Advertisement

ನಾರಾಯಣ ನಿನ್ನ ಮಹಿಮೆ ಅಪಾರ…

10:11 AM Dec 28, 2019 | mahesh |

“ಕಿರಿಕ್‌ ಪಾರ್ಟಿ’ ಚಿತ್ರದ ಸೂಪರ್‌ ಹಿಟ್‌ ಸಕ್ಸಸ್‌ ನಂತರ ನಾರಾಯಣನ ನಾಮಸ್ಮರಣೆ ಶುರು ಮಾಡಿದ್ದ ನಟ ರಕ್ಷಿತ್‌ ಶೆಟ್ಟಿ, ಇಂದು “ಅವನೇ ಶ್ರೀಮನ್ನಾರಾಯಣ’ನ ಅವತಾರದಲ್ಲಿ ಪ್ರೇಕ್ಷಕರ ಮುಂದೆ ದರ್ಶನ ಕೊಡುತ್ತಿದ್ದಾರೆ. ಸದ್ಯ ಕಳೆದ ಮೂರ್‍ನಾಲ್ಕು ತಿಂಗಳಿನಿಂದ ಕನ್ನಡದ ಜೊತೆಗೆ ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿಯಲ್ಲೂ ನಾರಾಯಣನ ಸೌಂಡ್‌ ಜೋರಾಗಿದ್ದು, ರಿಲೀಸ್‌ಗೂ ಮುನ್ನ ಮಾತಿಗೆ ಸಿಕ್ಕ ರಕ್ಷಿತ್‌ ಶೆಟ್ಟಿ ಶ್ರೀಮನ್ನಾರಾಯಣನ ಕುರಿತು ಒಂದಷ್ಟು ಮಾತನಾಡಿದ್ದಾರೆ.

Advertisement

ಮೂರು ವರ್ಷಗಳ ಬಳಿಕ ಪ್ರೇಕ್ಷಕರ ಮುಂದೆ ಬರುತ್ತಿರುವ ಎಕ್ಸಾಯಿಟ್‌ಮೆಂಟ್‌ ಹೇಗಿದೆ?
ಖಂಡಿತ ಎಕ್ಸಾಯಿಟ್‌ಮೆಂಟ್‌ ಅಂತೂ ಇದ್ದೇ ಇದೆ. ನನ್ನನ್ನು ಕೈಹಿಡಿದ ಫ್ಯಾನ್ಸ್‌, ಹಿಂದಿನ ಸಿನಿಮಾ ಗೆಲ್ಲಿಸಿದ ಆಡಿಯನ್ಸ್‌ ಎಲ್ಲರನ್ನೂ ಮೂರು ವರ್ಷ ಮಿಸ್‌ ಮಾಡಿಕೊಂಡಿದ್ದೇನೆ ಅನ್ನೋ ಫೀಲ್‌ ಅಂತೂ ಇದೆ. ಆದ್ರೆ ಅದೆಲ್ಲದಕ್ಕೂ ಕಾರಣ “ಅವನೇ ಶ್ರೀಮನ್ನಾರಾಯಣ’. ಒಂದೊಳ್ಳೆ ಸಿನಿಮಾ ಕೊಡಬೇಕು ಎಂಬ ಒಳ್ಳೆಯ ಉದ್ದೇಶ ಅದರ ಹಿಂದಿತ್ತು. ಫೈನಲಿ, ಎಲ್ಲರಿಗೂ ಇಷ್ಟವಾಗುವಂಥ ಸಿನಿಮಾ ಮಾಡಿದ್ದೇವೆ ಅನ್ನೋ ಕಾನ್ಫಿಡೆನ್ಸ್‌ನಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ.

