Advertisement

ಬಿದ್ದೀಯಬ್ಬೇ ಜೋಪಾನ…

09:12 AM Jan 30, 2020 | mahesh |

ಮಾನಸಿಕವಾಗಿ ಕುಗ್ಗಿರುವ ಹೆಣ್ಣುಮಕ್ಕಳನ್ನು ಖೆಡ್ಡಾಗೆ ಬೀಳಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿರುವ ತೋಳಗಳೇನೂ ಕಡಿಮೆ ಇಲ್ಲ. ತಾನೊಬ್ಬ ಕಥೆಗಾರ, ಸಿನಿಮಾ ನಿರ್ದೇಶಕ, ಸಮಾಜಸೇವಕನೆಂದು ಸೋಗು ಹಾಕಿಕೊಂಡು ತಾನೇ ಅವರ ಎಲ್ಲಾ ಸಮಸ್ಯೆಯನ್ನು ನಿವಾರಿಸಿ ಉದ್ಧಾರ ಮಾಡಲು ಬಂದವನೆಂದು, ಅವರ ಪ್ರತಿಭೆಗೆ ಅವಕಾಶ ನೀಡುವೆನೆಂದು ನಂಬಿಸುವ ಜನರೂ ಸೋಷಿಯಲ್‌ ಮೀಡಿಯಾದಲ್ಲಿ ಇದ್ದಾರೆ.

Advertisement

ಅವನು, ಫೇಸ್‌ಬುಕ್‌ನಲ್ಲಿ ಬಹಳ ಜನರ ಬಳಗ ಹೊಂದಿರುವವ. ಅವನ ಸ್ಟೇಟಸ್‌ಗಾಗಿಯೇ ಕಾದು ಕುಳಿತಿರುವವರಿದ್ದಾರೆ. ಅವನನ್ನು ಫಾಲೋ ಮಾಡುವ ಗುಂಪಿನಲ್ಲಿ ಮಹಿಳೆಯರ ದೊಡ್ಡ ದಂಡೇ ಇದೆ. ಅದಕ್ಕೆ ಕಾರಣ, ಅವನಿಗೆ ಹೆಣ್ಣುಮಕ್ಕಳ ಬಗ್ಗೆ, ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಂತಃಕರಣ ಜಾಸ್ತಿ. ಪ್ರಸಕ್ತ ವಿದ್ಯಮಾನಗಳಲ್ಲಿ ಮಹಿಳಾ ವಿರೋಧಿ ಘಟನೆ ನಡೆದರೆ, ತಕ್ಷಣ ಫೇಸ್‌ಬುಕ್‌ ವಾಲ್‌ ಮೇಲೆ ಅವುಗಳನ್ನು ಮುಕ್ತವಾಗಿ ಖಂಡಿಸುತ್ತಾನೆ. ಹಾಗೆಯೇ, ಅವನ ಸ್ನೇಹವಲಯದ ಹೆಣ್ಣುಮಕ್ಕಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಸ್ಟೇಟಸ್‌ಗಳನ್ನು ಹಾಕುತ್ತಾನೆ.

