Advertisement

ಜಾಗೃತಿ ಭಾರತ್‌: ಗಿರಿಧರನ ಕಾಶಿಯಾತ್ರೆ

09:55 AM Nov 10, 2019 | Lakshmi GovindaRaju |

ಇಲ್ಲಿ ಇಬ್ಬರು ಅಪರೂಪದ ವ್ಯಕ್ತಿಗಳ ಪರಿಚಯವಿದೆ. ಇಬ್ಬರ ಸಾಧನೆಯೂ ಮೆಚ್ಚುಗೆಗೆ ಅರ್ಹವಾದದ್ದು. ಒಬ್ಬರು ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಬೆಂಗಳೂರಿನಿಂದ ವಾರಾಣಸಿಯವರೆಗೆ ಬರಿಗಾಲಲ್ಲೇ ಓಡಿದ್ದಾರೆ! ಇನ್ನೊಬ್ಬರು, ನಾಡಿನ ಬಹುಪಾಲು ದೇಗುಲಗಳಲ್ಲಿ ಉರುಳು ಸೇವೆ ಮಾಡಿ ದಾಖಲೆ ನಿರ್ಮಿಸಿದ್ದಾರೆ. ತಂತಮ್ಮ ಆತ್ಮಸಂತೋಷಕ್ಕಾಗಿ ಮಾಡಿರುವ ಈ ಸೇವೆ- ಸಾಧನೆಯ ವಿವರಗಳು ಇಲ್ಲಿವೆ. ಓದಿಕೊಳ್ಳಿ.

Advertisement

ಬೆಂಗಳೂರಿನಿಂದ ವಾರಾಣಸಿಗೆ (ಅಲ್ಲಿಂದ ಕಾಶಿಗೆ) ಹೋಗಬೇಕೆಂದರೆ ಬಸ್ಸು, ರೈಲು ಅಥವಾ ವಿಮಾನದ ಮೊರೆ ಹೋಗಬೇಕು. ಗಿರಿಧರ ಕಾಮತ್‌ ಎಂಬ ಅಂಕಲ್‌ ಹೀಗೆ ಮಾಡಿಲ್ಲ. ವಾರಾಣಸಿಯನ್ನು (ಆನಂತರ ಕಾಶಿಯನ್ನು) ಓಡುತ್ತಲೇ ತಲುಪಿಬಿಡುವ ಸಂಕಲ್ಪ ಮಾಡಿದ್ದಾರೆ. ಆ ಪ್ರಯತ್ನದಲ್ಲಿ ಯಶಸ್ಸನ್ನೂ ಕಾಣುವವರಿದ್ದಾರೆ! (ನ.9ರಂದು ವಾರಾಣಸಿ ತಲುಪಲಿದ್ದಾರೆ) ಇಲ್ಲಿ, ಹೇಳಲೇಬೇಕಾದ ಒಂದು ವಿಶೇಷವಿದೆ. ಏನೆಂದರೆ- ಗಿರಿಧರ ಕಾಮತ್‌ ಅವರು, ಬೆಂಗಳೂರಿನಿಂದ ವಾರಾಣಸಿಯವರೆಗೆ 1800 ಕಿಲೋಮೀಟರ್‌ ದೂರವನ್ನು ಓಡುತ್ತಲೇ, ಅದೂ ಏನು? ಬರಿಗಾಲಲ್ಲಿ ಓಡುತ್ತಲೇ ಕ್ರಮಿಸಿದ್ದಾರೆ.

