ಮಹಾನಗರ: ಎಚ್ಚರಿಕೆ ಮತ್ತು ಸಾಮರ್ಥ್ಯ ಗುಣಗಳನ್ನು ಮೈ ಗೂಡಿಸಿಕೊಂಡರೆ ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯನ್ನು ತಲುಪಲು ಸಾಧ್ಯವಿದೆ ಎಂದು ಅಲೋಶಿಯಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ವಂ| ಡೈನೇಶಿಯಸ್ ವಾಸ್ ಹೇಳಿದರು.
ನಗರದ ಸಂತ ಅಲೋಶಿಯಸ್ ಕೈಗಾರಿಕಾ ತರಬೇತಿ ಸಂಸ್ಥೆ ಮತ್ತು ಹ್ಯುಂಡೈ ಮೋಟಾರ್ ಸಹಭಾಗಿತ್ವದ ವೃತ್ತಿ ತರಬೇತಿಯ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವೃತ್ತಿ ಶಿಕ್ಷಣವನ್ನು ಕೇವಲ ಉದ್ಯೋ ಗಕ್ಕೆಂದು ಪರಿಗಣಿಸಬಾರದು; ಅದು ಜೀವನದ ಗುರಿ ಎಂಬುದಾಗಿ ಕಾಣಬೇಕು ಎಂದರು.
ಅದ್ವೈತ್ ಹ್ಯುಂಡೈ ಸಂಸ್ಥೆಯ ಜನರಲ್ ಮ್ಯಾನೇಜರ್ ಶಶಿಕಾಂತ್ ಶೆಟ್ಟಿ, ತರಬೇತಿ ಮುಖ್ಯಸ್ಥ ಜಿ. ಸತೀಶ್ ಕುಮಾರ್, ಸಂತ ಅಲೋಶಿಯಸ್ ಐಟಿಐ ಪ್ರಾಂಶುಪಾಲ ವಿನ್ಸೆಂಟ್ ಮೆಂಡೋನ್ಸಾ ಉಪಸ್ಥಿತರಿದ್ದರು. ನಿರ್ದೇಶಕ ವಂ| ಸಿರಿಲ್ ಡಿ’ಮೆಲ್ಲೊ ಸ್ವಾಗತಿಸಿದರು.
ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಅತ್ಯುನ್ನತ ಅಂಕಗಳನ್ನು ಪಡೆದ ರೂಪೇಶ್, ಗ್ಯಾರಲ್ ಲೋಬೋ ಮತ್ತು ಮನೀಶ್ ಬಿ. ಅವರಿಗೆ ಸ್ಮರಣಿಕೆಯನ್ನು ನೀಡಲಾಯಿತು.
ಅದ್ವೈತ್ ಹ್ಯುಂಡೈನಲ್ಲಿ ಉದ್ಯೋಗಕ್ಕೆ ನೇಮಕಾತಿ ಪಡೆದ ವಿದ್ಯಾರ್ಥಿಗಳಿಗೆ ಕಂಪೆನಿಯ ಜನರಲ್ ಮ್ಯಾನೇಜರ್ ಶಶಿಕಾಂತ್ ಶೆಟ್ಟಿ ಅವರು ಉದ್ಯೋಗ ನೇಮಕಾತಿ ಪತ್ರ ವಿತರಿಸಿದರು. ಶಿಕ್ಷಕ ರೋಬಿನ್ ವಾಸ್ ನಿರೂಪಿಸಿದರು. ಆಲ್ವಿನ್ ಮಿನೇಜಸ್ ವಂದಿಸಿದರು.