Advertisement

ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ  ಒಲಿದ “ಕಾಯಕಲ್ಪ ಪ್ರಶಸ್ತಿ

04:16 PM Mar 16, 2017 | Team Udayavani |

ಮಡಿಕೇರಿ: ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 2016-2017 ಸಾಲಿನ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಾಯಕಲ್ಪ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದೆ. 

Advertisement

ಸೋಮವಾರಪೇಟೆ ತಾಲೂಕಿನ ಚೇರಳ ಶ್ರೀಮಂಗಲ ಗ್ರಾಮಕ್ಕೆ ಒಳಪಡುವ ಚೆಟ್ಟಳ್ಳಿಯ ಸುಮಾರು 50 ವರ್ಷದ ಹಿಂದೆ ಪ್ರಾರಂಭವಾದ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ಮುಳ್ಳಂಡ ಕುಟುಂಬಸ್ಥರು ಸುಮಾರು 3.50 ಎಕರೆ ಜಾಗವನ್ನು ದಾನವಾಗಿ ನೀಡಿರುತ್ತಾರೆ. ಆಗಿನಿಂದ ಸರಕಾರದ ಅಧೀನದಲ್ಲಿ ಪ್ರಾರಂಭವಾಗಿ ಉತ್ತಮ  ಆರೋಗ್ಯ ಸೇವೆಯನ್ನು ಸಲ್ಲಿಸುತ್ತ ಬರುತ್ತಿದ್ದು ಸುತ್ತಮುತ್ತಲಿನ ಹಲವು ಗ್ರಾಮದ ಜನರಿಗೆ ಅನುಕೂಲವಾಗುತ್ತಿದೆ. ಸರಕಾರದ ಆದೇಶದನ್ವಯ ಆರೋಗ್ಯ ಕೇಂದ್ರವನ್ನು ಉನ್ನತ ದರ್ಜೆಗೆ ಏರಿಸಿ ಉತ್ತಮ ಸೌಲಭ್ಯವನ್ನು ನೀಡಿತ್ತು.  

ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಯೋಗ ಶಾಲೆಯ ಅಗತ್ಯವಿದ್ದ ಕಾರಣ ಸ್ಥಳೀಯ ದಾನಿಗಳಾದ ಸೋಮೆಯಂಡ ದಿಲೀಪ್‌ ಅಪ್ಪಚ್ಚುರವರು ಸುಮಾರು 3ವರ್ಷಗಳ ಹಿಂದೆ ಪ್ರಯೋಗಶಾಲೆಯ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದಾರೆ. 
2016-17ರ ಸ್ವತ್ಛ ಭಾರತ ಅಭಿಯಾನ  ದಡಿಯಲ್ಲಿ ಆರೋಗ್ಯ ಕೇಂದ್ರಗಳಿಗೆ ನೀಡುವ ಕಾಯಕಲ್ಪ ಪ್ರಶಸ್ತಿಯ ಆಯ್ಕೆಗಾಗಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆಯ ಕಾಯಕಲ್ಪ ತಂಡ ಪ್ರತಿಯೊಂದು ಆರೋಗ್ಯ ಕೇಂದ್ರಕ್ಕೂ ಭೇಟಿ ನೀಡಿ ಆರೋಗ್ಯ ಕೇಂದ್ರದ ಪರಿಸರ, ಸ್ವತ್ಛತೆ, ನೈರ್ಮಲ್ಯ ಹಾಗೂ ಹಲವು ಸೌಲಭ್ಯವನ್ನೆಲ್ಲ ಪರಿಶೀಲಿಸಿದಾಗ ಚೆಟ್ಟಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಅಂಕ ಬಂದಿದೆ. 

ಬೆಂಗಳೂರಿನ ವಿಕಾಸ ಸೌಧದಲ್ಲಿ ರಾಜ್ಯ ಮಟ್ಟದ ಕಾಯಕಲ್ಪ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಚೆಟ್ಟಳ್ಳಿಯ ಆರೋಗ್ಯ ಕೇಂದ್ರದ ಉತ್ತಮ ಸೇವೆಯಿಂದ ಸಾರ್ವಜನಿಕರಲ್ಲಿ ಉತ್ತಮ ಅಭಿಪ್ರಾಯಗಳು ಕೇಳಿ ಬಂದಿವೆ.
ಆರೋಗ್ಯ ಕೇಂದ್ರದಲ್ಲಿ ಉತ್ತಮ ಸೇವೆ, ಸ್ವತ್ಛತೆ ಹಾಗೂ ನೈರ್ಮಲ್ಯವನ್ನು ಕಾಪಾಡಿಕೊಂಡು ಬಂದಿರುವುದರಿಂದ ಕಾಯಕಲ್ಪ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ ಎಂದು ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಗಿರೀಶ್‌ ಕೆ.ಎಂ. ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next