ಒಬ್ಬ ವ್ಯಕ್ತಿ 100 ಕಿಮೀ ಓಡಿದ್ದನ್ನು, 500 ಕಿ.ಮೀ. ದೂರವನ್ನು ಓಡುತ್ತಲೇ ಕ್ರಮಿಸಿದ ಎಂಬ ಸಂಗತಿಯನ್ನು ನಂಬಬಹುದು. ಆದರೆ, 1800 ಕಿ.ಮೀ. ದೂರವನ್ನು ಓಡುತ್ತಲೇ ಕ್ರಮಿಸುವುದು ಸಾಧ್ಯವೇ? ಹೀಗೆ ಓಡುವುದರ ಉದ್ದೇಶವಾದರೂ ಏನಿತ್ತು? ಯಾವುದಾದರೂ ದಾಖಲೆ ಮಾಡಬೇಕೆಂಬ ಹುಚ್ಚಿನಿಂದ ಹೀಗೆ ಓಡಿದರಾ? ಯಾವುದಾದರೂ ಎನ್‌ಜಿಓ ಈ ಓಟದ ಪ್ರಾಯೋಜಕತ್ವ ವಹಿಸಿಕೊಂಡಿದೆಯಾ?- ಇಂಥವೇ ಕುತೂಹಲದ ಪ್ರಶ್ನೆಗಳನ್ನು ಜೊತೆಗಿಟ್ಟುಕೊಂಡು ನೋಡಿದರೆ, ಬೆರಗಾಗುವಂಥ ವಿವರಗಳು ಜೊತೆಯಾಗುತ್ತಾ ಹೋಗುತ್ತವೆ. ಏನೆಂದರೆ- ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದೇ ಗಿರಿಧರ ಕಾಮತ್‌ರ ಓಟದ ಮುಖ್ಯ ಉದ್ದೇಶ. ಈ ಅಭಿಯಾನಕ್ಕಾಗಿ, ಅವರು ಯಾರೊಬ್ಬರಿಂದಲೂ ನಯಾಪೈಸೆಯ ನೆರವನ್ನೂ ಪಡೆದಿಲ್ಲ!

ಪಿಂಕಥಾನ್‌ನ ಯಶಸ್ಸು: ಮೂಲತಃ ಉಡುಪಿಯವರಾದ ಗಿರಿಧರ ಕಾಮತ್‌, ಬೆಂಗಳೂರಿನ ಗಿರಿನಗರದಲ್ಲಿ ವಾಸವಿದ್ದಾರೆ. ಸ್ವಂತದ್ದೊಂದು ಚಿಕ್ಕ ಫ್ಯಾಕ್ಟರಿಯಿದೆ. ಹೆಂಡತಿ-ಮಗಳು ಮತ್ತು ಅಪಾರ ಬಂಧು-ಬಳಗ, ಇದು ಅವರ ಫ್ಯಾಮಿಲಿ ಬ್ಯಾಕ್‌ಗ್ರೌಂಡ್‌. ಇಂಥ ಹಿನ್ನೆಲೆಯ ಗಿರಿಧರ ಕಾಮತ್‌, ಇತ್ತೀಚೆಗಷ್ಟೇ 50ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಓಡುವುದು, ಹೀಗೆ ಓಡುತ್ತಲೇ ಜಾಗೃತಿ ಮೂಡಿಸುವುದು ಅವರ ಬದುಕಿನ ಭಾಗವೇ ಆಗಿದ್ದು ಯಾವಾಗಿಂದ ಎಂದು ಕೇಳಿದರೆ, ಅವರು ಹೇಳಿದ ಮಾತಿದು:

“ಇದು 2011ರ ಮಾತು. ಆಗ ನಾನು, ಗೆಳೆಯ ವಿಜಯ ವಿಠ್ಠಲನೊಂದಿಗೆ ಲಾಲ್‌ಭಾಗ್‌ನಲ್ಲಿ ದಿನವೂ ವಾಕಿಂಗ್‌ ಹೋಗುತ್ತಿದ್ದೆ. ಆ ಸಂದರ್ಭದಲ್ಲಿಯೇ ಟಿಸಿಎಸ್‌ನವರು 10 ಕಿ.ಮೀ. ಮ್ಯಾರಥಾನ್‌ ಬಗ್ಗೆ ಪ್ರಕಟಣೆ ನೀಡಿದರು. ನನ್ನ ಗೆಳೆಯ- ‘ನಾವೂ ಓಡೋಣ ಕಣೋ. ಇವತ್ತಿಂದನೇ ಅಭ್ಯಾಸ ಮಾಡುವಾ’ ಅಂದ. ನಾನೂ ಒಪ್ಪಿದೆ. ಆ ಮ್ಯಾರಥಾನ್‌ ಮುಗಿದ ಮೇಲೂ ಓಡುವುದನ್ನು ನಿಲ್ಲಿಸಬೇಕು ಅನ್ನಿಸಲಿಲ್ಲ. ಆನಂತರದಲ್ಲಿ ದಿನಕ್ಕೆ 20 ಕಿ.ಮೀ. ದೂರವನ್ನು ಓಡುವಷ್ಟು ಸಾಮರ್ಥ್ಯ ಜೊತೆಯಾಯ್ತು. ದಿನಗಳು ಕಳೆದಂತೆಲ್ಲ ಓಟದ ದೂರವನ್ನೂ ಹೆಚ್ಚಿಸಿಕೊಂಡೆ…

