Advertisement

ಈ ಬಾರಿ ಅವರೆ ಮೇಳದ ಸ್ಪೆಷಲ್‌ ಹೋಳಿಗೆ, ಬರ್ಫಿ

11:57 AM Jan 06, 2017 | |

ಬೆಂಗಳೂರು: ನಗರದ ಸಜ್ಜನ್‌ ರಾವ್‌ ವೃತ್ತದ ಶ್ರೀ ವಾಸವಿ ಕಾಂಡಿಮೆಂಟ್ಸ್‌ನಲ್ಲಿ ಅವರೆಕಾಳು ಮತ್ತು ಬೇಳೆಯಲ್ಲಿ ತಯಾರಿಸಿದ ನೂರಾರು ಭಕ್ಷ್ಯಗಳನ್ನೊಳಗೊಂಡ “17ನೇ ವರ್ಷದ ಅವರೆ ಬೇಳೆ ಮೇಳ’ಕ್ಕೆ ಗುರುವಾರ ಚಾಲನೆ ದೊರೆಯಿತು. ಜ. 15ರವರೆಗೆ ಹತ್ತು ದಿನಗಳ ಕಾಲ ನಡೆಯುವ ಮೇಳಕ್ಕೆ ಬಿಬಿಎಂಪಿ ಮೇಯರ್‌ ಜಿ. ಪದ್ಮಾವತಿ ಚಾಲನೆ ನೀಡಿದರು.

Advertisement

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ವಿಧಾನ ಪರಿಷತ್‌ ಸದಸ್ಯರಾದ ತಾರಾ ಅನುರಾಧಾ, ಟಿ.ಎ. ಶರವಣ, ಅದಮ್ಯ ಚೇತನ ಅಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್‌, ರೈತ ಮುಖಂಡ ಕೋಡಿ ಹಳ್ಳಿ ಚಂದ್ರಶೇಖರ್‌, ನಟಿಯರಾದ ಪ್ರಿಯಾಂಕ ಉಪೇಂದ್ರ, ರೂಪಿಕಾ ಮತ್ತಿತರರು ಪಾಲ್ಗೊಂಡಿದ್ದರು. 

ಈ ವೇಳೆ ಮಾತನಾಡಿದ ನಟಿ ತಾರಾ ಅನುರಾಧಾ ಬಸವನಗುಡಿಯ ಕಡಲೆ ಕಾಯಿ ಪರಿಷೆಯಂತೆ ಅವರೆ ಬೇಳೆ ಮೇಳ ಕೂಡ ಬೆಂಗಳೂರಿನ ಅನನ್ಯತೆ ಯ ಒಂದು ಗುರುತಾಗಿದೆ ಎಂದರು. ನಟಿ ಪ್ರಿಯಾಂಕ ಉಪೇಂದ್ರ ಮಾತನಾಡಿ, ನಾನು ಇದೇ ಮೊದಲ ಬಾರಿಗೆ ಅವರೆ ಬೇಳೆ ಮೇಳದಲ್ಲಿ ಭಾಗವಹಿಸಿದ್ದೇನೆ.

ಅವರೆ ಬೇಳೆಯಲ್ಲಿ ಇಷ್ಟೆಲ್ಲಾ ವೈವಿಧ್ಯಮಯ ತಿನಿಸುಗಳನ್ನು ತಯಾರಿಸಬಹುದು ಎಂಬುದು ಗೊತ್ತಿರಲಿಲ್ಲ. ಪತಿ ಉಪೇಂದ್ರ ಸೇರಿದಂತೆ ನಮ್ಮ ಇಡೀ ಕುಟುಂಬಕ್ಕೆ ಅವರೆಕಾಳು, ಬೇಳೆಯ ಆಹಾರ ಪದಾರ್ಥಗಳೆಂದರೆ ತುಂಬಾ ಪ್ರಿಯ ಎಂದರು.

ವಾಸವಿ ಕಾಂಡಿಮೆಂಟ್ಸ್‌ ಮಾಲೀಕರಾದ ಗೀತಾ ಶಿವಕುಮಾರ್‌ ಮಾತನಾಡಿ, ಹಿತಕಿದ ಬೇಳೆಯ ಹೋಳಿಗೆ, ಕಾಜಾ ಬರ್ಫಿ, ಡ್ರೈ ಫ‌ೂಟ್‌ ಬರ್ಫಿ ಈ ಬಾರಿ ಮೇಳದ ವಿಶೇಷಗಳಾಗಿವೆ. ಇವಲ್ಲದೆ, ಅವರೆ ಕಾಳು ಮತ್ತು ಬೇಳೆಯಲ್ಲಿ ತಯಾರಿಸಿದ ನೂರಾರು ಬಗೆಯ ಭಕ್ಷ್ಯಗಳು ಲಭ್ಯವಿರುವುದಾಗಿ ಹೇಳಿದರು. 

