ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ನ ಮೆಗಾ ಹರಾಜು ಪ್ರಕ್ರಿಯೆಯ ಮೊದಲ ದಿನದ ಹರಾಜು ಮುಗಿದಿದೆ. ಹಲವು ಅಚ್ಚರಿಗಳಿಗೆ ಕಾರಣವಾದ ಮೊದಲ ದಿನದ ಹರಾಜಿನಲ್ಲಿ ಆವೇಶ್ ಖಾನ್ ಅವರು ಬರೋಬ್ಬರಿ ಹತ್ತು ಕೋಟಿ ರೂ ಬಾಚಿಕೊಂಡರು.
ಕಳೆದ ವರ್ಷದ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಡಿದ್ದ ಆವೇಶ್ ಖಾನ್ ಕೂಟದಲ್ಲಿ ಎರಡನೇ ಅತೀ ಹೆಚ್ಚು ವಿಕೆಟ್ ಕಿತ್ತ ಸಾಧನೆ ಮಾಡಿದ್ದರು. ಆದರೆ ಆವೇಶ್ ರನ್ನು ಡೆಲ್ಲಿ ಕ್ಯಾಪಿಟಲ್ಸ್ ಹರಾಜಿಗೆ ಬಿಟ್ಟಿದ್ದರಿಂದ ಭಾರೀ ಬೇಡಿಕೆ ಪಡೆದರು.
ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಆವೇಶ್ ಖಾನ್ ರನ್ನು ಹತ್ತು ಕೋಟಿ ರೂ ಬೆಲೆಗೆ ಖರೀದಿ ಮಾಡಿತು. ಕೇವಲ 20 ಲಕ್ಷ ರೂ ಮೂಲ ಬೆಲೆ ಹೊಂದಿದ್ದ ಆವೇಶ್ ಖಾನ್ ಹರಾಜಿನಲ್ಲಿ ಉತ್ತಮ ಮೊತ್ತವನ್ನೇ ಪಡೆದರು.
ಇದನ್ನೂ ಓದಿ:ದುಬಾರಿ ಆಟಗಾರರ ಖರೀದಿ ಕಥೆಗಳು
ಇದರೊಂದಿಗೆ ಹರಾಜಿನಲ್ಲಿ ಅತೀ ಹೆಚ್ಚು ಮೊತ್ತ ಪಡೆದ ಭಾರತೀಯ ಅನ್ ಕ್ಯಾಪ್ಡ್ ಆಟಗಾರ ( ಟೀಂ ಇಂಡಿಯಾವನ್ನು ಪ್ರತಿನಿಧಿಸದ) ಎಂಬ ಸಾಧನೆಗೆ ಆವೇಶ್ ಖಾನ್ ಪಾತ್ರರಾದರು. ಈ ಮೊದಲು ಕೃಷ್ಣಪ್ಪ ಗೌತಮ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು 9.25 ಕೋಟಿ ರೂ ಗೆ ಖರೀದಿ ಮಾಡಿತ್ತು.
ಮತ್ತೊಬ್ಬ ಅನ್ ಕ್ಯಾಪ್ಡ್ ಆಟಗಾರ ಶಾರುಖ್ ಖಾನ್ ಅವರನ್ನು ಪಂಜಾಬ್ ಕಿಂಗ್ಸ್ ತಂಡವು 9 ಕೋಟಿ ರೂ ಗೆ ಖರೀದಿ ಮಾಡಿತು.