Advertisement

Mangaluru ಸಾಧಕರಿಗೆ ಸಂದೇಶ ಪ್ರಶಸ್ತಿ ಪ್ರದಾನ

11:33 PM Feb 12, 2024 | Team Udayavani |

ಮಂಗಳೂರು: ಕಲೆ ದೇಶಕ್ಕೆ ಗೌರವ ತಂದು ಕೊಡುತ್ತದೆ. ವಿವಿಧ ಕಲಾ ಪ್ರಕಾರಗಳು ನಮ್ಮಲ್ಲಿದ್ದು ಸಂಪ್ರದಾಯ, ಸಂಸ್ಕೃತಿಗೆ ಕನ್ನಡಿಯಾಗಿವೆ. ಸಂಸ್ಕೃತಿ ನಮ್ಮ ಅಸ್ತಿತ್ವವನ್ನು ತೋರಿಸುತ್ತದೆ. ಮೌಲ್ಯಗಳು ಜೀವನ ದಲ್ಲಿ ಅಗತ್ಯವಾಗಿದ್ದು ಸಾಮಾಜಿಕ ಬೆಳವಣಿಗೆಗೆ ಪೂರಕ ಎಂದು ಬೆಂಗಳೂರು ಮಹಾ ಧರ್ಮಪ್ರಾಂತದ ಮಹಾ ಧರ್ಮಾ ಧ್ಯಕ್ಷ ರೈ| ರೆ| ಡಾ| ಪೀಟರ್‌ ಮಚಾದೊ ಹೇಳಿದರು.

Advertisement

ಕರ್ನಾಟಕ ಪ್ರಾಂತೀಯ ಕೆಥೋಲಿಕ್‌ ಧರ್ಮಾಧ್ಯಕ್ಷರ ಮಂಡಳಿ ಆಶ್ರಯದಲ್ಲಿರುವ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಂತೂರಿನ ಸಂದೇಶ ಪ್ರತಿಷ್ಠಾನದಲ್ಲಿ ರವಿವಾರ ಸಂದೇಶ ಪ್ರಶಸ್ತಿ ಪ್ರದಾನ ಮಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಂದಿನ ಜನಾಂಗಕ್ಕೆ ಸಂಸ್ಕೃತಿಯನ್ನು ತಲುಪಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಸಂದೇಶವು ಕಲೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವ ಸಂಸ್ಥೆಯಾಗಿ ಬೆಳೆದಿದೆ ಎಂದರು.

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಮಾತನಾಡಿ, ಸಂಸ್ಕೃತಿ, ಕಲೆ, ಸಾಹಿತ್ಯ ನಾಡಿನ ಸಂಪತ್ತು. ನಮ್ಮ ನಾಡಿನ ಸಂಸ್ಕೃತಿ ಜೀವಂತವಾಗಿ ಉಳಿಯಲು ಕಲಾ ಶಿಕ್ಷಣ ಸಂಸ್ಥೆಗಳ ಪಾತ್ರ ಮುಖ್ಯವಾಗಿದೆ ಎಂದರು.

ಮಂಗಳೂರಿನ ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಮಾತನಾಡಿ, ಸಂದೇಶ ಎಲ್ಲ ಮನಸ್ಸುಗಳನ್ನು ಬೆಸೆಯುವ ದೇವಾಲಯವಾಗಿದೆ. ನಾವು ಬಂಧುತ್ವದಲ್ಲಿ ಜೀವಿಸುವ ಅಗತ್ಯವಿದ್ದು, ಸಂದೇಶ ಸಂಸ್ಥೆಯ ಈ ಕಾರ್ಯ ಪೂರಕವಾಗಿದೆ ಎಂದು ಹೇಳಿದರು.

