Advertisement
ಶಾಲೆಗೆ ಹೋಗುವ ದಾರಿಯಲ್ಲಿ ಆ ಹುಡುಗಿ ಒಂದು ಸಣ್ಣ ಅಂಗಡಿ ಮುಂದೆ ಹಾದು ಹೋಗಬೇಕು. ಪ್ರತಿದಿನವೂ ಅಲ್ಲೊಂದು ಹುಡುಗರ ಗುಂಪು ನಿಂತಿರುತ್ತದೆ. ಅದರಲ್ಲಿ ಕೆಲವರು ಅವಳನ್ನು ನೋಡಿ ಶಿಳ್ಳೆ ಹೊಡೆಯುತ್ತಾರೆ. ಮತ್ತೂಬ್ಬ ಯಾವುದೋ ಸಿನಿಮಾ ಹಾಡೊಂದನ್ನು ಗುನುಗುತ್ತಾನೆ. ಉಳಿದವರು “ಹೋ’ ಎಂದು ಕೂಗುತ್ತಾರೆ.ಅವಳಿಗೆ ತಲೆ ತಗ್ಗಿಸಿಕೊಂಡು ಅಲ್ಲಿಂದ ಬರಬೇಕಾದರೆ ಸಾಕೋ ಸಾಕು ಎನಿಸುತ್ತದೆ.
Related Articles
ಲೈಂಗಿಕ ಕಿರುಕುಳದ ಬಗ್ಗೆ ತಪ್ಪು ಕಲ್ಪನೆಗಳು ಬಹಳ. ಅವುಗಳಲ್ಲಿ ಪ್ರಮುಖವಾದದ್ದು “ಅತ್ಯಾಚಾರ’ ಮಾತ್ರ ಲೈಂಗಿಕ ಕಿರುಕುಳ ಎಂಬುದು. ಆದರೆ, ಲೈಂಗಿಕ ಕಿರುಕುಳ ದೈಹಿಕವಾಗಿ ಮಾತ್ರ ನಡೆಯಬೇಕೆಂದಿಲ್ಲ. ಅದು ಮೌಖೀಕವಾಗಿ ಅಂದರೆ ಮಾತಿನ ಮೂಲಕವೂ ನಡೆಯಬಹುದು. ಇನ್ನೊಬ್ಬರ ಬಗ್ಗೆ ಅಶ್ಲೀಲವಾಗಿ ಮಾತಾಡುವುದು, ಮತ್ತೂಬ್ಬರ ದೇಹ-ವೇಷಭೂಷಣಗಳನ್ನು ಕುರಿತು ಲೈಂಗಿಕವಾಗಿ ಮಾತನಾಡುವುದು, ಅನಾಮಿಕ ಕರೆಗಳನ್ನು, ಮೆಸೇಜ್‌ಗಳನ್ನು ಮಾಡುವುದು, ದ್ವಂದ್ವಾರ್ಥದಲ್ಲಿ ಮಾತಾಡುವುದನ್ನು ಕೂಡಾ ಲೈಂಗಿಕ ಕಿರುಕುಳ ಎನ್ನಬಹುದು. ಇವೆಲ್ಲವೂ ಸಾಮಾನ್ಯವಾಗಿ ಗುಂಪುಗಳಲ್ಲಿ ಬಳಕೆಯಾಗುತ್ತವೆ. ಮಿಕ್ಕವರ ನಗು- ಕುಹಕ- ವ್ಯಂಗ್ಯ- ಕೇಕೆಗಳು ಇದಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಬಲ್ಲವು. ಹೆಚ್ಚಿನ ಬಾರಿ ಮಹಿಳೆಯರನ್ನು ವೇದಿಕೆ ಹತ್ತದಂತೆ, ಅತಿಥಿಗಳ ಕೈ ಕುಲುಕದಂತೆ, ಹಾರ ಹಾಕದಂತೆ ಮಾಡುವ ನಡವಳಿಕೆಗಳಿವು. ಇಂಥ ಸಂದರ್ಭಗಳಲ್ಲಿ ದೈಹಿಕವಾಗಿ ಅಪಾಯವಾಗದಿದ್ದರೂ ಮನಸ್ಸಿಗೆ ಅಪಾರ ಕಿರಿಕಿರಿ, ಮುಜುಗರ, ತಮ್ಮ ಬಗೆಗೇ ಕೀಳರಿಮೆ, ಭಯವುಂಟಾಗುತ್ತದೆ.
