Advertisement

ಜಿಲ್ಲೆಯಲ್ಲಿ ಡೆಂಘೀ ಹರಡದಂತೆ ಜಾಗೃತಿ

12:04 PM Aug 05, 2019 | Team Udayavani |

ರಾಮನಗರ: ಜಿಲ್ಲೆಯಲ್ಲಿಯೂ ಡೆಂಘೀ ಮತ್ತು ಚಿಕೂನ್‌ಗುನ್ಯಾ ಜ್ವರ ರೋಗ ಲಕ್ಷಣಗಳು ಉಳ್ಳ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 10 ಖಚಿತ ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಫೆಬ್ರವರಿಯಲ್ಲಿ ಒಂದು ಸಾವು ಸಂಭವಿಸಿದೆ. ಡೆಂಘೀ ಜ್ವರ ಹರಡದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ಜಿಲ್ಲಾದ್ಯಂತ ಮನೆ, ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಜೊತೆಗೆ ನೀರು ನಿಲ್ಲದಂತೆ ಕ್ರಮಹಿಸುತ್ತಿದ್ದಾರೆ.

Advertisement

ನೀರು ನಿಲ್ಲದಂತೆ ಎಚ್ಚರ ವಹಿಸಿ: ಕಳೆದ ಫೆಬ್ರವರಿಯಲ್ಲಿ ರಾಮನಗರ ತಾಲೂಕು ಪಾದರಹಳ್ಳಿ ಗ್ರಾಮದಲ್ಲಿ ಬಾಲಕಿಯೊಬ್ಬಳು ಡೆಂಘೀ ಜ್ವರಕ್ಕೆ ಬಲಿಯಾಗಿದ್ದಳು. ಡೆಂಘೀಗೆ ಕಾರಣವಾಗುವ ಸೊಳ್ಳೆಗಳು ಸ್ವಚ್ಛ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ ಟೈರ್‌ಗಳು, ಎಳೆನೀರು ಚಿಪ್ಪುಗಳು, ಟ್ಯಾಂಕ್‌, ಸಂಪ್‌, ಪಾತ್ರೆಗಳಲ್ಲಿ ಶೇಖರಣೆಯಾಗಿರುವ ನೀರಿನಲ್ಲಿ ಉತ್ಪತ್ತಿಯಾಗುತ್ತದೆ. ಹೀಗಾಗಿ ಕನಿಷ್ಠ ವಾರಕ್ಕೊಮ್ಮೆಯಾದರೂ ಈ ನೀರನ್ನು ಬದಲಿಸಬೇಕಾಗಿದೆ. ಟೈರ್‌ಗಳು, ಎಳೆನೀರು ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕಾಗಿದೆ. ಈ ವಿಚಾರವಾಗಿಯೂ ಜನ ಜಾಗೃತಿ ಮೂಡಿಸಲು ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಆತಂಕದ ಅಗತ್ಯವಿಲ್ಲ: ಕಳೆದ ಜುಲೈನಲ್ಲಿ ಜಿಲ್ಲೆಯಲ್ಲಿ ಇಲಾಖೆಯಿಂದ ನಿಯೋಜಿತರಾಗಿದ್ದ 724 ಪುರುಷ ಮತ್ತು ಮಹಿಳಾ ಕಾರ್ಯಕರ್ತರು, ಗ್ರಾಮೀಣ ಮತ್ತು ನಗರ ವ್ಯಾಪ್ತಿಯ ಸುಮಾರು 87 ಸಾವಿರ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪೈಕಿ ಸುಮಾರು 3500 ಮನೆಗಳಲ್ಲಿ ನೀರು ಶೇಖರಣೆಯಾಗಿದ್ದನ್ನು ಪತ್ತೆ ಮಾಡಿದ್ದಾರೆ. 5.40 ಲಕ್ಷ ಕಂಟೈನರ್‌ಗಳಲ್ಲಿ (ಪಾತ್ರೆ, ಟ್ಯಾಂಕು, ಟಯರ್‌ ಇತ್ಯಾದಿ) ನೀರಿರುವುದನ್ನು ಪರಿಶೀಲಿಸಿದ್ದು, ಇವುಗಳ ಪೈಕಿ 4900 ಕಂಟೈನರ್‌ಗಳು ಪ್ರಕರಣಗಳಲ್ಲಿ ಡೆಂಘೀಗೆ ಕಾರಣವಾಗುವ ಸೊಳ್ಳೆಗಳ ಲಾರ್ವ ಪತ್ತೆಯಾಗಿದೆ. ಈ ಪ್ರಮಾಣದ ಲಾರ್ವಪ್ರಕರಣಗಳು ಪತ್ತೆಯಾಗಿದ್ದರು ಸಹ ರಾಷ್ಟ್ರೀಯ ಸೂಚ್ಯಂಕದ ಪ್ರಕಾರ ಜಿಲ್ಲೆಯಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ತಿಂಗಳು ಹೀಗೆ ಪದೇ ಪದೆ ಮನೆ, ಮನೆ ಭೇಟಿ ಕಾರ್ಯಕ್ರಮ ನಿರಂತರ ನಡೆಯುತ್ತಿದೆ. ಜನರಲ್ಲಿ ನಿಧಾನವಾಗಿ ಜಾಗೃತಿ ವ್ಯಕ್ತವಾಗುತ್ತಿದೆ. ಆದರೆ, ಮಳೆಗಾಲವಾದ್ದರಿಂದ ಜನರ ಸಹಕಾರ ಹೆಚ್ಚಾಗಬೇಕಾಗಿದೆ ಎಂದು ಬೇರು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತರು ತಿಳಿಸಿದ್ದಾರೆ.

