ವಿದೇಶಗಳಿಂದ ಚಿನ್ನ ಕಳ್ಳಸಾಗಣೆ ಮಾಡಲು ಕಳ್ಳರು ನವನವೀನ ವಿಧಾನಗಳನ್ನು ಅನುಸರಿಸುವುದು ಹೊಸದೇನಲ್ಲ. ಮಂಗಳವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದ ವಿಮಾನದ ವೈರಿಂಗ್ ಅನ್ನೇ ಬಿಚ್ಚಿ ಅದರಲ್ಲಿ ಚಿನ್ನವನ್ನು ಬಚ್ಚಿಟ್ಟು ಕಳ್ಳಸಾಗಣೆ ನಡೆಸಿರುವುದನ್ನು ಕಂಡು ಕೇವಲ ಪ್ರಯಾಣಿಕರು ಮಾತ್ರವಲ್ಲ ಸ್ವತಃ ಕಸ್ಟಮ್ಸ್ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಕಳ್ಳರು ವಿಮಾನದ ವೈರಿಂಗ್‌ನಲ್ಲಿ ಚಿನ್ನವನ್ನು ಬಚ್ಚಿಡುವ ಸಂದರ್ಭದಲ್ಲಿ ಅಪ್ಪಿತಪ್ಪಿ ಇನ್ಯಾವುದೋ ವೈರಿಂಗ್‌ಗೆ ಹಾನಿ ಉಂಟಾಗಿದ್ದರೆ ಇಡೀ ವಿಮಾನವೇ ಕ್ಷಣಮಾತ್ರದಲ್ಲಿ ಧ್ವಂಸವಾಗಿ ಪ್ರಯಾಣಿಕರು ಸುಟ್ಟು ಕರಕಲಾಗುವ ಎಲ್ಲ ಸಾಧ್ಯತೆಗಳಿದ್ದವು. ಕಳ್ಳಸಾಗಣೆದಾರರ ಈ ಕುಕೃತ್ಯವನ್ನು ಊಹಿಸಿಯೇ ವಿಮಾನ ಯಾನಿಗಳು ಅಕ್ಷರಶಃ ನಲುಗಿ ಹೋಗಿದ್ದಾರೆ.
ವಿದೇಶಗಳಲ್ಲಿ ಅದರಲ್ಲೂ ಗಲ್ಫ್ ರಾಷ್ಟ್ರಗಳಲ್ಲಿ ಚಿನ್ನ ಒಂದಿಷ್ಟು ಅಗ್ಗವಾಗಿರುವುದರಿಂದ ಕಳೆದ ಹಲವಾರು ದಶಕಗಳಿಂದ ಚಿನ್ನ ಕಳ್ಳಸಾಗಣೆ ಎಗ್ಗಿಲ್ಲದೆ ನಡೆಯುತ್ತಲೇ ಬಂದಿದೆ. ಕಸ್ಟಮ್ಸ್ ಮತ್ತು ಇತರ ಭದ್ರತ ಸಿಬಂದಿ ಇಂತಹ ಕಳ್ಳಸಾಗಣೆ ಪ್ರಕರಣಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಲೇ ಬಂದಿರುವರಾದರೂ ಕಳ್ಳಹಾದಿಯಲ್ಲಿ ದೇಶಕ್ಕೆ ಚಿನ್ನ ಸಾಗಣೆಯಾಗುತ್ತಿರುವುದು ಮಾತ್ರ ನಿಂತಿಲ್ಲ. ಇತ್ತೀಚಿನ ದಶಕದಲ್ಲಿ ಕಳ್ಳಸಾಗಣೆಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾರಂಭಿಸಿದ್ದರೂ ಕಳ್ಳಸಾಗಣೆದಾರರು ಹೊಸ ಹೊಸ ತಂತ್ರ ಹೆಣೆಯುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಇಂತಹುದೇ ಒಂದು ಪ್ರಯತ್ನ ಮಂಗಳವಾರ ಬೆಳಗ್ಗೆ ಕಸ್ಟಮ್ಸ್ ಅಧಿಕಾರಿಗಳು ಬಯಲಿಗೆಳೆದ ಚಿನ್ನಕಳ್ಳಸಾಗಣೆಯ ಘಟನೆ. ಅಬುಧಾಬಿಯಿಂದ ಚೆನ್ನೈಗೆ ಆಗಮಿಸಿದ್ದ ವಿಮಾನದ ಶೌಚಾಲಯದ ಮೇಲ್ಛಾವಣಿಯಲ್ಲಿನ ವೈರಿಂಗ್‌ನಲ್ಲಿ 4.5 ಕೆ.