Advertisement

ಜಪಾನಿ ಚಿತ್ರ “ರಿಂಗ್‌ ವಾಂಡರಿಂಗ್‌’ಗೆ ಸ್ವರ್ಣ ಮಯೂರ ಪ್ರಶಸ್ತಿ ಗರಿ

12:02 PM Nov 29, 2021 | Team Udayavani |

ಪಣಜಿ: ಗೋವಾದ ಪಣಜಿ ನಗರದಲ್ಲಿ ನ.20ರಂದು ಆರಂಭವಾಗಿದ್ದ 52ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ (ಇಫಿ)ಕ್ಕೆ ಭಾನುವಾರ ಅದ್ಧೂರಿಯ ತೆರೆ ಬಿದ್ದಿತು. ಸಂಜೆ ಡಾ.ಶ್ಯಾಮ್‌ ಪ್ರಸಾದ್‌ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಉತ್ಸವದ ಸ್ವರ್ಣ ಮಯೂರ (ಗೋಲ್ಡನ್‌ ಪೀಕಾಕ್‌) ಪ್ರಶಸ್ತಿ ಸಹಿತ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ನಟಿ, ಚೊಚ್ಚಲ ಚಿತ್ರ ನಿರ್ದೇಶನ ಎಲ್ಲ ವಿಭಾಗಗಳ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

ಜಪಾನಿನ ಮಸಕಾಜು ಕನೆಕೋ ನಿರ್ದೇಶನದ ಜಪಾನಿ ಭಾಷೆಯ ಚಿತ್ರ “ರಿಂಗ್‌ ವಾಂಡರಿಂಗ್‌’ ಚಿತ್ರ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿದ್ದು, ಸ್ವರ್ಣ ಮಯೂರ ಪ್ರಶಸ್ತಿಗೆ ಭಾಜನವಾಗಿದೆ. ಇದರೊಂದಿಗೆ ಜೆಕೋಸ್ಲೋವೇಕಿಯಾದ ನಿರ್ದೇಶಕ ವಕ್ಲಾವ್‌ ಕದ್ರಂಕಾ ತಮ್ಮ ಚಿತ್ರ “ಸೇವಿಂಗ್‌ ಒನ್‌ ಹು ಈಸ್‌ ಡೆಡ್‌’ ಚಿತ್ರದ ನಿರ್ದೇಶನಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಮರಾಠಿ ಭಾಷೆಯ “ಗೋದಾವರಿ’ ಚಿತ್ರದ ನಟನೆಗಾಗಿ ಜಿತೇಂದ್ರ ಭಿಕುಲಾಲ್‌ ಜೋಷಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು.

ಸ್ಪ್ಯಾನಿಷ್‌ ಚಿತ್ರ “ಚಾರ್ಲೋಟ್‌’ ಚಿತ್ರದ ನಟನೆಗಾಗಿ ಆಂಜಿಲಾ ಮೊಲಿನಾ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗಳಿಸಿದರು. ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಮರಾಠಿ ಭಾಷೆಯ ನಿಖೀಲ್‌ ಮಹಾಜನ್‌ ನಿರ್ದೇಶನದ “ಗೋದಾವರಿ’ ಹಾಗೂ ಬ್ರೆಜಿಲ್‌ನ ರೋಡ್ರಿಗೋ ಡಿ ಒಲೆವೆರಾ ಅವರ “ದಿ ಫ‌ರ್ಸ್ಡ್ ಫಾಲನ್‌’ ಚಿತ್ರ ಪಡೆದವು.

ಇದನ್ನೂ ಓದಿ;- ದಾಂಡೇಲಿ : ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು, ಮನೆಯ ವಸ್ತುಗಳೆಲ್ಲ ಚೆಲ್ಲಾಪಿಲ್ಲಿ

ಇವೆಲ್ಲರಿಗೂ ರಜತ ಮಯೂರ ಪ್ರಶಸ್ತಿಯನ್ನು ನೀಡಲಾಗುತ್ತದೆ. ರಷ್ಯಾದ ರೋಮನ್‌ ವಸ್ಯನೋವ್‌ ಅವರ “ದಿ ಡಾರ್ಮ್’ ಚಿತ್ರ ವಿಶೇಷ ಪ್ರಶಂಸೆಯ ಪ್ರಶಸ್ತಿ ಪಡೆದರೆ, ಮಾರೆ ಅಲೆಸ್ಸಾಂಡ್ರಿನಿ ಅವರ “ಜಹೋರಿ’ ಚಿತ್ರಕ್ಕೆ ಚೊಚ್ಚಲ ನಿರ್ದೇಶನ ಪ್ರಶಸ್ತಿ ಲಭಿಸಿತು. ಇದೇ ವಿಭಾಗದಲ್ಲಿ ಮತ್ತೂಂದು ಸ್ಪ್ಯಾನಿಷ್‌ ಚಿತ್ರ “ದಿ ವೆಲ್ತ್‌ ಆಫ್ ದಿ ವರ್ಲ್ಡ್’ಗೆ ವಿಶೇಷ ಪ್ರಶಂಸಾ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

