Advertisement

ಅರಣ್ಯ ಮಹಾವಿದ್ಯಾಲಯಕ್ಕೆ ಅತ್ಯುನ್ನತ ಪ್ರಶಸ್ತಿ

05:13 PM Aug 16, 2020 | Suhan S |

ಶಿರಸಿ: ಭಾರತ ಸರ್ಕಾರದ ಪರ್ಯಾವರಣ ಮತ್ತು ಅರಣ್ಯ ಮಂತ್ರಾಲಯದ ಅಂಗ ಸಂಸ್ಥೆ ಡೆಹರಾಡೂನ್‌ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಪರಿಷತ್‌ ಕೊಡ ಮಾಡುವ ರಾಷ್ಟ್ರೀಯ ಮಟ್ಟದ ಅರಣ್ಯ ಸಂಶೋಧನೆಯ ಅತ್ಯುನ್ನತ ಪ್ರಶಸ್ತಿ ಶಿರಸಿ ಅರಣ್ಯ ಮಹಾವಿದ್ಯಾಲಯಕ್ಕೆ ಲಭಿಸಿದೆ. ದೇಶದ ಈ ಮಹತ್ವದ ಪ್ರಶಸ್ತಿಯನ್ನು ಮೊದಲ ಬಾರಿಗೆ ಅರಣ್ಯ ಕಾಲೇಜು ದಕ್ಕಿಸಿಕೊಂಡಿದೆ.

Advertisement

ಇಡೀ ದೇಶದಲ್ಲಿರುವ ಸುಮಾರು 30 ಅರಣ್ಯ ಕಾಲೇಜು, ಅರಣ್ಯ ಸಂಶೋಧನಾ ಕೇಂದ್ರಗಳ ವಿವಿಧ ಚಟುವಟಿಕೆಗಳನ್ನು ಆಧರಿಸಿ ಅತ್ಯಂತ ಗಮನಾರ್ಹ ಸಂಶೋಧನೆಗಳನ್ನು ಕೈಗೊಂಡು ಉನ್ನತ ಸಾಧನೆ ಮಾಡಿರುವ ಅರಣ್ಯ ಕಾಲೇಜಿಗೆ ಪ್ರಶಸ್ತಿ ಘೋಷಿಸಲಾಗಿದೆ. ಈ ಪ್ರಶಸ್ತಿ 25 ಸಾವಿರ ರೂ. ಮೊತ್ತ ಜೊತೆಗೆ ರಾಷ್ಟ್ರೀಯ ಫಲಕವನ್ನು ಹೊಂದಿರುತ್ತದೆ. ನಂತರದ ದಿನಗಳಲ್ಲಿ ಡೆಹರಾಡೂನ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುತ್ತದೆ.

