ಮುಂಬಯಿ, ಅ. 4: ಸಮಾಜಮುಖೀ ಚಿಂತನೆಗಳಿಂದ ನಿರಂತರವಾಗಿ ಸಮಾಜಕ್ಕಾಗಿ ನಾನು ಏನು ಮಾಡಲು ಸಾಧ್ಯ ಎಂದು ಚಿಂತಿಸುವವರು ಬಹಳ ವಿರಳ. ಆ ನಿಟ್ಟಿನಲ್ಲಿ ನಿಸ್ವಾರ್ಥವಾಗಿ ದುಡಿಯುವವರನ್ನು ಸಂಘ-ಸಂಸ್ಥೆಗಳು ಗುರುತಿಸಿ ಸಮ್ಮಾನಿಸಿದಾಗ ಅವರಿಗೆ ಪ್ರೋತ್ಸಾಹ ನೀಡಿದಾಗ ಮತ್ತಷ್ಟು ಜವಾಬ್ದಾರಿಯಿಂದ, ಉತ್ಸಾಹದಿಂದ ಅವರು ಕೆಲಸ ಮಾಡಲು ಸಾಧ್ಯವಾಗುತ್ತದೆ.
ಲಯನ್ ಜಯರಾಮ ಶೆಟ್ಟಿ ಅವರು ಕಳೆದ ಅನೇಕ ದಶಕಗಳಿಂದ ಸಮಾಜಪರ ಕಾರ್ಯಗಳನ್ನು ಮಾಡುತ್ತಾ ಬಂದಿರುವುದನ್ನು ನಾವು ನೋಡುತ್ತಾ ಬಂದಿದ್ದೇವೆ. ಅವರಿಗೆ ಇಂದು ಸನ್ಮಾನ ಮಾಡಿರುವುದು ಅರ್ಥಪೂರ್ಣ ಎಂದು ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ| ಆರ್. ಕೆ. ಶೆಟ್ಟಿ ಅವರು ಅಭಿಪ್ರಾಯಪಟ್ಟರು.
ಅವರು ಅ. 2ರಂದು ತುಳು ಕನ್ನಡಿಗರ ಹಿತಚಿಂತಕರ ವೇದಿಕೆಯವರು ಆಯೋಜಿಸಿದ್ದ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಸಂಚಾಲಕತ್ವದಲ್ಲಿ ಶ್ರೀ ಅನಂತಶಯನ ಬಂಟ ಮಹಿಳಾ ಯಕ್ಷಗಾನ ಕಲಾಮಂಡಳಿ ಕಾರ್ಕಳ ತಂಡದಿಂದ ತಾಳಮದ್ದಲೆ ಹಾಗೂ ಸಮ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು.
ಇನ್ನೋರ್ವ ಅತಿಥಿ ಉದ್ಯಮಿ ಕೆ. ಎಂ. ಶೆಟ್ಟಿ ಅವರು ಮಾತನಾಡಿ, ಯಕ್ಷಗಾನ ಮತ್ತು ತಾಳಮದ್ದಲೆಯನ್ನು ಮುಂಬಯಿಯಂಥ ಮಹಾನಗರದಲ್ಲಿ ತುಳು ಕನ್ನಡಿಗರು ಜೀವಂತವಾಗಿರಿಸಿರುವುದು ಅಭಿಮಾನದ ಸಂಗತಿ. ಇವತ್ತು ಈರ್ವರು ಗಣ್ಯರನ್ನು ಅವರ ಸಮಾಜಸೇವೆಯನ್ನು ಗುರುತಿಸಿ ಸಮ್ಮಾನಿಸಿರುವುದು ಖುಷಿ ತಂದಿದೆ. ಲಯನ್ ಜಯರಾಮ ಶೆಟ್ಟಿ ಅವರ ಕಾರ್ಯವೈಖರಿಯನ್ನು ನಾನು ಹಲವಾರು ವರ್ಷದಿಂದ ನೋಡುತ್ತಾ ಬಂದಿದ್ದೇನೆ. ಮರೋಲ್ ಪರಿಸರದಲ್ಲಿ ಮಾತ್ರವಲ್ಲ ಬಂಟ ಸಮುದಾಯದಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡು ನಿರಂತರವಾಗಿ ಸೇವೆಯನ್ನು ಸಲ್ಲಿಸಿದವರು ಎಂದರು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಲಯನ್ ಜಯರಾಮ ಶೆಟ್ಟಿ ಅವರು ನನ್ನ ಸಮಾಜಮುಖೀ ಚಿಂತನೆಗಳನ್ನು ಗುರುತಿಸಿ ಇಂದಿನ ದಿನ ತುಳು ಕನ್ನಡಿಗರ ಹಿತಚಿಂತಕರ ವೇದಿಕೆಯಲ್ಲಿ ಮಾಡಿದ ಸಮ್ಮಾನವನ್ನು ಸ್ವೀಕರಿಸಿ ಧನ್ಯನಾಗಿದ್ದೇನೆ. ಅನಿವಾರ್ಯ ಕಾರಣದಿಂದ ನಾನು ಹುಟ್ಟೂರಿನತ್ತ ಮುಖ ಮಾಡಿದ್ದರೂ ತಮ್ಮೆಲ್ಲರ ಪ್ರೀತಿಯನ್ನು ಹೊತ್ತುಕೊಂಡು ಹೋಗುತ್ತಿದ್ದೇನೆ ಎಂದು ನುಡಿದರು.
ವೇದಿಕೆಯಲ್ಲಿ ಉದ್ಯಮಿ ಸಮಾಜ ಸೇವಕ ಅಪ್ಪಣ್ಣ ಶೆಟ್ಟಿ, ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸುಭಾಸ್ ಶೆಟ್ಟಿ, ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ನ್ಯಾಯವಾದಿ ರತ್ನಾಕರ ಶೆಟ್ಟಿ, ನ್ಯಾಯವಾದಿ ಗುಣಕರ ಶೆಟ್ಟಿ, ಪೊವಾಯಿ ಕನ್ನಡ ಸಂಘದ ಮಾಜಿ ಅಧ್ಯಕ್ಷ, ಉದ್ಯಮಿ ಡಿ. ಕೆ. ಶೆಟ್ಟಿ, ಪೊವಾಯಿ ಕನ್ನಡ ಸಂಘದ ಅಧ್ಯಕ್ಷರಾದ ಅಶೋಕ್ ಶೆಟ್ಟಿ, ಸಾಂತೂರು, ಲಯನ್ ಶೋಭಾ ಶಂಕರ ಶೆಟ್ಟಿ, ಉದ್ಯಮಿ ಶಂಕರ ಶೆಟ್ಟಿ, ರಂಗನಟ ಭಾಸ್ಕರ ಸುವರ್ಣ ಸಸಿಹಿತ್ಲು, ಉದ್ಯಮಿ ವೇಣುಗೋಪಾಲ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು. ಸಾಹಿತಿ, ರಂಗನಟ, ಸಂಘಟಕ ಪೇತ್ರಿ ವಿಶ್ವನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು