Advertisement

ಅವೆನ್ಯೂ ರೋಡಿನ ಚುಕ್ಕು”ಬುಕ್ಕು’

04:14 PM Jul 06, 2019 | Vishnu Das |

ಮೊನ್ನೆ ಕಂಪ್ಯೂಟರ್‌ ಕೋರ್ಸ್‌ಗೆ ಸಂಬಂಧಿಸಿದ ಅಪರೂಪದ ಪುಸ್ತಕವೊಂದನ್ನು ಹುಡುಕುತ್ತಿದ್ದೆ. ಗೆಳೆಯನ ಬಳಿ ಕೇಳಿದಾಗ, ಎಲ್ಲಿಯೂ ಸಿಗಲಿಲ್ವಾ? ಹಾಗಾದ್ರೆ ಬಾ ಹೋಗೋಣ ಅಂತ ಸೀದಾ ಅವೆನ್ಯೂ ರಸ್ತೆಗೆ ಕರಕೊಂಡು ಬಂದ. ಜಾತ್ರೆ ಬೀದಿಯಲ್ಲಿ ಆಟಿಕೆ ಅಂಗಡಿಗಳ ಸಾಲೇ ಇರುವಂತೆ, ಅವೆನ್ಯೂ ರಸ್ತೆಯ ಇಕ್ಕೆಲಗಳಲ್ಲಿ ಬರೀ ಪುಸ್ತಕದ ಅಂಗಡಿಗಳೇ. ಸ್ಲೇಟು, ಬಳಪಗಳಿಂದ, ಮಗ್ಗಿ ಪುಸ್ತಕದಿಂದ ಹಿಡಿದು, ಎನ್‌ಸೈಕ್ಲೋಪೀಡಿಯಾದವರೆಗೆ ಎಲ್ಲಾ ಬಗೆಯ ಪುಸ್ತಕಗಳೂ ಅಲ್ಲಿ ಲಭ್ಯ. ನನಗೆ ಬೇಕಾದ ಪುಸ್ತಕ ಖರೀದಿಸಿದ ನಂತರ, ರಸ್ತೆಯುದ್ದಕ್ಕೂ ನಡೆದು ಹೋಗುತ್ತಾ, ಪುಸ್ತಕ ವ್ಯಾಪಾರಿಗಳನ್ನು ಮಾತಿಗೆಳೆದೆ.

Advertisement

ಯಾವುದೇ ತೆರಿಗೆ ಇಲ್ಲದೆ, ಪುಸ್ತಕ ಮಾರುವ ಇವರ ಸಂಪಾದನೆ ಹೇಳಿಕೊಳ್ಳುವಷ್ಟು ಇಲ್ಲದಿದ್ದರೂ, ಒಬ್ಬೊಬ್ಬ ವ್ಯಾಪಾರಿಯ ಬಳಿಯೂ ಒಂದೊಂದು ಮಾನವೀಯ ಕತೆಯಿತ್ತು. ಆ ಕತೆಗಳನ್ನೆಲ್ಲ ಸೇರಿಸಿ ಬರೆದರೆ, ಅದೇ ಒಂದು ಪುಸ್ತಕವಾದೀತು. ಅಂಥ ಕೆಲವು ಕತೆಗಳು ಇಲ್ಲಿವೆ…

ಲಕ್ಷ ಪುಸ್ತಕಗಳ “ಸಾಗರ’

ಎಸ್ಸೆಸ್ಸೆಲ್ಸಿ ಓದಿರುವ ಪುಸ್ತಕ ವ್ಯಾಪಾರಿ ಸಾಗರ್‌ ಬೆಂಗಳೂರಿನವರೇ. ಇವರು 20 ವರ್ಷಗಳಿಂದ ಫ‌ುಟ್‌ಪಾತ್‌ನಲ್ಲಿ ಪುಸ್ತಕಗಳ ವ್ಯಾಪಾರ ಮಾಡುತ್ತಿದ್ದಾರೆ. ಈಗ ಪುಸ್ತಕಗಳ ದೊಡ್ಡ ಗೋಡನ್‌ ಅನ್ನೇ ನಿರ್ಮಿಸಿದ್ದಾರೆ. ಸ್ವತಃ ಪುಸ್ತಕಪ್ರೇಮಿಯಾಗಿರುವ ಸಾಗರ್‌ ಬಳಿ, ಎಲ್ಲಾ ಬಗೆಯ ಹಳೆಯ, ಹೊಸ ಪುಸ್ತಕಗಳು, ಕೆಎಎಸ್‌, ಐಎಎಸ್‌, ಶಿಕ್ಷಕ ನೇಮಕಾತಿ, ರೈಲ್ವೇ ನೇಮಕಾತಿ, ಎಂಜಿನಿಯರಿಂಗ್‌, ಮೆಡಿಕಲ್‌, ಪಿಯುಸಿ, ಎಸ್ಸೆಸ್ಸೆಲ್ಸಿ, ಎಸ್‌.ಡಿ.ಎ ಎಫ್ ಡಿ ಎ, ಪೋಲೀಸ್‌ ನೇಮಕಾತಿ ಪುಸ್ತಕಗಳು ಸಿಗುತ್ತವೆ. ಸಾಗರ್‌ ಅವರ ಹಳೆಯ ಪುಸ್ತಕಗಳ ಗೋದಾಮು, ಕಬ್ಬನ್‌ ಪೇಟೆಯ 17ನೇ ಕ್ರಾಸ್‌ನಲ್ಲಿದ್ದು, ಅಲ್ಲಿ ಸುಮಾರು ಆರೇಳು ಲಕ್ಷ ಪುಸ್ತಕಗಳ ಸಂಗ್ರಹವಿದೆ ಹಾಗೂ 20 ನೇ ಕ್ರಾಸ್‌ನಲ್ಲಿ ಹೊಸ ಪುಸ್ತಕಗಳ ಗೋದಾಮು ಇದ್ದು, ಅಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಪುಸ್ತಕಗಳಿವೆಯಂತೆ!
ಸಾಗರ್‌ ಅವರಿಂದ ಪುಸ್ತಕ ಕೊಂಡವರಲ್ಲಿ ಒಬ್ಬ ಕೆಎಎಸ್‌ ಅಧಿಕಾರಿ, ಮೂವತ್ತು ಮಂದಿ ಎಸ್‌ಡಿಎ ಮತ್ತು ಎಫ್ಡಿಎ ಪರೀಕ್ಷೆ ಪಾಸು ಮಾಡಿ ಸರ್ಕಾರಿ ನೌಕರಿಯಲ್ಲಿದ್ದಾರೆ. ಬೇರೆ ಪುಸ್ತಕದಂಗಡಿಯ ಮಾಲೀಕರೂ ಇವರಲ್ಲಿಗೆ ಬಂದು ಪುಸ್ತಕ ಖರೀದಿಸುತ್ತಾರಂತೆ. ಪುಸ್ತಕದ ಮೇಲೆ ನಮೂದಿಸಿದ ಬೆಲೆಗಿಂತ ಹೆಚ್ಚು ತೆಗೆದುಕೊಳ್ಳುವುದಿಲ್ಲ. “ಬಡವರೆಂದು ಗೊತ್ತಾದರೆ, ಕಡಿಮೆ ಬೆಲೆಗೇ ಪುಸ್ತಕ ಕೊಡುತ್ತೇನೆ’ ಎನ್ನುತ್ತಾರೆ ಸಾಗರ್‌. ಮಳೆ ಬಂದಾಗ ಫ‌ುಟ್‌ಪಾತ್‌ ಮೇಲಿಟ್ಟ ಪುಸ್ತಕಗಳು ನೆನೆದು ನಷ್ಟ ಅನುಭವಿಸಿದರೂ, ಅವರಿಗೆ ಈ ವ್ಯಾಪಾರದಲ್ಲಿ ತೃಪ್ತಿ ಇದೆಯಂತೆ.
ರಿಯಾಯಿತಿ ಕೊಡುವ ಮೂರ್ತಿ

