Advertisement

ಅಮ್ಮನ ಇನ್ನೊಂದು ರೂಪ ಚಿಕ್ಕಮ್ಮ

04:34 PM Mar 01, 2017 | Karthik A |

ಮಕ್ಕಳಿಗೆ, ಅಮ್ಮನಷ್ಟೇ ಇಷ್ಟವಾಗುವ ಇನ್ನೊಂದು ಜೀವವಿರುತ್ತದೆ. ಆಕೆಯೇ ಚಿಕ್ಕಮ್ಮ. ಚಿಕ್ಕಿ, ಆಂಟಿ, ಮೌಶಿ, ಚಿಕ್ಕಮ್ಮ, ಚಿಗವ್ವ… ಎಂಬೆಲ್ಲಾ ಹೆಸರುಗಳಿಂದ ಆಕೆಯನ್ನು ಕರೆಯಲಾಗುತ್ತದೆ. ಹೆತ್ತವರು ಮಕ್ಕಳನ್ನು ಬೈದಾಗ, ಗದರಿಸಿದಾಗ ಅಥವಾ ಹೊಡೆದೇ ಬಿಟ್ಟಾಗ ಓಡೋಡಿ ಬಂದು ಮಕ್ಕಳನ್ನು ಬಿಡಿಸಿಕೊಳ್ಳುವಾಕೆ, ಮಕ್ಕಳ ಪರ ವಹಿಸಿ ಮಾತಾಡುವಾಕೆ ಚಿಕ್ಕಮ್ಮ. ಅಂಥ ಚಿಕ್ಕಮ್ಮನ ಪ್ರೀತಿಯನ್ನು ನೆನಪಿಸಿಕೊಳ್ಳುವ ಆಪ್ತ ಬರಹವಿದು…

Advertisement

ನೀನು, ನನ್ನ ಅಮ್ಮನ ಹಾಗೆ ಒಂಬತ್ತು ತಿಂಗಳು ಹೊತ್ತು ಹೆತ್ತಿಲ್ಲ. ಆದರೂ ನೀನು ನಿನಗೆ ಅಮ್ಮನಂತೆಯೇ ಆಪ್ತೆ. ಈ ಆಪ್ತತೆ ಆ ಸಮಯಕ್ಕೆ ಅಮ್ಮನೊಂದಿಗೂ ಬೆಳೆದಿರಲಿಲ್ಲ. ಎಲ್ಲವೂ ನೀನಾಗಿದ್ದೆ. ಯಾರು ಯಾವ ಸಂಬಂಧದಲ್ಲಿರೋದು ನನಗೆ ತಿಳಿಯದ ಆ ಹೊತ್ತು ಎಲ್ಲಾ ಸಂಬಂಧಗಳ ಭಾವದ ಮಳೆಗರೆದು ಶಾಂತವಾದ ಮನಸ್ಸನ್ನು ನನ್ನಲ್ಲಿ ಸೃಷ್ಟಿಸಿದ್ದೆ. ಇವಾಗ ನಿನ್ನಲ್ಲಿರುವ ಎಲ್ಲಾ ಗುಣಗಳು ನನ್ನಲ್ಲಿದೆ ಅನಿಸುತ್ತೆ. ರಕ್ತ ಸಂಬಂಧದಲ್ಲಿ ನನಗೆ ಚಿಕ್ಕಮ್ಮನಾಗಿದ್ರೂ ನೀ ಯಾವತ್ತೂ ನನ್ನ ಹೆತ್ತ ಅಮ್ಮನಿಗೆ ಸಮನಾಗಿದ್ದೆ. ಹೌದು ಚಿಕ್ಕಿ, ಇತ್ತೀಚೆಗೆ ಯಾಕೋ ಗೊತ್ತಿಲ್ಲ. ನಿನ್ನ ನೆನಪು ಸದಾ ಕಾಡುತ್ತೆ. ಮನಸ್ಸು ನಿನ್ನೊಂದಿಗಿರಲು ಆಸೆಪಡುತ್ತೆ. ನನ್ನಲ್ಲಿರುವ ಭಾವನೆಗಳನ್ನು ನಿನ್ನೊಂದಿಗೆ ಹೇಳ್ಳೋಣ ಅನಿಸುತ್ತೆ.