“ಶ್ರೀಮನ್ನಾರಾಯಣ’ ರಿಲೀಸ್‌ ತುಂಬ ತಡವಾಯ್ತು ಅನ್ನೋ ಮಾತಿದೆಯಲ್ಲ..? ಒಂದು ಒಳ್ಳೆಯ ಸಿನಿಮಾ ಮಾಡೋವಾಗ ಕೆಲವೊಮ್ಮೆ ಬೇರೆ ಬೇರೆ ಸಂಗತಿಗಳು ಕೌಂಟ್‌ ಆಗುತ್ತವೆ. ಕೆಲವೊಮ್ಮೆ ಅಂದುಕೊಂಡಂತೆ ಎಲ್ಲವೂ ನಡೆಯದಿರಬಹುದು. ಸಿನಿಮಾದಲ್ಲಿ ಇನ್ನೇನೋ ಬದಲಾವಣೆ, ಬೆಳವಣಿಗೆ ಆಗಬಹುದು. ಹಾಗಂತ ಆ ಸಿನಿಮಾ ಕೆಲಸ ಆಗ್ತಿಲ್ಲ ಅಂತಲ್ಲ. “ಅವನೇ ಶ್ರೀಮನ್ನಾರಾಯಣ’ ರಿಲೀಸ್‌ ಆಗೋದು ಸ್ವಲ್ಪ ತಡವಾಗಿರಬಹುದು. ಆದ್ರೆ ಅದಕ್ಕೆ ಹತ್ತಾರು ಪ್ರಾಕ್ಟಿಕಲ್‌ ಕಾರಣಗಳಿವೆ. ಮೂರು ವರ್ಷ ನಾವು ಯಾವತ್ತೂ ಕೆಲಸ ಮಾಡದೇ ಕೂತಿಲ್ಲ. ನಮಗೆ ತೃಪ್ತಿಯಾಗುವವರೆಗೂ ಸಿನಿಮಾ ಮಾಡಿದ್ದೇವೆ. ಹಾಗಾಗಿಯೇ ಇಂಥದ್ದೊಂದು ಸಿನಿಮಾ ಕೊಡೋದಕ್ಕೆ ಸಾಧ್ಯವಾಯ್ತು.

ಕಳೆದ ಮೂರು ವರ್ಷಗಳಲ್ಲಿ “ಅವನೇ ಶ್ರೀಮನ್ನಾರಾಯಣ’ ಏನೇನು ಕಲಿಸಿದ್ದಾನೆ?
ಒಂದೆರಡಲ್ಲ…, ತುಂಬ ಕಲಿಸಿದೆ. ಒಂದು ಯುನಿವರ್ಸಿಟಿಯಲ್ಲಿ ಮೂರು ವರ್ಷದ ಕೋರ್ಸ್‌ನಲ್ಲಿ ಏನೇನು ಕಲಿಯಬಹುದೋ, ಅದಕ್ಕಿಂತ ದುಪ್ಪಟ್ಟು ವಿಷಯಗಳನ್ನು ಈ ಸಿನಿಮಾ ಕಲಿಸಿದೆ. ಸಿನಿಮಾದ ಸ್ಕ್ರಿಪ್ಟ್, ಪ್ರೀ-ಪ್ರೊಡಕ್ಷನ್ಸ್‌ ಕೆಲಸಗಳಿಂದ ಹಿಡಿದು, ಶೂಟಿಂಗ್‌, ಪೋಸ್ಟ್‌ ಪ್ರೊಡಕ್ಷನ್ಸ್‌, ಪ್ರಮೋಶನ್ಸ್‌, ಪಬ್ಲಿಸಿಟಿ ಈಗ ರೀಲೀಸ್‌ ಆಗುವವರೆಗೆ ಎಲ್ಲವನ್ನೂ ಕಲಿಸಿದೆ. ಸಿನಿಮಾದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಪ್ರತಿಯೊಂದನ್ನೂ ಕಲಿಯುತ್ತಲೇ ಇರುತ್ತೇವೆ. ನನ್ನ ಪ್ರಕಾರ “ಅವನೇ ಶ್ರೀಮನ್ನಾರಾಯಣ’ ನನಗಂತೂ ಗ್ರೇಟ್‌ ಎಕ್ಸ್‌ಪೀರಿಯನ್ಸ್‌ ಎನ್ನಬಹುದು.