Advertisement

ಆ ಸಂದರ್ಭದಲ್ಲಿಯೇ ಕ್ಯಾನ್ಸರ್‌ ಬಗ್ಗೆ ಅಭಿಯಾನ ಮೂಡಿಸಲು ಪಿಂಕಥಾನ್‌ ಜಾಗೃತಿ ಓಟ ಆರಂಭವಾಯಿತು. ಇಲ್ಲಿ ಗಿರಿಧರ್‌ಗೆ ಸಾಥ್‌ ನೀಡಿದವರು ಬಾಲಿವುಡ್‌ ನಟ, ರೂಪದರ್ಶಿ ಮಿಲಿಂದ್‌ ಸೋಮನ್‌. ಸ್ತನ ಕ್ಯಾನ್ಸರ್‌ ಕುರಿತ ಜಾಗೃತಿ ಅದೆಂಥ ಯಶಸ್ಸು ಕಂಡಿತು ಅಂದರೆ, ಪಿಂಕಥಾನ್‌ಗೆ ಗಿರಿಧರ ಕಾಮತ್‌ ಅವರನ್ನೇ ಬ್ರಾಂಡ್‌ ಅಂಬಾಸಡರ್‌ ಎಂದು ಘೋಷಿಸಲಾಯಿತು. ಆನಂತರದಲ್ಲೂ ಜಾಗೃತಿ ಅಭಿಯಾನದ ಸದಾಶಯದೊಂದಿಗೆ ಒಂದು ನಗರದಿಂದ ಇನ್ನೊಂದು ನಗರಕ್ಕೆ ಓಡುವುದು ಗಿರಿಗೆ ಬದುಕಿನ ಒಂದು ಭಾಗವೇ ಆಗಿಹೋಯಿತು.

ಇಶಾ ಫೌಂಡೇಷನ್‌ನವರು ಬಡ ಹೆಣ್ಣುಮಕ್ಕಳಿಗಾಗಿ ಶಾಲೆ ನಿರ್ಮಿಸಲು ಮುಂದಾದಾಗ, ಬೆಂಗಳೂರಿನಿಂದ ಕೊಯಮತ್ತೂರಿನವರೆಗೂ ಬರಿಗಾಲಿನಲ್ಲಿ ಓಡಿ ಫ‌ಂಡ್‌ರೈಸ್‌ಗೆ ನೆರವಾಗಿದ್ದು, ಆನಂತರದ ದಿನಗಳಲ್ಲಿ ಆರೋಗ್ಯ ಸಂಬಂಧಿ ಜಾಗೃತಿ ಮೂಡಿಸಲು ಬೆಂಗಳೂರಿನಿಂದ ಹೈದರಾಬಾದ್‌ಗೆ, ಪಾಂಡಿಚೆರಿಯಿಂದ ಚೆನ್ನೈಗೆ, ವೃಂದಾವನದಿಂದ ದೆಹಲಿಗೆ ಬರಿಗಾಲಿನಲ್ಲಿ ಓಡಿದ್ದು ಗಿರಿಧರ್‌ ಅವರ ಸಾಹಸ-ಸಾಧನೆ.