ಪುಸ್ತಕ ವ್ಯಾಪಾರಿ ಪಿ.ಡಿ.ಮೂರ್ತಿ ಅವರು 20 ವರ್ಷಗಳಿಂದ ಪುಸ್ತಕ ವ್ಯಾಪಾರ ಮಾಡುತ್ತಿದ್ದಾರೆ. ಎಲ್ಲಾ ಬಗೆಯ ಪುಸ್ತಕಗಳು ಇವರ ಬಳಿ ಇದ್ದರೂ, ಹೆಚ್ಚು ವ್ಯಾಪಾರವಾಗುವುದು ಕೆಎಎಸ್‌, ಎಫ್ಡಿಎ, ಕಂಪ್ಯೂಟರ್‌ ಕೋರ್ಸ್‌ಗೆ ಸಂಬಂಧಿಸಿದ ಪುಸ್ತಕಗಳೇ. ಬಡ ವಿದ್ಯಾರ್ಥಿಗಳಿಗೆ ಶೇ.40-50ರಷ್ಟು ರಿಯಾಯಿತಿ ನೀಡುವುದು ಮೂರ್ತಿ ಅವರ ಹೆಗ್ಗಳಿಕೆ. ಮೂಲತಃ ದಾವಣಗೆರೆಯ ಹುಲಿಕಟ್ಟೆ ಯವರಾದ ಮೂರ್ತಿ, ಬಡತನದಿಂದಾಗಿ 8ನೇ ತರಗತಿಗೆ ಓದು ನಿಲ್ಲಿಸಿ, ಬೆಂಗಳೂರಿಗೆ ಬಂದರು. ಇಲ್ಲಿ ಬೇರ್ಯಾವ ಕೆಲಸವೂ ಇಷ್ಟ ವಾಗದೆ, ಪುಸ್ತಕ ಮಾರಲು ನಿಂತರು. ಲಾಭವೇ ಆಗಲಿ, ನಷ್ಟವೇ ಆಗಲಿ, ನನ್ನಿಂದ ಬಡವರಿಗೆ ಕಿಂಚಿತ್ತಾದರೂ ಸಹಾಯವಾಗಲಿ ಎಂದು ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ನಡೆಸುತ್ತಿದ್ದಾರೆ. ದಿನಕ್ಕೆ 10-15 ಪುಸ್ತಕಗಳು ಮಾರಾಟವಾಗಿ ಎರಡೂ¾ರು ಸಾವಿರ ದುಡಿದದ್ದೂ ಇದೆ, ವ್ಯಾಪಾರವಾಗದೆ ಹಸಿವಿನ ರಾತ್ರಿಗಳನ್ನು ಕಳೆದದ್ದೂ ಇದೆ ಎಂದು ನೆನಪಿಸಿಕೊಳ್ಳುತ್ತಾರವರು.

Advertisement

ಸರ್ಕಾರಿ ಕೆಲಸ ಬಿಟ್ಟು ಪುಸ್ತಕದಂಗಡಿ ತೆರೆದರು!

ಕೃಷ್ಣ ಬುಕ್‌ ಸೆಂಟರ್‌ಗೆ ಮಾಲೀಕರಾಗಿ ಆನಂದ್‌ ಮತ್ತು ಬಸವರಾಜಪ್ಪ ಇದ್ದಾರೆ. ದಾವಣಗೆರೆಯ ಈ ಸೋದರರು 10 ವರ್ಷಗಳಿಂದ ಪುಸ್ತಕ ಮಾರಾಟ ನಡೆಸುತ್ತಿದ್ದಾರೆ. ಇವರಲ್ಲಿ, ಆನಂದ್‌ 7ನೇ ತರಗತಿ ಓದಿದ್ದರೆ, ಬಸವರಾಜಪ್ಪ ಬಿ.ಎ., ಎಲ್‌ಎಲ್‌ಬಿ ಪದವಿ ಪಡೆದು, ಸರ್ಕಾರಿ ಕೆಲಸ ಗಿಟ್ಟಿಸಿಕೊಂಡವರು. ಸಿಕ್ಕಿದ ಕೆಲಸವನ್ನು ಬಿಟ್ಟು, ಪುಸ್ತಕದ ಮಳಿಗೆ ತೆರೆದರು. ಈ ಮುಂಚೆ ಸೋದರರು, ಹುಟ್ಟೂರಿನಲ್ಲಿ ಕೃಷಿ ಮಾಡುತ್ತಿದ್ದರು.

