ಹರಪನಹಳ್ಳಿ: ಏಡ್ಸ್ ಸೋಂಕು ತಡೆಗಟ್ಟಲು, ಸೋಂಕು ಹರಡುವಿಕೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧಿಧೀಶರಾದ ಉಂಡಿ ಮಂಜುಳಾ ಶಿವಪ್ಪ ಹೇಳಿದರು.
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಚ್‌ಐವಿ ಸೋಂಕಿನ ಬಗ್ಗೆ ಜನಸಾಮಾನ್ಯರಲ್ಲಿ ಆರೋಗ್ಯದ ತಿಳಿವಳಿಕೆ ಮತ್ತು ಕೊರತೆ ಇದ್ದು ಸಾರ್ವಜನಿಕರಲ್ಲಿ ಏಡ್ಸ್ ನಿಯಂತ್ರಣ ಕುರಿತು ಹೆಚ್ಚಿನ ಅರಿವು ಮೂಡಿಸಿ, ಏಡ್ಸ್ ಸೋಂಕಿಗೆ ಬಲಿಯಾಗುವವರ ಸಂಖ್ಯೆ ಕಡಿಮೆಯಾಗಬೇಕು. ಎಚ್‌ಐವಿ ಬಾಧಿ ತರನ್ನು ಯಾವುದೇ ತಾರತಮ್ಯ ಮಾಡದೇ ಗೌರವದಿಂದ ಕಾಣಬೇಕು. ಎಚ್‌ಐವಿ ಬಾಧಿತರಿಗೆ ಸರಕಾರದಿಂದ ಹಲವಾರು ಸೌಲಭ್ಯಗಳು ದೊರೆಯುತ್ತಿದ್ದು ಇದರ ಬಗ್ಗೆತಿಳಿವಳಿಕೆ ನೀಡಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದರು.
ಸಿವಿಲ್ ನ್ಯಾಯಾಧೀಶರಾದ ಬಿ.ಜಿ. ಶೋಭಾ ಮಾತನಾಡಿ, ಕಾನೂನಿನಡಿಯಲ್ಲಿ ಏಡ್ಸ್ ಬಾಧಿ ತರಿಗೆ ಗೌಪ್ಯತೆಯ ಹಕ್ಕು ನೀಡಲಾಗಿದ್ದು,ಎಚ್‌ಐವಿ ಏಡ್ಸ್‌ಗೆ ತುತ್ತಾಗಿರುವ ವ್ಯಕ್ತಿಗೆ ಸಾರ್ವಜನಿಕ ಕ್ಷೇತ್ರದಲ್ಲಾಗಲಿ ಅಥವಾ ಖಾಸಗಿಕ್ಷೇತ್ರದಲ್ಲಾಗಲಿ ತಾರತಮ್ಯವಾಗಿದ್ದರೆ, ಕಾನೂನು ರಕ್ಷಣೆಗೆ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದರು.
ಆರೋಗ್ಯ ಇಲಾಖೆ ಆಪ್ತ ಸಮಲೋಚಕ ಜಿ.ಎ.ಮಲ್ಲಿಕಾರ್ಜುನ ಮಾತನಾಡಿ, ಎಚ್.ಐ.ವಿ ಎನ್ನುವುದು ವೈರಸ್ ಮೂಲಕ ಹರಡುವ ರೋಗವಾಗಿದ್ದು, ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿಯನ್ನು ಹಂತ ಹಂತವಾಗಿ ನಾಶಗೊಳಿಸುವುದರಿಂದ ವಿವಿಧ ರೋಗಗಳಿಗೆತುತ್ತಾಗಬೇಕಾಗುತ್ತದೆ. ಆದ್ದರಿಂದ ರೋಗ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಆಗ ರೋಗದ ಸ್ಥಿತಿಗತಿ ತಿಳಿಯಲು ಸಾಧ್ಯವಾಗುತ್ತದೆ. ಎಚ್‌ಐವಿ ಏಡ್ಸ್ ಕುರಿತು ಇತ್ತೀಚಿನ ದಿನಗಳಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳುನಡೆಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಆರೋಗ್ಯಕರ ಜೀವನ ಶೈಲಿ ರೂಪಿಸಿಕೊಳ್ಳಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಬಿ.ಚಂದ್ರೇಗೌಡ ಅಧ್ಯಕ್ಷತೆವಹಿಸಿದ್ದರು. ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಎ.ಎಂ. ಬಸವರಾಜ್, ಸಾರ್ವಜನಿಕ ಆಸ್ಪತ್ರೆ ಅಧೀಕ್ಷಕ ಡಾ| ಶಿವಕುಮಾರ್, ಮಕ್ಕಳ ಕಲ್ಯಾಣ ಇಲಾಖೆ ಮಾಲುಂಬಿ ಇತರರಿದ್ದರು.