Advertisement

ಬ್ಯಾಲೆನ್ಸ್‌ ತಪ್ಪದಿರಿ ಕನಿಷ್ಠ ಬ್ಯಾಲೆನ್ಸ್‌ಗೆ ಗರಿಷ್ಠ ಸೇವಾ ಶುಲ್ಕ!

10:24 AM Sep 17, 2019 | Sriram |

ಬ್ಯಾಂಕುಗಳ ದೊಡ್ಡಣ್ಣ ಅನಿಸಿಕೊಂಡಿರುವ ಎಸ್‌ಬಿಐ, ಇದೀಗ ಹೊಸ ನಿಯಮಗಳನ್ನು ಘೋಷಿಸಿದೆ. ಈ ನಿಯಮಗಳು ಗ್ರಾಹಕರಿಗೆ ಹೊರೆಯಾಗುವ ಎಲ್ಲ ಸಾಧ್ಯತೆಗಳೂ ಇವೆ.ಬ್ಯಾಂಕ್‌ಗಿಂತ, ಸಾಸಿವೆ ಡಬ್ಬದಲ್ಲಿ ಹಣ ಇಡುವುದೇ ವಾಸಿ ಎಂಬ ಮಾತು ಕೇಳಿಬರಲೂ ಈ ನಿಯಮ ಕಾರಣ ಆಗಬಹುದೇನೋ…

Advertisement

ಹಣದುಬ್ಬರದ ಬೇಗುದಿಯಲ್ಲಿ ತತ್ತರಿಸುತ್ತಿರುವ ಜನತೆಗೆ ಇನ್ನೊಂದು ಬರೆ ಬೀಳುತ್ತಿದೆ. ಸರ್ಕಾರಿ ಸ್ವಾಮ್ಯದ ಸ್ಟೇಟ್‌ಬ್ಯಾಂಕ್‌ ಆಫ್ ಇಂಡಿಯಾ, ಅಕ್ಟೋಬರ್‌ 1, 2019ರಿಂದ ತನ್ನ ವಿವಿಧ ಸೇವಾಶುಲ್ಕವನ್ನು ಹೆಚ್ಚಿಸುತ್ತಿದ್ದು, ಬ್ಯಾಂಕ್‌ ಗ್ರಾಹಕರು ತಮ್ಮ ಬೆಲ್ಟನ್ನು ಇನ್ನೂ ಬಿಗಿಗೊಳಿಸುವ ಅನಿವಾರ್ಯತೆ ಧುತ್ತೆಂದು ಬಂದಿದೆ. ಬ್ಯಾಂಕಿನಲ್ಲಿ ಸೇವಾ ಶುಲ್ಕ ಹೆಚ್ಚು (prohibitive) ಎಂದು ಗ್ರಾಹಕರು ಗೊಣಗುತ್ತಿರುವಾಲೇ, ಸೇವಾ ಶುಲ್ಕ ಕಡಿಮೆಯಾಗುವ ಬದಲು ಮತ್ತೆ ಹೆಚ್ಚಾಗುತ್ತಿದ್ದು, ಗ್ರಾಹಕರು ಬೆಚ್ಚಿ ಬೀಳುತ್ತಿದ್ದಾರೆ. ಬ್ಯಾಂಕುಗಳ ದೊಡ್ಡಣ್ಣ ಎನಿಸಿಕೊಂಡಿರುವ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಸೇವಾಶುಲ್ಕವನ್ನು ಹೆಚ್ಚಿಸಿದರೆ, ಈ ದೊಡ್ಡ ಬ್ಯಾಂಕ್‌ ಹಾಕಿ ಕೊಟ್ಟ ಮಾರ್ಗದಲ್ಲಿ ಉಳಿದ ಬ್ಯಾಂಕುಗಳು ನಡೆಯುವುದು ತೀರಾ ಸಾಮಾನ್ಯವಾಗಿದೆ. ಬ್ಯಾಂಕಿಂಗ್‌ ಉದ್ಯಮದ ಈ ಸಿದ್ಧಸೂತ್ರ ಗ್ರಾಹಕರಿಗೆ ಚೆನ್ನಾಗಿ ಗೊತ್ತು. ಈಗಾಗಲೇ ಕೆಲವು ಬ್ಯಾಂಕುಗಳು ಇದನ್ನು ಅನುಷ್ಟಾನಗೊಳಿಸಿವೆ.

