Advertisement

ಬದಲಿ ಮಾರ್ಗ ಬಳಸಿ ಟ್ರಾಫಿಕ್‌ ಜಾಮ್‌ ತಪ್ಪಿಸಿ

02:45 PM Oct 07, 2022 | Team Udayavani |

ಉಡುಪಿ: ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದ್ದ ಇಂದ್ರಾಳಿ ಸೇತುವೆ ರಸ್ತೆ (ರಾ. ಹೆ. 169ಎ) ಕಾಮಗಾರಿಗೆ ಕೊನೆಗೂ ಕಾಲ ಕೂಡಿ ಬಂದಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೊಂದು ಬದಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಇಂದ್ರಾಳಿ ಸೇತುವೆ ಸಮೀಪ ದೊಡ್ಡ ಪ್ರಮಾಣದಲ್ಲಿ ಸಂಚಾರ ದಟ್ಟಣೆ ಸಂಭವಿಸುತ್ತಿದೆ. ಇಂದ್ರಾಳಿಯಿಂದ ಎಂಜಿಎಂವರೆಗೂ ಒಮ್ಮೊಮ್ಮೆ ವಾಹನಗಳು ಬಹು ಹೊತ್ತು ನಿಂತು ಮುಂದಕ್ಕೆ ಹೋಗಬೇಕಾಗುತ್ತದೆ. ಇನ್ನೊಂದು ಕಡೆಯಲ್ಲಿ ಇಂದ್ರಾಳಿ ಬಸ್‌ನಿಲ್ದಾಣವರೆಗೂ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ.

Advertisement

ಹಲವು ವರ್ಷಗಳ ಬಳಿಕ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆಯುತ್ತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಒಂದಷ್ಟು ಜವಾಬ್ದಾರಿಗಳನ್ನು ವಾಹನ ಸವಾರರು ತೋರಿಸಬೇಕಿದೆ. ಮುಂದಿನ 45 ದಿನಗಳ ಕಾಲ ಕಾಮಗಾರಿ ನಡೆಯುವುದರಿಂದ ಘನ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆಗೊಳಿಸಿ ಜಿಲ್ಲಾಡಳಿತ ಆದೇಶ ಮಾಡಿದ್ದರೂ ಸೂಕ್ತ ಸ್ಪಂದನೆ ವ್ಯಕ್ತವಾಗಿಲ್ಲ. ಗಂಟೆಗಟ್ಟಲೆ ಟ್ರಾಫಿಕ್‌ ನಿಂದ ಜನರಿಗೆ ಸಮಸ್ಯೆ ಆಗುವುದಲ್ಲದೆ ಕಾಮಗಾರಿ ನಡೆಸಲು ಇದರಿಂದ ಸಮಸ್ಯೆ ಯಾಗುತ್ತದೆ. ಜನರೇ (ಕಾರು, ದ್ವಿಚಕ್ರ ವಾಹನ ಹೊಂದಿರುವರು ಸಹ) ಇದನ್ನು ಅರ್ಥೈಸಿಕೊಂಡು ಬದಲಿ ಮಾರ್ಗದಲ್ಲಿ ಸಂಚರಿಸುವುದು ಸೂಕ್ತವಾಗಿದೆ.