ಬೆನ್ನ ಹಿಂದಿನ ಘಟನೆಗಳು
ಅವನ ಮೆಚ್ಚುಗೆ ಗಳಿಸಲಿಕ್ಕಾಗಿಯೇ ತಮ್ಮ ಸಣ್ಣ ಪುಟ್ಟ ಸಾಧನೆಗಳನ್ನು ಅವನ ಗಮನಕ್ಕೆ ತರಲು ಪ್ರಯತ್ನಿಸುವ ಮಹಿಳೆಯರಿದ್ದಾರೆ. ಅವರಲ್ಲಿ ಹೆಚ್ಚಿನವರು ನಿರ್ಲಕ್ಷಕ್ಕೆ ಒಳಗಾದವರು. ಸ್ವಾನುಕಂಪದಲ್ಲಿ ತಮ್ಮನ್ನು ತಾವು ಬೇಯಿಸಿಕೊಂಡವರು. ಅವನ ಸಾಮಾನ್ಯವಾದ ಮೆಚ್ಚುಗೆ ಮಾತಿಗೆ, ಕಳಕಳಿಗೆ ಏನೇನೋ ಅರ್ಥ ಕಲ್ಪಿಸಿಕೊಂಡು, ತಾನು ಅವನಿಗೆ ಬಹಳ ಬೇಕಾದವಳೆಂದು ಭ್ರಮಿಸುತ್ತಾರ. ಇನ್‌ಬಾಕ್ಸ್ ನಲ್ಲಿ ತಮ್ಮ ಮಾತುಗಳು ಹೊರಗಿನವರಿಗೆ ತಲುಪುವುದಿಲ್ಲ ಎಂಬ ನಂಬಿಕೆಯಲ್ಲಿ ಅವನೊಡನೆ ಸಲಿಗೆಯಿಂದ ಮಾತಿಗಿಳಿಯುತ್ತಾರೆ. ಅವನೂ ಯಾವುದೋ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಮಾತಿಗಿಳಿಯುತ್ತಾನೆ. ಅಂಥ ಒಬ್ಬಳ ಮಾತು ಯಾವಾಗ ಹದ್ದು ಮೀರಿತು ಅನ್ನುವ ಅರಿವಿಗೆ ಬರುವ ಮುನ್ನವೇ, ಬೇಕಿದ್ದು- ಬೇಡದ್ದು ಮೆಸೇಜುಗಳು ಇನ್‌ಬಾಕ್ಸ್‌ನಲ್ಲಿ ತುಂಬಿಕೊಂಡಿರುತ್ತವೆ. ಅವಳ್ಳೋ, ಯಾವುದೋ ಕಲ್ಪನಾಲೋಕದಲ್ಲಿ ವಿಹರಿಸುತ್ತಾ ಬಹಳ ಲವಲವಿಕೆಯಿಂದ ತನ್ನ ಇತರ ಕೆಲಸಗಳಲ್ಲಿ ಮಗ್ನಳಾಗಿರುತ್ತಾಳೆ. ಅವಳಿಗೇ ತಿಳಿಯದಂತೆ ಅವಳ ಮೆಸೆಂಜರ್‌ನ ಮಾತುಕತೆಗಳು ಗುಟ್ಟಾಗಿ ಅಲ್ಲಿ ಇಲ್ಲಿ ಹಂಚಿಕೆಯಾಗಿರುತ್ತವೆ. ಎಲ್ಲರೂ ಅವಳ ಬೆನ್ನ ಹಿಂದೆ ಅವಳ ಬಗ್ಗೆ ಗುಸುಗುಸು ಮಾತನಾಡಿಕೊಂಡು ಮತ್ತಷ್ಟು ಜನರಿಗೆ ಹಂಚುತ್ತಾರೆ. ಅವಳು ಸೋಶಿಯಲ್‌ ಮೀಡಿಯಾದಲ್ಲಿ ತಕ್ಕ ಮಟ್ಟಿಗೆ ಈಗಾಗಲೇ ಗಳಿಸಿದ್ದ ಗೌರವ ಮಣ್ಣು ಪಾಲಾಗುತ್ತಿರುತ್ತದೆ. ಅದ್ಯಾವುದರ ಪರಿವೆಯೇ ಅವಳಿಗೆ ಇಲ್ಲದೆ, ಯಾಕೆ ಇತ್ತೀಚೆಗೆ ಜನ ನನ್ನೊಡನೆ ವ್ಯವಹರಿಸಲು ಹಿಂಜರಿಯುತ್ತಾರೆ ಎಂದು ತಲೆಕೆಡಿಸಿಕೊಳ್ಳುತ್ತಾಳೆ.

