Advertisement

ಅಂಗನವಾಡಿಗೆ ಕಳಪೆ ಆಹಾರ: ಕೋಲಾಹಲ

03:17 PM Feb 16, 2017 | Team Udayavani |

ಕಲಬುರಗಿ: ಅಂಗನವಾಡಿ ಕೇಂದ್ರಗಳಿಗೆ ಕಳಪೆ ಆಹಾರ ಪೂರೈಕೆಯಾಗುತ್ತಿರುವುದನ್ನು ಬುಧವಾರ ನಡೆದ ಜಿಲ್ಲಾ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಸದಸ್ಯರೆಲ್ಲರೂ ಪಕ್ಷ ಭೇದ ಮರೆತು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹಿಸಿದರು. 

Advertisement

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನರೋಣಾ ಕ್ಷೇತ್ರದ ಸದಸ್ಯೆ ವಿಜಯಲಕ್ಷ್ಮೀ ರಾಗಿ ಅವರು ಆಳಂದ ತಾಲೂಕಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಅತ್ಯಂತ ಕಳಪೆ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದೆ. ಬೇಕಿದ್ದರೆ ಎಲ್ಲ ಮಾದರಿಗಳನ್ನು ತರಲಾಗಿದೆ.

ಮುಂದಿನ ಕ್ರಮ ತಮಗೆ ಬಿಟ್ಟದ್ದು ಎಂದು ಅಧ್ಯಕ್ಷರ ಮುಂದೆ ಹೋಗಿ ದವಸ ಧಾನ್ಯಗಳ ಪೊಟ್ಟಣಗಳನ್ನು ಪ್ರದರ್ಶಿಸಿದರು. ಇದನ್ನು ಹಿಂದಿನ ಸಭೆಯಲ್ಲೂ ಗಮನ ಸೆಳೆದಿದ್ದರೂ ಯಾವುದೇ ಬದಲಾವಣೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬಡದಾಳ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯೆ ರತ್ನವ್ವ ಪೂಜಾರಿ ಸಹ ಅಫಜಲಪುರ ತಾಲೂಕಿನ ಮಲ್ಲಾಬಾದ್‌ನಲ್ಲಿ ಕೂಡಾ ಕಳಪೆ ಆಹಾರ ನೀಡಲಾಗುತ್ತಿದೆ. ತಮ್ಮ ಅಳಲಿಗೆ ಕಿಮ್ಮತ್ತು ಇಲ್ಲದಂತಾಗಿದೆ ಎಂದರು. ಇದಕ್ಕೆ ಇತರ ಸದಸ್ಯರು ಧ್ವನಿಗೂಡಿಸಿದರು.

ಅರಳಗುಂಡಗಿ ಕ್ಷೇತ್ರದ ಸದಸ್ಯ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಕಳಪೆ ಆಹಾರ ಪೂರೈಸಲಾಗುತ್ತಿದೆ ಎಂಬುದರಾಗಿ ಸದಸ್ಯರು ಈಗ ಮೂರನೇ ಸಲ ದಾಖಲೆ ಸಮೇತ ದೂರು ನೀಡಿದ್ದರೂ ಯಾವುದೇ ಕ್ರಮವಾಗಲಿಲ್ಲ ಎಂದಾದ ಮೇಲೆ ಸಾಮಾನ್ಯ ಸಭೆ ಯಾಕೆ ನಡೆಸಬೇಕು,

Advertisement

ತಾವು ಸಮಸ್ಯೆಗಳನ್ನು ಬಗೆಹರಿಯಲೆಂದು ಬಡಿದಾಡುತ್ತೇವೆ. ಆದರೆ ತಮ್ಮ ಧ್ವನಿ ಕೋಣನ ಮುಂದೆ ಕಿನ್ನೂರಿ ಬಾರಿಸಿದಂತಾದರೆ ಹೇಗೆ? ಜಿ.ಪಂ ಸದಸ್ಯರಾಗಿ ಇಂದಿಗೆ ವರ್ಷವಾಗುತ್ತಾ ಬಂದರೂ ಸದಸ್ಯರು ಆರೋಪ ಮಾಡಿರುವ ಯಾವುದೇ ಒಬ್ಬ ಅಧಿಕಾರಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಿಲ್ಲ ಎನ್ನುವುದಾರೆ ಸಭೆ ನಡೆಸುವುದೇ ವ್ಯರ್ಥ ಎನಿಸುತ್ತದೆ ಎಂದರು. 

ಸದಸ್ಯ ಹರ್ಷಾನಂದ ಗುತ್ತೇದಾರ ಮಾತನಾಡಿ, ಸದಸ್ಯರೆಲ್ಲರೂ ಸಮರ್ಪಕವಾಗಿ ವಾದ ಮಂಡಿಸದೇ ಇರುವುದು ಹಾಗೂ ಈ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳದೇ ಇರುವುದು ತಮ್ಮೆಲ್ಲರ ಲೋಪ ಎಂದು ವಾಸ್ತವ ಅಂಶ ಬಿಚ್ಚಿಟ್ಟರು. 

ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆ ಆಗುತ್ತಿರುವುದನ್ನು ಪ್ರಯೋಗಾಲಯಕ್ಕೆ ಕಳುಹಿಸಿ. ವರದಿ ಬಂದ ನಂತರ ಅಧಿಕಾರಿಗಳ ಹಾಗೂ ಪೂರೈಕೆದಾರರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಒ ಅನಿರುದ್ಧ ಶ್ರವಣ ಸಭೆ ಗಮನಕ್ಕೆ ತಂದರು.  

Advertisement

Udayavani is now on Telegram. Click here to join our channel and stay updated with the latest news.

Next