Advertisement

ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಗೆ ಪ್ರಶಸ್ತಿಯ ಗರಿ

11:48 AM Jul 29, 2019 | Suhan S |

ಶ್ರೀರಂಗಪಟ್ಟಣ: ಸರ್ಕಾರಿ ಆಸ್ಪತ್ರೆಗಳೆಂದರೆ ಸ್ವಚ್ಛತೆ ಮಾಯವಾಗಿ, ಅವ್ಯವಸ್ಥೆ ತಾಂಡವವಾಡುವುದು ಸಾಮಾನ್ಯ. ಇದೇ ಕಾರಣಕ್ಕೆ ಜನರು ಅಲ್ಲಿಗೆ ಹೋಗುವುದಕ್ಕೆ ಮೂಗು ಮುರಿಯುತ್ತಾರೆ. ಆದರೆ, ಶ್ರೀರಂಗಪಟ್ಟಣ ತಾಲೂಕು ಆಸ್ಪತ್ರೆ ಸ್ವಚ್ಛತೆ ಹಾಗೂ ತ್ಯಾಜ್ಯ ವಿಲೇವಾರಿಯಲ್ಲಿ ವೈಜ್ಞಾನಿಕ ವಿಧಾನ ಅಳವಡಿಸಿಕೊಂಡು ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿಯ ಗರಿ ಮೂಡಿಸಿಕೊಂಡಿದೆ.

Advertisement

‘ಸ್ವಚ್ಛ ಭಾರತ ಅಭಿಯಾನದಡಿ’ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಮತ್ತು ರೋಗಿಗಳಿಗೆ ನೀಡುವ ಚಿಕಿತ್ಸೆಯನ್ನು ಆಧರಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಮೂರು ಲಕ್ಷ ರೂ ನಗದು ಮತ್ತು ಪ್ರಶಸ್ತಿ ಫ‌ಲಕ ನೀಡಲಾಗಿದೆ.

ಪ್ರಶಸ್ತಿ ಮಾನದಂಡವೇನು?:  ಪ್ರಶಸ್ತಿಗೆ ಆಯ್ಕೆ ಮಾಡಬೇಕಾದರೆ ಮೊದಲ ಹಂತದಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿಯೇ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸಾ ವಿಧಾನದ ಬಗ್ಗೆ ಪರಿಶೀಲನೆ ನಡೆಸುವುದು. ಎರಡನೇ ಹಂತದಲ್ಲಿ ಜಿಲ್ಲೆಯ ಇತರೆ ತಾಲೂಕಿನ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತದೆ. ಕೊನೆಯ ಮತ್ತು ಅಂತಿಮ ಹಂತದಲ್ಲಿ ರಾಜ್ಯಮಟ್ಟದ ನಿರ್ದೇಶಕರ ತಂಡದಿಂದ ಪರಿಶೀಲನೆ ನಡೆಯುತ್ತದೆ.

ಸ್ವಚ್ಛತೆಗೆ ಪ್ರಾಮುಖ್ಯತೆ: ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಆಸ್ಪತ್ರೆ ವೈದ್ಯರು, ಆಡಳಿತಾಧಿಕಾರಿಗಳು, ಸಿಬ್ಬಂದಿ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿರುವುದು ವಿಶೇಷ. ಅದಕ್ಕೆ ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ದೊರಕಿದೆ.

ಶೌಚಾಲಯವೂ ಸೇರಿದಂತೆ ಆಸ್ಪತ್ರೆಯ ಒಳಗೆ ಮತ್ತು ಹೊರಗೆ ಸ್ವಚ್ಛತೆಯನ್ನು ಕಾಯ್ದುಕೊಳ್ಳಲಾಗಿದೆ. ಅಲ್ಲಲ್ಲಿ ಕಸ ಹಾಕುವುದಕ್ಕೆ ಕಸದ ಬುಟ್ಟಿಗಳನ್ನು ಅಳವಡಿಸಲಾಗಿದೆ. ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿರ್ಬಂಧಿಸಿ, ಕಸದ ತೊಟ್ಟಿಯಲ್ಲೇ ಹಾಕುವಂತೆ ಜನರಿಗೆ ತಿಳಿವಳಿಕೆ ಮೂಡಿಸಿರುವುದರಿಂದ ಎಲ್ಲರೂ ಅದನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