ಜಿ. ಚಿನ್ನವನ್ನು ಅಡಗಿ ಸಿಡಲಾಗಿತ್ತು. ಅದೃಷ್ಟವಶಾತ್ ವಿಮಾನದ ಸ್ವತ್ಛತ ಸಿಬಂದಿ ವೈರಿಂಗ್ ಬೋರ್ಡ್‌ನಲ್ಲಿ ವ್ಯತ್ಯಾಸವಾಗಿರುವುದನ್ನು ಗಮನಿಸಿ ಮಾಹಿತಿ ನೀಡಿದ್ದರಿಂದ ಈ ಪ್ರಕರಣ ಬೆಳಕಿಗೆ ಬರುವಂತಾಯಿತು. ಚಿನ್ನ ಕಳ್ಳಸಾಗಣೆ ದಂಧೆಕೋರರ ಈ ಹೊಸ ವಿಧಾನ ತೀರಾ ಅಪಾಯಕಾರಿಯಾಗಿದ್ದು ವಿಮಾನ ಯಾನಿಗಳ ಪ್ರಾಣದೊಂದಿಗೆ ಚೆಲ್ಲಾಟ ವಾಡಿದಂತೆಯೇ ಸರಿ. ವಿಮಾನದ ವೈರಿಂಗ್‌ನಲ್ಲಿ ಚಿನ್ನವನ್ನು ಬಚ್ಚಿಡುವ ಧಾವಂತದಲ್ಲಿ ಒಂದಿಷ್ಟು ಎಡವಟ್ಟಾಗಿ ಬೇರೆ ವೈರ್ ಅನ್ನು ಕತ್ತರಿಸಿದ್ದರೆ ಘನಘೋರ ದುರಂತವೇ ನಡೆಯುವ ಸಾಧ್ಯತೆ ಇತ್ತು.
ಪ್ರಕರಣದ ಪ್ರಾಥಮಿಕ ತನಿಖೆ ವೇಳೆ ಈ ಕುಕೃತ್ಯದಲ್ಲಿ ವಿಮಾನದ ಸಿಬಂದಿ ಶಾಮೀಲಾಗಿರುವ ಮತ್ತು ವಿಮಾನ ಹಾರಾಟದ ಸಂದರ್ಭದಲ್ಲಿ ಕಳ್ಳರು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಇಡೀ ಪ್ರಕರಣ ವಿಮಾನಯಾನದ ಸುರಕ್ಷ ವ್ಯವಸ್ಥೆಯ ಬಗೆಗೆ ಮತ್ತೂಮ್ಮೆ ಜನರಲ್ಲಿ ಅನುಮಾನ ಮೂಡುವಂತೆ ಮಾಡಿದೆ. ವಿಮಾನದ ಸಿಬಂದಿಯ ವಿಶ್ವಾಸಾರ್ಹತೆಯ ಬಗೆಗೂ ಪ್ರಶ್ನೆಗಳು ಏಳುವಂತೆ ಮಾಡಿದೆ. ಈ ಪ್ರಕರಣವನ್ನು ನಾಗರಿಕ ವಿಮಾನ ಯಾನ ಇಲಾಖೆ ಮತ್ತು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಗಂಭೀರವಾಗಿ ಪರಿಗಣಿಸಿ, ಸಮರ್ಪಕ ಮತ್ತು ಸಮಗ್ರ ತನಿಖೆ ನಡೆಸಬೇಕು. ವಿಮಾನಯಾನದ ಭದ್ರತಾ ಲೋಪಗಳನ್ನು ಪತ್ತೆ ಹಚ್ಚಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಬೇಕು. ಅಷ್ಟು ಮಾತ್ರವಲ್ಲದೆ ಇದು ವಿಮಾನಯಾನದ ಸುರಕ್ಷೆಯನ್ನು ನೋಡಿಕೊಳ್ಳುತ್ತಿರುವ ಭದ್ರತಾ ಸಂಸ್ಥೆಗಳಿಗೂ ಕೂಡ ಬಲುದೊಡ್ಡ ಸವಾಲಾಗಿದೆ. ಇಲ್ಲಿ ಚಿನ್ನ ಕಳ್ಳಸಾಗಣೆಯ ವಿಷಯವಷ್ಟೇ ಅಲ್ಲದೆ ವಿಮಾನಯಾನಿಗಳ ಸುರಕ್ಷೆಯ ಪ್ರಶ್ನೆಯೂ ಅಡಗಿರುವುದರಿಂದ ಈ ಪ್ರಕರಣವನ್ನು ಕೂಡ ಹತ್ತರಲ್ಲಿ ಹನ್ನೊಂದು ಎಂದು ನಿರ್ಲಕ್ಷಿಸದೆ, ದಂಧೆಕೋರರ ಇಂತಹ ಕುಟಿಲ ತಂತ್ರಗಳನ್ನು ಭೇದಿಸಲು ತಮ್ಮ ಭದ್ರತಾ ಕಾರ್ಯತಂತ್ರಗಳಲ್ಲಿ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು. ಇದು ಇಂದಿನ ತುರ್ತು ಮತ್ತು ಅನಿವಾರ್ಯತೆ ಕೂಡ.