Advertisement

ಅರಿವು ಶೈಕ್ಷಣಿಕ ಸಾಲ ಯೋಜನೆ: ರಾಜ್ಯದಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯೇ ಮುಂದು

02:07 AM Mar 24, 2022 | Team Udayavani |

ಉಡುಪಿ: ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ “ಅರಿವು ಶೈಕ್ಷಣಿಕ ಸಾಲ ಯೋಜನೆ’ಯನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದು, ಈ ಎರಡು ಜಿಲ್ಲೆಗಳು ರಾಜ್ಯದಲ್ಲೇ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ.

Advertisement

ಉಡುಪಿಯ 287 ವಿದ್ಯಾರ್ಥಿಗಳು 189.42 ಲ.ರೂ. ಮತ್ತು ದ.ಕ.ದ 191 ವಿದ್ಯಾರ್ಥಿಗಳು 126.06 ಲ.ರೂ. ಪಡೆದುಕೊಂಡಿದ್ದಾರೆ.

ಬೀದರ್‌ಗೆ ಕೊನೆಯ ಸ್ಥಾನ
ಅತೀ ಕಡಿಮೆ ಸಾಲ ನೀಡಿಕೆಯಲ್ಲಿ ಕೊನೆಯ ಸ್ಥಾನ ಬೀದರ್‌ಗೆ ಲಭಿಸಿದೆ. ಇಲ್ಲಿ ಕೇವಲ 17 ವಿದ್ಯಾರ್ಥಿಗಳು 11.22 ಲ.ರೂ. ಸಾಲ ಪಡೆದುಕೊಂಡಿದ್ದಾರೆ. ಕೊಡಗು ಹಾಗೂ ಯಾದಗಿರಿ ಅನಂತರದ ಸ್ಥಾನದಲ್ಲಿವೆ. ಕೊಡಗಿನಲ್ಲಿ 30 ವಿದ್ಯಾರ್ಥಿಗಳು 19.80 ಲ.ರೂ., ಯಾದಗಿರಿಯ 40 ವಿದ್ಯಾರ್ಥಿಗಳು 26.40 ಲ.ರೂ. ಪಡೆದುಕೊಂಡಿದ್ದಾರೆ.

ಏನಿದು ಯೋಜನೆ?

ದೇವರಾಜ ಅರಸು ನಿಗಮದಿಂದ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ವಾರ್ಷಿಕ 1 ಲ.ರೂ.ಗಳಂತೆ ಕೋರ್ಸ್‌ ಅವಧಿಗೆ ಗರಿಷ್ಠ 4ರಿಂದ 5 ಲ.ರೂ. ವರೆಗೆ ವಾರ್ಷಿಕ ಶೇ. 2 ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.

ಅರ್ಹತೆ ಏನು?
ಶೈಕ್ಷಣಿಕ ಸಾಲ ಪಡೆದುಕೊಳ್ಳ ಬಯಸುವ ವಿದ್ಯಾರ್ಥಿ ಗಳು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿರಬೇಕು. ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 3.50 ಲ.ರೂ. ಮಿತಿ ಯಲ್ಲಿರಬೇಕು.