ಯಾಕೆ ನನ್ನನ್ನು ಬಿಟ್ಟು ಕಾಣದ ಊರಿಗೆ ಪಯಣ ಬೆಳೆಸಿದೆ? ನೀ ಯಾರಿಗೂ ಬೇಡವಾಗಿರಬಹುದು; ಆದರೆ ನನಗೆ ನೀ ಬೇಕು ಚಿಕ್ಕಿ. ಚಿಕ್ಕ ವಯಸ್ಸಿನಲ್ಲಿ ಸಂಸಾರ, ಜವಾಬ್ದಾರಿಯ ಹೊರೆ ಹೊತ್ತು ಕೆಲಸದೆಡೆ ದೊಡ್ಡ ಹೆಜ್ಜೆ ಇಟ್ಟಾಗ ನಿನ್ನ ಹಿಂದೆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಸಾಗಿದ ನೆನಪು. ಆ ಹೆಜ್ಜೆ ಸರಾಗವಾಗಿ ಮುಂದುವರಿಯಲ್ಲಿಲ್ಲವೇ ಅನ್ನುವ ಹತಾಶೆ. ನಿನ್ನ ಕಾಳಜಿ ಅಂದು ಪ್ರೀತಿಯ ವರ್ಷಧಾರೆ ಸುರಿಸಿತ್ತು. ಮನಸ್ಸಿನಲ್ಲಿ ಏನೋ ಒಂದನ್ನು ಸಾಧಿಸಿ ತೋರಿಸುವ ಛಲ ಅನಾವರಣವಾಗುತ್ತಿತ್ತು. ಆದರೆ ಯಾರ ಕಾಳಜಿಯೂ ಇಲ್ಲದ ದಿನಗಳಲ್ಲಿ ನೀನು ತೋರಿದ ಕಾಳಜಿಯ ನೆನೆದು ಕಣ್ಣೀರಿಡುತ್ತಿರುವೆ ಇಂದು. ನನಗೆ ಹುಷಾರ್‌ ಇಲ್ಲಾಂದ್ರೆ ಚಿಕ್ಕಿ, ನೀ ಎಷ್ಟು ದೂರವಿದ್ದರೂ ಓಡೋಡಿ ಬರುತ್ತಿದ್ದೆ. ಹೌದು ಚಿಕ್ಕಿ, ಈಗ ನನಗೆ ಹುಷಾರಿಲ್ಲ. ಎಲ್ಲಿದ್ದೀಯಾ? ಬೇಗ ಬಾ, ನಿನ್ನ ಆರೈಕೆಗಾಗಿ ನನ್ನ ಮನ ಹಂಬಲಿಸ್ತಿದೆ. ನಾನು ಒಂದನೇ ಕ್ಲಾಸ್‌ಗೆ ಸೇರಿದ ಸಮಯ.

ಆವತ್ತು ದ್ರಾಕ್ಷಿ ಹಿಡ್ಕೊಂಡು ನನ್ನಲ್ಲಿ ಮಾತಾಡಿಸೋಕೆ ಓಡೋಡಿ ಬಂದು ಮುದ್ದಾಡಿ ಹೋದವಳು ಮತ್ತೆ ತಿರುಗಿ ಯಾಕೆ ಬರಲಿಲ್ಲ ಚಿಕ್ಕಿ? ಆವತ್ತು ಮಾತ್ರ ಅಮ್ಮ ಅಷ್ಟರವರೆಗೆ ಎಂದೂ ಅಪ್ಪಿ ಹಿಡಿಯದವರು ನನ್ನ ಬಾಚಿ ಹಿಡಿದು ತಬ್ಬಿಕೊಂಡು ಅತ್ತದನ್ನ ನಾ ಮರೆಯಲಾರೆ. ನೀ ಇನ್ನೂ ಶಾಶ್ವತವಾಗಿ ಹತ್ತಿರ ಬರಲ್ಲಾಂತ ಆವತ್ತು ಗೊತ್ತಾಗಿತ್ತು. ಯಾರೂ ನನ್ನನ್ನು ನಿನ್ನ ಹಾಗೆ ಮುದ್ದು ಮಾಡಿಲ್ಲ. ನನಗೆ ನೋವಾದ್ರೆ ನನ್ನ ಪರ ನಿಂತು ಎಲ್ಲರಿಗೂ ಬೈಯ್ದು ನನ್ನನ್ನ ಸಮಾಧಾನ ಮಾಡುತ್ತಿದ್ದೆ. ಆದರೆ ಇವಾಗ ನಿನ್ನ ಜಾಗವನ್ನು ತುಂಬುವವರು ಯಾರೂ ಇಲ್ಲ ಚಿಕ್ಕಿ. ಪ್ಲೀಸ್‌ ಚಿಕ್ಕಿ, ದಯವಿಟ್ಟು ಒಮ್ಮೆ ಬಂದು ಅಪ್ಪಿ ಹಿಡ್ಕೊಂಡು ಮುದ್ದಾಡು. ಅಜ್ಜಿ ಆವತ್ತು ಹೇಳಿದ್ರು, ನೀ ದೂರದೂರಿಗೆ ಹೋಗಿದ್ದೀಯ, ವಾಪಸ್‌ ಬರ್ತೀಯಾ ಅನ್ನೋ ಆಶ್ವಾಸನೆ ಕೊಟ್ಟಿದ್ರೂ ಅದು ಕೇವಲ ಆಶ್ವಾಸನೆ ಅಂತಾ ಗೊತ್ತಿದ್ರೂ ಇವಾಗಲಾದ್ರೂ ಆ ಮಾತು ನಿಜವಾಗ್ಲಿ ಅನ್ನೋ ಹುಚ್ಚು ಆಸೆ.

ಚಿಕ್ಕಿ ಬರ್ತೀಯಲ್ವ? ನೀ ಬರುವಾಗ ನನಗೆ ದ್ರಾಕ್ಷಿ ತಾ ಆಯ್ತಾ? ನಿನಗೋಸ್ಕರ ಕಾಯ್ತಾ ಇದ್ದೇನೆ…

Advertisement
Advertisement

Udayavani is now on Telegram. Click here to join our channel and stay updated with the latest news.

Next