ಸೆಲೆಬ್ರಿಟಿ ಸೋಗು
ಅದೇ ರೀತಿ ಇನ್ನೊಂದು ಕಡೆ, ಮಾನಸಿಕವಾಗಿ ಕುಗ್ಗಿರುವ ಹೆಣ್ಣುಮಕ್ಕಳನ್ನು ಖೆಡ್ಡಾಗೆ ಬೀಳಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿರುವ ತೋಳಗಳೇನೂ ಕಡಿಮೆ ಇಲ್ಲ. ತಾನೊಬ್ಬ ಕಥೆಗಾರ, ಸಿನಿಮಾ ನಿರ್ದೇಶಕ, ಸಮಾಜಸೇವಕನೆಂದು ಸೋಗು ಹಾಕಿಕೊಂಡು ತಾನೇ ಅವರ ಎಲ್ಲಾ ಸಮಸ್ಯೆಯನ್ನು ನಿವಾರಿಸಿ ಉದ್ಧಾರ ಮಾಡಲು ಬಂದವನೆಂದು, ಅವರ ಪ್ರತಿಭೆಗೆ ಅವಕಾಶ ನೀಡುವೆನೆಂದು ನಂಬಿಸುವ ಜನರೂ ಸೋಷಿಯಲ್‌ ಮೀಡಿಯಾದಲ್ಲಿ ಇದ್ದಾರೆ. ಹೀಗೆ ನಂಬಿಸಿ, ಅವರ ಎಲ್ಲಾ ವೈಯುಕ್ತಿಕ ವಿಷಯಗಳನ್ನೂ ತಿಳಿದುಕೊಂಡು ಅವರ ಮಾನ ಮರ್ಯಾದೆಯನ್ನು ಹರಾಜಿಗಿಡುತ್ತಾರೆ. ಇದ್ಯಾವುದರ ಬಗ್ಗೆ ಎಚ್ಚರವಿಲ್ಲದ ಹೆಂಗಸರಿಗೆ, ಸೆಲೆಬ್ರಿಟಿಯೊಬ್ಬ ತನ್ನ ಬಗ್ಗೆ, ತನ್ನ ಕಥೆಯ ಬಗ್ಗೆ ಆಸಕ್ತಿ ವಹಿಸುತ್ತಿದ್ದಾನೆ ಎನ್ನುವ ವಿಷಯವೇ ಕಿಕ್‌ ಕೊಡುವಂಥದ್ದು. ಅವನು ತಮಗೆ ಕಳಿಸಿದ ಸಾಂತ್ವನದ ಸಾಲುಗಳನ್ನೇ, ಹುಸಿ ಆಶ್ವಾಸನೆಯ ಮಾತುಗಳನ್ನೇ ಬೇರೆ ನೂರು ಹೆಂಗಸರಿಗೆ ಕಾಪಿ ಪೇಸ್ಟ್ ಮಾಡಿ ಕಳಿಸಿರಬಹುದು, ಕಳಿಸಿರುತ್ತಾನೆ ಎನ್ನುವ ಆಲೋಚನೆಯೂ ಬಂದಿರುವುದಿಲ್ಲ.

ಈ ವಿಷಯದಲ್ಲಿ ಒಂದಷ್ಟು ಹೆಂಗಸರೂ ಕಡಿಮೆಯೇನಿಲ್ಲ. ಕೈಯಲ್ಲಿ ಬೇಕಾದಷ್ಟು ದುಡ್ಡಿದೆ. ಮನೆಯಲ್ಲಿ ಯಾರದ್ದೇನೂ ಅಂಕೆಯಿಲ್ಲ ಅನ್ನುವಂಥವರು, ಸಿಕ್ಕ ಸಿಕ್ಕ ಗಂಡಸರನ್ನೆಲ್ಲಾ ಕೊಂಡುಕೊಳ್ಳುವಂತೆ ಆಡುತ್ತಾರೆ. ತಮ್ಮ ಚಪಲಕ್ಕಾಗಿ ಬೇರೆಯವರ ಕುಟುಂಬ ವ್ಯವಸ್ಥೆಯನ್ನು ಹಾಳು ಮಾಡಲೂ ಕೆಲವರು ಹಿಂಜರಿಯುವುದಿಲ್ಲ.

