Advertisement

ಅರಿವು, ಆಸಕ್ತಿ ಮೂಡಿಸಿದ ಹಿಂದುಸ್ಥಾನಿ ಸಂಗೀತ ಪ್ರಾತ್ಯಕ್ಷಿಕೆ

06:08 PM Oct 31, 2019 | mahesh |

ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಬೋಧನೆ, ಪ್ರಸಾರದ ಉದ್ದೇಶದಿಂದ ಕುಂದಾಪುರದಲ್ಲಿ ಹುಟ್ಟಿಕೊಂಡ ಗುರುಪರಂಪರಾ ಸಂಗೀತ ಸಭಾ ನಾಗೂರಿನ ಸಂದೀಪನ್‌ ಶಾಲೆಯ ಶಿಕ್ಷಕ, ವಿದ್ಯಾರ್ಥಿಗಳಿಗೆ ನಡೆಸಿದ ಪ್ರಾತ್ಯಕ್ಷಿಕೆ ಉದ್ದೇಶ ಸಾಧನೆಯತ್ತ ಇರಿಸಿದ ಮೊದಲ ಮೆಟ್ಟಿಲೆನಿಸಿತು. ಹಿಂದೂಸ್ಥಾನಿ ಸಂಗೀತ ಪ್ರಸಾರ ಕಾಯಕದಲ್ಲಿ ತೊಡಗಿಕೊಂಡಿರುವ ಬಸವರಾಜ ರಾಜಗುರು, ಗಣಪತಿ ಭಟ್‌ ಹಾಸಣಗಿ ಗುರು ದಂಪತಿ ಸತೀಶ ಭಟ್‌ ಮಾಳಕೊಪ್ಪ – ಪ್ರತಿಮಾ ಭಟ್‌ ಗುರುಪರಂಪರಾದ ದಿಗªರ್ಶಕರು. ಹಿರಿಕಿರಿಯ ಶಿಷ್ಯಂದಿರಾದ ವೀಣಾ ನಾಯಕ್‌, ನಾಗರಾಜ ಭಟ್‌, ಚಿನ್ಮಯಿ ಧನ್ಯ, ಕೇದಾರ ಮರವಂತೆ, ಜಾಹ್ನವಿ ಪ್ರಭು ಅವ‌ರ ಕಲಿಕೆಯನ್ನು ಜತೆಗಿರಿಸಿಕೊಂಡು ಭಟ್‌ ದಂಪತಿ ಈ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

Advertisement

ಶಾಸ್ತ್ರೀಯ ಸಂಗೀತ ಎಂದರೆ ಸ್ವೀಕೃತ ವಿಧಿ, ನಿಯಮಗಳ ಚೌಕಟ್ಟಿನಲ್ಲಿ ಶ್ರುತಿ, ಸ್ವರ, ಲಯಬದ್ಧವಾಗಿ ಹೊಮ್ಮುವ ನಾದ ಎಂಬ ಅವರ ವಿವರಣೆ ಮತ್ತು ಉದಾಹರಣೆಗಳು ಶ್ರೋತೃಗಳಿಗೆ ಅದರ ಸ್ಥೂಲ ಪರಿಚಯ ಮಾಡಿಕೊಟ್ಟವು. ಭಾವಗೀತೆ ಅಥವಾ ಶ್ರುತಿ ಲಯ ಬದ್ಧವಾದ ಪ್ರಸ್ತುತಿಗಳು ಶಾಸ್ತ್ರೀಯ ಸಂಗೀತವಾಗಲಾರದು ಎನ್ನುವುದನ್ನು ಬಿಂಬಿಸಲು ಅದೇ ಶಾಲೆಯ ವಿದ್ಯಾರ್ಥಿನಿ ಜಾಹ್ನವಿ ಪ್ರಭು ಅವರಿಂದ ಹಾಡಿಸಿದ ಭಜನೆ ಮತ್ತು ಶಿಕ್ಷಕ ರೋಶನ್‌ ನಡೆಸಿಕೊಟ್ಟ ಹರಿಕತೆಯ ತುಣುಕನ್ನು ಉದಾಹರಿಸಿದರು. ಭಜನೆಯೊಂದು ಶಾಸ್ತ್ರೀಯ ಸಂಗೀತದ ಪರಿಧಿಯೊಳಗೆ ಹೇಗೆ ಬರುತ್ತದೆ ಎನ್ನುವುದನ್ನು ಹಿರಿಯ ಶಿಷ್ಯೆ ವೀಣಾ ನಾಯಕ್‌ ಅವರಿಂದ ಮೊದಲು ಜಾಹ್ನವಿ ಹಾಡಿದ ಭಜನೆಯನ್ನೇ ತಿಲಂಗ್‌ ರಾಗದಲ್ಲಿ ಹಾಡಿಸಿ ತೋರಿಸಿದರು.

ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಸ,ರಿ,ಗ,ಮ,ಪ,ದ,ನಿ ಎಂಬ 7 ಶುದ್ಧ ಮತ್ತು ರಿ,ಗ,ಮ,ದ,ನಿ ಎಂಬ 5 ವಿಕೃತ ಸ್ವರಗಳು ಅವುಗಳ ಆರೋಹ ಮತ್ತು ಅವರೋಹದೊಂದಿಗೆ ಬಳಕೆಯಾಗುತ್ತವೆ ಎನ್ನುವುದನ್ನು ಶಿಷ್ಯರು ಹಾಡಿ ತೋರಿಸಿದರು. ಒಂದು ರಾಗ ರೂಪುಗೊಳ್ಳಲು ಕನಿಷ್ಠ 5 ಸ್ವರಗಳು ಅಗತ್ಯ. ಭೂಪಾಲಿ ಅಂತಹ ಒಂದು ರಾಗ ಎನ್ನುವುದನ್ನು ಗಾಯನದ ಮೂಲಕ ಮನವರಿಕೆ ಮಾಡಿಸಿದರು. ಸಂಗೀತದ ಸ್ವರಗಳ ಸಂಯೋಜನೆ ಮತ್ತು ಬದಲಾವಣೆಗಳಿಂದ ಅಸಂಖ್ಯ ರಾಗಗಳು ಸೃಷ್ಟಿಯಾಗಿವೆ ಎಂದು ಹೇಳಿ, ಪ್ರತಿಮಾ ಭಟ್‌ ಮತ್ತು ಐವರು ಶಿಷ್ಯಂದಿರಿಂದ ತಮ್ಮ ವಿವರಣೆಗಳಿಗೆ ಅನುಗುಣವಾಗಿ ಸ್ವರ, ಲಯ, ಆರೋಹ, ಅವರೋಹದೊಂದಿಗೆ ಆಯ್ದ ರಾಗಗಳನ್ನು ಹಾಡಿಸಿದರು.

