಚಿತ ಸಂಪೂರ್ಣ ಮಾಹಿತಿ ಇರಬೇಕು. ಜತೆಗೆ ಎಲ್ಲಾ ಶಾಲೆ, ಕಾಲೇಜುಗಳಲ್ಲಿ ತಂಬಾಕು ಮುಕ್ತ ಶಾಲಾ ಸಮಿತಿ ರಚಿಸಿ, ಸಮಿತಿಯಿಂದ ಶಾಲೆ ಮತ್ತು ಕಾಲೇಕು ವಾತಾವರಣವನ್ನು ತಂಬಾಕು ಮುಕ್ತಗೊಳಿಸಲು ಕಾರ್ಯನಿರ್ವಹಿಸಬೇಕು. ಈ ಸೂಚನೆಯನ್ನು ಪಾಲಿಸದಿದ್ದಲ್ಲಿ, ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ತಂಬಾಕು ಕಡಿವಾಣಕ್ಕೆ ಶ್ರಮ: ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಕಾರ್ಯಕ್ರಮಾಧಿಕಾರಿ ಡಾ.ನಾಗರಾಜು ಮಾತನಾಡಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕದಿಂದ ತಂಬಾಕು ನಿಯಂತ್ರಿಸಲು ಜಿಲ್ಲೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. 100ಕ್ಕೂ ಹೆಚ್ಚು ಶಾಲಾ ಅರಿವು ಕಾರ್ಯಕ್ರಮಗಳು, 50ಕ್ಕೂ ಹೆಚ್ಚು ಕೋಟಾ³ ದಾಳಿ, 8 ತರಬೇತಿ ಕಾರ್ಯಾಗಾರ, 4 ಗುಲಾಬಿ ಆಂದೋಲನ, 28 ಎಫ್.ಜಿ.ಡಿ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಈ ಮೂಲಕ ತಂಬಾಕು ಕಡಿವಾಣಕ್ಕೆ ಶ್ರಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಧೂಮಪಾನದಿಂದ ಮಾರಕ ರೋಗ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಮಾತನಾಡಿ, ಧೂಮಪಾನದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜನರು ಅರಿವು ಬೆಳೆಸಿಕೊಳ್ಳಬೇಕು. ಸ್ವಯಂ ಪ್ರೇರಿತವಾಗಿ ಧೂಮಪಾನ ಮಾಡುವುದಿಲ್ಲ ಎಂಬ ನಿರ್ದಾರ ಕೈಗೊಳ್ಳಬೇಕು. ಧೂಮಪಾನ ಮಾರಕ ರೋಗಗಳಿಗೆ ಎಡೆ ಮಾಡಿಕೊಡುವುದರಿಂದ ಅದರಿಂದ ದೂರ ಇರಬೇಕು ಎಂದು ಸಲಹೆ ನೀಡಿದರು. ಸಭೆಯಲ್ಲಿ ಡಾ.ರಾಜು ಮತ್ತಿತರರು ಹಾಜರಿದ್ದರು.