ಸದ್ಯ ರಕ್ಷಿತ್ ಶೆಟ್ಟಿ ಅಭಿನಯದ “ಅವನೇ ಶ್ರೀಮನ್ನಾರಾಯಣ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಚಿತ್ರವನ್ನು ಇದೇ ವರ್ಷದ ಕೊನೆಗೆ ಪ್ರೇಕ್ಷಕರ ಮುಂದೆ ತರಲೇಬೇಕು ಎನ್ನುವ ಆಲೋಚನೆಯಲ್ಲಿರುವ ಚಿತ್ರತಂಡ, ಹಗಲು-ರಾತ್ರಿ ಎನ್ನದೆ ಚಿತ್ರದ ಕೆಲಸಗಳಲ್ಲಿ ನಿರತವಾಗಿದೆ. ಇನ್ನು “ಅವನೇ ಶ್ರೀಮನ್ನಾರಾಯಣ’ ಕೆಲಸಗಳು ಹೇಗೆ ನಡೆಯುತ್ತಿದೆ ಎನ್ನುವುದ ಬಗ್ಗೆ ನಟ ಸ್ವತಃ ರಕ್ಷಿತ್ ಶೆಟ್ಟಿ ಅವರೆ ವಿವರಣೆ ನೀಡಿದ್ದಾರೆ.
ಸೋಮವಾರ ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ಲೈವ್ ಬಂದ ರಕ್ಷಿತ್ ಶೆಟ್ಟಿ, ಸೋಶಿಯಲ್ ಮೀಡಿಯಾ ಮೂಲಕವೇ, ವಿದೇಶದಲ್ಲಿ ನಡೆಯುತ್ತಿರುವ ತಮ್ಮ ಚಿತ್ರದ ಮ್ಯೂಸಿಕ್, ಬ್ಯಾಕ್‌ಗ್ರೌಂಡ್ ಸ್ಕೋರ್‌ನ ಲೈವ್ ರೆಕಾರ್ಡಿಂಗ್ ಕೆಲಸಗಳ ಬಗ್ಗೆ ಮಾಹಿತಿ ನೀಡಿದ್ದಾರೆ. “ಇಲ್ಲಿಯವರೆಗೆ ನಮ್ಮ ಚಿತ್ರದ ರೀ-ರೆಕಾರ್ಡಿಂಗ್ ಸಾಮಾನ್ಯವಾಗಿ ಮುಂಬೈ, ಚೆನ್ನೈನಲ್ಲಿ ನಡೆಯುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಮೆಸಿಡೋನಿಯಾದಲ್ಲಿ ಲೈವ್ ರೆಕಾರ್ಡಿಂಗ್ ನಡೆಯುತ್ತಿದೆ.
ಅಜನೀಶ್ ಲೋಕನಾಥ್ ಇಲ್ಲಿಂದಲೇ ಸ್ಕೈಪ್ ಮೂಲಕ ರೆಕಾರ್ಡಿಂಗ್ ಮಾಡುತ್ತಿದ್ದಾರೆ’ ಎಂದರು. “ಅವನೇ ಶ್ರೀಮನ್ನಾರಾಯಣ ಏಕ ಕಾಲಕ್ಕೆ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಮೊದಲು ಈ ಚಿತ್ರ ಮಾಡೋದು ತುಂಬ ದೊಡ್ಡ ಪ್ರೋಸೆಸ್ ಅಲ್ಲ ಅಂಥ ಅಂದುಕೊಂಡಿದ್ದೆವು. ಆದ್ರೆ ಈಗ ಅದು ಎಷ್ಟು ದೊಡ್ಡ ಪ್ರೋಸಸ್ ಅಂತ ಗೊತ್ತಾಗುತ್ತಿದೆ. ನಮ್ಮ ಗಡಿಯನ್ನು ದಾಟಿ ಹೋಗಿ ಸಿನಿಮಾ ಮಾಡೋದು ಸಣ್ಣ ಮಾತಲ್ಲ.
ಮೂರು ವರ್ಷದ ಕೆಲಸ ನಿಮಗೆ ಇಷ್ಟವಾಗುತ್ತದೆ ಅನ್ನೋ ನಂಬಿಕೆ ಇದೆ’ ಎಂದಿದ್ದಾರೆ. ಅಂದಹಾಗೆ, “ಅವನೇ ಶ್ರೀಮನ್ನಾರಾಯಣ’ ಚಿತ್ರ ಬರೋಬ್ಬರಿ 200 ದಿನ ಚಿತ್ರೀಕರಣ ಮಾಡಿದೆ. 200 ದಿನ ಚಿತ್ರೀಕರಣ ಮಾಡಿದ ಮೊದಲ ಚಿತ್ರ ಎಂಬ ಮಾತೂ ಇದೆ. ಎಲ್ಲಾ ಓಕೆ, ಇಷ್ಟೊಂದು ಚಿತ್ರೀಕರಣ ಮಾಡಲು ಕಾರಣವೇನು ಎಂದರೆ ಚಿತ್ರದ ಗುಣಮಟ್ಟ ಎಂಬ ಉತ್ತರ ರಕ್ಷಿತ್‌ರಿಂದ ಬರುತ್ತದೆ.
“ನಾವು ಕೆಲವೇ ಕೆಲವು ದೃಶ್ಯಗಳನ್ನಷ್ಟೇ ಫೋಕಸ್ ಮಾಡಿ, ಅದನ್ನಷ್ಟೇ ಚೆನ್ನಾಗಿ ತೆಗೆದಿಲ್ಲ. ಪ್ರತಿ ಫ್ರೆàಮ್ ಬಗ್ಗೆಯೂ ಗಮನಹರಿಸಿದ್ದೆವೆ. “ಕಿರಿಕ್ ಪಾರ್ಟಿ’ಯಲ್ಲಿ ಒಂದು ದಿನಕ್ಕೆ ಎರಡ್ಮೂರು ಸೀನ್ ತೆಗೆದರೆ, ಇಲ್ಲಿ ಒಂದೊಂದು ಸೀನ್ ಶೂಟ್‌ಗೆ ಮೂರ್‍ನಾಲ್ಕು ದಿನ ಬೇಕಾಗಿತ್ತು. ಒಂದು ದಿನಕ್ಕೆ 8-9 ಶಾಟ್ಸ್ ಅಷ್ಟೇ ತೆಗೆಯುತ್ತಿದ್ದೆವು. ಮೊದಲ ಬಾರಿಗೆ ದೊಡ್ಡ ಸೆಟ್ ಹಾಕಿ. ಎಲ್ಲವೂ ನಮಗೆ ಹೊಸ ಅನುಭವ’ ಎನ್ನುತ್ತಾರೆ.