Advertisement
ಮೌಖೀಕವಾಗಿಯೂ, ದೈಹಿಕವಾಗಿಯೂ ಏನೂ ಮಾಡದೆ ಕಿರುಕುಳ ನೀಡುವ ವಿಧಾನವೂ ಇದೆ. ಇದನ್ನು Non-verbal harassment ಎನ್ನುತ್ತೇವೆ. ಹಿಂಬಾಲಿಸುವುದು, ಲೈಂಗಿಕವಾಗಿ ದ್ವಂದ್ವಾರ್ಥವುಳ್ಳ ಚಿತ್ರಗಳನ್ನು ಗೋಡೆ/ ಬೋರ್ಡು/ ಬೆಂಚುಗಳ ಮೇಲೆ ಬರೆಯು ವುದು, ಲೈಂಗಿಕ ಅರ್ಥವುಳ್ಳ ಸನ್ನೆಗಳನ್ನು ಮಾಡುವುದು (ಕಣ್ಣು ಮಿಟುಕಿಸುವುದು ದಿಟ್ಟಿಸಿ ನೋಡುವುದು, ದೇಹದ ಯಾವುದೋ ಭಾಗವನ್ನೇ ದೃಷ್ಟಿಸುವುದು, ಬಾಯಿಂದ “ಮುತ್ತು’ ಕೊಟ್ಟಂತೆ ಸನ್ನೆ- ಶಬ್ದ ಮಾಡುವುದು, ಕೈಗೆ ಮುತ್ತುಕೊಟ್ಟು ಹಾರಿಸುವುದು, “ಬಾ’ ಎಂದು ಕರೆದಂತೆ ಕೈಆಡಿಸುವುದು ಇತ್ಯಾದಿ), ವಸ್ತುವನ್ನು ದೇಹದ ಭಾಗಗಳಿಗೆ ಗುರಿಯಿಟ್ಟು ಎಸೆಯುವುದು, ಸಾರ್ವಜನಿಕವಾಗಿ “ಜನನಾಂಗ’ವನ್ನು, ಲೈಂಗಿಕ ಅರ್ಥವುಳ್ಳ ಚಿತ್ರಗಳನ್ನು ಪ್ರದರ್ಶಿಸುವುದು, ಅನಾಮಿಕ ಪತ್ರಗಳನ್ನು ಬರೆಯುವುದು ಅಮೌಖೀಕ ಲೈಂಗಿಕ ಕಿರುಕುಳ ಎನಿಸಿಕೊಳ್ಳುತ್ತವೆ. ಮತ್ತೂಂದು ವ್ಯಕ್ತಿಯ ದೇಹದ ಯಾವುದೇ ಭಾಗವನ್ನು ಅವರ ಒಪ್ಪಿಗೆಯಿಲ್ಲದೆ, ಲೈಂಗಿಕ ಉದ್ದೇಶದಿಂದ ಅಸಹಜವಾಗಿ ಮುಟ್ಟುವುದು ದೈಹಿಕ ಲೈಂಗಿಕ ಕಿರುಕುಳವಾಗುತ್ತದೆ.
ಪತ್ತೆ ಹೇಗೆ?ಪದೇಪದೆ ಲೈಂಗಿಕ ಕಿರುಕುಳಕ್ಕೆ ಒಳಗಾದವರು ಮಾನಸಿಕವಾಗಿ ಅತೀವ ನೋವು ಅನುಭವಿಸುತ್ತಾರೆ. ಹುಡುಗಿಯರು ಶಾಲೆ/ ಕಾಲೇಜಿಗೆ ಹೋಗಲು ನಿರಾಕರಿಸಬಹುದು, ಶೈಕ್ಷಣಿಕ ಪ್ರಗತಿಯಲ್ಲಿ ಹಠಾತ್ ಹಿನ್ನಡೆ, ಸ್ನೇಹಿತರು- ಪೋಷಕರು- ಶಿಕ್ಷಕರೊಡನೆ ಹೇಳಲು ಹೆದರುವುದು, ಸ್ನೇಹಿತರ ತಪ್ಪು ಮಾರ್ಗದರ್ಶನಕ್ಕೆ ಒಳಗಾಗಿ ಅಪ್ರಬುದ್ಧ ಪ್ರೇಮ ಪ್ರಕರಣಗಳಿಗೆ ಗುರಿಯಾಗುವುದು, ತೀವ್ರ- ದೀರ್ಘಕಾಲಿಕ ಈ ರೀತಿಯ ಸಂದರ್ಭಗಳಲ್ಲಿ ಆತ್ಮಹತ್ಯೆಗೂ ಪ್ರಯತ್ನಿಸಬಹುದು. — ಡಾ.ಕೆ.ಎಸ್. ಪವಿತ್ರ