Advertisement

ಸಂದೇಶ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಬಳ್ಳಾರಿ ಧರ್ಮಾಧ್ಯಕ್ಷ ರೈ| ರೆ|ಡಾ| ಹೆನ್ರಿ ಡಿ’ಸೋಜಾ ಮಾತನಾಡಿ, ನಾವು ಎಲ್ಲಿ ಹುಟ್ಟುತ್ತೇವೆ ಎನ್ನುವುದು ಮುಖ್ಯವಲ್ಲ ಎಲ್ಲಿಗೆ ಮುಟ್ಟುತ್ತೇವೆ ಎನ್ನುವುದು ಮುಖ್ಯ. ಸೋತು ಗೆದ್ದವರು ಸಾಧಕರಾಗಿದ್ದಾರೆ ಎಂದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಹಿರಿಯ ವಿದ್ವಾಂಸ ಪ್ರೊ| ವಿವೇಕ ರೈ ಮಾತನಾಡಿ, ಸಹಬಾಳ್ವೆ ಸಮನ್ವಯದಿಂದ ಬದುಕನ್ನು ಸಂದೇಶ ಸಂಸ್ಥೆ ಎತ್ತಿ ಹಿಡಿದಿದೆ. ಯುವ ಜನತೆ ಸ್ವಾರ್ಥಕ್ಕೆ ಸಿಲುಕಿ ಸಮಾಜ ಒಡೆಯುವ ಬದಲು ಬಂಧುತ್ವ ಕಾಪಾಡುವ ಕೆಲಸವಾಗಬೇಕು ಎಂದರು.

ಆಯ್ಕೆ ಸಮಿತಿ ಅಧ್ಯಕ್ಷ ಚಿನ್ನಪ್ಪ ಗೌಡ ಶುಭ ಹಾರೈಸಿದರು. ಪ್ರತಿಷ್ಠಾನದ ನಿರ್ದೇಶಕ ವಂ| ಡಾ| ಸುದೀಪ್‌ ಪೌಲ್‌ ಸ್ವಾಗತಿಸಿದರು. ಸಂಸ್ಥೆಯ ಟ್ರಸ್ಟಿ ರಾಯ್‌ ಕ್ಯಾಸ್ಟೆಲಿನೊ ವಂದಿಸಿದರು. ಕನ್ಸೆಪಾr ಫೆರ್ನಾಂಡಿಸ್‌ ನಿರೂಪಿಸಿದರು. ಡಾ| ನಾ.ದ. ಶೆಟ್ಟಿ ಅವರು ದಿ| ಅಮೃತ ಸೋಮೇಶ್ವರ ಅವರಿಗೆ ನುಡಿನಮನ ಸಲ್ಲಿಸಿದರು.

ಪ್ರಶಸ್ತಿ ಪುರಸ್ಕೃತ ಸಾಧಕರು
ಸಂದೇಶ ಸಾಹಿತ್ಯ ಪ್ರಶಸ್ತಿ ಪ್ರೊ| ಬಿ.ಎ. ವಿವೇಕ ರೈ (ಕನ್ನಡ), ವಲೇರಿಯನ್‌ ಕ್ವಾಡ್ರಸ್‌ (ಕೊಂಕಣಿ), ಮುದ್ದು ಮೂಡುಬೆಳ್ಳೆ (ತುಳು), ಸಂದೇಶ ಮಾಧ್ಯಮ ಪ್ರಶಸ್ತಿ ಅಬ್ದುಸ್ಸಲಾಮ್‌ ಪುತ್ತಿಗೆ, ಕೊಂಕಣಿ ಸಂಗೀತ ಪ್ರಶಸ್ತಿ ಆಲ್ವಿನ್‌ ಡಿ’ಕುನ್ಹಾ, ಕಲಾ ಪ್ರಶಸ್ತಿ ಕೆ. ಚಂದ್ರನಾಥ ಆಚಾರ್ಯ, ವಿಶೇಷ ಪ್ರಶಸ್ತಿ ಜನ ಶಿಕ್ಷಣ ಟ್ರಸ್ಟ್‌ನ ಪರವಾಗಿ ಕೃಷ್ಣ ಮೂಲ್ಯ ಅವರಿಗೆ ಪ್ರದಾನ ಮಾಡಲಾಯಿತು. ಶಿಕ್ಷಣ ಪ್ರಶಸ್ತಿಯನ್ನು ಹುಚ್ಚಮ್ಮ ಚೌದ್ರಿಯವರ ಪರವಾಗಿ ಚಿನ್ನಪ್ಪ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next