Advertisement

ನಂಬಿ ಕೆಟ್ಟವರುಂಟು
ಎಲ್ಲಕ್ಕಿಂತ ಆತಂಕಕಾರಿಯಾದ್ದೆಂದರೆ ಸಾಕಷ್ಟು ಮಧ್ಯಮವರ್ಗದ ಮಹಿಳೆಯರು, ಮಾನಸಿಕ ಸಾಂತ್ವನಕ್ಕಾಗಿ ಫೇಸ್‌ಬುಕ್‌ನಂಥ ಮಾಧ್ಯಮಗಳನ್ನು ನಂಬಿಕೊಂಡಿದ್ದಾರೆ. ನಿಜಜೀವನದಲ್ಲಿ ಇರುವ ಸ್ವಂತದವರನ್ನು ಕಡೆಗಣಿಸಿ, ದೂರದ ಬೆಟ್ಟದಂತೆ ನುಣ್ಣಗೆ ಕಾಣುವ ಸೋಶಿಯಲ್‌ ಮೀಡಿಯಾ ಎಂಬ ಮಾಯಾಲೋಕವನ್ನು ಸತ್ಯವೆಂದು ಭಾವಿಸಿ, ಅಲ್ಲಿ ಸಿಕ್ಕ ಯಾರನ್ನೋ ನಂಬಿ, ತಮ್ಮೆಲ್ಲಾ ವೈಯಕ್ತಿಕ ವಿವರಗಳನ್ನು ಹೊರಗಿನವರೊಡನೆ ಹಂಚಿಕೊಂಡು ತೊಂದರೆಗೆ ಈಡಾಗುತ್ತಿದ್ದಾರೆ.

ಸಂಸಾರದ ಸಂಕಷ್ಟಗಳಲ್ಲಿ, ವ್ಯವಹಾರಿಕ ಜಗತ್ತಿನ ಬವಣೆಗಳಲ್ಲಿ ಸಿಲುಕಿ ಯಾವುದೋ ಬಲಹೀನ ಕ್ಷಣಗಳಲ್ಲಿ ವೈಯಕ್ತಿಕ ವಿಷಯಗಳನ್ನು ಬೇರೆಯವರೊಡನೆ ಹಂಚಿಕೊಳ್ಳುವುದು ಸಹಜವಾದರೂ, ಕೇಳಿಸಿಕೊಳ್ಳುತ್ತಿರುವ ವ್ಯಕ್ತಿ ನಂಬಿಕೆಗೆ ಅರ್ಹನೇ ಎಂಬುದನ್ನು ಬಹಳ ಎಚ್ಚರಿಕೆಯಿಂದ ಗಮನಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಮಾನಸಿಕ ಭದ್ರತೆಗಾಗಿ ಫೇಸ್‌ಬುಕ್‌ ಸ್ನೇಹಿತರಿಗಿಂತ, ನಿಜಜೀವನದ ಸ್ನೇಹಿತರನ್ನು ನಂಬಿಕೊಳ್ಳುವುದೇ ಕ್ಷೇಮ.

ಈವರೆಗೆ ಹೇಳಿದ್ದರಲ್ಲಿ ಯಾವುದೂ ಕಾಲ್ಪನಿಕ ಘಟನೆಯಲ್ಲ. ಇಂಥ ವಿಷಯಗಳು ಸೋಶಿಯಲ್‌ ಮೀಡಿಯಾದಲ್ಲಿ ಇತ್ತೀಚೆಗೆ ಬಹಳಷ್ಟು ನಡೆಯುತ್ತಿವೆ. ನಿಮ್ಮ ಆಪ್ತರೇ ನಿಮ್ಮ ಮೆಸೇಜ್‌ಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಅಪಾಯವಿದ್ದಂತೆ, ನೀವು ಹ್ಯಾಕರ್‌ಗಳ ಜಾಲದಲ್ಲಿಯೂ ಸಿಲುಕಿಕೊಳ್ಳಬಹುದು.