Advertisement

ಆಸ್ಪತ್ರೆ ತ್ಯಾಜ್ಯ ವೈಜ್ಞಾನಿಕ ವಿಲೇವಾರಿ: ರೋಗಿಗಳಿಗೆ ಚಿಕಿತ್ಸೆ ನಂತರ ಉಳಿಯುವ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಕ್ರಮ ವಹಿಸಲಾಗಿದೆ. ಚಿಕಿತ್ಸೆ ನೀಡಿದ ಸಿರೆಂಜ್‌, ಶಸ್ತ್ರ ಚಿಕಿತ್ಸೆ ಬಳಿಕ ಉಳಿದ ಅನುಪಯುಕ್ತ ವಸ್ತುಗಳನ್ನು ಪ್ರತ್ಯೇಕವಾಗಿಸಿ ಆಸ್ಪತ್ರೆಯಲ್ಲೇ ಸಂಸ್ಕರಣೆ ಮಾಡಲಾಗುತ್ತಿದೆ. ತ್ಯಾಜ್ಯ ವಿಲೇವಾರಿ ಮಾಡುವ ಜವಾಬ್ದಾರಿ ಯನ್ನು ಖಾಸಗಿ ಸಂಸ್ಥೆಗೆ ನೀಡಲಾಗಿದೆ. ಕಾಲ ಕಾಲಕ್ಕೆ ಆಸ್ಪತ್ರೆ ತ್ಯಾಜ್ಯ ಹೊರಗೆ ರವಾನೆಯಾಗುವ ಕಾರಣ ಯಾವುದೇ ಸಮಸ್ಯೆ ಕಾಡುತ್ತಿಲ್ಲ.

ಪ್ರತಿ ಒಳ ರೋಗಿಗಳ ಕೊಠಡಿಗೆ ಪ್ರತ್ಯೇಕ ಆಸನ ಹಾಗೂ ತೆರೆ ಬಟ್ಟೆ ಹಾಕುವ ಮೂಲಕ ಸೋಂಕು ಹರಡದಂತೆ ಜಾಗ್ರತೆ ವಹಿಸಲಾಗಿದೆ. ಪ್ರತಿದಿನ ಕೊಠಡಿ, ಆವರಣವನ್ನು ಸ್ವಚ್ಛಗೊಳಿಸಲು ಅಗತ್ಯ ಸಿಬ್ಬಂದಿ ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದು ಆಸ್ಪತ್ರೆಗೆ ಪ್ರಶಸ್ತಿ ಬರಲು ಕಾರಣವಾಗಿದೆ.

ಸಾವಿರಕ್ಕೇರಿದ ರೋಗಿಗಳ ಸಂಖ್ಯೆ: ಈ ಹಿಂದೆ ಆಸ್ಪತ್ರೆಗೆ ಬರುತ್ತಿದ್ದ ರೋಗಿಗಳ ಸಂಖ್ಯೆ 200ರ ಆಸುಪಾಸಿನಲ್ಲಿತ್ತು. ಪ್ರಸ್ತುತ 800 ರಿಂದ 1000 ರೋಗಿಗಳು ನಿತ್ಯ ಆಸ್ಪತ್ರೆಗೆ ಬರುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ದೊರೆಯುತ್ತದೆ ಎನ್ನುವ ನಂಬಿಕೆ ಇಮ್ಮಡಿಯಾಗಿದೆ. ಇಲ್ಲಿ ದೊರೆಯುವ ಉತ್ತಮ ಚಿಕಿತ್ಸೆ ಪರಿಣಾಮ ಶ್ರೀರಂಗಪಟ್ಟಣ ತಾಲೂಕು ಮಾತ್ರವಲ್ಲದೆ ಪಾಂಡವಪುರ, ಕೆ.ಆರ್‌.ಪೇಟೆ, ಜಿಲ್ಲಾ ಕೇಂದ್ರವಾದ ಮಂಡ್ಯದಿಂದಲೂ ಅಧಿಕ ಸಂಖ್ಯೆಯಲ್ಲಿ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಸ್ತುತ ಆಸ್ಪತ್ರೆಯಲ್ಲಿ 11 ವೈದ್ಯರಿದ್ದಾರೆ. ಚರ್ಮ, ಸರ್ಜರಿ, ಸ್ತ್ರೀರೋಗ, ಇಎನ್‌ಟಿ, ಆರ್ಥೋ, ನೇತ್ರ, ದಂತ ವೈದ್ಯರು ಸದಾ ಲಭ್ಯರಿರುತ್ತಾರೆ. ಬರುವ ರೋಗಿಗಳಿಗೆ ಇರುವ ಸೌಲಭ್ಯಗಳನ್ನೇ ಬಳಸಿಕೊಂಡು ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಅವಶ್ಯಕತೆ ಇದ್ದಾಗ ಶಸ್ತ್ರ ಚಿಕಿತ್ಸೆಗಳನ್ನು ವೈದ್ಯರ ತಂಡ ಯಶಸ್ವಿಯಾಗಿ ನಡೆಸುತ್ತಿದೆ. ತುರ್ತು ಅಪಘಾತ ಸಂದರ್ಭದಲ್ಲೂ ವೈದ್ಯರು ಲಭ್ಯರಿರುತ್ತಾರೆ.