ವಾರ್ಷಿಕ 20 ಕೋ.ರೂ. ಸಾಲ
ರಾಜ್ಯದಲ್ಲಿ ವಾರ್ಷಿಕವಾಗಿ 3 ಸಾವಿರ ವಿದ್ಯಾರ್ಥಿಗಳಿಗೆ 20 ಕೋ.ರೂ.ಅರಿವು ಶೈಕ್ಷಣಿಕ ಸಾಲ ನೀಡಲಾಗುತ್ತಿದೆ. ಆಯಾ ಜಿಲ್ಲೆಗಳಿಗೆ ನಿರ್ದಿಷ್ಟ ಗುರಿ ನೀಡಲಾಗುತ್ತದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಅರ್ಜಿಗಳು ಬಾರದಿದ್ದರೆ, ಹೆಚ್ಚು ಅರ್ಜಿಗಳು ಬಂದ ಜಿಲ್ಲೆಗಳು ಮನವಿ ಸಲ್ಲಿಸಿದರೆ ಆ ಮೊತ್ತವನ್ನು ಇತರ ಜಿಲ್ಲೆಗಳ ಫ‌ಲಾನುಭವಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಈ ಮೂಲಕ ಶೇ. 100ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ವ್ಯಾಸಂಗದ ಕೋರ್ಸ್‌ಗಳು
ಬಿಇ, ಎಂಬಿಬಿಎಸ್‌, ಬಿಯುಎಂಎಸ್‌, ಬಿಡಿಎಸ್‌, ಬಿಎಎಂಎಸ್‌, ಬಿಎಚ್‌ಎಂಎಸ್‌, ಎಂಬಿಎ, ಎಂಟಿಕ್‌, ಎಂಇ, ಎಂಡಿ, ಪಿಎಚ್‌.ಡಿ., ಬಿಸಿಎ/ಎಂಸಿಎ, ಎಂಎಸ್‌ ಅಗ್ರಿಕಲ್ಚರ್‌, ಬಿಎಸ್ಸಿ ನರ್ಸಿಂಗ್‌, ಬಿ-ಫಾರ್ಮಾ/ಎಂ-ಫಾರ್ಮಾ, ಬಿಎಸ್ಸಿ ಪ್ಯಾರಾ ಮೆಡಿಕಲ್‌, ಬಿಎಸ್ಸಿ ಬಯೊಟೆಕ್ನಾಲಜಿ, ಬಿ.ಟೆಕ್‌, ಬಿಪಿಟಿ, ಬಿವಿಎಸ್ಸಿ/ಎಂವಿಎಸ್ಸಿ, ಬಿಎನ್‌ಎಂ, ಬಿಎಚ್‌ಎಂ, ಎಂಡಿಎಸ್‌, ಎಂಎಸ್‌ಡಬ್ಲೂé, ಎಲ್‌ಎಲ್‌ಎಂ, ಎಂಎಫ್ಎ, ಎಂಎಸ್ಸಿ ಬಯೊಟೆಕ್ನಾಲಜಿ, ಎಂಎಸ್ಸಿ-ಎಜಿ.

ಆಯ್ಕೆ ಪ್ರಕ್ರಿಯೆ ಹೇಗೆ?
ಸುವಿಧಾ ತಂತ್ರಾಂಶದ ಮೂಲಕ ವಿದ್ಯಾರ್ಥಿಗಳು ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ಸಿಇಟಿ ರ್‍ಯಾಂಕಿಂಗ್‌ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಎಂಬಿಬಿಎಸ್‌, ಬಿಎಸ್ಸಿ ನರ್ಸಿಂಗ್‌, ಬಿಎಸ್ಸಿ ಪ್ಯಾರಾ ಮೆಡಿಕಲ್‌, ಎಂಎಸ್ಸಿ ಬಯೊಟೆಕ್ನಾಲಜಿ ಅಧ್ಯಯನ ಮಾಡುವ ಹೆಚ್ಚಿನ ಮಂದಿ ವಿದ್ಯಾರ್ಥಿಗಳು ಈ ಯೋಜನೆಯಸೌಲಭ್ಯ ಪಡೆದುಕೊಂಡಿದ್ದಾರೆ. ಸಾಲ ಸೌಲಭ್ಯದ ಮಾಹಿತಿಗಳು ನಿಗಮದ ವೆಬ್‌ಸೈಟ್‌ನಲ್ಲಿಯೂ ಸಿಗಲಿವೆ.

ಸೂಕ್ತ ಮಾಹಿತಿ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಅರಿವು ಶೈಕ್ಷಣಿಕ ಸಾಲ ಯೋಜನೆಯನ್ನು ಸಮರ್ಪಕವಾಗಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಶಿಬಿರ ಆಯೋಜಿಸುತ್ತಿರುತ್ತೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಬೇಕು.
– ಮಂಜು ಡಿ., ನಿಗಮದ ಜಿಲ್ಲಾ ವ್ಯವಸ್ಥಾಪಕರು,
ಉಡುಪಿ, ದ.ಕ. (ಪ್ರಭಾರ)

-ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next