ಹ್ಯಾಕಿಂಗ್‌ ಕ್ಷೇತ್ರ ಎಷ್ಟು ಮುಂದುವರಿದಿದೆ ಅಂದರೆ, ಅಲ್ಪ ಸ್ವಲ್ಪ ತಲೆ ಉಪಯೋಗಿಸಬಲ್ಲ ಕಂಪ್ಯೂಟರ್‌ ಕ್ಷೇತ್ರದ ಎಂಕ ಸೀನ ನಾಣಿಯೂ ಅವರಿವರ ಮೆಸೆಂಜರ್‌ ಹ್ಯಾಕ್‌ ಮಾಡಿ, ಮೆಸೇಜುಗಳನ್ನು ಓದಬಲ್ಲ. ಅದನ್ನು ಅವರಿವರೊಂದಿಗೆ ಹಂಚಿಕೊಂಡು ವಿಕೃತ ಆನಂದ ಅನುಭವಿಸಬಲ್ಲ.

ಇದೇ ರೀತಿ, ಯಾವುದೋ ಸ್ಟೇಟಸ್‌ಗೆ, ಯಾರೋ ಒಬ್ಬಳು ತುಸು ಸಲಿಗೆಯಿಂದ ಕಮೆಂಟಿಸಿದುದನ್ನು ಓದಿ ಸ್ಟೇಟಸ್‌ ಹಾಕಿದವ, ಅದರಲ್ಲಿ ಮತ್ತೇನೋ ಅರ್ಥ ಹುಡುಕಿ ಅವಳ ಹಿಂದೆ ಬೀಳುವ ಸಂದರ್ಭಗಳೂ ಬೇಕಾದಷ್ಟಿವೆ. ತಿಳಿವಳಿಕೆ ಉಳ್ಳವರು, ಪ್ರಜ್ಞಾವಂತರು ಅನ್ನಿಸಿಕೊಂಡವರೂ ಇಂಥ ಜಾಲಗಳಲ್ಲಿ ಸಿಲುಕುತ್ತಿರುವುದು ಕಳವಳಕಾರಿ. ಎಷ್ಟೋ ಸಂದರ್ಭಗಳಲ್ಲಿ, ಗುರುವಿನ ಸ್ಥಾನದಲ್ಲಿ ಇರುವಂಥವರು ಕೂಡಾ ಕ್ಷಣಮಾತ್ರದಲ್ಲಿ ಬೆತ್ತಲಾಗಿ ಬಿಡುತ್ತಿದ್ದಾರೆ.