ಓಟದ ಮೂಲಕ ಪಾಠ: ಅಂದಹಾಗೆ, ಬೆಂಗಳೂರಿನಿಂದ ವಾರಾಣಸಿಗೆ ಓಟ ಆರಂಭಿಸಿದ್ದು ಅಕ್ಟೋಬರ್‌ 2, 2019ರಂದು. ಇದರ ಹಿಂದೆ ಒಂದು ಸ್ವಾರಸ್ಯವಿದೆ. ಅದನ್ನು ಗಿರಿಧರ್‌ ಅವರೇ ಹೇಳುವುದು ಹೀಗೆ: ನನಗೆ ಇತ್ತೀಚೆಗಷ್ಟೇ 50 ವರ್ಷ ತುಂಬಿತು. ಜನರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸಬೇಕು. ಆ ಮೂಲಕ 50ನೇ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿಕೊಳ್ಳಬೇಕು ಅನ್ನಿಸಿತು. ದಿನಕ್ಕೆ 50 ಕಿ.ಮೀ.ನಂತೆ ಓಡುತ್ತಾ ವಾರಾಣಸಿ ತಲುಪಬೇಕು ಎಂದು ಪ್ಲಾನ್‌ ಹಾಕಿಕೊಂಡು, ಗಾಂಧೀ ಜಯಂತಿಯ ದಿನವೇ ಬೆಂಗಳೂರಿನ ಗವಿಗಂಗಾಧರೇಶ್ವರನ ಗುಡಿಯಿಂದ ಓಟ ಆರಂಭಿಸಿದೆ…

ಒಂದು ವಿಷಯವನ್ನು ಹೇಳಿಬಿಡಬೇಕು: ಹೀಗೆ ಓಡುತ್ತಿರುವುದು ನನ್ನ ಮನಸ್ಸಂತೋಷಕ್ಕೆ. ಈ ಓಟದ ಸಂದರ್ಭದಲ್ಲಿ ಆಗುವ ಎಲ್ಲ ಖರ್ಚೂ ನನ್ನದೇ. ಅದಕ್ಕೆ ಯಾರಿಂದಲೂ ನಯಾಪೈಸೆಯ ನೆರವೂ ಪಡೆದಿಲ್ಲ. ಬೆಂಗಳೂರು-ಹೈದ್ರಾಬಾದ್‌-ನಾಗ್‌ಪುರ-ಜಬಲ್ಪುರ- ಖಟ್ನಿ-ವಾರಾಣಸಿ- ಇದು ನನ್ನ ಓಟದ ಹಾದಿ. ಒಂದು ಜೊತೆ ಬಟ್ಟೆ, ಖರ್ಚಿಗೆ ಸ್ವಲ್ಪ ಹಣ, ಎಟಿಎಂ ಕಾರ್ಡ್‌, ಮೊಬೈಲ್‌ ಛಾರ್ಜರ್‌, ಮಕ್ಕಳನ್ನು ಮಲಗಿಸಲು ಬಳಸುವ ಉಯ್ನಾಲೆ ತೊಟ್ಟಿಲಿನಂಥ ಒಂದು ಬಟ್ಟೆ- ಇದಿಷ್ಟೇ ನನ್ನ ಲಗೇಜ್‌.

ಮಧ್ಯಾಹ್ನ ಓಡುವಾಗ ಆಯಾಸವಾದರೆ ಮಾರ್ಗ ಮಧ್ಯದಲ್ಲಿ ಸಿಗುವ ಮರದ ಕೊಂಬೆಗಳಿಗೆ ಉಯ್ನಾಲೆ ಕಟ್ಟಿ ಅಲ್ಲಿಯೇ ಮಲಗುತ್ತೇನೆ. ಮಾರ್ಗ ಮಧ್ಯೆ ಸಿಗುವ ಹಳ್ಳಿಗಳ ಶಾಲೆ ಅಥವಾ ದೇವಸ್ಥಾನದಲ್ಲಿ ವಾಸ್ತವ್ಯ ಹೂಡುತ್ತೇನೆ. (ನಗರಗಳಲ್ಲಿ ಉಳಿಯಬೇಕಾಗಿ ಬಂದಾಗ ಚಿಕ್ಕ ಜ್ಞಡ್ಜ್ಗಳ ಮೊರೆ ಹೋಗುತ್ತೇನೆ) ಈ ಸಂದರ್ಭದಲ್ಲಿ ಹಳ್ಳಿಗರಿಗೆ ನಿಮ್ಮ ಆರೋಗ್ಯಕ್ಕೆ ನೀವೇ ಜವಾಬ್ದಾರರು. ದಿನವೂ ಕನಿಷ್ಠ ಒಂದು ಗಂಟೆ ವ್ಯಾಯಾಮ ಮಾಡಿ. ಯೋಗ, ಈಜು, ನಡಿಗೆ, ಯೋಗ-ಇವೆಲ್ಲವೂ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ…’ ಎಂದು ಹೇಳಿ, ಓಟ ಮುಂದುವರಿಸುತ್ತೇನೆ.