ಶುಲ್ಕ ಹೆಚ್ಚಳವೆಷ್ಟು ಮತ್ತು ಎಲ್ಲೆಲ್ಲಿ?
ಖಾತೆಯಲ್ಲಿ ತಿಂಗಳ ಸರಾಸರಿ ಕನಿಷ್ಠ ಬ್ಯಾಲೆನ್ಸ್‌ 25000 ರೂ. ಇದ್ದರೆ, ಅವರು ತಿಂಗಳಿನಲ್ಲಿ ಎರಡು ಬಾರಿ ಉಚಿತವಾಗಿ ಖಾತೆಯಿಂದ ಹಣ ಹಿಂಪಡೆಯಬಹುದು. ಒಂದು ವೇಳೆ ಖಾತೆಯಲ್ಲಿ 25000 ರೂ. ನಿಂದ 50,000 ರೂ. ವರೆಗೆ ಬ್ಯಾಲೆನ್ಸ್‌ ಇದ್ದರೆ 10 ಬಾರಿ ಉಚಿತವಾಗಿ ಹಿಂಪಡೆಯಬಹುದು. ಈ ಮಿತಿಯನ್ನು ಕ್ರಾಸ್‌ ಮಾಡಿದರೆ ರೂ. 50 ಶುಲ್ಕ ಮತ್ತು ಜಿಎಸ್‌ಟಿ ದಂಡ ನೀಡಬೇಕು. ಒಂದು ಲಕ್ಷಕ್ಕಿಂತ ಹೆಚ್ಚು ಸರಾಸರಿ ತಿಂಗಳ ಬ್ಯಾಲೆನ್ಸ್‌ ಇದ್ದರೆ, ಇಂಥ ನಿಯಂತ್ರಣ ಇರುವುದಿಲ್ಲ.

ತಿಂಗಳ ಸರಾಸರಿ ಕನಿಷ್ಠ ಬ್ಯಾಲೆನ್ಸ್‌ ಎಲ್ಲಿ ಮತ್ತು ಎಷ್ಟು?
ಗ್ರಾಮಾಂತರ ಪ್ರದೇಶ- ರೂ. 1000
ಅರೆ ಪಟ್ಟಣ- ರೂ. 2000
ಮಹಾನಗರ- ರೂ. 3000
ಕನಿಷ್ಠ ಬ್ಯಾಲೆನ್ಸ್‌ ಇದ್ದಲ್ಲಿ ಕೊರತೆಯ ಆಧಾರದ ಮೇಲೆ ಶುಲ್ಕವನ್ನು ವಿಧಿಸಲಾಗುವುದು. ತಿಂಗಳಿನಲ್ಲಿ ಪ್ರತಿದಿನದ ಅಂತ್ಯದ ಬ್ಯಾಲೆನ್ಸನ್ನು ಕೂಡಿಸಿ 30 ಅಥವಾ 31 ದಿನಗಳಿಂದ ಭಾಗಿಸುವ ಮೂಲಕ ಸರಾಸರಿ ಕನಿಷ್ಠ ಬ್ಯಾಲೆನ್ಸ್‌ ಎಷ್ಟಿದೆ ಎಂಬುದನ್ನು ಲೆಕ್ಕ ಹಾಕಲಾಗುತ್ತದೆ.