ಇನ್‌ಬಾಕ್ಸ್‌ ವೀರರು
ಮಹಿಳೆಯರಿಗೆ ಅತಿ ಹೆಚ್ಚು ತೊಂದರೆ ಕೊಡುವವರು ಇನ್‌ಬಾಕ್ಸ್‌ ವೀರರು. ಪದೇ ಪದೆ ಮೆಸೆಂಜರ್‌ನಲ್ಲಿ ಮೆಸೇಜ್‌ ಮಾಡುವುದು, ನಿಮ್ಮ ನಂಬರ್‌ ಕೊಡಿ, ಪ್ರೈವೇಟ್‌ ಆಗಿ ಸಿಕ್ತೀರಾ ಅಂತೆಲ್ಲ ಕೇಳುತ್ತ ಹಿಂದೆ ಬೀಳುವುದು, ಊಟ ಆಯ್ತಾ, ತಿಂಡಿ ಆಯ್ತಾ, ಯಾಕೆ ಹೊಸ ಫೋಟೊ ಅಪ್‌ಲೋಡ್‌ ಮಾಡ್ತಿಲ್ಲ ಅಂತೆಲ್ಲಾ ಅನವಶ್ಯಕ ಪ್ರಶ್ನೆಗಳನ್ನು ಕೇಳುವವರಿದ್ದಾರೆ. ಫೇಸ್‌ಬುಕ್‌ ಸ್ನೇಹಿತರೆಂಬ ಸೌಜನ್ಯಕ್ಕೆ ಕಟ್ಟುಬಿದ್ದು. ನೀವೇನಾದರೂ ಉತ್ತರಿಸಿದರೋ, ಮುಗಿಯಿತು. (ಎಲ್ಲರೂ ಹಾಗಿರುವುದಿಲ್ಲ ಅನ್ನುವುದೂ ಸತ್ಯ) ಹೆಚ್ಚಿನಂಶ, ಯಾರು ನೇರವಾಗಿ, ವಿಷಯಾಧಾರವಾಗಿ ಪ್ರತಿಕ್ರಿಯಿಸುವುದಿಲ್ಲವೋ, ಅವರೇ ಇನ್‌ಬಾಕ್ಸ್ ನಲ್ಲಿ ಅಶ್ಲೀಲವಾಗಿ ವರ್ತಿಸಿ, ಕಿರಿಕಿರಿ ಉಂಟು ಮಾಡುವವರು. ಇನ್ನೊಂದು ಕಡೆ ತನ್ನ ಸಂಸಾರವನ್ನು ಕಡೆಗಣಿಸಿ, ಮತ್ಯಾರೊಂದಿಗೋ ಭಾವನಾತ್ಮಕವಾಗಿ ಬೆಸೆದುಕೊಂಡು ದ್ವಿಮುಖ ಜೀವನ ನಡೆಸುವವರೂ ಇದ್ದಾರೆ. ಈ ಬೆಳವಣಿಗೆಗಳು ನಿಜಕ್ಕೂ ಆತಂಕಕಾರಿ.

ಈ ವಿಷಯಗಳು ಯೋಚಿಸಿದಷ್ಟೂ ಸರಿ-ತಪ್ಪುಗಳ ಪರಿಧಿಯಾಚೆಗೆ ನಿಲ್ಲುತ್ತವೆ. ಯಾವುದೇ ಮನುಷ್ಯ ನಿಜವಾಗಿ ತನಗೆ ಬೇಕಿರುವುದೇನು ಎಂಬುದರ ಕಡೆ ತಾನಾಗಿಯೇ
ಸ್ಪಷ್ಟತೆ ಕಂಡುಕೊಳ್ಳಬೇಕಿದೆ.

ಇಂಥ ಸಂದರ್ಭದಲ್ಲಿ, ಕಡೆಯದಾಗಿ ಹೇಳಬಹುದಾದ ಮಾತೆಂದರೆ, ಸಾತ್ವಿಕ ಪರಿಚಯ, ಆರೋಗ್ಯಪೂರ್ಣ ಸಂಬಂಧ ಹಾಗೂ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗಬಲ್ಲ ಸಾಮಾಜಿಕ ಜಾಲತಾಣಗಳಿಗೆ ಇನ್ನೊಂದು ಮುಖವೂ ಇದೆ. ಅರೆಕ್ಷಣ ಮೈಮರೆತರೂ ನಮ್ಮನ್ನೇ ಹೊಂಡಕ್ಕೆ ಬೀಳಿಸುವ ಕೂಪವಾಗಿಬಿಡಬಹುದು. ಇಲ್ಲಿ ಹಂಚಿಕೊಂಡ ನಿಮ್ಮ ಭಾವನೆಗಳು, ನಿಮ್ಮನ್ನೇ ಆಟವಾಡಿಸಲು ತೊಡಗಬಹುದು ಎಚ್ಚರ.