2-3 ಕಿ.ಮೀ. ಹೆಚ್ಚಳವಾದರೂ ಅನುಕೂಲ

ಕ್ಲಚ್‌ ಮತ್ತೆ ಗೇರ್‌ಗಳ ಮೇಲೆ ಹೆಚ್ಚಿನ ಒತ್ತಡ ಬೀಳುವುದರಿಂದ ವಾಹನಗಳ ಎಂಜಿನ್‌ಗೆ ಹೊಡೆತ ಬೀಳುವ ಸಾಧ್ಯತೆ ಹೆಚ್ಚು. ಇಂಧನ ವೆಚ್ಚ ಅಧಿಕವಾಗುತ್ತದೆ. ಸಮಯ ವ್ಯರ್ಥವಾಗುತ್ತದೆ. ಅಲ್ಲದೆ ವಿಪರೀತ ಧೂಳಿನ ವಾತಾವರಣ ಸೃಷ್ಟಿಯಾಗಿದೆ. ಅದರಲ್ಲಿಯೂ ವಿಶೇಷವಾಗಿ ಪ್ರತೀನಿತ್ಯ ಉಡುಪಿ-ಮಣಿಪಾಲ ಸಂಚರಿಸುವ ಕಾರು, ಬೈಕು, ಟೆಂಪೊಗಳನ್ನು ಹೊಂದಿರುವ ಉದ್ಯೋಗಿಗಳು ಪೆರಂಪಳ್ಳಿ ಮೂಲಕ ಸಾಗಿದರೆ ಉತ್ತಮ. 2-3 ಕಿ. ಮೀ. ಹೆಚ್ಚಳವಾದರೂ ಸಮಯದ ಉಳಿತಾಯ, ಧೂಳಿನಿಂದ ರಕ್ಷಣೆಯಾಗುತ್ತದೆ.

ಬದಲಿ ಮಾರ್ಗ ಸಂಚಾರ ಹೇಗೆ ?

Advertisement

ಕುಂದಾಪುರದಿಂದ ಸಂತೆಕಟ್ಟೆ, ಮಣಿಪಾಲ ಮೂಲಕ ಕಾರ್ಕಳ ಕಡೆಗೆ ಹೋಗುವವರು, ಮೂಡುಬಿದಿರೆ, ಕಾರ್ಕಳ ಕಡೆಯಿಂದ ನೇರವಾಗಿ ಬ್ರಹ್ಮಾವರ, ಕುಂದಾಪುರ ಕಡೆಗೆ ಹೋಗುವವರು ಉಡುಪಿಯನ್ನು ಪ್ರವೇಶಿಸದೆ ಮಣಿಪಾಲ ಪೆರಂಪಳ್ಳಿ ಮಾರ್ಗವಾಗಿ ನೇರವಾಗಿ ಮುಂದೆ ಚಲಿಸಬಹುದು. ಬಸ್‌ ಹೊರತುಪಡಿಸಿ ಇತರ ಘನ ವಾಹನಗಳು, ಇತರ ಕಾರು, ದ್ವಿಚಕ್ರ ವಾಹನ ಸಹ ಕುಂದಾಪುರ, ಬ್ರಹ್ಮಾವರ ಕಡೆಯಿಂದ ಬರುವವರು ಅಂಬಾಗಿಲು, ಪೆರಂಪಳ್ಳಿ ರಸ್ತೆ ಮೂಲಕ ಮಣಿಪಾಲಕ್ಕೆ ಬಂದು ಮುಂದಕ್ಕೆ ಹೋಗಬಹುದು.

ಮಂಗಳೂರು, ಪಡುಬಿದ್ರಿ, ಕಾಪು, ಉಡುಪಿ ಕಡೆಯಿಂದ ಮಣಿಪಾಲಕ್ಕೆ ಬರುವವರು ಕಲ್ಸಂಕ-ಗುಂಡಿಬೈಲು, ದೊಡ್ಡಣಗುಡ್ಡೆ- ಎ.ವಿ. ಬಾಳಿಗ ಆಸ್ಪತ್ರೆ ಮೂಲಕ ಪೆರಂಪಳ್ಳಿ ರಸ್ತೆ ಸಂಪರ್ಕಿಸಿ ಅಲ್ಲಿಂದ ಮಣಿಪಾಲಕ್ಕೆ ಹೋಗಬೇಕು.