ಪ್ರಮೋಶನ್ಸ್‌ ವೇಳೆ ಸಿಗುತ್ತಿರುವ ರೆಸ್ಪಾನ್ಸ್‌ ಕಂಡು ಏನನಿಸುತ್ತಿದೆ?
ನಮ್ಮ ಪ್ರೊಡಕ್ಟ್ ಮೊದಲು ಆಡಿಯನ್ಸ್‌ ಗಮನ ಸೆಳೆಯಬೇಕು, ಅವರಿಗೆ ಇಷ್ಟವಾಗ್ಬೇಕು. ಅದರಲ್ಲಿ ಏನೋ ಇದೆ ಅಂಥ ಅವರಿಗೆ ಅನಿಸಬೇಕು. ಹಾಗಾದಾಗ ಮಾತ್ರ ಅವರು ಸಿನಿಮಾ ನೋಡಕ್ಕೆ ಬರುತ್ತಾರೆ. ಅದಕ್ಕಾಗಿ ನಾವು ಮೊದಲೇ ಸಾಕಷ್ಟು ಪ್ಲಾನ್‌ ಮಾಡಿಕೊಂಡು ಪ್ರಮೋಶನ್ಸ್‌ ಶುರು ಮಾಡಿದ್ದೆವು. ಅದರಂತೆ, ಫ‌ಸ್ಟ್‌ಲುಕ್‌, ಟೀಸರ್‌, ಟ್ರೇಲರ್‌, ಸಾಂಗ್ಸ್‌ ಎಲ್ಲವೂ ರಿಲೀಸ್‌ ಆಯ್ತು. ನಮ್ಮ ನಿರೀಕ್ಷೆಯಂತೆ ಪ್ರಮೋಶನ್ಸ್‌ ವೇಳೆಯಲ್ಲಿ ಸಿನಿಮಾಕ್ಕೆ ಬಿಗ್‌ ರೆಸ್ಪಾನ್ಸ್‌ ಸಿಗ್ತಿದೆ. ಎಲ್ಲರೂ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಸ್ವಲ್ಪ ಧೈರ್ಯ ಬಂದಿದೆ. ಆದ್ರೂ ಸಿನಿಮಾ ರಿಲೀಸ್‌ ಆಗುವವರೆಗೂ ಒಂದಷ್ಟು ಭಯ ಇದ್ದೇ ಇರುತ್ತೆ.

Advertisement

ಇದು ಯಾವ ಶೈಲಿಯ ಸಿನಿಮಾ? ಯಾವ ವರ್ಗಕ್ಕೆ ಹೆಚ್ಚು ಇಷ್ಟವಾಗುತ್ತೆ?
ಇದು ಇಂಥದ್ದೇ ಜಾನರ್‌ಗೆ ಸೇರುವ ಸಿನಿಮಾ ಅಂಥ ನಾನು ಹೇಳಲಾರೆ. ಆದ್ರೆ ಇತ್ತೀಚೆಗೆ ನಾನು ಕಂಡಂತೆ, ಕನ್ನಡವೂ ಸೇರಿದಂತೆ, ಯಾವ ಇಂಡಸ್ಟ್ರಿಯಲ್ಲೂ ಈ ಥರದ್ದೊಂದು ಎಕ್ಸ್‌ಪೆರಿಮೆಂಟ್‌ ಆಗಿಲ್ಲ ಎನ್ನಬಹುದು. ಇನ್ನು ಒಂದೇ ಸಾಲಿನಲ್ಲಿ ಹೇಳ್ಳೋದಾದ್ರೆ, “ಅವನೇ ಶ್ರೀಮನ್ನಾರಾಯಣ’ ಒಂದು ಕಂಪ್ಲೀಟ್‌ ಎಂಟರ್‌ಟೈನ್ಮೆಂಟ್‌ ಕಮರ್ಶಿಯಲ್‌ ಸಿನಿಮಾ. ಇದರಲ್ಲಿ ಆರಂಭದಿಂದ, ಕೊನೆವರೆಗೂ ಫ‌ನ್‌ ಇದೆ, ಎಂಟರ್‌ಟೈನ್ಮೆಂಟ್‌ ಇದೆ. ಆಡಿಯನ್ಸ್‌ಗೆ ಖುಷಿ ಕೊಡುತ್ತೆ. ನನ್ನ ಪ್ರಕಾರ ಇದು ಯಾವುದೋ ಒಂದು ವರ್ಗಕ್ಕಲ್ಲ, ಎಲ್ಲಾ ಥರದ ಆಡಿಯನ್ಸ್‌ಗೂ ಕನೆಕ್ಟ್ ಆಗುವಂಥ ಸಿನಿಮಾ.

