Advertisement
ಮುಖ್ಯವಾಗಿ ವಿದ್ಯಾರ್ಥಿ ಸಮುದಾಯ ಮಾದಕ ದ್ರವ್ಯ ಸೇವನೆ, ಮಾರಾಟದಲ್ಲಿ ಸಕ್ರಿಯವಾಗಿರುವುದರ ಸುಳಿವು ಪೊಲೀಸರಿಗೆ ಸಿಕ್ಕಿದೆ. ನ. 12ರಿಂದ ಡಿ. 6ರ ವರೆಗೆ ದ.ಕ.ದಲ್ಲಿ ಗಾಂಜಾ ಸೇವನೆ ಆರೋಪದಲ್ಲಿ ಒಟ್ಟು 25ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದ್ದು ಇದರಲ್ಲಿ 16 ಮಂದಿ ಕಾಲೇಜು ವಿದ್ಯಾರ್ಥಿಗಳು. ಇದು ಕೆಲವು ವಿದ್ಯಾರ್ಥಿಗಳು ಡ್ರಗ್ಸ್ ಚಟುವಟಿಕೆಯಲ್ಲಿ ಸಕ್ರಿಯವಾಗಿರುವುದನ್ನು ದೃಢಪಡಿಸಿದೆ. ಉಡುಪಿ ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ ಮೂರು ಪ್ರಕರಣಗಳಲ್ಲಿ ಆರು ಮಂದಿಯನ್ನು ಬಂಧಿಸಲಾಗಿದೆ. ಡಿ. 1ರಂದು ಗಾಂಜಾ ಸೇವಿಸುತ್ತಿದ್ದ ನಾಲ್ವರನ್ನು ಬಂಧಿಸಿದ್ದರು.
ನ. 27ರಂದು ನಗರದ ಕಾಲೇಜೊಂದರ ವಿದ್ಯಾರ್ಥಿಗಳಿಬ್ಬರ ಮೇಲೆ ನಡೆದಿದ್ದ ರ್‍ಯಾಗಿಂಗ್ ಪ್ರಕರಣದಲ್ಲಿ ಪೊಲೀಸರು 9 ಮಂದಿಯನ್ನು ಬಂಧಿಸಿದ್ದರು. ಇದರಲ್ಲಿ 7 ಮಂದಿ ವಿದ್ಯಾರ್ಥಿಗಳು ಗಾಂಜಾ ವ್ಯಸನಿಗಳು ಎಂಬುದು ದೃಢಪಟ್ಟಿತ್ತು. ಡಿ. 2ರಂದು ವಿದ್ಯಾರ್ಥಿಗಳ ನಡುವಿನ ಹೊಡೆದಾಟ, ಪೊಲೀಸರು ಮತ್ತು ಸಾರ್ವಜನಿಕರ ಮೇಲಿನ ಹಲ್ಲೆ ಪ್ರಕರಣದಲ್ಲಿ ಪೊಲೀಸರು 8 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ನಾಲ್ವರು ಗಾಂಜಾ ಸೇವಿಸಿದ್ದು ದೃಢಪಟ್ಟಿತ್ತು. ಗಾಂಜಾ ಸೇವನೆ ಹಿನ್ನೆಲೆಯಲ್ಲಿ ನ. 17ರಂದು ಉರ್ವ ಪೊಲೀಸರು 5 ಮಂದಿ ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ಕೇರಳ ಲಿಂಕ್
ಗಾಂಜಾ ಸೇವನೆ ಮಾಡಿರುವ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಕೇರಳ ಮೂಲದ ವಿದ್ಯಾರ್ಥಿಗಳು. ಈಗಾಗಲೇ ನಗರಕ್ಕೆ ಕೇರಳ, ಆಂಧ್ರಪ್ರದೇಶ, ಗೋವಾ ಮೊದಲಾದ ಕಡೆಗಳಿಂದ ಗಾಂಜಾ ಮತ್ತಿತರ ಮಾದಕ ದ್ರವ್ಯಗಳು ಪೂರೈಕೆಯಾಗುವುದನ್ನು ಪೊಲೀಸರು ಕಂಡುಕೊಂಡಿದ್ದರು. ಕೇರಳ ಗಡಿಯನ್ನು ಕೇಂದ್ರೀಕರಿಸಿ ಕಾರ್ಯಾಚರಣೆ ನಡೆಸಿ ಬೃಹತ್ ಪ್ರಮಾಣದಲ್ಲಿ ಮಾದಕ ದ್ರವ್ಯ ಸಂಗ್ರಹಿಸಿದ್ದರು. ಆದಾಗ್ಯೂ ಕೇರಳ ಭಾಗದ ವಿದ್ಯಾರ್ಥಿಗಳ ಕೈಗೆ ಸುಲಭವಾಗಿ ಗಾಂಜಾ ಸಿಗುತ್ತಿದೆ ಎನ್ನಲಾಗುತ್ತಿದೆ. ಮಾತ್ರವಲ್ಲದೆ ಕೆಲವು ವಿದ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನಿಗಳಾಗಿರುವ ಜತೆಗೆ ಪೆಡ್ಲರ್(ಮಾರಾಟಗಾರರು) ಕೂಡ ಆಗಿರುವ ಸಾಧ್ಯತೆ ಇದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
Related Articles
Advertisement
ಜಾಗೃತಿಗೆ ಆದ್ಯತೆ ಮಾದಕ ದ್ರವ್ಯ ಸೇವನೆ ಹಿನ್ನೆಲೆಯಲ್ಲಿ ಈಗಾಗಲೇ ಹಲವಾರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದರ ಜತೆಗೆ ವಿದ್ಯಾರ್ಥಿ ಸಮುದಾಯ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಕೂಡ ನಡೆಯುತ್ತಿವೆ. ಈಗಾಗಲೇ ಮೂಲ್ಕಿ, ಮೂಡುಬಿದಿರೆ, ಪಣಂಬೂರು, ಕಾವೂರು, ಸುರತ್ಕಲ್, ಉಳ್ಳಾಲ, ಕೊಣಾಜೆ, ಕಂಕನಾಡಿ ಠಾಣಾ ವ್ಯಾಪ್ತಿಯ ಶಿಕ್ಷಣ ಸಂಸ್ಥೆ, ಹಾಸ್ಟೆಲ್‌ಗಳಲ್ಲಿ ಇಂತಹ ಕಾರ್ಯಕ್ರಮ ನಡೆಸಲಾಗಿದ್ದು, ಮುಂದಿನ ವಾರದಿಂದ ಇತರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿಯೂ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಲಿದೆ.
-ಎನ್. ಶಶಿಕುಮಾರ್,
ಪೊಲೀಸ್ ಆಯುಕ್ತರು, ಮಂಗಳೂರು