Advertisement

ಸಾವು ನೋವಿನ ನಂತರ ಎಚ್ಚೆತ್ತ ಪೊಲೀಸ್

12:57 AM Aug 29, 2019 | Team Udayavani |

ಬೆಂಗಳೂರು: ಐಎಸ್‌ಐ ಮುದ್ರೆಯಿರುವ, ಶಿರವನ್ನು ಪೂರ್ತಿ ಕಾಪಾಡುವ ಹೆಲ್ಮೆಟ್‌ ಧರಿಸಬೇಕು ಎಂಬ ನಿಯಮ ಉಲ್ಲಂಘನೆ ಪೊಲೀಸರ ಜೀವಕ್ಕೆ ಅಪಾಯ ತಂದೊಡ್ಡಿರುವ ಎರಡು ಪ್ರತ್ಯೇಕ ಘಟನೆಗಳು ನಗರ ಸಂಚಾರ ಪೊಲೀಸರನ್ನು ಕಡೆಗೂ ಜಾಗೃತಗೊಳಿಸಿವೆ.

Advertisement

ಪೊಲೀಸ್‌ ಅಲ್ಲದೆ ಸಾರ್ವಜನಿಕರೂ ಅರ್ಧ ಹೆಲ್ಮೆಟ್‌ ಧರಿಸಿ ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿರುವ ಪ್ರಕರಣಗಳು ಆಗಾಗ ಘಟಿಸುತ್ತಲೇ ಇವೆ. ಅರ್ಧ ಹೆಲ್ಮೆಟ್‌ ಧರಿಸಿ ಕಾನೂನು ಉಲ್ಲಂ ಸಿ ಅವಘಡಗಳಿಗೆ ಅನುವಾಗುವ ಪ್ರಕರಣಗಳು ಸಾರ್ವಜನಿಕರನ್ನು ಮಾತ್ರವಲ್ಲ, ಕಾನೂನು ಕಾಯುವ ಪೊಲೀಸರನ್ನೂ ಕಾಡುತ್ತಿರುವುದು ಈ ಜಾಗೃತಿಗೆ ಕಾರಣವಾಗಿದೆ.

ಅರ್ಧ ಹೆಲ್ಮೆಟ್‌ ಧರಿಸಿದ ವೇಳೆ ಉಂಟಾದ ಅಪಘಾತದಿಂದ ಒಬ್ಬ ಕಾನ್‌ಸ್ಟೆಬಲ್‌ ಸಾವು ಹಾಗೂ ಮತ್ತೂಬ್ಬ ಕಾನ್‌ಸ್ಟೆಬಲ್‌ ಕೋಮಾ ಸ್ಥಿತಿ ತಲುಪಿರುವ ಪ್ರತ್ಯೇಕ ಘಟನೆಗಳು ಇತ್ತೀಚೆಗೆ ನಡೆದಿರುವುದು ಸಂಚಾರ ಪೊಲೀಸರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ.

ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಪೊಲೀಸರು ಅರ್ಧ ಹೆಲ್ಮೆಟ್‌ ಧರಿಸಿದ್ದರೆ ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸಿ ದಂಡ ವಿಧಿಸುವಂತೆ ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಡಾ.ಬಿ.ಆರ್‌.ರವಿಕಾಂತೇಗೌಡ ಆದೇಶಿಸಿದ್ದಾರೆ. ಆದರೆ, ಈ ಆದೇಶ ಕೇವಲ “ಕಾಗದಕ್ಕೆ ಸೀಮಿತ’ವಾಗಲಿದೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

1988ರ ಕೇಂದ್ರ ಮೋಟಾರು ವಾಹನ ಕಾಯಿದೆಯ 230ನೇ ನಿಯಮದ ಅನ್ವಯ ದ್ವಿಚಕ್ರ ವಾಹನ ಸವಾರರು ಪ್ರಯಾಣದ ವೇಳೆ ಕಡ್ಡಾಯವಾಗಿ ಐಎಸ್‌ಐ ಗುರುತಿನ ಪೂರ್ಣ ಪ್ರಮಾಣದ ಹೆಲ್ಮೆಟ್‌ ಧರಿಸಬೇಕು. ಜತೆಗೆ ಸುಪ್ರೀಂಕೋರ್ಟ್‌ ಕೂಡ ಈ ಸಂಬಂಧ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ. ಆದರೂ* ನಿಯಮ ಮತ್ತು ಆದೇಶದ ಪಾಲನೆ ಮಾತ್ರ ಆಗುತ್ತಿಲ್ಲ.