ರ್‍ಯಾಂಕ್‌ ಪಡೆದ ಹುಡುಗಿ

ಇವರ ಮಳಿಗೆಯಲ್ಲಿ ಸುಮಾರು 50 ಸಾವಿರ ಪುಸ್ತಕಗಳಿವೆ. ಬಡ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪುಸ್ತಕ ಮಾರುವುದಲ್ಲದೆ, ನಾಲ್ಕೈದು ಅನಾಥಾಶ್ರಮಗಳಿಗೆ ಹಾಗೂ ಬಡ ಮಕ್ಕಳ ಶಾಲೆಗಳಿಗೆ ಅಗತ್ಯ ಪುಸ್ತಕಗಳನ್ನು ಉಚಿತವಾಗಿ ನೀಡುತ್ತಾರೆ. 5 ವರ್ಷಗಳ ಹಿಂದೆ ಎಂಜಿನಿಯರಿಂಗ್‌ನ ಎಂಟೂ ಸೆಮಿಸ್ಟರ್‌ನ ಪುಸ್ತಕಗಳನ್ನು ಇವರಿಂದ ಖರೀದಿಸಿದ್ದ ಹುಡುಗಿ, ಕಾಲೇಜಿಗೆ ರ್‍ಯಾಂಕ್‌ ಪಡೆದಿದ್ದಷ್ಟೇ ಅಲ್ಲದೆ, ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾಳೆ. ಮಳಿಗೆಗೆ ಬಂದಿದ್ದ ಆಕೆ, ಅಷ್ಟೂ ಪುಸ್ತಕಗಳನ್ನು ಇವರಿಗೇ ಕೊಟ್ಟು, ಸ್ವೀಟ್‌ ನೀಡಿ ಹೋಗಿದ್ದಳು. ಕೆಲ ವರ್ಷಗಳ ನಂತರ ಬಂದು ಮದುವೆ ಆಮಂತ್ರಣ ಪತ್ರಿಕೆಯನ್ನೂ ನೀಡಿದ್ದಳಂತೆ. ಹೀಗೆ, 250ಕ್ಕೂ ಹೆಚ್ಚು ಕಾಯಂ ಗಿರಾಕಿಗಳಿದ್ದು, ಅವರೆಲ್ಲ ಸಣ್ಣ ಮಗ್ಗಿ ಪುಸ್ತಕ ಬೇಕಾಗಿದ್ದರೂ ಇವರ ಬಳಿಯೇ ಬರುತ್ತಾರಂತೆ.

ಅರ್ಧದಷ್ಟು ಪುಸ್ತಕ, ಮಳೆಯಲ್ಲಿ ಕೊಚ್ಚಿ ಹೋಗಿತ್ತು!
ನನ್ನ ಬಳಿ ಪುಸ್ತಕ ಖರೀದಿಸಿದ್ದ ಹುಡುಗನೊಬ್ಬ ಎಂಬಿಬಿಎಸ್‌ ಪಾಸ್‌ ಮಾಡಿ, ವೈದ್ಯನಾದ. ಕೆಲಸ ಸಿಕ್ಕಿದ ನಂತರ ಪುಸ್ತಕಗಳನ್ನು ವಾಪಸ್‌ ಮಾಡಲು ಬಂದಾಗ, ನನಗೆ ಪ್ಯಾಂಟು- ಶರ್ಟ್‌ ಕೊಡಿಸಿ, ಹೋಟೆಲ್‌ನಲ್ಲಿ ಊಟ ಹಾಕಿಸಿದ್ದ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಪುಸ್ತಕ ವ್ಯಾಪಾರಿ ಶ್ರೀನಿವಾಸ್‌. ತಮ್ಮಿಂದ ಪುಸ್ತಕ ಖರೀದಿಸಿದವರೆಲ್ಲ ಓದಿ, ಜೀವನದಲ್ಲಿ ಬೆಳೆಯುವುದನ್ನು ನೋಡುವುದೇ ಶ್ರೀನಿವಾಸರಿಗೆ ಖುಷಿ. ಮೂಲತಃ ದಾವಣಗೆರೆಯವರಾದ ಇವರು, ಓದಿದ್ದು 5ನೇ ಕ್ಲಾಸ್‌ ಮಾತ್ರ. 15 ವರ್ಷಗಳಿಂದ ಪುಸ್ತಕ ಮಾರುತ್ತಿರುವ ಇವರಿಂದ ಪುಸ್ತಕ ಕೊಂಡ ಅನೇಕರು ಸರ್ಕಾರಿ ನೌಕರಿ ಪಡೆದಿದ್ದಾರಂತೆ. ಒಮ್ಮೆ ಮಳೆಗೆ, ಶ್ರೀನಿವಾಸ್‌ ಅವರ ಪುಸ್ತಕ ಮಳಿಗೆಯ ಅರ್ಧದಷ್ಟು ಪುಸ್ತಕಗಳು ನೆನೆದು, ಅಪಾರ ನಷ್ಟ ಅನುಭವಿಸಬೇಕಾಯ್ತು. ಯಾರಿಗೆ ಬೇಕಪ್ಪಾ ಈ ಕೆಲಸ ಅನ್ನಿಸುವಂತೆ ಆಗಿತ್ತಾದರೂ, ನಮಗಂತೂ ವಿದ್ಯೆಯಿಲ್ಲ. ನಮ್ಮಿಂದ ವಿದ್ಯಾರ್ಥಿಗಳಿಗಾದರೂ ಅನುಕೂಲವಾಗಲಿ ಎಂದು ಮತ್ತೆ ವ್ಯಾಪಾರ ಮುಂದುವರಿಸಿದರಂತೆ.

– ಯೋಗೇಶ್‌ ಮಲ್ಲೂರು

Advertisement

Udayavani is now on Telegram. Click here to join our channel and stay updated with the latest news.

Next