Advertisement

ಕಾಡಿನಲ್ಲಿ ಕೆಲಸ ಮಾಡಿದವರಿಗೆ ಪ್ರಶಸ್ತಿ

01:29 PM Oct 02, 2019 | Suhan S |

ಶಿರಸಿ: ಕಾಡಿನಲ್ಲಿ ಕೆಲಸ ಮಾಡಿ, ಅರಣ್ಯಗಳ್ಳತನ, ವನ್ಯಜೀವಿ ರಕ್ಷಣೆಯಲ್ಲಿ ಕೆಲಸ ಮಾಡಿದ ಅರಣ್ಯ ಇಲಾಖೆ ಪ್ರಾಮಾಣಿಕ, ನೇರ ಅಧಿಕಾರಿಗಳಿಗೆ ನೀಡಲಾಗುವ ಮುಖ್ಯಮಂತ್ರಿಗಳ ಚಿನ್ನದ ಪ್ರಶಸ್ತಿಗೆ ರಾಜ್ಯದ 32 ವೃತ್ತಗಳಿಂದ 25 ಸಿಬ್ಬಂದಿಗೆ ಪ್ರಶಸ್ತಿ ಘೋಷಣೆಯಾಗಿದೆ.

Advertisement

ಇಲಾಖೆಯ ಪ್ರತ್ಯೇಕ ಐದು ವಿಭಾಗಗಳಲ್ಲಿ ಪಶಸ್ತಿ ಪ್ರಕಟಿಸಲಾಗಿದೆ. ಈ ಪೈಕಿ ಕೆನರಾ ಅರಣ್ಯ ವೃತ್ತದ ಸಿಬ್ಬಂದಿ ಹೆಚ್ಚಿನ ಪ್ರಶಸ್ತಿಗಳನ್ನು ಬಾಚಿಕೊಂಡು ಅರಣ್ಯಾದಾಯ ಕೊಡುವ ಜೊತೆಗೆ, ರಕ್ಷಣೆಯಲ್ಲೂ ಮುಂದಿದೆ!

ಕೆನರಾ ಅರಣ್ಯ ವೃತ್ತಕ್ಕೆ ಆರು ಪ್ರಶಸ್ತಿಗಳು ಬಂದಿದ್ದು, 4 ಪ್ರಶಸ್ತಿ ಬಾಚಿಕೊಂಡ ಧಾರವಾಡ ನಂತರದ ಸ್ಥಾನದಲ್ಲಿದೆ. ಬಳ್ಳಾರಿ, ಚಿಕ್ಕಮಗಳೂರು ಅರಣ್ಯ ವೃತ್ತಗಳು ತಲಾ ಮೂರು ಪ್ರಶಸ್ತಿ ಪಡೆದು ಮೂರನೇ ಸ್ಥಾನದಲ್ಲಿವೆ.

ಏನಿದು ಪ್ರಶಸ್ತಿ?: ಅರಣ್ಯ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ವನ್ಯಜೀವಿ ರಕ್ಷಣೆ, ಅರಣ್ಯ ಸಂರಕ್ಷಣೆ, ಅಪರಾಧ ಚಟುವಟಿಕೆ ನಿಯಂತ್ರಿಸಿದ, ಅರಣ್ಯ ನಿರ್ವಹಣೆ ತರಬೇತಿ, ಸಂಶೋಧನೆ, ಕ್ರೀಡಾಕೂಟದಲ್ಲಿ ಪಾಲ್ಗೊಂಡ ಸಾಧಕ ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರಶಸ್ತಿ ಇದು. ಶೌರ್ಯತನ, ದಿಟ್ಟತನ ತೋರಿದ ಅಧಿಕಾರಿಗಳಿಗೂ ಪ್ರಶಸ್ತಿ. ವೃತ್ತ ಮಟ್ಟದಿಂದ ಸ್ವೀಕೃತವಾದ ಅರ್ಜಿಗಳನ್ನು ಕಳೆದ ಜು.17 ರಂದು ರಾಜ್ಯ ಮಟ್ಟದ ಸಭೆಯಲ್ಲಿ ಅಖೈರುಗೊಳಿಸಿದ ಪ್ರಸ್ತಾವನೆಗೆ ಕಳೆದ ಸೆ.30 ರಂದು ಸರಕಾರದ ಅಧೀನ ಕಾರ್ಯದರ್ಶಿ ಪಿ.ವಿ. ಶ್ರೀನಿವಾಸನ್‌ ಮುಖ್ಯಮಂತ್ರಿಗಳ ಪದಕ ಪ್ರದಾನಕ್ಕೆ ಸಹಿ ಹಾಕಿದ್ದಾರೆ.