ಯಂತ್ರಗಳ ಬಳಕೆ: ರೋಗಿಗಳಿಗೆ ಅನಸ್ತೇಷಿಯಾ ನೀಡುವ ಹಾಗೂ ಶಸ್ತ್ರ ಚಿಕಿತ್ಸೆ ವೇಳೆ ಗಾಳಿ ಕೊಡುತ್ತಲೇ ವೆಂಟಿಲೇಟರ್‌ನಂತೆ ಕೆಲಸ ಮಾಡಲು ಅನುಕೂಲವಾಗುವಂತೆ ಅನಸ್ತೇಷಿಯಾ ವರ್ಕ್ಸ್ಸ್ಟೇಷನ್‌ ಯಂತ್ರ ಅಳವಡಿಸಲಾಗಿದೆ. ನಾಲ್ಕು ಡಯಾಲಿಸಿಸ್‌ ಯಂತ್ರಗಳಿದ್ದು, ಪ್ರತಿದಿನ ಸುಮಾರು 30 ರಿಂದ 35 ರೋಗಿಗಳಿಗೆ ಡಯಾಲಿಸಿಸ್‌ ಮಾಡಲಾಗುತ್ತಿದೆ. ಆಸ್ಪತ್ರೆ ನೂರು ಹಾಸಿಗೆಗಳ ಸೌಲಭ್ಯ ಹೊಂದಿದೆ.

ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ, ಇದೀಗ ಕೇಂದ್ರ ಸರ್ಕಾರದ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದೆ. ಅಲ್ಲದೆ, ಇತರೆ ಸರ್ಕಾರಿ ಆಸ್ಪತ್ರೆಗಳಿಗೂ ಮಾದರಿಯಾಗಿದೆ. ಜಿಲ್ಲೆಯ ಎಲ್ಲಾ ಆಸ್ಪತ್ರೆಗಳು ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ಹಾಗೂ ಚಿಕಿತ್ಸೆಯ ಉತ್ತಮ ಮಾದರಿ ಅನುಸರಿಸಬೇಕಿದೆ.

ಸೌಲಭ್ಯ ಕಲ್ಪಿಸುವ ಧ್ಯೇಯ:

ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿಯಿಂದ ಬರುವ 3 ಲಕ್ಷ ರೂ. ನಗದು ಹಣದಲ್ಲಿ ಶೇ.70 ರೋಗಿಗಳಿಗೆ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಬಳಸಲಾಗುವುದು. ಸ್ವಚ್ಛತೆಗೆ ಶ್ರಮಿಸುತ್ತಿರುವ ಸಿಬ್ಬಂದಿಗೆ ಶೇ.30ರಷ್ಟು ಹಣವನ್ನು ಪ್ರೋತ್ಸಾಹ ಧನವಾಗಿ ನೀಡುವ ಉದ್ದೇಶ ಹೊಂದಲಾಗಿದೆ. ಇನ್ನು 2015ರಿಂದ ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿ ನೀಡಲಾಗುತ್ತಿದ್ದು, ಈಗಾಗಲೇ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಮತ್ತು ಪಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಶಸ್ತಿ ಲಭಿಸಿದೆ. ತಾಲೂಕು ಆಸ್ಪತ್ರೆ ಮಟ್ಟದಲ್ಲಿ ಗಮನಿಸುವುದಾದರೆ ಮೊದಲ ಬಾರಿಗೆ ಶ್ರೀರಂಗಪಟ್ಟಣಕ್ಕೆ ದೊರಕಿರುವುದು ವಿಶೇಷವಾಗಿದೆ.
● ಗಂಜಾಂ ಮಂಜು
Advertisement

Udayavani is now on Telegram. Click here to join our channel and stay updated with the latest news.

Next