ಗ್ರಾಮೀಣದಲ್ಲಿ ಡೆಂಘೀ ಪ್ರಕರಣ ಹೆಚ್ಚು: 2019ರ ಜನವರಿಯಿಂದ ಜುಲೈ ಮಾಸದ ಅಂತ್ಯದವರೆಗೂ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 250 ಶಂಕಿತ ಪ್ರಕರಣಗಳನ್ನು ಆಧರಿಸಿ, ರಕ್ತಲೇಪನವನ್ನು ಪರೀಕ್ಷೆಗೆ ಒಳಪಡಿಸಿದಾಗ ನಗರ ಪ್ರದೇಶಗಳಲ್ಲಿ 3 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 7 ಒಟ್ಟು 10 ಪ್ರಕರಣಗಳು ಡೆಂಘೀ ಜ್ವರ ಎಂದು ದಾಖಲಾಗಿದೆ. ರಾಮನಗರ ತಾಲೂಕಿನಲ್ಲಿ 206 ಶಂಕಿತ ಪ್ರಕರಣಗಳ ಪೈಕಿ 7 ಪ್ರಕರಣಗಳು ಖಚಿತವಾಗಿವೆ. ಚನ್ನಪಟ್ಟಣದಲ್ಲಿ 27 ಶಂಕಿತ ಪ್ರಕರಣಗಳ ಪೈಕಿ 3 ಪಾಸಿಟಿವ್‌ ಎಂದು ತಿಳಿದು ಬಂದಿದೆ. ಕನಕಪುರದಲ್ಲಿ 5 ಮತ್ತು ಮಾಗಡಿ ತಾಲೂಕಿನಲ್ಲಿ 12 ಪ್ರಕರಣಗಳನ್ನು ಶಂಕಿಸಲಾಗಿತ್ತಾದರು ಪರೀಕ್ಷೆಯಲ್ಲಿ ಅವು ಡೆಂಘೀ ಜ್ವರ ಅಲ್ಲ ಎಂದು ದೃಢಪಟ್ಟಿದೆ.

Advertisement

2018ನೇ ಸಾಲಿನಲ್ಲಿ 153 ಶಂಕಿತ ಜ್ವರ ಪ್ರಕರಣಗಳನ್ನು ಪರೀಕ್ಷೆಗೆ ಒಳಪಡಿಲಾಗಿತ್ತು. ಆ ಪೈಕಿ 15 ಡೆಂಘೀ ಜ್ವರ ಎಂದು ಸಾಭೀತಾಗಿತ್ತು. ಆದರೆ, ಸಾವಿನ ಪ್ರಕರಣಗಳು ಆರೋಗ್ಯ ಇಲಾಖೆಯಲ್ಲಿ ದಾಖಲಾಗಲಿಲ್ಲ.

 

● ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next