ಚನ್ನರಾಯಪಟ್ಟಣ: ಡಿಸೆಂಬರ್ ಜನವರಿ ಬಂದರೆ ಪ್ರತಿ ಮನೆಯಲ್ಲಿಯೂ ಅವರೆಕಾಯಿ ಘಮಲು ಇದ್ದೇ ಇರುತ್ತದೆ. ಚಳಿಗಾಲದಲ್ಲಿ ಅವರೆಕಾಳಿನ ಉಪ್ಪೆಸರು, ಮುದ್ದೆ ಹೆಸರು ಕೇಳಿದರೆ ಎಂತಹವರ ಬಾಯಲ್ಲೂನೀರು ಬರುತ್ತದೆ. ಅದರಲ್ಲೂ ಸೊಗಡು ಅವರೆಕಾಳಿನಸಾರು, ಮುದ್ದೆ ರುಚಿಯ ಮುಂದೆ ಬೇರೆ ಊಟವಿಲ್ಲ.ತಾಲೂಕಿನ ರೈತರು ರಾಗಿ, ಜೋಳದ ಬೆಳೆ ಮಧ್ಯೆಬೆಳೆಯುವ ಅವರೆಕಾಯಿ ಘಮಲು ಈಗ ಪಟ್ಟಣದಲ್ಲೂ ಹರಡಿಕೊಂಡಿದ್ದು, ರಸ್ತೆ ಬದಿಯಲ್ಲಿ ರಾಶಿ ಹಾಕಿಕೊಂಡು ಮಾರಾಟ ಮಾಡಲಾಗುತ್ತಿದೆ.
ತಾಲೂಕಿನ 6 ಹೋಬಳಿಯಲ್ಲಿ 40, 325 ಹೆಕ್ಟೇರ್‌ನಲ್ಲಿ ರಾಗಿ, 9,300ಹೆಕ್ಟೇರ್‌ನಲ್ಲಿ ಮೆಕ್ಕೆ ಜೋಳಬೆಳೆದಿದ್ದು, ಅದರ ಮಧ್ಯದಲ್ಲಿಬಹುತೇಕ ರೈತರು ಅವರೆಬೆಳೆಯ ನ್ನೇ ಹಾಕಿದ್ದಾರೆ.ಈ ಬಾರಿ ಮಾಗಿಯಚಳಿ ಹೆಚ್ಚಿದ್ದು, ಬೆಳಗ್ಗೆ9 ಗಂಟೆಯಾದ್ರೂಮಂಜು ಬೀಳುತ್ತಲೇ ಇರುತ್ತದೆ. ಇದು ಅವರೆ ಬೆಳೆಗೆಹೇಳಿ ಮಾಡಿದಂತಹ ವಾತಾವರಣವಾಗಿದೆ.ಕಂಗೊಳಿಸುತ್ತಿರುವ ಅವರೆ: ತಾಲೂಕಿನ ರೈತರ ಜಮೀನಿನಲ್ಲಿ ಅವರೆ ಮೊಗ್ಗು, ಪಿಂದಿ ಜೋತಾಡುತ್ತಿದ್ದು, ರಸ್ತೆಯಲ್ಲಿ ಸಂಚರಿಸುವವರ ಕಣ್ಮನ ಸೆಳೆಯುತ್ತಿದೆ. ಪ್ರಸಕ್ತ ವರ್ಷ ಮುಂಗಾರು, ಹಿಂಗಾರು ಮಳೆ ಉತ್ತಮವಾಗಿ ಸುರಿದಿದ್ದು, ಜೋಳ, ರಾಗಿ ಬೆಳೆಯ ಮಧ್ಯೆ ಹಾಕಿರುವ ಅವರೆ ಬಳ್ಳಿ ಈಗ ಜಮೀನಿನ ತುಂಬ ಹರಡಿಕೊಂಡು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.
ಇಳುವರಿ ಹೆಚ್ಚಳ: ಅವರೆ ಬಳ್ಳಿ ಹಾಗೂ ಅದರ ಕಾಯಿಯ ಮೇಲೆ ಬಿದ್ದಿರುವ ಮಂಜಿನ ಹನಿನೋಡುವುದೇ ಒಂದು ಸೊಬಗು, ಅವರೆಕಾಯಿಮುಟ್ಟಿದರೆ ಅದರ ಸೊಗಡು ಕೈಗೆ ಅಂಟುತ್ತಿದೆ. ಅಷ್ಟರಮಟ್ಟಿಗೆ ಈ ಬಾರಿ ಅವರೆಕಾಯಿ ಬೆಳೆದಿದ್ದು,ಇಳುವರಿಯೂ ಉತ್ತಮವಾಗಿದೆ.