ಹಣ ರವಾನೆ ಶುಲ್ಕಗಳು (Funds Remittance)
ನಮಗೆಲ್ಲಾ ಗೊತ್ತಿರುವಂತೆ, ಈಗ ಎರಡು ರೀತಿಯ ಹಣರವಾನೆ ಮಾಡಲಾಗುತ್ತಿದೆ. 2 ಲಕ್ಷ ದವರೆಗೆ ಹಣವನ್ನು ಕಳಿಸುವ ವ್ಯವಸ್ಥೆಗೆ NEFT ಎಂದೂ, 2 ಲಕ್ಷದ ಮೇಲಿನ ರವಾನೆಗೆ RTGS ಎಂದೂ ಹೇಳಲಾಗುತ್ತಿದ್ದು, ಪರಿಷðತ ಶುಲ್ಕ ಈ ರೀತಿ ಇದೆ.

Advertisement

ಆರ್‌ಟಿಜಿಎಸ್‌ ಹಣ ರವಾನೆ
2 ಲಕ್ಷದಿಂದ 5 ಲಕ್ಷ ದ ವರೆಗೆ-20 ರೂ. + ಜಿ ಎಸ್‌ ಟಿ
5 ಲಕ್ಷ ಮತ್ತು ಮೇಲೆ- 40 ರೂ. + ಜಿ.ಎಸ. ಟಿ ಎನ್‌ ಇ.

ನೆಫ್ಟ್ ಹಣ ರವಾನೆ
10,000 ವರೆಗೆ- 2ರೂ. + ಜಿ.ಎಸ್‌.ಟಿ
10,000ದಿಂದ 200000- 12ರೂ. + ಜಿ.ಎಸ್‌.ಟಿ
20,0000 ಮೇಲೆ- 20 ರೂ.+ ಜಿ.ಎಸ್‌.ಟಿ
ಈ ಶುಲ್ಕ ಹೆಚ್ಚಳ ಬ್ಯಾಂಕುಗಳಿಗೆ ಅನಿವಾರ್ಯವಾಗಿದೆ. ಯಾವುದೇ ಸೇವೆಯೂ ಉಚಿತವಾಗಿ ದೊರಕುವುದಿಲ್ಲ. ಹಾಗೆಯೇ ಬ್ಯಾಂಕುಗಳ ಸೇವಾಶುಲ್ಕವು ಸ್ಥಿರವಾಗಿರದೇ, ನಿರ್ವಹಣಾ ವೆಚ್ಚಕ್ಕೆ ಸ್ಪಂದಿಸುತ್ತಾ ಏರುತ್ತಲೇ ಹೋಗುವುದು ತೀರಾ ಸಾಮಾನ್ಯ ಬೆಳವಣಿಗೆ. ಬ್ಯಾಂಕುಗಳಲ್ಲಿ ಸಾಲದ ಮೇಲಿನ ಬಡ್ಡಿಯ ದರ ಇಳಿಯುತ್ತಿದ್ದು, ಬ್ಯಾಂಕುಗಳ ಆದಾಯದ ಮೇಲೆ ಒತ್ತಡ ಬಿದ್ದಿದೆ. ಬ್ಯಾಂಕುಗಳು ಬಡ್ಡಿಯೇತರ ಆದಾಯವನ್ನು ಹೆಚ್ಚಿಸಿಕೊಳ್ಳುವ ತುರ್ತು ಅವಶ್ಯಕತೆ ಇದೆ. ಬ್ಯಾಂಕುಗಳು ಗಳಿಸಿದ ಅದಾಯದ ಗಣನೀಯ ಪ್ರಮಾಣ, ಸುಸ್ತಿ ಸಾಲಕ್ಕೆ ವಜಾ ಅಗುವುದರಿಂದ, ಬ್ಯಾಂಕುಗಳು ಈಗ ತಮ್ಮ ಲಾಭದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲೇಬೇಕಾಗಿದೆ. ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ಲಕ್ಷಾಂತರ ಕೋಟಿಯನ್ನು ಡಿಜಿಟಲ್‌ ಬ್ಯಾಂಕಿಂಗ್‌ ವ್ಯವಸ್ಥೆಗೆ (ಗಣಕೀಕರಣ- ಕೋರ್‌ ಬ್ಯಾಂಕಿಂಗ್‌) ಹೂಡಿದ್ದು, ಆ ವೆಚ್ಚದ ಕೆಲವು ಭಾಗವನ್ನು ರಿಕವರಿ ಮಾಡಿಕೊಳ್ಳಬೇಕಾಗಿದೆ ಮತ್ತು ಡಿಜಿಟಲೀಕರಣ ಸಂಪೂರ್ಣ ಬಳಕೆಯಾಗುವಂತೆ ಮಾಡಬೇಕಾಗಿದೆ. ಅದಕ್ಕೂ ಮೇಲಾಗಿ, ಬ್ಯಾಂಕಿನಲ್ಲಿ ನಗದು ವ್ಯವಹಾರವನ್ನು ಕಡಿಮೆಗೊಳಿಸಿ ಡಿಜಿಟಲ್‌ ವ್ಯವಹಾರವನ್ನು ಉತ್ತೇಜಿಸುವ ಪರೋಕ್ಷ ಉದ್ದೇಶವೂ ಇದರಲ್ಲಿ ಇದೆ. ನಗದು ವ್ಯವಹಾರಕ್ಕೆ ಶುಲ್ಕ ವಿಧಿಸುವುದರಿಂದ, ಗ್ರಾಹಕರು ಹೆಚ್ಚು ಹೆಚ್ಚು ಡಿಜಿಟಲೀಕರಣದತ್ತ ಒಲಿಯತ್ತಾರೆ ಎನ್ನುವ ದೂರಗಾಮಿ ಇರಾದೆಯೂ ಇದರಲ್ಲಿದೆ.