ಹಂಚಿಕೊಳ್ಳುವ ಮುನ್ನ…
-ಫೇಸ್‌ಬುಕ್‌ ಎಂಬುದು ನಿಮ್ಮ ಪರ್ಸನಲ್‌ ಡೈರಿ ಅಲ್ಲ. ಇದೊಂದು “ತೆರೆದ ಪುಸ್ತಕ’. ಇಲ್ಲಿ ನೀವು ಬರೆಯುವುದನ್ನು ಯಾರು ಬೇಕಾದರೂ ಓದಬಹುದು. ಹಾಗಾಗಿ, ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರವಿರಲಿ.

-ಖುಷಿಯ ಕ್ಷಣಗಳನ್ನು ಹಂಚಿಕೊಳ್ಳುವುದು ತಪ್ಪಲ್ಲ. ಆದರೆ, ಕೆಲವೊಂದು ಅತ್ಯಂತ ಖಾಸಗಿ ವಿಷಯಗಳನ್ನು ಫೇಸ್‌ಬುಕ್‌ನಲ್ಲಿ ಹಾಕಬೇಡಿ.

-ಫ್ರೆಂಡ್‌ ರಿಕ್ವೆಸ್ಟ್‌ಗಳನ್ನು ಒಪ್ಪಿಕೊಳ್ಳುವಾಗ, ಮ್ಯೂಚುವಲ್‌ ಫ್ರೆಂಡ್‌ಗಳು (ರಿಕ್ವೆಸ್ಟ್‌ ಕಳಿಸಿದವರ ಮತ್ತು ನಿಮ್ಮ, ಎರಡೂ ಗುಂಪಿನಲ್ಲಿ ಇರುವ ಗೆಳೆಯರು) ಎಷ್ಟಿದ್ದಾರೆಂದು ಗಮನಿಸಿ.

– ಕಮೆಂಟ್‌ ಮಾಡುವಾಗ ಎಲ್ಲಿಯೂ ಸಂಯಮ, ಸಭ್ಯತೆ ಮೀರದಿರಿ.

-ನಿಮ್ಮ ಫೋಟೊ, ಪೋಸ್ಟ್‌ಗಳಿಗೆ ಕಮೆಂಟ್‌ ಮಾಡಿದರೆಂಬ ಏಕೈಕ ಕಾರಣಕ್ಕೆ ಅವರನ್ನು ನೀವಾಗಿಯೇ ಇನ್‌ಬಾಕ್ಸ್‌ನಲ್ಲಿ ಮಾತಿಗೆ ಎಳೆಯಬೇಡಿ.

-ಪದೇ ಪದೆ ಮೆಸೇಜ್‌ ಮಾಡಿ ಕಿರಿಕಿರಿ ಮಾಡುವವರಿಗೆ ಖಾರವಾಗಿ ಉತ್ತರಿಸಿ, ಅಂಥವರಿಂದ ಆದಷ್ಟು ದೂರವೇ ಉಳಿಯಿರಿ.

-ನಿಮ್ಮಿಷ್ಟದ ಬರಹಗಾರರೋ, ನಟರೋ ಅಥವಾ ಸೆಲೆಬ್ರಿಟಿಗಳು ಫ್ರೆಂಡ್‌ ಆದರೆಂಬ ಕಾರಣಕ್ಕೆ, ಅವರನ್ನು ಖಾಸಾ ಗೆಳೆಯರಂತೆ ಭಾವಿಸುವುದು, ಪದೇ ಪದೆ ಮೆಸೇಜ್‌ ಮಾಡುವುದು, ನಿಮ್ಮ ಬರಹ/ ಅಭಿಪ್ರಾಯಗಳಿಗೆ ಅವರಿಂದ ಒಪ್ಪಿಗೆ ಪಡೆಯಲು ಯತ್ನಿಸುವುದು ಸರಿಯಲ್ಲ.