ಕಾಲೇಜು ನಡೆಸಿರುವ ಸಂಶೋಧನಾ ಚಟುವಟಿಕೆಗಳು, ದೇಶದ ವಿವಿಧ ಸಂಶೋಧನಾ ಸಂಸ್ಥೆಗಳ ಜೊತೆಗೂಡಿ ಕೈಗೊಂಡ ಸಂಶೋಧನೆಗಳು, ಕಾಲೇಜಿನ ವಿದ್ಯಾರ್ಥಿಗಳು ಅರಣ್ಯ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆ ಕಾರ್ಯಗಳಲ್ಲಿ ಕೈಗೊಂಡ ಕೆಲಸಗಳು, ಕಾಲೇಜಿನ ಸಿಬ್ಬಂದಿ ಬಾಹ್ಯ ಅನುದಾನದಿಂದ ನಡೆಸಿರುವ ಸಂಶೋಧನೆಗಳು, ಪ್ರಕಟಗೊಂಡ ಸಂಶೋಧನಾ ಲೇಖನಗಳು, ಕಾಲೇಜಿನ ಸಿಬ್ಬಂದಿಗೆ ದೊರಕಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾನ್ಯತೆ, ರಾಷ್ಟ್ರೀಯ ಅರಣ್ಯ ನೀತಿ, ರಾಷ್ಟ್ರೀಯ ಪರಿಸರ ನೀತಿ ಇವುಗಳನ್ನು ರೂಪಿಸಲು ಸಿಬ್ಬಂದಿ ಮಾಡಿರುವ ಕೊಡುಗೆಗಳನ್ನು, ಕಳೆದ ಮೂರು ದಶಕಗಳಿಂದ ಪಶ್ಚಿಮಘಟ್ಟದ ಅರಣ್ಯಸಂಪನ್ಮೂಲಗಳ ಸಮೀಕ್ಷೆ, ನಕ್ಷೆ ತಯಾರಿ, ಸಂಶೋಧನೆ ಮತ್ತು ಉಪಯೋಗಗಳ ಕುರಿತು ಅತಿ ಉಪಯುಕ್ತ ಸಂಶೋಧನೆಗಳನ್ನು ನಡೆಸಿರುವುದು, ಪಶ್ಚಿಮಘಟ್ಟದಲ್ಲಿ ಸಿಗುವ ಕೆಂಪು ದೇವದಾರಿ ವೃಕ್ಷದಿಂದ ಕ್ಯಾನ್ಸರ್‌ ನಿರೋಧಕ ಔಷಧ ಕಂಡು ಹಿಡಿದಿರುವುದು, ಅದಕ್ಕಾಗಿ ದೊರೆತ ಅಂತಾರಾಷ್ಟ್ರೀಯ ಪೇಟೆಂಟ್‌, ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಟ್ಟು ಕೃಷಿ ಮಾಡಬಹುದಾದ ಬಿದಿರುಗಳ ಸಂಶೋಧನೆ, ದೂರಸಂವೇದಿ ಮತ್ತು ಜಿಐಎಸ್‌ ತಂತ್ರಜ್ಞಾನ ಉಪಯೋಗಿಸಿ ಉತ್ತರ ಕನ್ನಡ ಜಿಲ್ಲೆಯ ನಕ್ಷೆ ತಯಾರಿ ಮಾಡಿ ಜಲಸಂಪನ್ಮೂಲಗಳ ಬಗೆಗೆ ಮತ್ತು ಮಣ್ಣಿನ ಇಂಗಾಲದ ಬಗೆಗೆ ಸಂಶೋಧನೆ, ರಾಮಪತ್ರೆ ಜಡ್ಡಿಗಳ ಸಮೀಕ್ಷೆ ಮತ್ತು ಸಂರಕ್ಷಣಾ ಚಟುವಟಿಕೆಗಳು, ಕಾಡು ಮರಗಳ ನರ್ಸರಿಯಲ್ಲಿ ಕಾಣಬಹುದಾದ ರೋಗ ಮತ್ತು ಕೀಟ ಬಾಧೆ ನಿರ್ವಹಿಸುವಲ್ಲಿ ಬೇಕಾದ ಸಂಶೋಧನೆಯನ್ನು ನಡೆಸಿರುವುದು, ಜೈವಿಕ ಇಂಧನಗಳ ಸಂಶೋಧನೆ, ಜೈವಿಕ ಇಂಧನ ನೀಡುವ ಪ್ರಭೇದಗಳ ಅಭಿವೃದ್ಧಿ, ಅಪ್ಪೆಮಿಡಿ ತಳಿ ಸಂರಕ್ಷಣೆ ಮತ್ತು ಅಭಿವೃದ್ಧಿ, ಕೃಷಿ ಅರಣ್ಯ ಮಾದರಿಗಳ ಸುಧಾರಣೆ, ಅರಣ್ಯ ಬೀಜ ಸಂರಕ್ಷಣೆ, ಅರಣ್ಯ ಜಿನ್‌ ಬ್ಯಾಂಕ್‌ಗಳ ಅಭಿವೃದ್ಧಿ, ಪಶ್ಚಿಮ ಘಟ್ಟದಲ್ಲಿ ದೊರಕುವ ಔಷಧ ಸಸ್ಯಗಳ ಸಮೀಕ್ಷೆ ತಳಿಯ ಅಭಿವೃದ್ಧಿ ಮತ್ತು ರಾಸಾಯನಿಕಗಳ ಬಗೆಗೆ ಸಂಶೋಧನೆ, ಸಾಗವಾನಿ, ಶ್ರೀಗಂಧ, ರಕ್ತಚಂದನ, ಬಿದಿರು, ಚೌಬೀನೆ ಮರಗಳ ಅಭಿವೃದ್ಧಿ ಸೇರಿದಂತೆ ಇತರ ಚಟುವಟಿಕೆಗಳನ್ನೂ ಪರಿಶೀಲಿಸಿ ಪ್ರಶಸ್ತಿ ಘೋಷಿಸಲಾಗಿದೆ. ಉಪನ್ಯಾಸಕ ಶ್ರೀಧರ್‌ ಭಟ್‌ರಿಗೆ ವನ್ಯಜೀವಿ ಸಂರಕ್ಷಣೆಯಲ್ಲಿ ಕೊಡಮಾಡುವ ಕಾರ್ಲ್ ಝೀಯಿಸ್‌ ಪ್ರಶಸ್ತಿ, ಡಾ| ಆರ್‌ ವಾಸುದೇವ ಇವರಿಗೆ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ನವದೆಹಲಿ ಕೊಡಮಾಡುವ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ, ಅಂತಾರಾಷ್ಟ್ರೀಯ ಪೇಟೆಂಟ್‌ ಕೂಡ ಉಲ್ಲೇಖನೀಯ.

Advertisement

Udayavani is now on Telegram. Click here to join our channel and stay updated with the latest news.

Next