ಕನಿಷ್ಠ ಬ್ಯಾಲೆನ್ಸ್‌ ಪರಿಕಲ್ಪನೆ ಎಷ್ಟು ಸರಿ?
ಸುಮಾರು 70% ಗ್ರಾಹಕರಿಗೆ ಈ ನಿಬಂಧನೆಯನ್ನು ಪಾಲಿಸಲು ಸಾಧ್ಯವಾಗುವುದಿಲ್ಲ.ಬ್ಯಾಂಕಿನಲ್ಲಿ ಕುಳಿತು ಗ್ರಾಹಕರ ಖಾತೆಯನ್ನು ನೋಡಿದವರಿಗೆ ಮಾತ್ರ ಈ ಸತ್ಯ ತಿಳಿಯುವುದು. ಜನರಲ್ಲಿ ಕಷ್ಟದ ದಿನಗಳಿಗಾಗಿ ಉಳಿಸುವ ಪ್ರವೃತ್ತಿ ಬೆಳೆಸಲು, ಬ್ಯಾಂಕಿಂಗ್‌ ಪಿತಾಮಹ ಟಿ.ಎಮ….ಎ.ಪೈ ಯವರು “ಎಲ್ಲವನ್ನೂ ಬ್ಯಾಂಕಿನಲ್ಲಿ ಇಡು. ಬೇಕಾದಾಗ ಎಷ್ಟು ಬೇಕೋ ಅಷ್ಟನ್ನು ಎಷ್ಟು ಬಾರಿಯಾದರೂ ತೆಗಿ’ ಎಂದು ಹೇಳಿದ್ದರು. ಈಗಿನ ಚಿಂತನೆ ಇದಕ್ಕೆ ವ್ಯತಿರಿಕ್ತವಾಗಿದೆ. ಹೊಸ ಶುಲ್ಕ ನೀತಿಯಿಂದ ಬೇಸತ್ತ ಮಂದಿ, ಬ್ಯಾಂಕಿನಲ್ಲಿ ಹಣವಿಡುವುದೇ ಬೇಡ ಎಂದು ವಾದಿಸಿದರೂ ಅಚ್ಚರಿಯಿಲ್ಲ. ಗ್ರಾಹಕರ ಅಭಿಪ್ರಾಯ ಪಡೆಯದೆ ಮನಸ್ಸಿಗೆ ಬಂದಂತೆ ನಿಯಮ ತರುತ್ತಿರುವ ಬ್ಯಾಂಕ್‌ ಅಧಿಕಾರಿಗಳ ವರ್ತನೆ ಕಂಡೇ- ಬ್ಯಾಂಕಿಗಿಂತ ಸಾಸಿವೆ ಡಬ್ಬವೇ ಮೇಲು ಎಂದು ಕೆಲವರು ಕಿಚಾಯಿಸುತ್ತಿದ್ದಾರೆ. ಈಗಂತೂ ಅದು ಒಪ್ಪಲೇಬೇಕಾದ ಸತ್ಯ.

