ಯಾದಗಿರಿ: ಜಿಲ್ಲಾ ಕೇಂದ್ರದಲ್ಲಿರುವ ಯಾದಗಿರಿ ತಾಲೂಕು ಭೂಮಾಪನ ಇಲಾಖೆ ಕಚೇರಿ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಪಟ್ಟಿದ್ದು, ತಾಲೂಕಿನ 160ಕ್ಕೂ ಹೆಚ್ಚು ಗ್ರಾಮೀಣ ಮತ್ತು ನಗರದ ಪ್ರದೇಶಗಳ ಭೂದಾಖಲೆಗಳಿರುವ ಕಚೇರಿಯಲ್ಲಿ ಅವುಗಳನ್ನು ಸಮರ್ಪಕವಾಗಿ ಇಡಲು ವ್ಯವಸ್ಥೆ ಇಲ್ಲದಿರುವುದೇ ವಿಪರ್ಯಾಸ.
ಇಲ್ಲಿನ ತಹಶೀಲ್ದಾರ್ ಕಾರ್ಯಾಲಯ ಆವರಣದಲ್ಲಿ ಸಹಾಯಕ ಭೂಮಾಪನ ಇಲಾಖೆ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಕಚೇರಿಗೆ 10*10 ಅಳತೆಯ ಎರಡು ಕೊಠಡಿಗಳು ಮಾತ್ರ ಇದ್ದು, ಒಂದು ಕೊಠಡಿ ದಾಖಲೆಗಳಿಗೆ ಮೀಸಲಾಗಿದ್ದರೆ, ಇನ್ನೊಂದು ಕೋಣೆಯಲ್ಲಿ ಇಲಾಖೆಯ 47 ಸರ್ವೇಯರ್‌ಗಳು ಕುಳಿತುಕೊಳ್ಳಲೂ ಜಾಗವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸುಮಾರು ವರ್ಷಗಳಿಂದ ಇಂತಹ ಅವ್ಯವಸ್ಥೆಯಲ್ಲಿಯೇ ಕಚೇರಿ ನಡೆಯುತ್ತಿದೆ.
ಇಲ್ಲಿ ಅಧಿಕಾರಿಗೂ ಕುಳಿತುಕೊಳ್ಳಲು ಸ್ಥಳವಿರಲಿಲ್ಲ. ಇತ್ತೀಚೆಗೆ ಬಂದಿರುವ ಅಧಿಕಾರಿ ತಹಶೀಲ್ದಾರ್ ಕಚೇರಿಯಲ್ಲಿ ಕುಳಿತುಕೊಳ್ಳಲು ಸ್ಥಳ ಮಾಡಿಕೊಂಡಿದ್ದಾರೆ. ತಾಲೂಕಿನ ಸಾವಿರಾರು ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ರಕ್ಷಿಸುವ ಕಚೇರಿಗೆ ಉತ್ತಮ ಕಟ್ಟಡ ಇಲ್ಲದಿರುವುದು ಒಂದು ದೊಡ್ಡ ದುರಂತವೇ ಸರಿ.
ಇಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಕೆಲವರು ಕಚೇರಿ ಒಳಗಿದ್ದರೆ, ಮತ್ತೆ ಕೆಲವರು ಹೊರಗೇ ತುಕೊಳ್ಳುವಂತಾಗಿದೆ. ಕಚೇರಿಗೆ ಬೇಕಿರುವ ಇಂಟರ್‌ನೆಟ್, ಕುಡಿಯುವ ನೀರು ಹಾಗೂ ಇನ್ನಿತರ ಮೂಲ ಸೌಕರ್ಯಗಳು ಇಲ್ಲದಿರುವುದು ಸೋಜಿಗದ ಸಂಗತಿಯಾಗಿದ್ದು, ಜಿಲ್ಲಾಡಳಿತ ಗಮನಹರಿಸಿ ಸರ್ಕಾರಿ ಮತ್ತು ಸಾರ್ವಜನಿಕರ ಆಸ್ತಿ ದಾಖಲೆಗಳ ರಕ್ಷಣೆ ಹಿತದೃಷ್ಟಿಯಿಂದ ಭೂಮಾಪನ ಇಲಾಖೆಗೆ ವ್ಯವಸ್ಥೆತ ಕಟ್ಟಡದ ಸೌಕರ್ಯ ಕಲ್ಪಿಸಲು ಮುಂದಾಗಬೇಕಿದೆ.
ಭೂ ಮಾಪನ ಇಲಾಖೆ ಕಚೇರಿಗೆ ಎರಡು ಕೊಠಡಿಗಳಿವೆ, ಒಂದರಲ್ಲಿ ದಾಖಲೆಗಳಿದ್ದು, ಇನ್ನೊಂದರಲ್ಲಿ ಸಿಬ್ಬಂದಿ ಕುಳಿತುಕೊಳ್ಳುತ್ತಾರೆ. ಇಕ್ಕಟ್ಟಾದ ಸ್ಥಳದಲ್ಲಿ ಕೆಲಸ ನಿರ್ವಹಿಸುವಂತಾಗಿದೆ. ಹೆಚ್ಚಿನ ಸ್ಥಳದ ಅಗತ್ಯವಿದೆ. ಶ್ರೀನಿವಾಸ ಮೂರ್ತಿ, ಸಹಾಯಕ ನಿರ್ದೇಶಕರು, ಭೂಮಾಪನ ಇಲಾಖೆ ತಾಲೂಕಿನ ಸಂಪೂರ್ಣ ದಾಖಲೆಗಳಿರುವ ಪ್ರಮುಖ ಕಚೇರಿ ಸ್ಥಿತಿ ಹೀಗಿದೆ ಎಂದರೆ ನಂಬಲು ಅಸಾಧ್ಯ. ಇಲ್ಲಿನ ಸಿಬ್ಬಂದಿಗೆ ಯಾವುದೇ ಸೌಕರ್ಯಗಳಿಲ್ಲ. ಸಾರ್ವಜನಿಕರ ಗೋಳು ಕೇಳುವವರೇ ಇಲ್ಲದಂತಾಗಿದೆ. ಶೀಘ್ರವೇ ಭೂಮಾಪನ ಇಲಾಖೆಗೆ ವ್ಯವಸ್ಥಿತ ಕಚೇರಿಯನ್ನು ಒದಗಿಸಬೇಕು.
ಶಿವರಾಜ ದಾಸನಕೇರಿ, ಸ್ಥಳೀಯ ನಿವಾಸಿ
ಅನೀಲ ಬಸೂದೆ