ಬೇಡಿಕೆ ಹೆಚ್ಚು: ತಾಲೂಕಿನಲ್ಲಿ ಬೆಳೆಯುವ ಅವರೆ ಜೊತೆ ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಜಿಲ್ಲೆ ಹಾಗೂ ಆಂಧ್ರ ಪ್ರದೇಶದಿಂದಲೂಸೊಗಡು ಅವರೆಕಾಯಿ ಪಟ್ಟಣದ ಮಾರುಕಟ್ಟೆಗೆ ಬರುತ್ತದೆ. ಈ ಬಾರಿ ತಡವಾಗಿರುವ ಕಾರಣಮಾರುಕಟ್ಟೆಯಲ್ಲಿ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿಅವರೆಕಾಯಿ ದೊರೆಯುತ್ತಿಲ್ಲ. ಒಂದು ಕೇಜಿ ಅವರಈಗ 40 ರೂ.ಗೆ ಮಾರಾಟಮಾಡಲಾಗುತ್ತಿದೆ. ಕಡಿಮೆ ಇಲ್ವಾ ಎಂದು ಗ್ರಾಹಕರು ಕೇಳಿದ್ರೆ 100 ರೂ. ಕೊಡಿ ಕೇಜಿ ತೆಗೆದುಕೊಳ್ಳಿ ಎನ್ನುತ್ತಾರೆ ವರ್ತಕರು.
ನಾಲ್ಕು ತಿಂಗಳು ಮಾತ್ರ: ಅವರೆಕಾಯಿಹೆಚ್ಚೆಂದರೆ ನಾಲ್ಕು ತಿಂಗಳುದೊರೆಯುತ್ತದೆ. ಪ್ರತಿವರ್ಷ ನವೆಂಬರ್ ತಿಂಗಳಿನಲ್ಲೇ ಮಾರುಟ್ಟೆಗೆ ಬಂದಿದ್ದ ಅವರೆ,ಈ ಬಾರಿ ಡಿಸೆಂಬರ್‌ನಲ್ಲಿ ಬಂದಿದೆ. ಗ್ರಾಪಂ ಚುನಾವಣೆ ಇದ್ದ ಕಾರಣ ಹೊರ ಜಿಲ್ಲೆಯಿಂದ ಅಷ್ಟಾಗಿ ಅವರೆಕಾಯಿ ತಾಲೂಕಿಗೆ ಬಂದಿಲ್ಲ. ಇದರಿಂದ ಬೆಲೆಹೆಚ್ಚಿದೆ. ಒಂದೆರಡು ವಾರದಲ್ಲಿ 20 ರೂ.ಗೆ ಇಳಿಯುವ ನಿರೀಕ್ಷೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.
ಪ್ರಸಕ್ತ ವರ್ಷ ಮಾಗಿ ಚಳಿ ಜನರ ಮೈನಡುಗಿಸುತ್ತಿದೆ. ಈ ಹಿತವಾದವಾತಾವರಣಕ್ಕೆ ಅವರೆ ಬೆಳೆ ಉತ್ತಮವಾಗಬಂದಿದೆ. ವರ್ತಕರೇ ಜಮೀನಿಗೆ ಬಂದು ಎಕರೆಗೆ ಇಂತಿಷ್ಟು ಹಣ ನೀಡಿ, ಬೆಳೆ ಪಡೆಯುತ್ತಿದ್ದಾರೆ.
– ಶಾಂತಮ್ಮ, ರೈತ ಮಹಿಳೆ, ಕುರುವಂಕ.
ಬೇಡಿಕೆ ಇರುವಷ್ಟು ಅವರೆಕಾಯಿಗೆ ಮಾರುಕಟ್ಟೆಗೆ ಬರುತ್ತಿಲ್ಲ, ಹೀಗಾಗಿಪ್ರಸ್ತುತ ಬೆಲೆ ಜಾಸ್ತಿ ಇದೆ. ಆಂಧ್ರ ಪ್ರದೇಶದ ಅವರೆ ಬಂದರೆ ಬೆಲೆ ಕಡಿಮೆಆಗಲಿದೆ. ಗ್ರಾಪಂ ಚುನಾವಣೆ ಇದ್ದ ಕಾರಣ, ನಿರೀಕ್ಷಿತ ಮಟ್ಟದಲ್ಲಿ ರೈತರು ಅವರೆಕಾಯಿಯನ್ನು ಮಾರುಕಟ್ಟೆಗೆ ತಂದಿಲ್ಲ. ನಾವೇ ಜಮೀನಿಗೆ ಹೋಗಿ ಖರೀದಿಸಿ, ಮಾರಾಟ ಮಾಡುತ್ತಿದ್ದೇವೆ.
– ಮಹದೇವ, ಅವರೆಕಾಯಿ ವ್ಯಾಪಾರಿ.
–ಶಾಮಸುಂದರ್ ಕೆ.ಅಣ್ಣೇನಹಳ್ಳಿ