ಯಾರಿಗೆಲ್ಲ ಬಂತು?: ಚಿಕ್ಕಮಗಳೂರು ವೃತ್ತದ ವಲಯಾರಣ್ಯಾಧಿಕಾರಿ ಶಿಲ್ಪಾ ಎಸ್ಸೆಲ್‌, ಮಂಜುನಾಥ ಎಚ್‌.ವಿ, ಬಳ್ಳಾರಿಯ ಎ.ಎಚ್‌. ಮುಲ್ಲಾ, ಗುರುನ ಗೌಡ ಪಾಟೀಲ, ಧಾರವಡದ ಡಿ.ಜಿ. ಕನ್ನಜ್ಜವನರ್‌, ಕೆನರಾ ವೃತ್ತದ ಶಿರಸಿಯಲ್ಲಿ ಕೆಲಸ ಮಾಡಿದ್ದ ವಿ.ಮುನಿರಾಜು, ಬೆಳಗಾವಿಯ ಎ.ವೈ. ಪಾಟೀಲ, ಉಪ ವಲಯ ಅರಣ್ಯಾಧಿಕಾರಿಗಳಾದ ಧಾರವಾಡದ ಶಂಕರಪ್ಪ ಮಾಣಿ, ಎಸ್‌.ಬಿ.ಪೂಜಾರ, ಚಾಮರಾಜನಗರದ ಚಂದ್ರಕುಮಾರ ಆರ್‌, ಕೆನರಾದ ಹರಿಶ್ಚಂದ್ರ ಪಟಗಾರ, ವೈ.ಎಲ್‌. ಲಮಾಣಿ, ಬೆಳಗಾವಿಯ ಜಿ.ಎಂ. ಬಾಯಣ್ಣವರ್‌, ಬೆಂಗಳೂರು ತನೂರ್‌ ಅಹಮದ್‌, ಕೊಡಗಿನ ವೈ.ಕೆ. ಜಗದೀಶ, ಬಳ್ಳಾರಿಯ ರಾಮಣ್ಣ, ಅರಣ್ಯ ರಕ್ಷಕರಾದ ಕೆನರಾದ ತಾರಾ ನಾಯ್ಕ, ಬೆಂಗಳೂರಿನ ಅನಿಲಕುಮಾರ ಎಸ್‌. ಜೆ., ಧಾರವಾಡದ ಗಿರೀಶ ಅಗಸಾಲೆ, ಚಾಮರಾಜ ನಗರದ ಮುತ್ತುರಾಜ ಬಿ., ಮಂಗಳೂರಿನ ಮೋಹನ, ಹಾಸನದ ಮಲ್ಲಯ್ಯ ಪಡೆದಿದ್ದಾರೆ.

Advertisement

ಮಾವುತರಿಗೂ: ಅರಣ್ಯ ಸಂರಕ್ಷಣೆ ಜೊತೆಗೆ ಆನೆಗಳನ್ನು ಪಳಗಿಸಿದ ಮಾವುತರಿಗೂ ಪ್ರಶಸ್ತಿ ಲಭಿಸಿದೆ. ಆನೆ ಮಾವುತ ಚಿಕ್ಕಮಗಳೂರಲ್ಲಿ ಚಿಕ್ಕಮಗಿ ಅಂಥೋಣಿ ಯು.ಆರ್‌. ಅವರಿಗೆ ಲಭಿಸಿದೆ. ಅರಣ್ಯ ಸಂರಕ್ಷಣೆಯಲ್ಲಿ ವಿಶೇಷ ಪಾಲು ನೀಡುವ ಅರಣ್ಯ ವೀಕ್ಷಕರಾದ ಕೆನರಾ ವೃತ್ತದ ಗೋಪಾಲ ಗೌಡ, ಪರಶುರಾಮ ತೋರಸ್ಕರಗೆ ಮುಖ್ಯಮಂತ್ರಿಗಳ ಪದಕ ಪ್ರಾಪ್ತವಾಗಿದೆ.

ಅರಣ್ಯ ರಕ್ಷಣೆಗಾಗಿ ಗುದ್ದಾಟ ಮಾಡಿದ್ದಕ್ಕೆ ಸರಕಾರ ಬೆನ್ನುತಟ್ಟಿದೆ. ಇದು ಇನ್ನಷ್ಟು ಕೆಲಸ ಮಾಡುವ ಉಮೇದು ನೀಡಿದೆ. ವಿ.ಮುನಿರಾಜು, ಶಿರಸಿಯಲ್ಲಿ ಕೆಲಸ ಮಾಡಿ ಹೆಬ್ರಿಗೆ ವರ್ಗಾವಣೆಗೊಂಡ ಅರಣ್ಯಾಧಿಕಾರಿ

ಪ್ರತೀ ವರ್ಷ ಈ ಪ್ರಶಸ್ತಿಯನ್ನು ವಿಶ್ವ ಪರಿಸರ ದಿನಾಚರಣೆಗೇ ನೀಡುವಂತಾಗಬೇಕು. ಆ ಮೂಲಕ ಪರಿಸರ ಸಂರಕ್ಷಣೆಗೆ ಟೊಂಕ ಕಟ್ಟಿದ ಅಧಿಕಾರಿಗಳನ್ನೂ ಅಭಿನಂದಿಸಿದಂತಾಗುತ್ತದೆ. ರಮೇಶ ಹಳೇಕಾನಗೋಡ, ಪರಿಸರ ಕಾರ್ಯಕರ್ತ

 

ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next