ಟೋಕಿಯೊ: ಇಲ್ಲಿ ನಡೆಯುತ್ತಿರುವ ಪ್ಯಾರಾಲಂಪಿಕ್ಸ್ ನಲ್ಲಿ ಭಾರತದ ಶೂಟರ್ ಅವನಿ ಲೇಖರಾ ಇತಿಹಾಸ ಬರೆದಿದ್ದಾರೆ. ಇಂದು ನಡೆದ 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಅವನಿ, ಒಂದೇ ಕೂಟದಲ್ಲಿ ಎರಡು ಪದಕ ಗೆದ್ದ ಭಾರತೀಯ ಕ್ರೀಡಾಪಟು ಎಂಬ ಸಾಧನೆ ಮಾಡಿದ್ದಾರೆ.
ಇದಕ್ಕೂ ಮೊದಲು ಅವನಿ ಲೇಖರಾ 10 ಮೀಟರ್ ಏರ್ ರೈಫಲ್ ವಿಭಾಗದ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದ್ದರು.
ಫೈನಲ್ ಪಂದ್ಯದಲ್ಲಿ ಭಾರತದ ಅವನಿ ಲೇಖರಾ ಒಟ್ಟು 445.9 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಿ ಕಂಚಿನ ಪದಕ ಪಡೆದರು. ಅಂತಿಮ ಸುತ್ತು ಆರಂಭಕ್ಕೂ ಮುನ್ನ ಅವನಿ ಕೇವಲ 149.5 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರು. ಆದರೆ ಅಂತಿಮ ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ನೀಡಿ ಮೂರನೇ ಸ್ಥಾನ ಪಡೆದರು.
ಇದನ್ನೂ ಓದಿ:ಶುಕ್ರವಾರ ಶುಭ ತಂದ ಪ್ರವೀಣ್: ಹೈಜಂಪ್ ನಲ್ಲಿ ಬೆಳ್ಳಿ ಗೆದ್ದ ಪ್ರವೀಣ್ ಕುಮಾರ್
ಇಂದು ಬೆಳಗ್ಗೆ ಹೈಜಂಪ್ ವಿಭಾಗದಲ್ಲಿ ಭಾರತದ ಪ್ರವೀಣ್ ಕುಮಾರ್ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಅವನಿ ಪದಕ ಬೇಟೆಯೊಂದಿಗೆ ಟೋಕಿಯೊ ಪ್ಯಾರಾಲಂಪಿಕ್ಸ್ ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.