ಅನಾರೋಗ್ಯ ಕಾಡಿಲ್ಲ: ಸಂತೋಷದ ಸಂಗತಿಯೆಂದರೆ, ಅಕ್ಟೋಬರ್‌ 2ರಿಂದ ದಿನವೂ ಓಡುತ್ತಲೇ ಇದ್ದೇನೆ. ಈ ಸಂದರ್ಭದಲ್ಲಿ ಜ್ವರ, ತಲೆನೋವು, ಶೀತ, ಕಾಲುನೋವು… ಉಹೂಂ, ಈ ಬಗೆಯ ಸಣ್ಣದೊಂದು ಸಮಸ್ಯೆಯೂ ನನ್ನನ್ನು ಕಾಡಿಲ್ಲ. ನಾನು ಸಾಗಿಬಂದ ದಾರಿಯುದ್ದಕ್ಕೂ ಸಾವಿರಾರು ಜನ ಭೇಟಿಯಾಗಿದ್ದಾರೆ. ಆರೋಗ್ಯದ ಕುರಿತು ಕಾಳಜಿ ಕಾಳಜಿ ವಹಿಸುವುದಾಗಿಯೂ ಮಾತು ಕೊಟ್ಟಿದ್ದಾರೆ. ಅಂಥದೊಂದು ಚಿಕ್ಕ ಬದಲಾವಣೆಗೆ ಕಾರಣವಾಗಿದ್ದಕ್ಕೆ ನನಗೆ ಹೆಮ್ಮೆಯಿದೆ ಅನ್ನುತ್ತಾರೆ ಗಿರಿಧರ ಕಾಮತ್‌.

ಸನ್ಮಾನ ಮಾಡಿ ಬೀಳ್ಕೊಟ್ಟರು: ಪರ ಊರಿನಲ್ಲಿ, ಅಪರಿಚಿತ ನಗರದಲ್ಲಿ ಓಡುವ ಸಂದರ್ಭದಲ್ಲಿ, ಫೇಸ್‌ಬುಕ್‌ನ ಗೆಳೆಯರು ಮಾಡಿದ ಸಹಾಯವನ್ನು ಎಂದಿಗೂ ಮರೆಯಲಾರೆ ಅನ್ನುತ್ತಾರೆ ಗಿರಿ. ಪ್ರತಿದಿನವೂ ತಮ್ಮ ಮುಂದಿನ ಪ್ರಯಾಣದ ಬಗ್ಗೆ ಫೇಸ್‌ಬುಕ್‌ನಲ್ಲಿ ಗಿರಿ ದಾಖಲಿಸುತ್ತಾರೆ. ಅದನ್ನು ನೋಡಿದ ಎಷ್ಟೋ ಗೆಳೆಯರು- ಈ ಮಾರ್ಗದಲ್ಲಿಯೇ ನಮ್ಮ ಊರಿದೆ. ಊರಿನ ಎಂಟ್ರೆನ್ಸ್‌ಗೆà ನಮ್ಮ ಗೆಳೆಯರು ಬಂದಿರುತ್ತಾರೆ. ಅವರೊಂದಿಗೆ ಅರ್ಧ ಗಂಟೆ ಮಾತಾಡಿ, ಊಟ ಮಾಡಿಕೊಂಡು ಹೋಗಿ ಎಂದದ್ದೂ ಇದೆಯಂತೆ. ಇನ್ನೂ ಕೆಲವು ಕಡೆ, ಊರಿನವರೆಲ್ಲಾ ಸೇರಿ ಸನ್ಮಾನ ಮಾಡಿ, ಬೀಳ್ಕೊಟ್ಟಿದ್ದೂ ಉಂಟು. ಸ್ವಾರಸ್ಯವೇನು ಗೊತ್ತಾ? ಹೀಗೆ ವಿನಾಕಾರಣ ಪ್ರೀತಿ ತೋರಿದ ಫೇಸ್‌ಬುಕ್‌ ಗೆಳೆಯರ ಪೈಕಿ, ಯಾರೊಬ್ಬರನ್ನೂ ಗಿರಿ ಮುಖತಃ ನೋಡಿಲ್ಲ!

ಕುಂದಾಪುರದ ಹೋಟೆಲ್‌ ಇದೆ!: ನಿರ್ಮಲ್‌ ಅಂತೊಂದು ಊರು. ಅಲ್ಲಿಂದ ಹೈವೇಯಲ್ಲಿ ಹತ್ತು ಕಿಮೀ ದೂರ ಓಡಿಬಿಟ್ಟಿದ್ದೆ. ಉಳಿದುಕೊಳ್ಳಲು ಯಾವ ವ್ಯವಸ್ಥೆಯೂ ಇಲ್ಲ. ರಾತ್ರಿ ವಾಪಸ್‌ ನಿರ್ಮಲ್‌ಗೆ ಬರಬೇಕು ಅಂತ ಗೊತ್ತಾಯ್ತು. ಆಗಲೇ ಸಂಜೆ ಏಳು ದಾಟಿತ್ತು. ದಾರಿಯಲ್ಲಿ ಬಂದ ಲಾರಿ, ವಾಹನಗಳನ್ನೆಲ್ಲ ಕೈ ಅಡ್ಡ ಹಾಕಿದೆ. ಯಾರೂ ನಿಲ್ಲಿಸಲಿಲ್ಲ. ಕೊನೆಗೆ ಒಬ್ಬ ಬೈಕ್‌ ಸವಾರ ನಿಲ್ಲಿಸಿ, ನನ್ನನ್ನು ಹತ್ತಿಸಿಕೊಂಡ. ಯಾಕೆ ಓಡುತ್ತಿದ್ದೇರಿ ಎಂದು ಕೇಳಿದ. ನನ್ನ ಉದ್ದೇಶ ತಿಳಿಸಿದೆ.

ಆಗ ಅವನು, ನಿರ್ಮಲ್‌ದಲ್ಲಿ ಒಂದು ಕುಂದಾಪುರದ ಕಡೆಯ ಹೋಟೆಲ್‌ ಇದೆ. ನೀವು ಅಲ್ಲಿ ಉಳಿದುಕೊಳ್ಳಿ ಅಂತ ಅಲ್ಲಿಗೆ ಕರೆದುಕೊಂಡು ಹೋದ. ಊಟದ ವ್ಯವಸ್ಥೆಯನ್ನೂ ಅವನೇ ಮಾಡಿದ. (ನಾನು ರಾತ್ರಿ ಎಲ್ಲಿ ಜರ್ನಿ ನಿಲ್ಲಿಸುತ್ತೇನೋ ಅಲ್ಲಿಂದಲೇ ಓಟ ಶುರು ಮಾಡುತ್ತೇನೆ ಅಂದಿದ್ದೆ) ‘ನಾನು ಬೆಳಗ್ಗೆ ಮತ್ತೆ ಅದೇ ದಾರಿಯಲ್ಲಿ ಬೆಳಗ್ಗೆ ಹೋಗುವವನಿದ್ದೇನೆ. ನೀವು ಬರುವುದಾದರೆ ನಾನು ನಿಮ್ಮನ್ನು ಅಲ್ಲಿಗೆ ಬಿಡುತ್ತೇನೆ’ ಅಂದ. ಅದನ್ನು ನಾನು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ಯಾರೋ ಒಬ್ಬ ಅಪರಿಚಿತನಿಗೆ ಅಷ್ಟೆಲ್ಲಾ ಸಹಾಯ ಮಾಡುವ ಜನರಿದ್ದಾರಲ್ಲ ಅಂತ…

* ಎ. ಆರ್‌. ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next