ವರ್ಷಕ್ಕೊಂದು ಸಿನಿಮಾ ಕೊಡಲೇಬೇಕು ಅನ್ನೋ ನಟ ನಾನಲ್ಲ
ಸಾಮಾನ್ಯವಾಗಿ ಯಾವುದೇ ಹೀರೋ ವರ್ಷಕ್ಕೆ ಕನಿಷ್ಟ ಒಂದಾದ್ರೂ ಸಿನಿಮಾ ಕೊಡಬೇಕು. ಇಲ್ಲಾಂದ್ರೆ ಅವನಿಗೆ ಫ್ಯಾನ್ಸ್‌ ಕಡಿಮೆಯಾಗ್ತಾರೆ, ಮಾರ್ಕೇಟ್‌ ಕಡಿಮೆಯಾಗುತ್ತೆ. ಅವನ ಸಿನಿಮಾ ಕೆರಿಯರ್‌ ಗ್ರಾಫ್ ಡೌನ್‌ ಆಗುತ್ತೆ ಅನ್ನೋ ಮಾತು ಇಂಡಸ್ಟ್ರಿಯಲ್ಲಿದೆ. ಆದ್ರೆ ನಾನು ಅದರ ಬಗ್ಗೆ ಹೆಚ್ಚಾಗಿ ಯೋಚಿಸಲ್ಲ. ಒಂದು ಸಿನಿಮಾ ಮಾಡಿದ್ರೆ, ಅದರ ಬಗ್ಗೆ ಆಡಿಯನ್ಸ್‌, ಇಂಡಸ್ಟ್ರಿ ಯಾವಾಗಲೂ ಮಾತಾಡುವಂತಿರಬೇಕು. ಅಂಥ ಸಿನಿಮಾ ಮಾಡ್ಬೇಕು. ಆ ಥರ ಸಿನಿಮಾ ಮಾಡೋದಕ್ಕೆ ಸ್ವಲ್ಪ ಜಾಸ್ತಿ ಟೈಮ್‌ ತಗೆದುಕೊಳ್ಳುತ್ತೆ. ವರ್ಷಕ್ಕೆ ಒಂದು ಸಿನಿಮಾ ಕೊಡಲೇಬೇಕು ಅನ್ನೋ ನಟ ನಾನಲ್ಲ. ಅಂಥ ಅರ್ಜೆನ್ಸಿ ನನಗಿಲ್ಲ. ನಾನು ನಿರ್ದೇಶಕನಾಗಬೇಕು ಅಂಥ ಕನಸಿಟ್ಟುಕೊಂಡು ಬಂದವನು. ನಾಳೆ ಏನಾದ್ರೂ ನನಗೆ ನಟನೆಯಲ್ಲಿ ಅವಕಾಶ ಇಲ್ಲ ಅಂತಾದ್ರೆ, ನಿರ್ದೇಶನ ಮಾಡಿಕೊಂಡು ಇರುತ್ತೇನೆ. ನನಗೆ ಅದರ ಬಗ್ಗೆ ಏನೂ ಬೇಜಾರಿಲ್ಲ…

ಜಿ.ಎಸ್‌ ಕಾರ್ತಿಕ ಸುಧನ್‌ 

Advertisement

Udayavani is now on Telegram. Click here to join our channel and stay updated with the latest news.

Next