Advertisement

ಪ್ರತಿ ಬಾರಿ ಸಂಚಾರ ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸುವ ಅಧಿಕಾರಿಗಳು, ಈ ಆದೇಶಗಳನ್ನು ಹೊರಡಿಸುತ್ತಾರೆ. ಕೆಲವು ದಿನಗಳ ಮಟ್ಟಿಗೆ ಆದೇಶಗಳು ಕಟ್ಟುನಿಟ್ಟಾಗಿ ಪಾಲನೆ ಆಗುತ್ತವೆ. ಆದರೆ, ಆಯುಕ್ತರು ಬದಲಾದ ಬಳಿಕ ಯಥಾ ಪ್ರಕಾರ ನಿಯಮಗಳ ಉಲ್ಲಂಘನೆ ಮುಂದುವರಿಯುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮೂಲ ಸಮಸ್ಯೆಗೆ ಕೈ ಹಾಕಿಲ್ಲ!: ಅರ್ಧ ಹೆಲ್ಮೆಟ್‌ ಧರಿಸುವುದರಿಂದ ಪ್ರಾಣಾಪಾಯ ಉಂಟಾಗಲಿದೆ ಎಂಬ ಸೂಚನೆಗಳಿದ್ದರೂ ಪೊಲೀಸ್‌ ಸಿಬ್ಬಂದಿ ಅರ್ಧ ಹೆಲ್ಮೆಟ್‌ ಧರಿಸುವ ಉದಾಹರಣಗಳಿವೆ. ತಲೆ ಹಾಗೂ ಮುಖವನ್ನು ಪೂರ್ಣ ಪ್ರಮಾಣದಲ್ಲಿ ರಕ್ಷಿಸುವ ಹೆಲ್ಮೆಟ್‌ ಧರಿಸಬೇಕೆಂಬ ನಿಯಮವನ್ನು ಸಾರ್ವಜನಿಕರೂ ಉಲ್ಲಂ ಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅರ್ಧ ಹೆಲ್ಮೆಟ್‌ ಧರಿಸುವುದಕ್ಕೆ ಕಡಿವಾಣ ಹಾಕಲು ಇರುವ ಮಾರ್ಗಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆ ಸೇರಿದಂತೆ ಸಕ್ಷಮ ಪ್ರಾಧಿಕಾರಗಳು ಮುಂದಾಗದಿರುವುದು ಸಮಸ್ಯೆಯ ಜೀವಂತಿಕೆಗೆ ಹಿಡಿದ ಕೈಗನ್ನಡಿಯಾಗಿದೆ.

ಮಾರಾಟ ನಿರಾತಂಕ: 2018ರಲ್ಲಿ ಐಎಸ್‌ಐ ಮುದ್ರೆ ಇರುವ ಹೆಲ್ಮೆಟ್‌ ಕಡ್ಡಾಯ ವಿಚಾರ ಮುನ್ನೆಲೆಗೆ ಬಂದಾಗ ಸಂಚಾರ ಪೊಲೀಸರು, ನಗರದ ವಿವಿಧ ಭಾಗಗಳಲ್ಲಿ ಇರುವ ಹೆಲ್ಮೆಟ್‌ ಮಾರಾಟಗಾರರ ಮಳಿಗೆಗಳ ಮೇಲೆ ದಾಳಿ ನಡೆಸಿದ್ದರು. ಬಳಿಕ ಈ ಪ್ರಕ್ರಿಯೆ ಮುಂದುವರಿಯಲೇ ಇಲ್ಲ. ಪರಿಣಾಮವೇ ಇಂದಿಗೂ ಅರ್ಧ ಹೆಲ್ಮೆಟ್‌ಗಳ ಮಾರಾಟ ನಿರಾಂತಕವಾಗಿ ಸಾಗಿದೆ ಎಂದು ಹೇಳಲಾಗುತ್ತಿದೆ.

