Advertisement

ಮುಗ್ಧ ರೈತರ ದಾರಿ ತಪ್ಪಿಸುವ ಕಾಂಗ್ರೆಸ್‌: ಕೃಷಿ ಕಾಯ್ದೆ ತಿದ್ದುಪಡಿ ಕುರಿತು ಜಾಗೃತಿ ಅಭಿಯಾನ

04:23 PM Oct 08, 2020 | sudhir |

ಬಾಗಲಕೋಟೆ: ಕೇಂದ್ರ- ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆ ತಿದ್ದುಪಡಿ ಕುರಿತು ಕಾಂಗ್ರೆಸ್‌ ಮುಗ್ಧ
ರೈತರ ದಾರಿ ತಪ್ಪಿಸುತ್ತಿದೆ. ಈ ಕುರಿತು ಪ್ರತಿಯೊಂದು ಗ್ರಾಮ ಮಟ್ಟದಲ್ಲೂ ರೈತರಿಗೆ ಹೊಸ ಮಸೂದೆಗಳ ಕುರಿತು ತಿಳಿವಳಿಕೆ
ನೀಡುವ ಕಾರ್ಯ ಮಾಡಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷರೂ ಆಗಿರುವ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ
ಹೇಳಿದರು.

Advertisement

ನಗರದ ಬಸವೇಶ್ವರ ಮಂಗಲ ಭವನದಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಹಮ್ಮಿಕೊಂಡಿದ್ದ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ರೈತರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ
ಮಸೂದೆ, ರೈತರ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ, ಅಗತ್ಯ ಸರಕುಗಳ ತಿದ್ದುಪಡಿ ಮಸೂದೆ ಜಾರಿಗೆ ತಂದಿದೆ. ಈ ಮೂರು ತಿದ್ದುಪಡಿಗಳು ರೈತರ ಸಮಗ್ರ ಏಳ್ಗೆ ಹೊಂದಿವೆ. ಆದರೆ ಕಾಂಗ್ರೆಸ್‌ ಹಾಗೂ ಇತರ ವಿರೋಧ ಪಕ್ಷಗಳು ರೈತರನ್ನುದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ರೈತರ ಏಳ್ಗೆ ಸಹಿಸದ ಇಂತಹ ಪಕ್ಷಗಳ ಕುತಂತ್ರಕ್ಕೆ ಯಾರೂ ಕಿವಿಗೊಡಬಾರದು ಎಂದರು.

ರೈತ ಜಾಗೃತಿ ಅಭಿಯಾನ: ಬಿಜೆಪಿ ರೈತ ಮೋರ್ಚಾದಿಂದ ಪ್ರತಿಯೊಂದು ಬೂತ್‌ ಹಾಗೂ ಗ್ರಾಮ ಮಟ್ಟದಲ್ಲಿ ರೈತ ಜಾಗೃತಿ
ಅಭಿಯಾನ ನಡೆಸಲಾಗುತ್ತಿದೆ. ಆ ಮೂಲಕ ಮಸೂದೆಗಳಲ್ಲಿ ಏನಿದೆ, ಯಾವುದು ಸತ್ಯ, ಯಾವುದು ಸುಳ್ಳು? ಎಂಬುದರ ಕುರಿತು
ಕರಪತ್ರಗಳ ಮೂಲಕ ರೈತರಿಗೆ ತಿಳಿಸುವ ಕಾರ್ಯ ನಡೆಯಲಿದೆ. ರೈತ ತಾನು ಬೆಳೆದ ಬೆಳೆಗೆ ತಾನೇ ಮಾಲೀಕ. ತನಗೆ ಇಷ್ಟವಾದ
ಸ್ಥಳದಲ್ಲಿ ಆತ ಯೋಗ್ಯ ಬೆಲೆಗೆ ಬೆಳೆ ಮಾರಾಟ ಮಾಡಬೇಕು. ಇದರಿಂದ ಎಪಿಎಂಸಿಗಳು ಮುಚ್ಚಲ್ಪಡುತ್ತವೆ ಎಂದು ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ. ಈ ಕುರಿತು ಈಗಾಗಲೇ ಸಂಬಂಧಿಸಿದ ಸಚಿವರು, ಸರ್ಕಾರ ಸ್ಪಷ್ಟಪಡಿಸಿದ್ದು, ಎಪಿಎಂಸಿಗಳು ಮುಚ್ಚುವುದಿಲ್ಲ ಎಂದು ಹೇಳಿದರು.

