ಹೊಸದಿಲ್ಲಿ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೋರಾ ದಲ್ಲಿ 40 ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಗೆ ಬಳಸಲಾಗಿರುವ ಆರ್‌ಡಿಎಕ್ಸ್ ಸ್ಫೋಟಕವನ್ನು ಗಡಿಯಾಚೆಯಿಂದ ಕಳ್ಳಸಾಗಣೆ ಮಾಡಿ ತರಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಶಂಕಿಸಿದೆ.
ಜಮ್ಮು ಕಾಶ್ಮೀರದಲ್ಲಿ ಕಳೆದ ಹತ್ತು ವರ್ಷಗಳಲ್ಲೇ ಮೊದಲ ಬಾರಿಗೆ ಉಗ್ರ ಕೃತ್ಯಕ್ಕೆ ಆರ್‌ಡಿಎಕ್ಸ್ ಸ್ಫೋಟಕವನ್ನು ಆವಂತಿಪುರ ದಾಳಿಯಲ್ಲಿ ಬಳಸಲಾಗಿರುವುದು ಕಂಡುಬಂದಿದೆ ಎಂದು NIA ಹೇಳಿದೆ.
ಈ ನಡುವೆ ಇಂದು ಶನಿವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಸರ್ವ ಪಕ್ಷಗಳ ಸಭೆಯನ್ನು ಕರೆದಿದೆ. ಈ ಸಭೆಯಲ್ಲಿ ಪುಲ್ವಾಮಾ ಉಗ್ರದಾಳಿಗೆ ದೇಶದ ಪ್ರತಿಕ್ರಿಯೆ ಸ್ಪಷ್ಟವಾಗಿ ಪ್ರಕಟವಾಗಲಿದೆ. ಸಭೆಯು ಸಂಸತ್ತಿನ ಗ್ರಂಥಾಲಯದಲ್ಲಿ ಬೆಳಗ್ಗೆ 11 ಗಂಟೆಯ ಹೊತ್ತಿಗೆ ಆರಂಭವಾಗಲಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರು ಈ ಸರ್ವ ಪಕ್ಷ ಸಭೆಯನ್ನು ಕರೆದಿದ್ದಾರೆ.
ಪುಲ್ವಾಮಾ ದಾಳಿಯ ವಿವರಗಳನ್ನು ಸಭೆಯಲ್ಲಿ ಸರ್ವ ಪಕ್ಷಗಳಿಗೆ ನೀಡಲಾಗುವುದಲ್ಲದೆ ಸರಕಾರ ಈ ವರೆಗೆ ತೆಗೆದುಕೊಂಡಿರುವ ಕ್ರಮಗಳನ್ನು ಕೂಡ ವಿವರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕಟ್ಟೆಚ್ಚರದಿಂದ ಇರುವಂತೆ ಭದ್ರತಾ ಪಡೆಗಳಿಗೆ ಸೂಚಿಸಲಾಗಿದೆ. ರಾಜ್ಯದ ಅನೇಕ ಸೂಕ್ಷ್ಮ ಭಾಗಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಮೊಬೈಲ್ ಸೇವೆಗಳನ್ನು ಅಮಾನತು ಪಡಿಸಲಾಗಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.