ಹಿಂದೂಸ್ಥಾನಿ ಸಂಗೀತದಲ್ಲಿ ಖಯಾಲ್‌, ಧ್ರುಪದ್‌, ಢಮಾರ್‌, ಟಪ್ಪಾ, ಠುಮ್ರಿ ಎಂಬ ಪ್ರಭೇದ‌ಗಳು ಇವೆ. ಅವುಗಳಲ್ಲಿ ಖಯಾಲ್‌ ಹೆಚ್ಚು ಪ್ರಚಲಿತದಲ್ಲಿದೆ. ಇದರಲ್ಲಿ ಗಾಯಕರು ರಾಗಗಳ ಚೌಕಟ್ಟನ್ನು ಮೀರದೆ ಹಾಡುವಾಗಿನ ತಮ್ಮ ಮನೋಧರ್ಮಕ್ಕೆ ಅಥವಾ ಖಯಾಲ್‌ಗೆ ಅನುಗುಣವಾಗಿ ಆ ರಾಗಗಳನ್ನು ವಿಸ್ತರಿಸುತ್ತ ಹೋಗುತ್ತಾರೆ. ಅದು ಆ ದೃಷ್ಟಿಯಿಂದ ಆಶು ಸಂಗೀತ. ಅದರಲ್ಲಿ ಹಾಡು ಅಥವಾ ಚೀಜ್‌ ನೆಪ ಮಾತ್ರಕ್ಕೆ ಇರುತ್ತದೆ. ಹಾಗಾಗಿ ಒಂದೇ ರಾಗವನ್ನು ಬೇರೆಬೇರೆ ಗಾಯಕರು ವಿಭಿನ್ನವಾಗಿ ಹಾಡುತ್ತಾರೆ. ಹಾಗೆಯೇ ಒಬ್ಬ ಗಾಯಕನಿಗೆ ಒಂದು ರಾಗವನ್ನು ಒಮ್ಮೆ ಹಾಡಿದಂತೆ ಇನ್ನೊಮ್ಮೆ ಹಾಡಲಾಗುವುದಿಲ್ಲ. ಪ್ರತೀ ಹಾಡನ್ನು ವಿಲಂಬಿತ್‌, ಬಡತ್‌, ಮಧ್ಯಮ್‌ ಮತ್ತು ದ್ರುತ್‌ ಎಂಬ ಏರುಗತಿಯ ಲಯಗಳಲ್ಲಿ ಹೊಮ್ಮಿಸಲಾಗುತ್ತದೆ ಎಂಬ ವಿವರಣೆ ಮತ್ತು ಉದಾಹರಣೆ, ತಬಲಾ ವಾದಕ ಗಣಪತಿ ಹೆಗಡೆ ಹರಿಕೇರಿ ಅವರು ನುಡಿಸಿದ ವಿವಿಧ ತಾಳ ಮತ್ತು ಲಯಗಳ ಬೋಲ್‌ಗ‌ಳು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಸಾಮಾನ್ಯ ಸ್ವರೂಪವನ್ನು ಸಾದರಪಡಿಸಿದುವು.

ಹಿಂದುಸ್ಥಾನಿ ಸಂಗೀತದ ಹಾಡುಗಾರಿಕೆ ಮುಖವಿಲಾಸ್‌, ಚೀಜ್‌, ಸ್ಥಾಯಿ, ಅಂತರ್‌, ಆಲಾಪ್‌, ಬೋಲ್‌ ತಾನ್‌, ಸರ್ಗಮ್‌ ತಾನ್‌ ಮತ್ತು “ಆ’ಕಾರ್‌ ತಾನ್‌ ಎಂಬ ಅಷ್ಟಾಂಗಗಳನ್ನು ಒಳಗೊಂಡಿರುತ್ತದೆ ಎನ್ನುವುದನ್ನು ಸತೀಶ ಭಟ್‌ ಉದಾಹರಣೆಗಳೊಂದಿಗೆ ಮನದಟ್ಟು ಮಾಡಿಸಿದರು. ಅದರೊಂದಿಗೆ ಸಂಗೀತದ ಕಲಿಕೆಗೆ ಕೇವಲ ಅದರೆಡೆಗಿನ ಮೋಹ ಇದ್ದರೆ ಸಾಲದು, ದೀರ್ಘ‌ಕಾಲ ಶ್ರದ್ಧೆ ಮತ್ತು ಶ್ರಮವಹಿಸಿ ನಡೆಸುವ ಕಲಿಕೆ ಮತ್ತು ಅಭ್ಯಾಸವೂ ಮೇಳೈಸಬೇಕು ಎಂಬ ಬೆನ್ನುಡಿಯ ಮೂಲಕ ಸಂಗೀತದ ಪರಿಣತಿ ಸಾಧನೆಯ ಫ‌ಲ ಎನ್ನುವುದನ್ನು ಬಿಂಬಿಸಿದರು. ಪ್ರಾತ್ಯಕ್ಷಿಕೆ ನಿರ್ವಹಿಸಿದ ಜತೀಂದ್ರ ಮರವಂತೆ ಗುರುಗಳೊಂದಿಗೆ ಜಿಜ್ಞಾಸುವಿನಂತೆ ಸಂವಾದ ನಡೆಸಿ ಅದು ಬೋಧಪ್ರದ ಆಗುವಂತೆ ಮಾಡಿದರು.

Advertisement

ಜನಾರ್ದನ

Advertisement

Udayavani is now on Telegram. Click here to join our channel and stay updated with the latest news.

Next