Advertisement

ಭ್ರಷ್ಟಾಚಾರ ನಿರ್ಮೂಲನೆಗೆ ಜಾಗೃತಿ ಅಗತ್ಯ: ನ್ಯಾ|ವಿಶ್ವನಾಥ ಶೆಟ್ಟಿ

11:54 PM Nov 23, 2019 | Sriram |

ಉಡುಪಿ: ಲೋಕಾಯುಕ್ತರಿಂದ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ. ಇದಕ್ಕೆ ಯುವಕರು ಸಹಿತ ಎಲ್ಲರ ಸಹಕಾರ ಅಗತ್ಯವಾಗಿದೆ. ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿದರಷ್ಟೆ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ ಎಂದು ಲೋಕಾಯುಕ್ತ ನ್ಯಾ| ಪಿ. ವಿಶ್ವನಾಥ್‌ ಶೆಟ್ಟಿ ಹೇಳಿದರು.

Advertisement

ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ಶುಕ್ರವಾರ ನೂತನ ಗ್ರಂಥಾಲಯ “ಜ್ಞಾನ ಸಿಂಧೂ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಕೀಲರು ಮತ್ತು ನ್ಯಾಯಾಧೀಶರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಸೂಕ್ತ ನ್ಯಾಯ ಸಿಗಬೇಕೆಂದಿದ್ದರೆ ಇವರಿಬ್ಬರ ನಡೆ ಅಪಾರವಾದ ಪಾತ್ರ ವಹಿಸುತ್ತದೆ. ಯಶಸ್ವಿ ವಕೀಲರಾಗುವತ್ತ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಕರೆ ನೀಡಿದರು.

ಗ್ರಂಥಾಲಯಗಳ ಸದುಪಯೋಗವಾಗಲಿ
ಗ್ರಂಥಾಲಯಗಳು ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವತ್ತ ಹೆಚ್ಚು ಗಮನಹರಿಸಬೇಕು. ವಿದ್ಯಾರ್ಥಿ ಜೀವನದಲ್ಲಿಯೇ ಯಶಸ್ಸಿನತ್ತ ಗಮನ ಕೇಂದ್ರೀಕರಿಸಿಕೊಳ್ಳಬೇಕು. ಜ್ಞಾನವೊಂದಿದ್ದರೆ ಬದುಕಿನ ಇತರ ಅಗತ್ಯಗಳನ್ನು ಪೂರೈಸಬಹುದು ಎಂದರು.

ಉತ್ತಮ ಅಂಕ ಗಳಿಸಿ
ದೇಶಾದ್ಯಂತ ಇಂದು ಹಲವಾರು ಕಾನೂನು ಕಾಲೇಜುಗಳಿದ್ದು, ಉತ್ತಮ ಶಿಕ್ಷಣ ನೀಡುವ ಮೂಲಕ ಪೈಪೋಟಿ ನಡೆಸುತ್ತಿವೆ. ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುವತ್ತ ಗಮನಹರಿಸಬೇಕು. ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಅತೀ ಅಗತ್ಯವಾಗಿದ್ದು, ಯುವಸಮುದಾಯದಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

Advertisement

ಓದಿನ ಆಸಕ್ತಿ ಕ್ಷೀಣ
ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾತನಾಡಿ, ಗ್ರಂಥಾಲ ಯಗಳು ಸ್ಮಾರಕಗಳಾಗುತ್ತಿವೆ. ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ಓದಿನ ಆಸಕ್ತಿ ಕಡಿಮೆಯಾಗುತ್ತಿದೆ. ಉಡುಪಿ ಜಿಲ್ಲೆಯಾದ್ಯಂತ ಗ್ರಂಥಾಲಯ ಸಪ್ತಾಹದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ| ಡಾ| ಪ್ರಕಾಶ್‌ ಕಣಿವೆ ಸ್ವಾಗತಿಸಿದರು. ಮಣಿಪಾಲದ ಟಿ.ಎ. ಪೈ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಪ್ರೊ| ಮಧು ವೀರರಾಘವನ್‌, ಮಣಿಪಾಲದ ಡಾ| ಟಿಎಂಎ ಪೈ ಫೌಂಡೇಶನ್‌ನ ಖಜಾಂಚಿ ಟಿ. ಅಶೋಕ್‌ ಪೈ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಅಲ್ಡ್ರನ್‌ ಪೌಲ್‌ ಹಾಗೂ ಕೀರ್ತನಾ ಪರಿಚಯಿಸಿದರು. ಜಾನ್ನಿ ವೆನಿಸಾ ಡಿ’ಸಿಲ್ವಾ ಕಾರ್ಯಕ್ರಮ ನಿರೂಪಿಸಿ, ಶ್ರೀಲಕ್ಷ್ಮೀ ಕಾಮತ್‌ ಕಾರ್ಯಕ್ರಮ ನಿರೂಪಿಸಿದರು.

ಅಪಾರ ಜ್ಞಾನ ಅಗತ್ಯ
ಉತ್ತಮ ವಕೀಲರಾಗಬೇಕಾದರೆ ಅಪಾರ ಜ್ಞಾನ ಹೊಂದಿರಬೇಕಾಗುತ್ತದೆ. ಹೊಸ ತಂತ್ರಜ್ಞಾನಗಳಿಗೆ ತಕ್ಕಂತೆ ಅಪ್‌ಡೇಟ್‌ ಆಗುತ್ತಾ ಹೋದರಷ್ಟೇ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯ. ಸಾರ್ವಜನಿಕರಿಗೆ ಸೇವೆ ನೀಡುವುದರಲ್ಲಿ ರಾಜ್ಯದಲ್ಲಿ ಉಡುಪಿಯೇ ನಂಬರ್‌ ವನ್‌ ಆಗಿದೆ. ಕಂದಾಯ ಇಲಾಖೆ ಸಹಿತ ವಿವಿಧ ಇಲಾಖೆಗಳಲ್ಲಿ ಉತ್ತಮ ಸೇವೆಯನ್ನು ನೀಡುವ ಮೂಲಕ ಉತ್ತಮ ಆಡಳಿತ ನೀಡಲು ಜಿಲ್ಲಾಡಳಿತ ಪಣತೊಟ್ಟಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next