Advertisement

ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಅಗತ್ಯದಷ್ಟು ಅವರೆಕಾಯಿ ದಾಸ್ತಾನು ಸಿಗುತ್ತದೋ ಇಲ್ಲವೋ ಎಂಬ ಅನುಮಾನ ಇತ್ತು. ಆದರೆ, ರೈತರು ಹನಿ ನೀರಾವರಿ ಬಳಸಿ ಅವರೆಕಾಯಿ ಬೆಳೆದಿದ್ದಾರೆ. ಇದರಿಂದ ಅಗತ್ಯದಷ್ಟು ಅವರಕೆಯಾಸಿ ಸಿಕ್ಕಿದ್ದು, ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕಳೆದ ವರ್ಷ 400 ರೂ. ಇದ್ದ ಪ್ರತಿ ಕೇಜಿ ಕರಿದ ಅವರೆ ಬೇಳೆ ಬೆಲೆ ಈ ವರ್ಷ 670 ರೂ.ಗೆ ಏರಿದೆ ಎಂದು ತಿಳಿಸಿದರು. 

ಇನ್ನೂ ಎರಡು ಕಡೆ ಮೇಳ: ನಗರದ ಬೇರೆ ಬೇರೆ ಭಾಗದ ಜನರ ಬೇಡಿಕೆ ಹಿನ್ನೆಲೆಯಲ್ಲಿ ಮಲ್ಲೇಶ್ವರ ಮತ್ತು ನಾಗರಭಾವಿಯಲ್ಲೂ ಮೇಳ ಆಯೋಜಿಸಲಾಗು ತ್ತಿದೆ. ಮಲ್ಲೇಶ್ವರದ ಸರ್ಕಾರಿ ಶಾಲಾ ಮೈದಾನದಲ್ಲಿ ಜ.18ರಿಂದ 22ರವರೆಗೆ, ನಾಗರಭಾವಿಯ ಪೂರ್ಣಿಮಾ ಮಹಲ್‌ ಪಕ್ಕದಲ್ಲಿ ಜ.25ರಿಂದ 29ರವರೆಗೆ ಮೇಳ ನಡೆಯಲಿದೆ ಎಂದು ಗೀತಾ ಶಿವಕುಮಾರ್‌ ಹೇಳಿದರು.

ಪ್ರಮುಖ ಭಕ್ಷ್ಯಗಳು
ಹಿತಕಿದ ಬೇಳೆ ಹೋಳಿಗೆ, ದೋಸೆ, ಹಿತಕಿದ ಬೇಳೆ ಸಾರು, ಅವರೆ ಕಾಳು ಚಿತ್ರಾನ್ನ, ಉಪ್ಪಿಟ್ಟು, ರಾಗಿಮುದ್ದೆ ಅವರೆಕಾಳು ಸಾರು, ಹಿತಕಿದ ಬೇಳೆಯಲ್ಲಿ ಮಾಡಿದ ಮಸಾಲೆ, ಮಸಾಲೆ ವಡೆ, ನಿಪ್ಪಟ್ಟು, ಜಾಮೂನು, ಪಾಯಸ, ಎಳ್ಳವರೆ, ಒತ್ತು ಶಾವಿಗೆ ಅವರೆಕಾಳು, ಗೋಡಂಬಿ ಹಿತಕಿದಬೇಳೆ, ಪುದೀನ ಹಿತಕಿದಬೇಳೆ, ಕಾಂಗ್ರೆಸ್‌ ಮಿಕ್ಸ್‌, ಬೆಣ್ಣೆಉಂಡೆ ಮಿಕ್ಸ್‌, ಅವಲಕ್ಕಿ ಮಿಕ್ಸ್‌, ಪೆಪ್ಪರ್‌ ಹಿತಕಿದಬೇಳೆ, ಬೆಳ್ಳುಳ್ಳಿ ಹಿತಕಿದ ಬೇಳೆ, ಅವರೆಕಾಳು ಹುಸ್ಲಿ ಇತ್ಯಾದಿ

Advertisement

Udayavani is now on Telegram. Click here to join our channel and stay updated with the latest news.

Next