ಗ್ರಾಹಕರಿಗೆ ಹೊರೆಯೇ?
ಬ್ಯಾಂಕುಗಳು ನೀಡುವ ಸಮರ್ಥನೆ ಏನೇ ಇರಲಿ; ಹೊಸದಾಗಿ ಜಾರಿಯಾಗಲಿರುವ ಶುಲ್ಕ ನೀತಿಯಿಂದ ಗ್ರಾಹಕರಿಗೆ ಹೊರೆಯಾಗುವುದು ಸತ್ಯ. ಹಣ ದುಬ್ಬರದ ದಿನಗಳಲ್ಲಿ. ಪ್ರತಿ ಮೊತ್ತವೂ ದೊಡ್ಡ ಮೊತ್ತವೇ. ಪ್ರತಿ ಬಾರಿ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿಯನ್ನು ಇಳಿಸಿದಾಗ, ಅವುಗಳು ಠೇವಣಿಧಾರರಿಗೆ ನೀಡುವ ಬಡ್ಡಿಯನ್ನು ಕಡಿಮೆ ಮಾಡುತ್ತವೆ ಎನ್ನುವ ಸತ್ಯವನ್ನು ಬ್ಯಾಂಕುಗಳು ಮರೆಮಾಚುತ್ತವೆ. ಬಟ್ಟೆ ಮೇಲಿನ ಟಿಡಿಎಸ್‌ ಮಿತಿಯನ್ನು 10,000ದಿಂದ 40,000ಕ್ಕೆ ಏರಿಸಿದಾಗ, ಠೇವಣಿ ಮೇಲಿನ ಬಡ್ಡಿ ದರವನ್ನು ಇಳಿಸಿದ್ದನ್ನು ಮರೆಮಾಚಲಾಗಿದೆ. ಯಾವುದೇ ಸೇವೆಯು ಉಚಿತವಾಗಿ ದೊರಕುವುದಿಲ್ಲ ಎನ್ನುವುದು ಸತ್ಯವಾದರೂ, ಅದಕ್ಕೊಂದು ಇತಿ ಮಿತಿ ಇರುತ್ತದೆ. ಸೇವಾಶುಲ್ಕ ಹೆಚ್ಚಾಗುವುದು ಜಗತ್ತಿನ ನಿಯಮ ಎನ್ನುವುದು ಸರಿ. ಅದರೆ, ಠೇವಣಿ ಮೇಲಿನ ಬಡ್ಡಿದರಕ್ಕೆ ಏಕೆ ಈ ಸೂತ್ರ ಅನ್ವಯವಾಗಬಾರದು ಎನ್ನುವುದು ಪ್ರಶ್ನೆ. ಬ್ಯಾಂಕುಗಳು ಗ್ರಾಹಕರಿಂದ ಪಡೆಯುತ್ತವೆಯೇ ವಿನಃ ಅವರಿಗೆ ಏನನ್ನೂ ನೀಡುವುದಿಲ್ಲ ಎನ್ನುವ ಆರೋಪದಲ್ಲಿ ಸತ್ಯವಿಲ್ಲದಿಲ್ಲ.

– ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next