ಚಿತ್ತಾಪುರ: ಪ್ರಾಮಾಣಿಕವಾಗಿ ಹಾಗೂ ಶಿಸ್ತುಬದ್ಧತೆಯಿಂದ ಸಮಾಜ ಸೇವೆಯಲ್ಲಿ ತೊಡಗಬೇಕೇ ವಿನಃ ಯಾವುದೋ ಪ್ರಶಸ್ತಿ ಪಡೆಯುವ ಸಲುವಾಗಿ ಸೇವೆ ಮಾಡಬಾರದು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಾದೇವಪ್ಪ ಕಡೇಚೂರ ಹೇಳಿದರು.
ಕಲಬುರಗಿಯ ಅವರ ನಿವಾಸದಲ್ಲಿ ತಾಲೂಕು ಆರ್ಯ ಈಡಿಗ ಸಮಾಜದ ವತಿಯಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯಾವುದೇ ಲಾಭ ನಿರೀಕ್ಷಿಸದೇ ಹಾಗೂ ಫಲಾಪೇಕ್ಷೆ ಬಯಸದೇ ಸೇವೆ ಸಲ್ಲಿಸಬೇಕು. ಆದರೆ ಈಗಿನವರು ಲಾಭದ ದೃಷ್ಟಿಯಿಂದ ಸೇವೆ ಸಲ್ಲಿಸುತ್ತಾರೆ. ಇದು ಸರಿಯಲ್ಲ ಎಂದರು.
ನಾನು ಹೈದ್ರಾಬಾದ ಕರ್ನಾಟಕ ವಿಮೋಚನಾ ಚಳವಳಿ ಸಂದರ್ಭದಲ್ಲಿ ಪ್ರಾಣವನ್ನು ಲೆಕ್ಕಿಸದೇ ಭಾಗವಹಿಸಿದ್ದೆ. ಆಗ ನಮ್ಮ ಮನೆ ಮೇಲೆ ಎರಡು ಬಾರಿ ರಜಾಕಾರರು ದಾಳಿ ಮಾಡಿದ್ದರು. ನಾನು ಯಾವತ್ತೂ ಪ್ರಶಸ್ತಿಗಾಗಿ ಆಸೆ ಪಟ್ಟಿಲ್ಲ. ಪ್ರಸ್ತುತ 91 ವರ್ಷ ವಯಸ್ಸಿನಲ್ಲಿ ನನಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ತಡವಾಗಿಯಾದರೂ ಸರ್ಕಾರ ನನ್ನ ಸೇವೆ ಗುರುತಿಸಿರುವುದು ಹರ್ಷ ಉಂಟು ಮಾಡಿದೆ ಎಂದರು.
ಕಳೆದ 2011ರಲ್ಲಿ ಆಗಿನ ಮುಖ್ಯಮಂತ್ರಿ ಸದಾನಂದಗೌಡ, ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ಸುನೀಲಕುಮಾರ ಕಾರ್ಕಳ ಅವರು ನಾನು ಬರೆದ “ಸ್ನೇಹ ಸರಪಳಿ’ ಪುಸ್ತಕವನ್ನು ಬಿಡುಗಡೆ ಮಾಡಿದ್ದರು. ಆದರೆ ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸುನೀಲಕುಮಾರ ಅವರಿಂದ ನನಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ವಿಶೇಷ ಎಂದರು.
ಈಡಿಗ ಸಮಾಜದ ತಾಲೂಕು ಅಧ್ಯಕ್ಷ ವಿನೋದ ಗುತ್ತೇದಾರ, ಪ್ರಧಾನ ಕಾರ್ಯದರ್ಶಿ ಕಾಶಿನಾಥ ಗುತ್ತೇದಾರ, ಮುಖಂಡರಾದ ರಮಣಾ ರೆಡ್ಡಿ, ಶ್ಯಾಮ ಮುಕ್ತೇದಾರ, ವೆಂಕಟೇಶ ಕಡೇಚೂರ, ಹುಸನಯ್ಯ ಗುತ್ತೇದಾರ ಇದ್ದರು.