ಗದಗ: “ದ್ವೇಷ ಬಿಡು, ಪ್ರೀತಿ ಮಾಡು’ ಎಂಬ ಸಂದೇಶ ಸಾರಿದ ಶಿರಹಟ್ಟಿಯ ಫಕೀರೇಶ್ವರರ ವಾಣಿಯನ್ನು ನಾವಿಂದು ಪರಿಪಾಲಿಸುವ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ಒಳ್ಳೆಯ ಕಾರ್ಯ ಮಾಡೋಣ ಎಂದು ಶಿರಹಟ್ಟಿ ಸಂಸ್ಥಾನ ಮಠದ ಜ|ಫಕೀರ ದಿಂಗಾಲೇಶ್ವರ ಮಹಾಸ್ವಾಮೀಜಿ ಹೇಳಿದರು.
ನಗರದ ಮುಳಗುಂದ ನಾಕಾ ಬಳಿಯ ಅಡವೀಂದ್ರಸ್ವಾಮಿ ಮಠದ ಶ್ರೀ ಅನ್ನಪೂರ್ಣೇಶ್ವರಿದೇವಿ 8ನೇ ವರ್ಷದ ಜಾತ್ರೆ, ಮಹಾರಥೋತ್ಸವದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಶ್ರೀಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು ಹೊಸಳ್ಳಿಮಠ ಸಮ್ಮುಖ ವಹಿಸಿ ಮಾತನಾಡಿದರು. ಪಂಡಿತ ರಾಜಗುರು ಗುರುಸ್ವಾಮಿ ಕಲಕೇರಿ ಅವರಿಂದ ಉಪದೇಶಾಮೃತ, ಡಾ|ಅನ್ನದಾನಿ ಹಿರೇಮಠ ಅವರಿಂದ ಉಪನ್ಯಾಸ ಜರುಗಿತು. ಜಾತ್ರಾ ಸಮಿತಿ ಅಧ್ಯಕ್ಷ ಮೋಹನ ಗ್ವಾರಿ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ|ಎಂ.ಡಿ. ಗೊಜನೂರ ಅವರಿಗೆ “ಅನ್ನಪೂರ್ಣೇಶ್ವರಿ ವೈದ್ಯ ರತ್ನ?, ನಿವೃತ್ತ ಎಂಜಿನಿಯರ್ ಎಂ. ಬಸಪ್ಪ ಅವರಿಗೆ “ತಾಂತ್ರಿಕ ಹಾಗೂ ಸಮಾಜ ಸೇವಾ ರತ್ನ’, ಗದಗ-ಬೆಟಗೇರಿ ನಗರಸಭೆ ವಿರೋಧ ಪಕ್ಷದ ನಾಯಕ ಎಲ್.ಡಿ. ಚಂದಾವರಿ ಅವರಿಗೆ “ರಾಜೀವಗಾಂಧಿ ನಗರ ಶಿಲ್ಪಿ’, ವ್ಯಾಪಾರಸ್ಥ ಕಿರಣ ಭೂಮಾ ಅವರಿಗೆ “ಉದ್ಯಮಶೀಲ ರತ್ನ’ ಹಾಗೂ ರೋಣ ತಾಲೂಕಿನ ಅಬ್ಬಿಗೇರಿ ಪರಪ್ಪ ಶಿವಶಿಂಪರ ಅವರಿಗೆ “ಕೃಷಿ ಸಂಪದ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ಗೀತಾ ಹೂಗಾರ ಅವರ “ಅಚ್ಚ ಕನ್ನಡತಿ’ ಕವನ ಸಂಕಲನವನ್ನು ಶ್ರೀಗಳು ಬಿಡುಗಡೆಗೊಳಿಸಿದರು.
ಗಂಗಣ್ಣ ಕೋಟಿ, ಪ್ರಶಾಂತ ಶಾಬಾದಿಮಠ, ಪಿ.ಸಿ. ಶಾಬಾದಿಮಠ, ಎಸ್.ವಿ.ಯಳವತ್ತಿ, ಮಹೇಶ್ಚಂದ್ರ ಕಬಾಡರ, ಬಿ.ಬಿ. ಪಾಟೀಲ, ಎ.ಎಸ್. ವಸ್ತ್ರದ, ಎಚ್.ವಿ. ಹುಲ್ಲತ್ತಿ, ಜಿ.ಎಂ. ಹೊಸಮನಿ, ಶಿವಾನುಭವ ಸಮಿತಿ ಅಧ್ಯಕ್ಷ ಜಿ.ಎಂ. ಯಾನಮಶೆಟ್ಟಿ ಇದ್ದರು.ಸಮಿತಿಯ ವೈದಿಕ ಬಳಗದಿಂದ ವೇದಘೋಷ ಜರುಗಿತು. ಸಾನ್ವಿ ಪಾಟೀಲ ಪ್ರಾರ್ಥಿಸಿದರು. ಶಾಂತಾಬಾಯಿ ಬಾಕಳೆ ಸ್ವಾಗತಿಸಿ, ಡಾ|ರಾಜೇಂದ್ರ ಗಡಾದ ನಿರೂಪಿಸಿ, ಸಿ.ಬಿ. ಮಾಳಗಿ ವಂದಿಸಿದರು.