ರಾಜ್ಯ ಸರ್ಕಾರ ಈ ಬಗ್ಗೆ ಪೊಲೀಸ್‌ ಇಲಾಖೆ ಸೇರಿದಂತೆ ಸಕ್ಷಮ ಪ್ರಾಧಿಕಾರಗಳ ಜತೆ ಚರ್ಚಿಸಿ ಅರ್ಧ ಹೆಲ್ಮೆಟ್‌ ರಾಜ್ಯದಲ್ಲಿ ತಯಾರಿಸುವುದು, ಇಲ್ಲವೇ ರಾಜ್ಯದಲ್ಲಿ ಮಾರಾಟ ಸಂಪೂರ್ಣ ನಿಷೇಧ ಹೇರುವ ಕಠಿಣ ಕ್ರಮ ಕೈಗೊಂಡರೆ. ಸಾರ್ವಜನಿಕರು ಅನಿವಾರ್ಯವಾಗಿ ಪೂರ್ಣ ಹೆಲ್ಮೆಟ್‌ ಧರಿಸಲು ಮುಂದಾಗುತ್ತಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಪೊಲೀಸರಿಗೇ ಅರ್ಧ ಹೆಲ್ಮೆಟ್‌ ನೀಡ್ತಾರೆ!: ಪೊಲೀಸ್‌ ಇಲಾಖೆ ವತಿಯಿಂದ ಸಿಬ್ಬಂದಿ ಕೂಡ ಕರ್ನಾಟಕ ಪೊಲೀಸ್‌ ಲಾಂಛನ ಹೊಂದಿರುವ ಹೆಲ್ಮೆಟ್‌ ಖರೀದಿಸುತ್ತಾರೆ. ಸರ್ಕಾರದಿಂದ ಅನುಮತಿ ಪಡೆದ ಮಳಿಗೆಯಿಂದಲೇ ಆ ಹೆಲ್ಮೆಟ್‌ ಖರೀದಿ ಮಾಡಲಾಗುತ್ತದೆ. ಆದರೆ, ಅದು ಅರ್ಧ ಹೆಲ್ಮೆಟ್‌ ಆಗಿರುತ್ತದೆ. ಹೀಗಾಗಿ, ತಯಾರಕರೇ ಪೂರ್ಣ ಪ್ರಮಾಣದ ಹೆಲ್ಮೆಟ್‌ ತಯಾರಿಸಿ ಸಿಬ್ಬಂದಿಗೆ ಮಾರಾಟ ಮಾಡಬಹುದಿತ್ತು. ಆದರೆ ಈ ಕಾರ್ಯ ನಡೆಯಲಿಲ್ಲ. ಈ ಬಗ್ಗೆ ಇಲಾಖೆಯೂ ಗಂಭೀರವಾಗಿ ಚಿಂತಿಸಿಲ್ಲ ಎಂದು ಸಿಬ್ಬಂದಿಯೊಬ್ಬರು ಹೇಳಿದರು.

ಕಾನೂನನ್ನು ಎಲ್ಲಾ ದ್ವಿಚಕ್ರ ವಾಹನ ಸವಾರರು ಸ್ವಯಂಪ್ರೇರಣೆಯಿಂದ ಪಾಲಿಸಬೇಕು. ಪ್ರತಿಯೊಬ್ಬರ ಜೀವ ರಕ್ಷಣೆ ಅವರ ಕೈಯಲ್ಲಿಯೇ ಇರುತ್ತದೆ. ಹೀಗಾಗಿ, ಸರ್ಕಾರ ರೂಪಿಸಿರುವ ನಿಯಮವನ್ನು ಗೌರವಿಸಿ ನೈತಿಕತೆಯಿಂದ ಪಾಲಿಸಬೇಕು.
-ಪ್ರೊ.ಎಂ.ಎನ್‌ ಶ್ರೀಹರಿ, ಸಂಚಾರ ತಜ್ಞ

* ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next