– ಇನ್‌ಬಾಕ್ಸ್‌ನಲ್ಲಿ ಚಾಟ್‌ ಮಾಡುವಾಗ ಸ್ನೇಹದ ಎಲ್ಲೆ ಮೀರಬೇಡಿ. ಖಾಸಗಿ ವಿಷಯಗಳನ್ನು, ಕೌಟುಂಬಿಕ ಸಮಸ್ಯೆಗಳನ್ನು ಎದುರಿನವರೊಂದಿಗೆ ಹಂಚಿಕೊಳ್ಳಲೇಬೇಡಿ.

-ಫೇಸ್‌ಬುಕ್‌ನಲ್ಲಿ ಫೋಟೋ ಅಪ್‌ಲೋಡ್‌ ಮಾಡುವಾಗ ಜಾಗ್ರತೆ ವಹಿಸಿ.

-“ನನಗೆ ಕಷ್ಟವಿದೆ, ಸ್ವಲ್ಪ ಹಣದ ಸಹಾಯ ಮಾಡಿ’ ಅಂತ ಯಾರಾದರೂ ಮೆಸೆಂಜರ್‌ನಲ್ಲಿ ಸಹಾಯ ಕೇಳಿದರೆ, ಹಿಂದೆ ಮುಂದೆ ನೋಡದೆ ಹಣ ಕೊಡಬೇಡಿ. ಅವರಿಗೆ ನಿಜವಾಗಿಯೂ ಹಣದ ಅಗತ್ಯ ಇದೆಯಾ ಅಂತ, ಮ್ಯೂಚುವಲ್‌ ಫ್ರೆಂಡ್‌ಗಳಲ್ಲಿ ವಿಚಾರಿಸಿ, ನಂತರ ಸಹಾಯಕ್ಕೆ ಮುಂದಾಗಿ.

– ಫೇಸ್‌ಬುಕ್‌ ಫ್ರೆಂಡ್‌ಗಳು ಕರೆದರು ಎಂಬ ಕಾರಣಕ್ಕೆ ಗುರುತು, ಪರಿಚಯ ಇರದ ಜಾಗಕ್ಕೆ ಒಂಟಿಯಾಗಿ ಹೋಗುವುದು ತಪ್ಪು.

-ಫೇಸ್‌ಬುಕ್‌ನಲ್ಲಿ ಇನ್ನೊಬ್ಬರ ಖಾಸಗಿ ವಿಷಯವನ್ನು ಕೆದಕುವುದು, ಬೇರೆಯವರ ಬಗ್ಗೆ ಗಾಸಿಪ್‌ ಮಾಡುವುದು ನಿಮ್ಮ ವ್ಯಕ್ತಿತ್ವಕ್ಕೇ ಧಕ್ಕೆ ಮಾಡಬಲ್ಲದು.

-“ನಾನು ಬರೆದ ಪೋಸ್ಟ್‌ ಬಗ್ಗೆ ನಿಮ್ಮ ಅಭಿಪ್ರಾಯವೇನು?’- ಅಂತ ಒತ್ತಾಯವಾಗಿ ಲೈಕು, ಕಮೆಂಟು ಮಾಡಿಸುವವರೂ ಇರುತ್ತಾರೆ. ವಿಷಯ ಯಾವುದೇ ಆಗಲಿ, ಆ ಕುರಿತು ಸ್ವಂತ ಅಭಿಪ್ರಾಯವಿಲ್ಲದಿದ್ದರೆ ಸುಮ್ಮನಿರುವುದೇ ಲೇಸು. ಯಾರೋ ಬರೆದಿದ್ದನ್ನು ಮುಲಾಜಿಗೆ ಕಟ್ಟುಬಿದ್ದು ಶೇರ್‌ ಮಾಡಬೇಡಿ.

-ಅಪರ್ಣಾ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next