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರ ಬೆಳೆಗೆ ಬೆಂಬಲ ಬೆಲೆ ಮುಂದಿನ ದಿನಗಳಲ್ಲಿ ಕೊಡುವುದಿಲ್ಲ ಎಂದು ವದಂತಿ
ಹಬ್ಬಿಸಲಾಗುತ್ತಿದೆ. ಇದೂ ಸುಳ್ಳು. ಈಚೆಗೆ ಲೋಕಸಭೆ ಅಧಿವೇಶನ ನಡೆದಾಗ ಈ ಮಸೂದೆ ಅಂಗೀಕಾರ ಮಾಡಲಾಗಿದೆ. ಅದೇ
ಸಂದರ್ಭದಲ್ಲಿ ಸುಮಾರು 28 ಬೆಳೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಬೆಂಬಲ ಬೆಲೆಯೂ ಘೋಷಿಸಿದ್ದಾರೆ. ಬೆಳೆಗೆ ಸೂಕ್ತ ಬೆಲೆ
ಇಲ್ಲದಾಗ, ರೈತ ಸಂಕಷ್ಟದಲ್ಲಿದ್ದಾಗ ಬೆಂಬಲ ಬೆಲೆ ಕೊಡುವುದು ಸರ್ಕಾರದ ಜವಾಬ್ದಾರಿ. ಇದನ್ನು ಬಿಜೆಪಿ ಸರ್ಕಾರ ಮಾಡಲಿದೆ ಎಂದು ತಿಳಿಸಿದರು.

22 ಲಕ್ಷ ಹೆಕ್ಟೇರ್‌ ಕೃಷಿಗೆ ಬಳಕೆ ಆಗುತ್ತಿಲ್ಲ:
ರಾಜ್ಯದಲ್ಲಿ 191 ಲಕ್ಷ ಹೆಕ್ಟೇರ್‌ ಕೃಷಿ ಯೋಗ್ಯ ಭೂಮಿ ಇದೆ. ಸದ್ಯ 110 ಲಕ್ಷ ಹೆಕ್ಟೇರ್‌ ಮಾತ್ರ ಬಳಕೆಯಾಗುತ್ತಿದೆ. ಇನ್ನೂ 22 ಲಕ್ಷ ಹೆಕ್ಟೇರ್‌ ಭೂಮಿ ಕೃಷಿಗೆ ಬಳಕೆಯಾಗುತ್ತಿಲ್ಲ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮೂಲಕ ಈ ಭೂಮಿಯೂ ಕೃಷಿಗೆ ಬಳೆಕಯಾಗಲಿದೆ. ಸದ್ಯ ದೇಶದ ಜಿಡಿಪಿಯಲ್ಲಿ ಕೃಷಿ ಉತ್ಪನ್ನದಾರರ ಶೇ.16ರಷ್ಟಿದೆ. ಅದು ಹೆಚ್ಚಾಗಬೇಕು. ಕೃಷಿ ಉತ್ಪನ್ನ ಬೆಳೆ ಹೆಚ್ಚಾದಾಗ, ಜಿಡಿಪಿಯಲ್ಲಿ ಅವರ ಪಾತ್ರವೂ ಹೆಚ್ಚುತ್ತದೆ. ಇದು ನಮ್ಮ ಸರ್ಕಾರದ ಮೂಲ ಗುರಿ. ಲಾಕಡೌನ್‌ ವೇಳೆ ಕೆಲಸ ಕಳೆದುಕೊಂಡ ಹಲವಾರು ಜನ, ಹಳ್ಳಿಗೆ ಬಂದು ಕೃಷಿ ಮಾಡಬೇಕೆಂಬ ಸಂಕಲ್ಪ ತೊಟ್ಟಿದ್ದಾರೆ. ಆದರೆ, ಅವರಿಗೆ ಭೂಮಿ
ಇಲ್ಲ. ಅಂತಹ ವ್ಯಕ್ತಿಗಳೂ ಕೃಷಿ ಮಾಡಲು ಅನುಕೂಲವಾಗಲು ಭೂ ಸುಧಾರಣೆ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು
ವಿವರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next