Advertisement

ಸೆನ್ಸಾರ್‌ ಬೋರ್ಡ್‌ ನ ಅಧ್ಯಕ್ಷ ಮತ್ತು ಸಿನೆಮಾಕರ್ಮಿ ಪ್ರಸೂನ್‌ ಜೋಷಿಯವರಿಗೆ ಜೀವಿತಾವಧಿ ಪ್ರಶಸ್ತಿ ನೀಡಲಾಯಿತು. ಅಸ್ಸಾಂನ ದಿಮಾಸಾ ಭಾಷೆಯ “ಶೇಮ್ಖೋರ್’ ಚಿತ್ರದ ನಟಿ ಮತ್ತು ನಿರ್ದೇಶಕಿ ಎಮಿ ಬರೂವ ಅವರನ್ನು ಅತ್ಯಪರೂಪದ ಪ್ರಾದೇಶಿಕ ಭಾಷೆಯಲ್ಲಿ ಚಿತ್ರ ರೂಪಿಸಿದ್ದಕ್ಕೆ ಸಮ್ಮಾನಿಸಲಾಯಿತು. ಗೋವಾದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಮತ್ತಿತರ ಗಣ್ಯರು ಭಾಗವಹಿಸಿದ್ದರು. ಈ ಬಾರಿಯ ಚಿತ್ರೋತ್ಸವದಲ್ಲಿ ವರ್ಚುಯಲ್‌ ಸೇರಿದಂತೆ ಸುಮಾರು 10 ಸಾವಿರ ಪ್ರತಿನಿಧಿಗಳು ಭಾಗವಹಿಸಿದ್ದರು.

ಬ್ರಿಕ್‌ ಚಿತ್ರೋತ್ಸವ ಮತು ಪ್ರಶಸ್ತಿ

ಚಿತ್ರೋತ್ಸವದ ಜತೆಗೇ ಆರನೇ ಬ್ರಿಕ್ಸ್‌ ರಾಷ್ಟ್ರಗಳ ಚಿತ್ರೋತ್ಸವವೂ ನಡೆಯಿತು. ಇದರಲ್ಲಿ ದಕ್ಷಿಣ ಆಫ್ರಿಕಾದ “ಬರಾಖತ್‌’ ಮತ್ತು ರಷ್ಯಾದ “ದಿ ಸನ್‌ ಅಬೋವ್‌ ಮಿ ನೆವರ್‌ ಸೆಟ್ಸ್‌’ ಚಿತ್ರಗಳಿಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಲಾಯಿತು. ಬ್ರೆಜಿಲ್‌ನ ಸಿನೆಮಾ ನಿರ್ದೇಶಕರಾದ ಲೂಸಿಯಾ ಮೂರತ್‌ ಅವರಿಗೆ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಸಿಕ್ಕಿದೆ.

ತಮಿಳು ಚಲನಚಿತ್ರ “ಅಸುರನ್‌’ನ ನಟನೆಗೆ ಧನುಷ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಹಾಗೂ ಬ್ರೆಜಿಲ್‌ನ “ಆನ್‌ ವ್ಹೀಲ್ಸ್‌’ ಚಿತ್ರದ ನಟನೆಗೆ ಲಾರಾ ಬೋಲ್ಡೊರಿನಿಗೆ ನಟಿ ಪ್ರಶಸ್ತಿ ಲಭಿಸಿತು. ಚೀನದ ನಿರ್ದೇಶಕ ಯಾನ್‌ ಹನ್‌ ಅವರ “ಎ ಲಿಟ್ಲ ರೆಡ್‌ ಫ್ಲವರ್‌’ ಚಿತ್ರಕ್ಕೆ ವಿಶೇಷ ಪ್ರಶಂಸಾ ಪ್ರಶಸ್ತಿ ಲಭಿಸಿತು.

Advertisement

Udayavani is now on Telegram. Click here to join our channel and stay updated with the latest news.

Next