ಕಾರ್ಕಳ, ಹಿರಿಯಡ್ಕ, ಹೆಬ್ರಿ ಮಾರ್ಗದಿಂದ ಉಡುಪಿಗೆ ಬರುವವರು ಮಣಿಪಾಲ-ಡಿಸಿ ಕಚೇರಿ ರಸ್ತೆ -ಪೆರಂಪಳ್ಳಿ, ಅಂಬಾಗಿಲು ತಲುಪಿ ಅಲ್ಲಿಂದ ಉಡುಪಿಗೆ ಮತ್ತು ಸಂತೆಕಟ್ಟೆ ಮಾರ್ಗವಾಗಿ ಕುಂದಾಪುರ ಕಡೆಗೆ ತೆರಳಬಹುದು.

45 ದಿನಗಳ ಕಾಲ ಕಾಮಗಾರಿ ಮುಗಿಯುವವರೆಗೆ ಇದನ್ನು ಪಾಲಿಸಿದಲ್ಲಿ ವ್ಯವಸ್ಥಿತ ಕಾಮಗಾರಿ ಮುಗಿಯಲಿದೆ. ಮುಂದೆಯೂ ಉಡುಪಿ ಪ್ರವೇಶಿಸುವುದು ಅಗತ್ಯವಿಲ್ಲದಿದ್ದರೆ ಈ ಪರ್ಯಾಯ ಮಾರ್ಗವನ್ನೇ ಮುಂದುವರಿಸಿದರೆ ಒಂದೇ ಕಡೆ ಉಂಟಾಗುವ ವಾಹನ ದಟ್ಟಣೆ ನಿಯಂತ್ರಿಸಲು ಸಾಧ್ಯವಾಗುತ್ತದೆ.

ಜಿಲ್ಲಾಧಿಕಾರಿಗಳ ಮನವಿ: ಅ.1ರಿಂದ ಕಾಮಗಾರಿ ಆರಂಭಗೊಂಡು 45 ದಿನಗಳ ಕೆಲಸ ನಡೆಯಲಿದ್ದು, ಬದಲಿ ರಸ್ತೆಯಲ್ಲಿ ಸಂಚರಿಸುವ ಮೂಲಕ ಸಂಚಾರ ನಿಯಮ ಪಾಲಿಸಿ. ಸುಗಮ ಸಂಚಾರ ವ್ಯವಸ್ಥೆಗೆ ಸಾರ್ವಜನಿಕರು ಸಹಕರಿಸಿ. –ಕೂರ್ಮಾ ರಾವ್‌ ಎಂ., ಉಡುಪಿ ಜಿಲ್ಲಾಧಿಕಾರಿ

ಪೊಲೀಸ್‌ ಇಲಾಖೆ ಮನವಿ: ಇಂದ್ರಾಳಿ ಸೇತುವೆ ಕಾಮಗಾರಿ ಸಂಬಂಧಿಸಿ ಸಂಚಾರ ದಟ್ಟಣೆ ನಿಯಂತ್ರಿಸಲು ಇಲಾಖೆ ಸಿಬಂದಿ ಶ್ರಮಿಸುತ್ತಿದ್ದಾರೆ. ಸಂಚಾರ ಬದಲಾವಣೆ ಆದೇಶದಲ್ಲಿ ಘನ ವಾಹನಗಳು ಮಾತ್ರ ಇವೆ. ಘನ ವಾಹನಗಳು ಪೆರಂಪಳ್ಳಿ ಮಾರ್ಗದಲ್ಲಿ ಸಾಗುವಂತೆ ಕ್ರಮ ತೆಗೆದುಕೊಂಡಿದ್ದೇವೆ. ಕಾರುಗಳ ಸಂಖ್ಯೆ ಹೆಚ್ಚು ಇರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಕಾಮಗಾರಿ ಮುಗಿಯುವವರೆಗೆ ಬದಲಿ ಮಾರ್ಗ ಪೆರಂಪಳ್ಳಿ ರಸ್ತೆಯಲ್ಲಿ ಸಾಗುವ ಮೂಲಕ ಸಂಚಾರ ದಟ್ಟಣೆ ನಿಯಂತ್ರಿಸಲು ಸಹಕರಿಸಬೇಕು. -ಸಿದ್ದಲಿಂಗಪ್ಪ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next